ಎಚ್-1ಬಿ ವೀಸಾದಾರರ ಸಂಗಾತಿಗಳಿಗೆ ಕೆಲಸ ಮಾಡಲು ಅವಕಾಶ ಮುಂದುವರಿಸಿ

Update: 2018-05-17 17:53 GMT

ವಾಶಿಂಗ್ಟನ್, ಮೇ 17: ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡುವ ನೀತಿಯನ್ನು ಮುಂದುವರಿಸುವಂತೆ ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ನೇತೃತ್ವದಲ್ಲಿ 130 ಸಂಸದರ ಗುಂಪೊಂದು ಟ್ರಂಪ್ ಆಡಳಿತವನ್ನು ಒತ್ತಾಯಿಸಿದೆ.

ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಅಮೆರಿಕದಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಲು ಅವಕಾಶ ನೀಡುವ ಒಬಾಮ ಕಾಲದ ನೀತಿಯನ್ನು ರದ್ದುಪಡಿಸಲು ಡೊನಾಲ್ಡ್ ಟ್ರಂಪ್ ಸರಕಾರ ಮುಂದಾಗಿರುವುದನ್ನು ಸ್ಮರಿಸಬಹುದಾಗಿದೆ.

ಟ್ರಂಪ್ ಸರಕಾರ ಈ ನಿರ್ಧಾರವನ್ನು ಜಾರಿಗೊಳಿಸಿದರೆ, ಉದ್ಯೋಗ ಪರವಾನಿಗೆ ಹೊಂದಿರುವ 70,000ಕ್ಕೂ ಅಧಿಕ ಎಚ್-4 ವೀಸಾದಾರರ ಮೇಲೆ ಮಾರಕ ಪರಿಣಾಮ ಉಂಟಾಗುತ್ತದೆ.

 ಎಚ್-1ಬಿ ವೀಸಾದಾರರ ಸಂಗಾತಿಗಳಿಗೆ ಎಚ್-4 ವೀಸಾಗಳನ್ನು ಕೊಡಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಮುಂತಾದ ಅತಿ ಕೌಶಲ ಅಗತ್ಯವಾಗಿರುವ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವಿದೇಶಿ ಉದ್ಯೋಗಿಗಳಿಗೆ ಎಚ್-1ಬಿ ವೀಸಾಗಳನ್ನು ಕೊಡಲಾಗುತ್ತದೆ.

ಎಚ್-4 ವೀಸಾದಾರರಿಗೆ ಕೆಲಸ ಮಾಡಲು ಅವಕಾಶ ನೀಡದಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ಅಮೆರಿಕದ ಸಂಸದರು ಆಂತರಿಕ ಭದ್ರತೆ ಕಾರ್ಯದರ್ಶಿ ಕರ್ಸ್ಟನ್ ನೀಲ್‌ಸನ್‌ಗೆ ಪತ್ರವೊಂದನ್ನು ಬರೆದಿದ್ದಾರೆ.

‘‘ಎಚ್-4 ವೀಸಾದಾರರಿಗೆ ಕೆಲಸ ಮಾಡಲು ಅವಕಾಶ ನೀಡುವ ನೀತಿಯು ನಮ್ಮ ಆರ್ಥಿಕತೆಯನ್ನು ಬಲಗೊಳಿಸಿದೆ. ಅದೇ ವೇಳೆ, ಅಮೆರಿಕದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಸಾವಿರಾರು ಮಂದಿಗೆ, ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ, ಆರ್ಥಿಕ ಬೆಂಬಲವನ್ನು ನೀಡಿದೆ’’ ಎಂದು ಪತ್ರ ಹೇಳಿದೆ. ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಎರಡೂ ಪಕ್ಷಗಳ 130 ಶಾಸಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ಅಮೆರಿಕದಲ್ಲಿ ಕೆಲಸ ಮಾಡಲು ಪರವಾನಿಗೆ ಹೊಂದಿರುವ ಎಚ್-4 ವೀಸಾದಾರರ ಪೈಕಿ 93 ಶೇಕಡ ಮಂದಿ ಭಾರತೀಯರು ಎಂದು ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News