ಕಾನ್ಸ್ ಚಿತ್ರೋತ್ಸವ : ಜನಾಂಗೀಯ ಪಕ್ಷಪಾತ ಧೋರಣೆ ವಿರುದ್ಧ ಕರಿಯ ನಟಿಯರ ಪ್ರತಿಭಟನೆ

Update: 2018-05-18 18:02 GMT
ಸಾಂದರ್ಭಿಕ ಚಿತ್ರ

ಕಾನ್ಸ್ (ಫ್ರಾನ್ಸ್), ಮೇ 18: ಫ್ರಾನ್ಸ್‌ನ ಕಾನ್ಸ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಿರುವ 16 ಕರಿಯ ನಟಿಯರು, ಫ್ರಾನ್ಸ್ ಚಿತ್ರೋದ್ಯಮದಲ್ಲಿರುವ ಜನಾಂಗೀಯ ಪಕ್ಷಪಾತ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಲಿಂಗ ಸಮಾನತೆಗಾಗಿ ಕಾನ್ಸ್ ತೀರ್ಪುಗಾರರ ಮಂಡಳಿಯ ಅಧ್ಯಕ್ಷೆ ಕೇಟ್ ಬ್ಲಾಂಚೆಟ್ ನೇತೃತ್ವದಲ್ಲಿ 82 ಮಹಿಳೆಯರು ಅಭಿಯಾನವೊಂದನ್ನು ಆರಂಭಿಸಿದ ಕೆಲವೇ ದಿನಗಳ ಬಳಿಕ ಈ ಪ್ರತಿಭಟನೆ ನಡೆದಿದೆ.

'ಮೈ ಪ್ರೊಫೆಶನ್ ಈಸ್ ನಾಟ್ ಬ್ಲಾಕ್' ಎಂಬ ನೂತನ ಪುಸ್ತಕದ ಪ್ರಚಾರ ಸಂದರ್ಭದಲ್ಲಿ ಐಸಾ ಮೈಗ ನೇತೃತ್ವದಲ್ಲಿ ನಟಿಯರು ಪ್ರತಿಭಟನೆ ನಡೆಸಿದರು ಎಂದು 'ವೆರೈಟಿ' ಪತ್ರಿಕೆ ವರದಿ ಮಾಡಿದೆ.

''ಇದೊಂದು ಐತಿಹಾಸಿಕ ಕ್ಷಣವಾಗಿದೆ. ಇದು ನನ್ನ ಅತಿ ವಿಚಿತ್ರ ಕನಸಿಗೂ ಮೀರಿದ ಕಲ್ಪನೆಯಾಗಿದೆ. 20 ವರ್ಷಗಳ ಕಾಲ ನಾನು ನಟಿಸಿದ್ದೇನೆ. ಆದರೆ, ಇಂಥ ಒಂದು ಭಾವನೆ ನನ್ನಲ್ಲಿ ಯಾವತ್ತೂ ಹುಟ್ಟಿರಲಿಲ್ಲ'' ಎಂದು ಮೈಗ ಹೇಳಿದರು.

ಬೋಸಾನ್-ಡಯಾಗನ್, ಮಾಟಾ ಗ್ಯಾಬಿನ್, ಮೈಮೂನಾ ಗ್ವೇಯ್, ಎಯೆ ಹೈದರಾ, ರ್ಯಾಚೆಲ್ ಖಾನ್, ಸಾರಾ ಮಾರ್ಟಿನ್ಸ್, ಮೇರೀ-ಫಿಲೋಮಿನಿ, ಸ್ಯಾಬೈನ್ ಪಕೋರ, ಫಿರ್ಮಿನಿ ರಿಚರ್ಡ್, ಸೋನಿಯಾ ರೋಲ್ಯಾಂಡ್, ಮಗಾಜ್ಯಿಯಾ ಸಿಲ್ಬರ್‌ಫೀಲ್ಡ್, ಶರ್ಲಿ ಸೋವಗ್ನಾನ್, ಅಸಾ ಸಿಲ್ಲಾ, ಕರಿಡ್ಜಾ ಟೂರ್ ಮತ್ತು ಫ್ರಾನ್ಸ್ ರೆಬ್ಡ ಮುಂತಾದವರು ಪ್ರತಿಭಟನಕಾರರ ಗುಂಪಿನಲ್ಲಿದ್ದರು.

ಸಾಮಾಜಿಕ ವ್ಯವಸ್ಥೆ ಮತ್ತು ಫ್ರಾನ್ಸ್ ಚಿತ್ರೋದ್ಯಮವನ್ನು ಬದಲಿಸಲು ಕಾನ್ಸ್ ವೇದಿಕೆಯನ್ನು ಬಳಸಿಕೊಳ್ಳುವ ಮಹತ್ವದ ಬಗ್ಗೆ ಮೈಗ ಈ ಸಂದರ್ಭದಲ್ಲಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News