ಅಲಿಗಡದ ಶಾಂತಿ ಕದಡಲು ಕೇಸರಿ ಪಡೆಗಳ ಸಂಚು?
ಭಾಗ-1
ಕೌಶಲ್‌ನಾಥ್ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ತಲಾ ನಾಲ್ಕು ಜಿಲ್ಲೆಗಳಲ್ಲಿಯೂ ಈ ತೀವ್ರವಾದಿ ಹಿಂದೂ ಯುವವಾಹಿನಿ 1,200-1,400ರಷ್ಟು ಅಧಿಕೃತ ಸದಸ್ಯರನ್ನು ಹೊಂದಿದೆ. ಅದರ ಸ್ಥಾಪಕ ಈಗ ಮುಖ್ಯಮಂತ್ರಿಯಾಗಿರುವುದರಿಂದ ಇತರ ಸಾವಿರಾರು ಹಿಂದೂಗಳು ಕೂಡಾ ಸದಸ್ಯತ್ವ ಪಡೆಯಲು ಬಯಸುತ್ತಿದ್ದಾರೆ. ‘‘ನಾವು ಸೋಶಿಯಲ್ ಮೀಡಿಯಾವನ್ನು ಕೂಡಾ ಹೊಂದಿದ್ದೇವೆ. ಫೇಸ್‌ಬುಕ್‌ನಲ್ಲಿ ನಮಗೆ 1.16 ಲಕ್ಷ ಅನುಯಾಯಿಗಳಿದ್ದಾರೆ’’ ಎಂದು ಕೌಶಲ್‌ನಾಥ್ ತಿಳಿಸಿದ್ದಾರೆ.
ಅಲಿಗಡ ಪಟ್ಟಣದ ಅಚಲ್ ತಾಲ್ ಪ್ರದೇಶದ ಸುತ್ತಮುತ್ತಲಿನ ಪ್ರತಿಯೊಂದು ಕಟ್ಟಡವೂ ಗೋಪುರದಿಂದ ಕಂಗೊಳಿಸುತ್ತದೆ. ಸಣ್ಣ ಹಾಗೂ ದೊಡ್ಡ ಗಾತ್ರದ ಅನೇಕ ದೇಗುಲಗಳು ಉತ್ತರಪ್ರದೇಶದ ನಗರ ಅಲಿಗಡದಲ್ಲಿರುವ ಸರೋವರದ ಸುತ್ತಮುತ್ತಲಿನ ಕಿರಿದಾದ ಓಣಿಗಳಲ್ಲಿ ಕಾಣಸಿಗುತ್ತವೆಯೆಂದು ಗಿಲಾಹ್‌ರಾಜ್ ಹನುಮಾನ್ ಮಂದಿರದ ಮುಖ್ಯ ಆರ್ಚಕರಾದ ಕೌಶಲ್‌ನಾಥ್ ಯೋಗಿ ಹೇಳುತ್ತಾರೆ.
2017ರ ಮಾರ್ಚ್ ತಿಂಗಳ ಕೆಲವು ದಿನಗಳಲ್ಲಿ ಗಿಲಾಹ್‌ರಾಜ್ ಹನುಮಾನ್ ದೇಗುಲವು ಜನರಿಂದ ಕಿಕ್ಕಿರಿದು ತುಂಬಿತ್ತು. ಬಿಜೆಪಿಯ ಯೋಗಿ ಆದಿತ್ಯನಾಥ್ ಆಗಷ್ಟೇ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು ಹಾಗೂ ಸ್ಥಳೀಯ ಹಿಂದೂಗಳು, ಆದಿತ್ಯನಾಥ್ ಬೆಳೆಸಿದ್ದ ಹಿಂದೂ ಯುವ ವಾಹಿನಿಗೆ ಸೇರ್ಪಡೆಗೊಳ್ಳಲು ಈ ಮಂದಿರಕ್ಕೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ‘‘ಆಗ ಈ ದೇಗುಲದಲ್ಲಿ ಕುಳಿತುಕೊಳ್ಳಲು ಜಾಗವೇ ಇರಲಿಲ್ಲ’’ ಎಂದು ಅಲಿಗಡ, ಹತ್ರಾಸ್, ಇಟಾ ಹಾಗೂ ಕಾಸಗಂಜ್ ಜಿಲ್ಲೆಗಳಲ್ಲಿ ಈ ತೀವ್ರವಾದಿ ಸಂಘಟನೆಯ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ 34 ವರ್ಷ ವಯಸ್ಸಿನ ಕೌಶಲ್‌ನಾಥ್ ಹೇಳುತ್ತಾರೆ.
ದೇವಾಲಯದಿಂದ ಕೆಲವೇ ಮೀಟರ್ ದೂರದಲ್ಲಿ ಆರೆಸ್ಸೆಸ್‌ಗೆ ಸೇರಿದ ಎಬಿವಿಪಿ ಹಾಗೂ ವಿಶ್ವಹಿಂದೂ ಪರಿಷತ್‌ನ ಸ್ಥಳೀಯ ಘಟಕಗಳು ಒಂದೇ ಕಚೇರಿಯಲ್ಲಿ ಸ್ಥಳವನ್ನು ಹಂಚಿಕೊಂಡಿವೆ. ಕಳೆದ ಎರಡು ವರ್ಷಗಳಲ್ಲಿ ಎಬಿವಿಪಿಯ ಸದಸ್ಯತ್ವ ಹಾಗೂ ಪ್ರಭಾವ ಒಂದೇ ಸಮನೆ ಏರಿಕೆಯಾಗತೊಡಗಿದೆ. ಇದರ ಜೊತೆಗೆ ವಿಶ್ವ ಹಿಂದೂ ಮಹಾಸಂಘ, ಧರ್ಮ ಜಾಗರಣ್ ಮಂಚ್, ಹಿಂದೂ ಜಾಗರಣ್ ಸಮಿತಿ ಸೇರಿದಂತೆ ಸಣ್ಣಪುಟ್ಟ ಹಿಂದುತ್ವವಾದಿ ಗುಂಪುಗಳೂ ಸಕ್ರಿಯವಾಗಿವೆ.
ಈ ಎಲ್ಲಾ ಹಿಂದುತ್ವವಾದಿ ಗುಂಪುಗಳ ಬೆಂಬಲಿಗರು ಮೇ 2ರಂದು ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ಆವರಣದೊಳಗೆ ಅಕ್ರಮವಾಗಿ ಪ್ರವೇಶಿಸಿ, ವಿವಿಯ ವಿದ್ಯಾರ್ಥಿ ಒಕ್ಕೂಟದ ಸಭಾಭವನದಲ್ಲಿ ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರವನ್ನು ಇರಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಮಾರಕಾಯುಧಗಳೊಂದಿಗೆ ಬಂದಿದ್ದ ಪ್ರತಿಭಟನಾಕಾರರು ಹಿಂಸಾಚಾರಕ್ಕಿಳಿದರು ಹಾಗೂ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಭಾಷಣ ಮಾಡಲಿದ್ದ ವಿದ್ಯಾರ್ಥಿ ಒಕ್ಕೂಟದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಹಿಂಸಾಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳು ಎಫ್‌ಐಆರ್ ದಾಖಲಿಸಲು ಸಿದ್ಧತೆ ಮಾಡುತ್ತಿರುವಾಗಲೇ, ಅವರು ಪೊಲೀಸರ ಲಾಠಿಪ್ರಹಾರವನ್ನು ಎದುರಿಸಬೇಕಾಯಿತು. ಸಂಘಪರಿವಾರದ ಬೆಂಬಲಿಗರ ಆಕ್ರಮಣವನ್ನು ಖಂಡಿಸಿ ಕ್ಯಾಂಪಸ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ ಪರಿಣಾಮವಾಗಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ತಕ್ಷಣವೇ ವಿವಿಯಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು ಈತನಕವೂ ಮುಂದುವರಿದಿದೆ.
ಆದರೆ ವಿವಿಯ ಕ್ಯಾಂಪಸ್‌ನಲ್ಲಿ ಗಲಭೆಯಲ್ಲಿ ತಮ್ಮ ಮೇಲಿನ ಆರೋಪಗಳನ್ನು ಹಿಂದುತ್ವವಾದಿ ಗುಂಪುಗಳು ನಿರಾಕರಿಸಿವೆ. ವಿವಿ ಆವರಣದೊಳಗೆ ನುಗ್ಗಿದವರಲ್ಲಿ ತಮ್ಮ ಕೆಲವು ಕಾರ್ಯಕರ್ತರಿದ್ದಿರಬಹುದಾದರೂ, ಒಂದು ಸಂಘಟನೆಯಾಗಿ ತಾವು ಶಾಮೀಲಾಗಿಲ್ಲವೆಂದು ಅವು ಸ್ಪಷ್ಟಪಡಿಸಿವೆ. ಹಿಂದೂ ಜಾಗರಣ್ ಮಂಚ್‌ನ ಸೋನು ಸವಿತಾ ಮೇ 2ರ ಪ್ರತಿಭಟನೆಯನ್ನು ತಾನು ಆಯೋಜಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ವಿವಿಯ ಪ್ರತಿಕೃತಿಯನ್ನು ದಹಿಸುವ ಕಾರ್ಯಕ್ರಮವನ್ನು ಮಾತ್ರ ಹಮ್ಮಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.
ಬಲವರ್ಧನೆ
2007ರಲ್ಲಿ ವೃಂದಾವನದಿಂದ ಕೌಶಲ್‌ನಾಥ್ ಅವರ ಆಗಮನದೊಂದಿಗೆ ಅಲಿಗಡದಲ್ಲಿ ಹಿಂದೂ ಯುವವಾಹಿನಿಯ ಶಾಖೆ ಆರಂಭಗೊಂಡಿತು.
ಕೌಶಲ್‌ನಾಥ್ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ತಲಾ ನಾಲ್ಕು ಜಿಲ್ಲೆಗಳಲ್ಲಿಯೂ ಈ ತೀವ್ರವಾದಿ ಯುವವಾಹಿನಿ 1,200-1,400ರಷ್ಟು ಅಧಿಕೃತ ಸದಸ್ಯರನ್ನು ಹೊಂದಿದೆ. ಅದರ ಸ್ಥಾಪಕ ಈಗ ಮುಖ್ಯಮಂತ್ರಿಯಾಗಿರುವುದರಿಂದ ಇತರ ಸಾವಿರಾರು ಹಿಂದೂಗಳು ಕೂಡಾ ಸದಸ್ಯತ್ವ ಪಡೆಯಲು ಬಯಸುತ್ತಿದ್ದಾರೆ. ‘‘ನಾವು ಸೋಶಿಯಲ್ ಮೀಡಿಯಾವನ್ನು ಕೂಡಾ ಹೊಂದಿದ್ದೇವೆ. ಫೇಸ್‌ಬುಕ್‌ನಲ್ಲಿ ನಮಗೆ 1.16 ಲಕ್ಷ ಅನುಯಾಯಿಗಳಿದ್ದಾರೆ’’ ಎಂದವರು ತಿಳಿಸಿದ್ದಾರೆ. ‘‘ಸಂಘಟನೆಯಲ್ಲಿ ಸರಕಾರಿ ನೌಕರರಿಗೆ ಸೇರ್ಪಡೆಗೆ ಅವಕಾಶವಿಲ್ಲ. ಆದರೆ ಅವರು ತಮ್ಮ ಮಕ್ಕಳನ್ನು ನಮ್ಮೆಡೆಗೆ ದೂುತ್ತಿದ್ದಾರೆ’ ಎಂದವರು ಹೇಳಿದ್ದಾರೆ.
ಅಲಿಗಡ ಮುಸ್ಲಿಂ ವಿವಿಯಲ್ಲಿ ಮೇ 2ರ ದಾಳಿಗೆ ಸಂಬಂಧಿಸಿ ಬಂಧಿತರಾದ ಕೆಲವೇ ಕೆಲವು ಮಂದಿಯಲ್ಲೊಬ್ಬರಾದ ಅಮಿತ್ ಗೋಸ್ವಾಮಿ ಎಬಿವಿಪಿಯೊಂದಿಗೆ ಗುರುತಿಸಿಕೊಂಡಿದ್ದ. ಆದರೆ ಎಬಿವಿಪಿಯ ಅಲಿಗಡ ವರಿಷ್ಠರಾದ ‘‘ಯೋಗೇಂದ್ರ ವರ್ಮಾ ಮಾತ್ರ, ಗೋಸ್ವಾಮಿ ಯಾವತ್ತೂ ಸಂಘಟನೆಯ ಸದಸ್ಯರಾಗಿರಲಿಲ್ಲ. ಆದರೆ ಸಾಮಾನ್ಯ ವಿದ್ಯಾರ್ಥಿಯಂತೆ ಅವರು ಅದನ್ನು ಬೆಂಬಲಿಸಿರಬಹುದು’’ ಎಂದು ಹೇಳುತ್ತಾರೆ.
ಎಬಿವಿಪಿಯ ಅಲಿಗಡ ಶಾಖೆಯು 1949ರ ಜುಲೈನಲ್ಲಿ ಆರಂಭಗೊಂಡಿತ್ತು. 2015ರವರೆಗೂ ಅದು ಸುಮಾರು 6,600ರಷ್ಟು ಸಾಧಾರಣ ಸಂಖ್ಯೆಯ ಸದಸ್ಯರನ್ನು ಹೊಂದಿತ್ತು. ಮುಂದಿನ ವರ್ಷದಲ್ಲಿ ಈ ಸಂಖ್ಯೆ 8 ಸಾವಿರಕ್ಕೇರಿದ್ದು, 2017ರಲ್ಲಿ 9,465ಕ್ಕೆ ತಲುಪಿತ್ತು. ‘‘ನಿಮ್ಮ ಸಿದ್ಧಾಂತಗಳನ್ನು ಪೋಷಿಸುವ ಸರಕಾರವಿದ್ದಲ್ಲಿ, ನಿಮ್ಮ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗುತ್ತದೆ’’ ಎಂದು ವರ್ಮಾ ತನ್ನ ತಂಡದ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ವಿವರಿಸುತ್ತಾರೆ.
ಆದರೆ ಎಬಿವಿಪಿ ಮಾತ್ರ ಇತರ ಹಿಂದುತ್ವ ಸಂಘಟನೆಗಳಂತಲ್ಲ. ವಿದ್ಯಾರ್ಥಿಗಳು ಮಾತ್ರವೇ ಅದರ ಕಾರ್ಯಕರ್ತರಾಗಿರುತ್ತಾರೆ. ಅಲಿಗಡದ ಧರ್ಮಸಮಾಜ ಪದವಿ ಕಾಲೇಜ್, ಗಗನ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಟೆಕ್ನಾಲಜಿ, ಗ್ಯಾನ್ ಮಹಾವಿದ್ಯಾಲಯ ಹಾಗೂ ಟಿಕಾರಾಮ್ ಕಾನ್ಯ ಮಹಾವಿದ್ಯಾಲಯಗಳಲ್ಲಿ ಎಬಿವಿಪಿ ಗಣನೀಯ ಸಂಖ್ಯೆಯ ಕಾರ್ಯಕರ್ತರನ್ನು ಹೊಂದಿದೆ. ಮೂಲತಃ ಮಥುರಾದವರಾದ 29 ವರ್ಷ ವಯಸ್ಸಿನ ವರ್ಮಾ, ಆಡಳಿತ ನಿರ್ವಹಣೆ (ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್) ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಖಾಸಗಿ ವಿಶ್ವವಿದ್ಯಾನಿಲಯವೊಂದರಲ್ಲಿ ಪಿಎಚ್‌ಡಿ ಅಧ್ಯಯನಕ್ಕಾಗಿ ಅರ್ಜಿ ಕೂಡಾ ಸಲ್ಲಿಸಿದ್ದಾರೆ.
ಯೋಗೇಶ್ ವಾರ್ಶ್ನೆ, ಎಎಂಯು ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಇನ್ನೋರ್ವ ಆರೋಪಿಯಾಗಿದ್ದಾನೆ. ಹಿಂದೂ ಜಾಗರಣ್ ಮಂಚ್‌ನ ಕಾರ್ಯಕರ್ತನಾಗಿದ್ದ ಈತನ ಸದಸ್ಯತ್ವವನ್ನು ಜನವರಿ ತಿಂಗಳಲ್ಲಷ್ಟೇ ರದ್ದುಪಡಿಸಲಾಗಿತ್ತು. 1935ರಲ್ಲಿ ಸ್ಥಾಪನೆಯಾದ ಈ ಸಂಘಟನೆಯು ಅಲಿಗಡದಲ್ಲಿ 200ರಿಂದ 400ರಷ್ಟು ಸದಸ್ಯರನ್ನು ಹೊಂದಿರುವುದಾಗಿ ಸವಿತಾ ತಿಳಿಸಿದ್ದಾರೆ. 2014ನೇ ಇಸವಿಯ ತನಕವೂ ಹಿಂದೂ ಜಾಗರಣ್ ಮಂಚ್ ಸಂಘಟನೆಯು ಮುಸ್ಲಿಮರನ್ನು ಹಾಗೂ ಕ್ರೈಸ್ತರನ್ನು ಹಿಂದೂಧರ್ಮಕ್ಕೆ ಮತಾಂತರಿಸುವ ‘ಘರ್‌ವಾಪಸಿ’ ಕಾರ್ಯಕ್ರಮದಲ್ಲಿ ನಿರತವಾಗಿತ್ತು. ಆದರೆ ಘರ್‌ವಾಪಸಿಯನ್ನು ಬಲವಂತವಾಗಿ ಮಾಡಲಾಗುತ್ತಿರುವ ವ್ಯಾಪಕವಾದ ಟೀಕೆಗಳು ಎದುರಾದ ಬಳಿಕ ಅದು ಕೋಮುವಾದಿ ವಿಷಯಗಳ ಬಗ್ಗೆ ಪತ್ರಿಕಾ ಹೇಳಿಕೆಗಳನ್ನು ನೀಡುವುದಕ್ಕೆ ಹಾಗೂ ಜಿನ್ನಾ ಭಾವಚಿತ್ರದಂತಹ ವಿಷಯಗಳ ಬಗ್ಗೆ ಅಭಿಯಾನಗಳನ್ನು ನಡೆಸುವುದಕ್ಕೆ ತನ್ನ ಗಮನ ಹರಿಸತೊಡಗಿತು.
ಇತ್ತೀಚಿನ ವರ್ಷಗಳಲ್ಲಿ ಹಿಂದೂ ಜಾಗರಣ್ ಮಂಚ್‌ನ ಸದಸ್ಯತ್ವದಲ್ಲಿ ಗಣನೀಯ ಏರಿಕೆಯಾಗದಿದ್ದರೂ, ಇಂತಹ ಅಭಿಯಾನಗಳು ಸದಸ್ಯತ್ವವನ್ನು ಹೆಚ್ಚಿಸಲು ನೆರವಾಗುತ್ತವೆಯೆಂದು ಕೌಶಲ್‌ನಾಥ್ ತಿಳಿಸಿದರು. ಭಾರೀ ಸಂಖ್ಯೆಯ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ನಮ್ಮೆಂದಿಗೆ ಸೇರ್ಪಡೆಗೊಳ್ಳಲು ಬಯಸುತ್ತಿದ್ದಾರೆಂದು ಅವರು ಹೇಳುತ್ತಾರೆ. ಅಲಿಗಡ ವಿವಿಯ ಹಾಸ್ಟೆಲ್‌ನಲ್ಲಿ ರಮಝಾನ್ ತಿಂಗಳಲ್ಲಿ ನಮಗೆ ಆಹಾರವನ್ನು ನೀಡಲಾಗುತ್ತಿರಲಿಲ್ಲವೆಂದು ಹಿಂದೂ ವಿದ್ಯಾರ್ಥಿಗಳು ಆಕ್ಷೇಪವನ್ನು ವ್ಯಕ್ತಪಡಿಸಿದ್ದರೆಂದು ಅವರು ಹೇಳುತ್ತಾರೆ.