ಲಷ್ಕರೆ, ಜೈಶೆ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ

Update: 2018-05-18 18:04 GMT

ಇಸ್ಲಾಮಾಬಾದ್, ಮೇ 18: ಭಾರತದಲ್ಲಿ ದಾಳಿಗಳನ್ನು ನಡೆಸುವುದಕ್ಕಾಗಿ ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕರನ್ನು ಬಳಸಿಕೊಳ್ಳುವ ಪಾಕಿಸ್ತಾನದ ನೀತಿಯನ್ನು ಮಾಜಿ ಪ್ರಧಾನಿ ನವಾಜ್ ಶರೀಫ್ ಪ್ರಶ್ನಿಸುವ 3 ವರ್ಷಗಳ ಮೊದಲೇ, ಲಷ್ಕರೆ ತಯ್ಯಬ ಮತ್ತು ಜೈಶೆ ಮುಹಮ್ಮದ್ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶರೀಫ್ ಸರಕಾರವನ್ನು ಒತ್ತಾಯಿಸಿದ್ದರು.

ಮುಂಬೈ ಭಯೋತ್ಪಾದಕ ದಾಳಿ ಬಗ್ಗೆ ತನಿಖೆ ನಡೆಸಿದ್ದ ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿಯ ಮಾಜಿ ಮುಖ್ಯಸ್ಥ ತಾರೀಖ್ ಖೋಸಾ ಅಂದಿನ ಪಾಕ್ ಸರಕಾರಕ್ಕೆ ಈ ಶಿಫಾರಸು ಮಾಡಿದ್ದರು.

ಪೇಶಾವರದ ಸೇನಾ ಶಾಲೆಯಲ್ಲಿ 2014 ಡಿಸೆಂಬರ್ 16ರಂದು ತಾಲಿಬಾನ್ ಭಯೋತ್ಪಾದಕರು ನಡೆಸಿದ ಮಾರಣಹೋಮದ ಬಳಿಕ, ಭಯೋತ್ಪಾದನೆ ನಿಗ್ರಹ ಕ್ರಿಯಾ ಯೋಜನೆಯೊಂದನ್ನು ತಯಾರಿಸುವಂತೆ ಪಿಎಂಎಲ್-ಎನ್ ಸರಕಾರ ಖೋಸಾಗೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ, ಅವರು 'ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ತಂತ್ರಗಾರಿಕೆ' ಎಂಬ ವರದಿಯನ್ನು ಅಂದಿನ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಸೇರಿದಂತೆ ಹಲವರನ್ನು ಒಳಗೊಂಡ ಕ್ರಿಯಾ ಗುಂಪಿಗೆ ಸಲ್ಲಿಸಿದ್ದರು.

ಈ ವರದಿಯ ಆಧಾರದಲ್ಲಿ ಭಯೋತ್ಪಾದನೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಲಾಯಿತು. ಬಳಿಕ, ಅದೇ ತಿಂಗಳಲ್ಲಿ ಸರಕಾರ ಅದನ್ನು ಅನುಮೋದಿಸಿತು.

ತನ್ನ ಪುಸ್ತಕ 'ದ ಫಾಲ್ಟರಿಂಗ್ ಸ್ಟೇಟ್'ನಲ್ಲಿ ಖೋಸಾ ಈ ಕುರಿತ ವಿವರಗಳನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News