ರಮಝಾನ್ ತಿಂಗಳಿಗೆ ಮುಸ್ಲಿಮರಿಗೆ ಶುಭ ಹಾರೈಸಿದ ಟ್ರಂಪ್

Update: 2018-05-18 17:50 GMT

ವಾಶಿಂಗ್ಟನ್, ಮೇ 18: ಹಿಂದಿನ ವರ್ಷಕ್ಕೆ ವ್ಯತಿರಿಕ್ತವಾಗಿ, ಪವಿತ್ರ ರಮಝಾನ್ ತಿಂಗಳ ಆರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಮುಸ್ಲಿಮರಿಗೆ ಶುಭ ಹಾರೈಸಿದ್ದಾರೆ.

ಅಮೆರಿಕದ ಧಾರ್ಮಿಕ ಬದುಕನ್ನು ಶ್ರೀಮಂತಗೊಳಿಸಲು ಮುಸ್ಲಿಮರು ನೀಡುವ ದೇಣಿಗೆಯ ಬಗ್ಗೆ ರಮಝಾನ್ ನಮಗೆ ಮನದಟ್ಟುಮಾಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಜೂನ್ ಆರಂಭದಲ್ಲಿ ಶ್ವೇತಭವನದಲ್ಲಿ ಇಫ್ತಾರ್ ಕೂಟವೊಂದನ್ನು ಏರ್ಪಡಿಸುವ ಬಗ್ಗೆ ಅದು ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಿದೆ ಎಂದು ವಾಶಿಂಗ್ಟನ್ ಪ್ರದೇಶದಲ್ಲಿ ಅಂತರ್‌ಧರ್ಮೀಯ ರಾಜತಾಂತ್ರಿಕತೆಯಲ್ಲಿ ತುಂಬಾ ಸಮಯದಿಂದ ತೊಡಗಿಸಿಕೊಂಡಿರುವ ಮುಸ್ಲಿಮ್ ರಿಯಲ್ ಎಸ್ಟೇಟ್ ಉದ್ಯಮಿ ರೇ ಮಹ್ಮೂದ್ ಹೇಳಿದ್ದಾರೆ.

ರಮಝಾನ್ ಸಂದರ್ಭದಲ್ಲಿ ಮುಸ್ಲಿಮರಿಗೆ ಶುಭ ಹಾರೈಸುವುದು ಹಾಗೂ ಇಫ್ತಾರ್ ಕೂಟವೊಂದನ್ನು ಏರ್ಪಡಿಸುವುದು ದಶಕಗಳಿಂದ ಶ್ವೇತಭವನದ ಸಂಪ್ರದಾಯವಾಗಿತ್ತು. ಆದರೆ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಇದು ಬದಲಾಗಿತ್ತು.

ಕಳೆದ ವರ್ಷ ರಮಝಾನ್ ಹಬ್ಬದ ಸಂದರ್ಭದಲ್ಲಿ ಟ್ರಂಪ್ ನೀಡಿದ ಹೇಳಿಕೆ ಹೀಗಿತ್ತು: ''ಕೋಟ್ಯಂತರ ಮಂದಿ ಆಚರಿಸುವ ಈ ಹಬ್ಬವು, ಹಿಂಸೆಯನ್ನು ತ್ಯಜಿಸುವ ನಮ್ಮೆಲ್ಲರ ಬದ್ಧತೆಯನ್ನು ಬಲಪಡಿಸುತ್ತದೆ''.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News