ಫೆರಾರಿ ಕಾರಿಗಿಂತ ದುಬಾರಿ ಈ ಬೈಕ್ !

Update: 2018-05-18 10:27 GMT

ನೀವು ಮೋಟಾರ್ ಸೈಕಲ್ ಪ್ರಿಯರೆಂದಾದಲ್ಲಿ ನಿಮಗೆ ಹಾರ್ಲೆ-ಡೇವಿಡ್ ಸನ್ ಬುಚೆರೆರ್ ಬ್ಲೂ ಎಡಿಶನ್ ಬೈಕ್ ಬಗ್ಗೆ ಒಂದಿಷ್ಟು ತಿಳಿದಿದೆಯೇ ?... ವಿಲಾಸಿ ಕಾರು ಫೆರಾರಿಗಿಂತಲೂ ದುಬಾರಿ ಈ ಬೈಕ್. ಬರೋಬ್ಬರಿ 1.8 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ, ಅಂದರೆ ರೂ 12,24,09,000 ಮೌಲ್ಯದ ಈ ದುಬಾರಿ ಬೈಕಿನ ಫೀಚರ್ಸ್ ಬಗ್ಗೆ ತಿಳಿದರೆ ನಿಮಗೆ ಖಂಡಿತಾ ಅಚ್ಚರಿಯಾಗುವುದು. ಅತ್ಯಂತ ಬೆಲೆಬಾಳುವ ವಿಲಾಸಿ ಕಾರಿಗಿಂತಲೂ ಬೆಲೆಬಾಳುವ ಈ ಬೈಕ್ ಅನ್ನು  ವಿನ್ಯಾಸಗೊಳಿಸಿ ತಯಾರಿಸಲು ಕಾರ್ಲ್ ಎಫ್ ಬುಚೆರೆರ್ ಇಲ್ಲಿನ ವಾಚ್ ತಯಾರಕರಿಗೆ, ಬುಚೆರೆರ್ ಫೈನ್ ಜುವೆಲ್ಲರಿಗೆ ಹಾಗೂ ಬಂಡ್ನರ್ ಬೈಕ್ ತಜ್ಞರಿಗೆ ಒಂದು ವರ್ಷವೇ ತಗಲಿತ್ತು.

ಅಷ್ಟಕ್ಕೂ ಈ ಮೋಟಾರ್ ಸೈಕಲ್ ಅಷ್ಟೊಂದು ದುಬಾರಿಯೇಕೆ?, ಈ ಬೈಕ್ ಅನ್ನು ಸ್ವಿಸ್ ವಾಚ್ ಮತ್ತು ಚಿನ್ನಾಭರಣ ತಯಾರಕ ಸಂಸ್ಥೆ ಬುಚೆರೆರ್ ಹಾಗೂ ಸ್ವಿಸ್ ಕಸ್ಟಮ್ ಹಾರ್ಲೆ-ಡೇವಿಡ್ ಸನ್ ವರ್ಕ್ ಶಾಪ್ ಬಂಡ್ನರ್ ಬೈಕ್ ಜಂಟಿಯಾಗಿ ತಯಾರಿಸಿದ್ದವು. ಆರಂಭದಲ್ಲಿ ಹಾರ್ಲೆ-ಡೇವಿಡ್ ಸನ್ ಸ್ಲಿಮ್ ಎಸ್  ತಯಾರಿಸಿದ್ದ ಸಂಸ್ಥೆ ಈಗ ಬುಚೆರೆರ್ ಬ್ಲೂ ಎಡಿಶನ್ ತಯಾರಿಸಿದೆ. ಈ ಬೈಕ್ ನಲ್ಲಿರುವ ಪ್ರತಿಯೊಂದು ಲೋಹದ ವಸ್ತು ಕೂಡ ಮಶೀನುಗಳನ್ನು ಉಪಯೋಗಿಸದೆ ಕೈಗಳಿಂದಲೇ ವೆಲ್ಡ್ ಮಾಡಿ  ವಿನ್ಯಾಸಕ್ಕೆ ತಕ್ಕಂತೆ ಪಾಲಿಶ್ ಮಾಡಲಾಗಿದೆ. ಈ ಬೈಕ್ ನಲ್ಲಿ ಸಾಂಪ್ರದಾಯಿಕ ಫ್ರೇಮ್ ಮತ್ತು ರಿಮ್ ಇದ್ದರೆ,  ಶಾಖ ನಿರೋಧಕ ಎಲ್‍ಇಡಿ ಲೈಟ್ ಗಳು,  ದನದ ಚರ್ಮದಿಂದ ಮಾಡಿದ ಹಾಗೂ ಸ್ವಿಝಲ್ರ್ಯಾಂಡಿನಲ್ಲಿ ಕೈಯ್ಯಿಂದಲೇ ಹೊಲಿಯಲ್ಪಟ್ಟ ಸೀಟು ಇದೆ. ಈ ಬೈಕ್ ನ ಐರಿಡೀಸೆಂಟ್ ಬಣ್ಣ ಪಡೆಯಲು ಇಡೀ ಮೋಟಾರ್ ಸೈಕಲ್ ಅನ್ನು ಆರು ಬಣ್ಣದ ಪದರಗಳಲ್ಲಿ ಸಿಲ್ವರ್ ಪ್ಲೇಟ್ ಮಾಡಿ ನಂತರ  ಒಂದು ರಹಸ್ಯ ಕೋಟಿಂಗ್ ವಿಧಾನವನ್ನು ಬಳಸಲಾಗಿದೆ.

ಅಷ್ಟೇ ಅಲ್ಲ, ಈ ಮೋಟಾರ್ ಸೈಕಲ್ ನಲ್ಲಿ 360 ವಜ್ರದ ಹರಳುಗಳು, ಚಿನ್ನ ಲೇಪಿತ ಸ್ಕ್ರೂ, ವಾಲ್ವ್ ಗಳು, ಕಾರ್ಲ್ ಎಫ್ ಬುಚೆರೆರ್  ತಯಾರಿಸಿದ ವಿಶಿಷ್ಟ ವಾಚ್ ಹಾಗೂ ಬುಚೆರೆರೆ ಫೈನ್ ಜುವೆಲ್ಲರಿಯಿಂದ ರಿಂಗ್ ಗಳೂ ಇವೆ. ಡಿಝ್ಲರ್ ರೊಟೇಟಿಂಗ್ ರಿಂಗ್ ಬೈಕ್ ನ ಹ್ಯಾಂಡಲ್ ಮತ್ತು ಇತರ ಭಾಗಗಳಲ್ಲಿವೆ.

ಗಾಜಿನೊಳಗಡೆ ಸುರಕ್ಷಿತವಾಗಿರಿಸಲಾದ  ಆರು ಅಂಚುಗಳಿರುವ 5.40 ಕ್ಯಾರೆಟ್ ವಜ್ರವಿರುವ ಸೋಲಿಟೇರ್ ರಿಂಗ್ ಕೂಡ  ಈ ಬೈಕ್ ನಲ್ಲಿದೆ. ವಾಹನದಲ್ಲಿರುವ ದುಬಾರಿ ವಾಚ್ ಗೆ ಕೂಡ ಹಾನಿಯಾಗದಂತೆ ಸಾಕಷ್ಟು ಸುರಕ್ಷಾ ವಿಧಾನಗಳನ್ನು ಅನುಸರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News