×
Ad

ರಾಯಚೂರು ರೈಲು ನಿಲ್ದಾಣದಲ್ಲಿ ಕಂಡರು ಗಾಂಧೀಜಿ!

Update: 2025-12-21 09:44 IST

ಎಡೆದೊರೆ ನಾಡಾದ ರಾಯಚೂರು ಜಿಲ್ಲೆಯು ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ. ಇದರಂತೆ ದಿನನಿತ್ಯವೂ ಸಾವಿರಾರು ಜನ ಓಡಾಡುವ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರಂಗೆ ಕಾಲಿಟ್ಟರೆ ಸಾಕು ಭಾರತದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ದರ್ಶನವಾಗುತ್ತದೆ! ಇಲ್ಲಿನ ರೈಲು ನಿಲ್ದಾಣದಲ್ಲಿ ಗಾಂಧೀಜಿ ಅವರ ಜೀವನದ ವಿವಿಧ ಘಟನಾವಳಿಗಳು ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತವೆ. ರಾಯಚೂರು ರೈಲ್ವೆ ನಿಲ್ದಾಣದ ಹೊರಗೆ ಮತ್ತು ಒಳಗೆ ಸ್ವಾತಂತ್ರ್ಯ ಹೋರಾಟದ ಸಂದರ್ಭದ ವಿವಿಧ ಗೋಡೆಚಿತ್ರಗಳು ಮೋಹಕವಾಗಿ ಅನಾವರಣಗೊಂಡು ಮನಸೂರೆಗೊಳಿಸುತ್ತವೆ.

‘ಸ್ವಚ್ಛ ಭಾರತ ಸ್ವಚ್ಛ ರೈಲು’ ಯೋಜನೆಯಡಿ ಮತ್ತು ಗಾಂಧೀಜಿಯವರು ರೈಲು ನಿಲ್ದಾಣಕ್ಕೆ ಕಾಲಿಟ್ಟು 2018ಕ್ಕೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿಜೀಯ ಈ ಚಿತ್ರಗಳನ್ನು ಚಿತ್ರಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧೀಜಿಯವರು ರಾಯಚೂರಿ ನಿಂದ ಮಹಾರಾಷ್ಟ್ರಕ್ಕೆ ರೈಲಿನಲ್ಲಿ ತೆರಳಿದ್ದರು. ಆ ನೆನಪನ್ನು ಇಲ್ಲಿ ಮೆಲಕು ಹಾಕುವಂತೆ ಈ ಚಿತ್ರಗಳು ಮಾಡುತ್ತವೆ.

ರಾಯಚೂರು ರೈಲ್ವೆ ನಿಲ್ದಾಣವು ಜಂಕ್ಷನ್ ಆಗಿದ್ದು ಇದನ್ನು ಇಂಗ್ಲಿಷ್‌ನಲ್ಲಿ ‘ಆರ್ಸಿ’ ಎಂದು ಸಾಂಕೇತಿಕವಾಗಿ ಸೂಚಿಸಲಾಗುತ್ತಿದೆ. ಈ ರೈಲು ನಿಲ್ದಾಣ ನೂರಾ ಐವತ್ತು ವರ್ಷಗಳು ತುಂಬಿದ ಇತಿಹಾಸ ಹೊಂದಿದೆ.

ಬ್ರಿಟಿಷರ ಕಾಲದಿಂದಲೂ ಮುಂಬೈ ಮತ್ತು ಚೆನೈ ಮಾರ್ಗದ ರೈಲು ಗಾಡಿಗಳಿಗೆ ರಾಯಚೂರಿನ ನಿಲ್ದಾಣವು ಮುಖ್ಯ ರೈಲು ನಿಲ್ದಾಣವಾಗಿತ್ತು. ರಾಯಚೂರು ರೈಲು ನಿಲ್ದಾಣವು ಮುಂಬಯಿ-ಚೆನೈ ರೈಲು ಮಾರ್ಗದ ಮೇನ್ ಲೈನ್‌ನಲ್ಲಿದೆ.

ರಾಯಚೂರು ನಿಲ್ದಾಣಕ್ಕೆ ತನ್ನದೇ ಆದ ಚರಿತ್ರೆ, ಇತಿಹಾಸವಿದೆ. 1871ರ ಬ್ರಿಟಿಷ್‌ಕಾಲದ ಇಂಡಿಯನ್ ಪೆನಿನ್ಸುಲಾ ರೈಲ್ವೆ ಮತ್ತು ಮದ್ರಾಸ್ ರೈಲ್ವೇ ಮಾರ್ಗಗಳು ರಾಯಚೂರು ರೈಲು ನಿಲ್ದಾಣದಲ್ಲಿ ಸೇರುತ್ತಿದ್ದವು. ಮುಂಬೈಯಿಂದ ಪ್ರಾರಂಭವಾದ ರೈಲುಮಾರ್ಗ ಹಾಗೂ ಮದ್ರಾಸ್(ಚೆನೈ)ನಿಂದ ಪ್ರಾರಂಭ ವಾದ ರೈಲುಮಾರ್ಗಗಳು ರಾಯಚೂರು ರೈಲು ನಿಲ್ದಾಣದಲ್ಲಿ ಕೊನೆಗೊಂಡವು. ರಾಯಚೂರು ರೈಲು ನಿಲ್ದಾಣವು ವಾಡಿ, ಗುಂತಕಲ್ಲು ಮತ್ತು ಗದ್ವಾಲ್ ರೈಲು ಮಾರ್ಗಗಳನ್ನು ಒಳಗೊಂಡಿದೆ. ಗಿಣಿಗೆರಾ - ಸಿಂಧನೂರು - ರಾಯಚೂರು ಹೊಸ ರೈಲು ಮಾರ್ಗವು ಪ್ರಗತಿಯಲ್ಲಿದೆ. ಮುಖ್ಯವಾಗಿ ರಾಯಚೂರು ರೈಲ್ವೆ ನಿಲ್ದಾಣವು ಜಂಕ್ಷನ್ ಆಗಿದ್ದು ಗುಂತಕಲ್ಲು ವಿಭಾಗಕ್ಕೆ ಸೇರಿದೆ. ಗುಂತಕಲ್ ರೈಲು ನಿಲ್ದಾಣವು ಮುಖ್ಯ ರೈಲು ನಿಲ್ದಾಣವಾಗಿದೆ. ರಾಯಚೂರು ರೈಲು ನಿಲ್ದಾಣದ ಕೋಡ್ ‘ಆರ್ಸಿ’ಯಾಗಿದೆ. ಮೂರು ಪ್ಲಾಟ್‌ಫಾರಂಗಳನ್ನು ಹೊಂದಿದ್ದು, ಪ್ರತಿದಿನ ಎಂಬತ್ತಕ್ಕೂ ಹೆಚ್ಚು ರೈಲುಗಳು ರಾಯಚೂರಿನ ನಿಲ್ದಾಣದಲ್ಲಿ ನಿಂತು, ಹಾದು ಹೋಗುತ್ತವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ, ದಿಲ್ಲಿ, ಮುಂಬೈ, ಚೆನ್ನೈ, ಹೈದರಬಾದ್, ಅಹಮದಾ ಬಾದ್, ಕೊಯಂಬತ್ತೂರ್, ತ್ರಿವೇಂದ್ರಂ ಮುಂತಾದ

ದೇಶದ ಹಲವು ನಗರಗಳಿಗೆ ಬ್ರಾಡ್ಗೇಜ್ ಮಾರ್ಗದ ಮೂಲಕ ರೈಲು ಸಾರಿಗೆ ಉತ್ತಮ ಸಂಪರ್ಕ ಸೇವೆಯನ್ನು ಹೊಂದಿದೆ.ದಕ್ಷಿಣ ಮಧ್ಯೆ ರೈಲು ವಿಭಾಗದ ರೈಲು ನಿಲ್ದಾಣಗಳಲ್ಲಿನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛ ಭಾರತ, ಸ್ವಚ್ಛ ರೈಲು ವಿಶಿಷ್ಟವಾದ ಯೋಜನೆಯೊಂದನ್ನು ಹಾಕಿಕೊಂಡು, ಇದರಡಿಯಲ್ಲಿ ರಾಯಚೂರು ನಿಲ್ದಾಣವು ಆಯ್ಕೆಗೊಂಡು ತನ್ನ ಚಹರೆಯನ್ನೇ ಬದಲಾಯಿಸಿಕೊಂಡಿತು. ಅಂದಿನ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರ ಇಚ್ಛೆಯಂತೆ ಆಯ್ಕೆಗೊಂಡ ನೂರು ರೈಲು ನಿಲ್ದಾಣಗಳಲ್ಲಿ ಆಯಾ ಭಾಗದ ಇತಿಹಾಸ, ಚರಿತ್ರೆ, ಜನಪದ ಇನ್ನಿತರ ಕಲೆಗಳನ್ನು ರೈಲುನಿಲ್ದಾಣದ ಆವರಣದಲ್ಲಿ ಚಿತ್ರಕಲೆಯ ಮೂಲಕ ಅನಾವರಣಗೊಳಿಸುವ ಮಹತ್ವದ ಚಿಂತನೆ ದಕ್ಷಿಣ ಮಧ್ಯೆ ರೈಲ್ವೆ ಹಮ್ಮಿಕೊಂಡಿತು.

ರಾಯಚೂರು ರೈಲು ನಿಲ್ದಾಣವು ಸ್ವಾತಂತ್ರ್ಯ ಹೋರಾಟದ ಯಶೋಗಾಥೆಯ ಚಿತ್ರಾವಳಿಗಳು ಪ್ರಯಾಣಿಕರಿಗೆ ಕಂಡು ಬರುವುದರ ಮೂಲಕ, ಸ್ವಾತಂತ್ರ್ಯದ ವಿವಿಧ ಘಟನೆಗಳು ಮನಪಟಲದಲ್ಲಿ ಹಾಯ್ದು ಹೋಗುವುದಂತು ಗ್ಯಾರಂಟಿ. ಈ ಹಿಂದೆ ಇದ್ದ ಖಾಲಿ ಗೋಡೆಗಳಲ್ಲಿ ಉಪ್ಪಿನ ಸತ್ಯಾಗ್ರಹ, ಗಾಂಧೀಜಿಯ ರೈಲು ಪ್ರಯಾಣ, ಸ್ವಚ್ಛಭಾರತ ಕುರಿತಾದ ಚಿತ್ರಗಳು ನೋಡುಗರಲ್ಲಿ ಅರಿವು ಮೂಡಿಸುತ್ತವೆ. ಪ್ರಮುಖವಾಗಿ ಈ ಕಲಾಕೃತಿಗಳೊಂದಿಗೆ ರೈಲು ನಿಲ್ದಾಣವು ಶುಚಿತ್ವವನ್ನು ಕಾಪಾಡಿಕೊಂಡಿದೆ. ಬಣ್ಣಗಳಿಂದ ಕೂಡಿ ಹೊಸಕಳೆ, ಮೆರಗನ್ನು ಪಡೆದುಕೊಂಡಿದೆ.

ಗಾಂಧೀಜಿಯವರ ಚಿತ್ರಕಲಾಕೃತಿಗಳು ಅಲ್ಲದೆ ವಿವಿಧ ಬಗೆಯ, ಹತ್ತು ಹಲವಾರು ಉಬ್ಬುಶಿಲ್ಪ ಗಳು ಗಮನ ಸೆಳೆಯುತ್ತವೆ. ಟಿಕೇಟು ತೆಗೆದುಕೊಳ್ಳುವ ವರಾಂಡದ ಸುತ್ತಲೂ ಇರುವ ಹಂಪಿರಥ, ಯಕ್ಷಗಾನ ಮಾದರಿ, ಗಾಯನ, ನೃತ್ಯದ ಮಾದರಿ ಇನ್ನಿತರ ಸುಂದರ ಉಬ್ಬು ಶಿಲ್ಪದ ಕಲಾಕೃತಿಗಳು ಪ್ರಯಾಣಿಕರನ್ನು ಆಕರ್ಷಿಸುತ್ತವೆ. ಅಂದಹಾಗೆ ರಾಯಚೂರು ರೈಲ್ವೆ ನಿಲ್ದಾಣವು ಉತ್ತಮ ನಿರ್ವಹಣೆ ಯಿಂದ ಕೂಡಿದೆ ಎಂದು ಕೆಂದ್ರ ರೈಲ್ವೆ ಸಚಿವರ ಪ್ರಶಂಸೆಗೆ ಪಾತ್ರವಾಗಿದೆ. ಮಹಾತ್ಮ ಗಾಂಧೀಜಿ ಯವರ ಚಿತ್ರಕಲಾಕೃತಿಗಳಿಂದ ರಾಯಚೂರು ರೈಲ್ವೆ ನಿಲ್ದಾಣವು ನವೀಕರಣಗೊಂಡು ನಳನಳಿಸುತ್ತಿದ್ದು, ಇದು ರಾಯಚೂರಿನ, ಕರುನಾಡಿನ ಹೆಮ್ಮೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News