×
Ad

ಅಲಿಗಡದ ಶಾಂತಿ ಕದಡಲು ಕೇಸರಿ ಪಡೆಗಳ ಸಂಚು?

Update: 2018-05-18 23:47 IST

ಭಾಗ-2

 ಮುಖ್ಯ ಗುರಿ

ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯವು ಅಲಿಗಡದ ಪರಂಪರೆಯ ಅತ್ಯಂತ ಪ್ರಮುಖ ಭಾಗವಾಗಿದೆ. ವಿವಿಯ 35 ಸಾವಿರ ವಿದ್ಯಾರ್ಥಿಗಳ ಪೈಕಿ ಬಹುತೇಕ ವಿದ್ಯಾರ್ಥಿಗಳು ಅಲಿಗಡದ ಹೊರಗಿನವರಾಗಿದ್ದಾರೆ. ಕೇಂದ್ರ ಸರಕಾರದ ಈ ವರ್ಷದ ವಿವಿ ರ್ಯಾಂಕಿಂಗ್‌ನಲ್ಲಿ ಎಎಂಯು ಹತ್ತನೆ ಸ್ಥಾನವನ್ನು ಪಡೆದಿದೆ. ಈ ವಿಶ್ವವಿದ್ಯಾನಿಲಯವು ಮುಸ್ಲಿಮರ ರಾಷ್ಟ್ರೀಯ ಸಂಕೇತವಾಗಿರುವುದರಿಂದ ಪ್ರತಿಯೊಂದು ಹಿಂದುತ್ವವಾದಿ ಸಂಘಟನೆಗಳು ಅದರ ಮೇಲೆ ಕಣ್ಣಿರಿಸಿವೆ.

ಅಲಿಗಡ ವಿವಿಯು ತಮ್ಮ ಪಾಲಿಗೆ ಅತ್ಯಂತ ಮಹತ್ವವಾದುದೆಂದು ಕೌಶಲ್‌ನಾಥ್ ಹಾಗೂ ಎಬಿವಿಪಿಯ ಯೋಗೇಂದ್ರ ವರ್ಮಾ ಇಬ್ಬರೂ ಒಪ್ಪಿಕೊಳ್ಳುತ್ತಾರೆ. ‘‘ಅಲ್ಲಿ ನಮ್ಮ ಯಾವುದೇ ಶಾಖೆಯಿಲ್ಲ. ಆದರೆ ನಾವು ಅತ್ಯಂತ ನಿಕಟವಾಗಿ ನಿಗಾವಹಿಸಬೇಕಾದ ಏಕೈಕ ಕೇಂದ್ರೀಯ ವಿಶ್ವವಿದ್ಯಾನಿಲಯ ಇದಾಗಿದೆ’’ ಎಂದು ವರ್ಮಾ ಹೇಳುತ್ತಾರೆ.

ಎಎಂಯು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಸ್ಥಾನ ಹೊಂದಿರುವು ದರಿಂದ, ಹಿಂದೂಗಳಿಗೆ ಮೀಸಲು ಸ್ಥಾನಗಳನ್ನು ನೀಡಲು ಅಲ್ಲಿ ಅವಕಾಶವಿಲ್ಲವೆಂದು ಕೌಶಲ್‌ನಾಥ್ ದೂರುತ್ತಾರೆ.

ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯವು ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರ ವಿರೋಧಿಗಳಿಗೆ ಆಶ್ರಯ ನೀಡುತ್ತಿದೆಯೆಂದು ಹಿಂದುತ್ವವಾದಿ ಸಂಘಟನೆಗಳು ಆರೋಪಿಸಿವೆ. ಸಿಮಿ ಸಂಘಟನೆಯು ಅಲಿಗಡದಲ್ಲಿ ಜನಿಸಿದೆಯೆಂದು ಕೌಶಲ್‌ನಾಥ್ ಹೇಳುತ್ತಾರೆ. ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಯಾಕೂಬ್ ಮೆಮನ್‌ನಂತಹ ವ್ಯಕ್ತಿಗಳನ್ನು ಬೆಂಬಲಿಸಿ ಪಾದಯಾತ್ರೆ ನಡೆಸಿದ್ದಾರೆ ಹಾಗೂ ಮನಾನ್ ವಾನಿ ಅಲ್ಲಿ ವಿದ್ಯಾರ್ಥಿಯಾಗಿದ್ದನೆಂದವರು ತಿಳಿಸುತ್ತಾರೆ.

2000ನೇ ಇಸವಿಯಲ್ಲಿ ಸಿಮಿ ಸಂಘಟನೆಯು ನಿಷೇಧಿಸಲ್ಪಟ್ಟಿತ್ತು. ಕಾಶ್ಮೀರದ ಸಂಶೋಧನಾ ವಿದ್ಯಾರ್ಥಿಯಾದ ಮನಾನ್ ವಾನಿ ಜನವರಿ 2ರಂದು ನಾಪತ್ತೆಯಾಗಿದ್ದ ಹಾಗೂ ಆತ ಉಗ್ರಗಾಮಿಗಳ ಜೊತೆ ಸೇರಿಕೊಂಡಿದ್ದನೆನ್ನಲಾಗಿದೆ. ಮುಂಬೈಯಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಶಾಮೀಲಾಗಿದ್ದನೆಂಬ ಆರೋಪದಲ್ಲಿ ಮೆಮನ್‌ನನ್ನು 2015ರಲ್ಲಿ ಗಲ್ಲಿಗೇರಿಸಲಾಗಿತ್ತು.

ಮೆಮನ್‌ಗೆ ಎಎಂಯು ಬೆಂಬಲ ನೀಡುತ್ತಿದೆಯೆಂದು ಆರೋಪಿಸಿ ಕೌಶಲ್‌ನಾಥ್ 2015ರಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಆತನ ವಿರುದ್ಧ ಪೊಲೀಸರು ಕಾನೂನು ಉಲ್ಲಂಘನೆಯ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಆಗ ಲೋಕಸಭಾ ಸದಸ್ಯರಾಗಿದ್ದ ಯೋಗಿ ಆದಿತ್ಯನಾಥ್ ಅವರ ನೆರವಿಗೆ ಬಂದಿದ್ದರು. ಎಎಂಯು ಕ್ಯಾಂಪಸ್‌ನಲ್ಲಿಯೂ ತಮ್ಮ ಸಂಘಟನೆಗೆ ಬೆಂಬಲಿಗರಿದ್ದಾರೆಂದು ವರ್ಮಾ ಹೇಳಿಕೊಳ್ಳುತ್ತಾರೆ. ಕೆಲವು ಹಿಂದೂ ವಿದ್ಯಾರ್ಥಿಗಳು ತಮ್ಮ ಅಳಲನ್ನು ಹಂಚಿಕೊಳ್ಳಲು ಬರುತ್ತಾರೆ ಹಾಗೂ ತಮಗೆ ಅಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುತ್ತಾರೆಂದು ಹೇಳುತ್ತಾರೆ. ವಿವಿಯ ಶಿಕ್ಷಕರೊಂದಿಗೂ ತಾವು ಸಂಪರ್ಕದಲ್ಲಿರುವುದಾಗಿ ವರ್ಮಾ ಹೇಳುತ್ತಾರೆ. ಮುಸ್ಲಿಂ ಉಪನ್ಯಾಸಕರು ಅವರ ಸಮುದಾಯದ ವಿದ್ಯಾರ್ಥಿಗಳ ಪರವಾಗಿ ಪಕ್ಷಪಾತದಿಂದ ವರ್ತಿಸುತ್ತಾರೆಂದು ಕೌಶಲ್‌ನಾಥ್ ಆರೋಪಿಸುತ್ತಾರೆ.

 ಅಲಿಗಡ ವಿಶ್ವವಿದ್ಯಾನಿಲಯದ ಮುಸ್ಲಿಂ ಹಾಗೂ ಹಿಂದೂ ವಿದ್ಯಾರ್ಥಿ ಗಳೆಲ್ಲರಿಗೂ, ಕ್ಯಾಂಪಸ್‌ನಲ್ಲಿ ಹಿಂದುತ್ವವಾದಿ ಸಂಘಟನೆಗಳು ನೆಲೆಯೂರಲು ಪ್ರಯತ್ನಿಸುತ್ತಿರುವ ಅರಿವಿದೆ. ರಮಝಾನ್ ಸಮಯದಲ್ಲಿ ಅಲಿಗಡ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಲಭ್ಯವಿಲ್ಲವೆಂಬ ಆರೋಪ ಗಳನ್ನು ಅದೇ ವಿವಿಯ ಹಿಂದೂ ವಿದ್ಯಾರ್ಥಿಯೊಬ್ಬರು ತಳ್ಳಿಹಾಕಿದ್ದರು. ‘‘ಊಟಕ್ಕೆ ಬಂದವರ ಸಂಖ್ಯೆ 100ಕ್ಕಿಂತ ಕಡಿಮೆ ಇದ್ದರೆ ಮಾತ್ರವೇ ಭೋಜನಶಾಲೆಗಳನ್ನು ಮುಚ್ಚಲಾಗುವುದು ಹಾಗೂ ಹಿಂದೂಗಳಿಗೆ ಉಪವಾಸವು ಕಡ್ಡಾಯವಾಗಿಲ್ಲ’’ ಎಂದವರು ಸ್ಪಷ್ಟಪಡಿಸಿದ್ದರು. ಇಂತಹ ವಿಷಯಗಳ ಕುರಿತಾದ ದೂರುಗಳನ್ನು ಬಗೆಹರಿಸುವ ಹೊಣೆಯನ್ನು ವಿವಿಯ ಶಿಸ್ತುಪಾಲನಾಧಿಕಾರಿ ಅಥವಾ ವಾರ್ಡನ್ ಅವರಿಗೆ ಬಿಟ್ಟರೆ ಒಳ್ಳೆಯದು ಎಂದಾತ ಪ್ರತಿಪಾದಿಸಿದ್ದರು. ಆನ್‌ಲೈನ್‌ನಲ್ಲಿ ಈ ಬಗ್ಗೆ ಆತ ಮಾಡಿದ ಪೋಸ್ಟ್ ಗೆ ವ್ಯಾಪಕವಾದ ಟೀಕೆಗಳು ವ್ಯಕ್ತವಾಗಿತ್ತು. ಈ ಸಲವೂ ಕೇಸರಿ ಸಂಘಟನೆಗಳು, ಸುಲಭವಾಗಿ ಹಿಂದೆ ಸರಿಯುವ ಇರಾದೆಯಲ್ಲಿಲ್ಲ. ಮೇ 2ರ ಘಟನೆಯ ಬಗ್ಗೆಯೂ ಅವರೆಲ್ಲರೂ ಹಳೆ ಕತೆಯನ್ನೇ ಪುನರುಚ್ಚರಿಸುತ್ತಾರೆ. ತಾವು ಪ್ರತಿಭಟನೆ ನಡೆಸಲು ಬಂದಿದ್ದೇವಷ್ಟೇ ಹೊರತು, ವಿದ್ಯಾರ್ಥಿ ಒಕ್ಕೂಟದ ಕಾರ್ಯಕ್ರಮಕ್ಕೆ ಅಡಚಣೆಯುಂಟುವುದು ತಮ್ಮ ಉದ್ದೇಶವಲ್ಲವೆಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹೇಳಿಕೊಂಡಿದ್ದಾರೆ. ವಿವಿಯ ವಿದ್ಯಾರ್ಥಿಗಳೇ ಹಿಂಸಾಚಾರವನ್ನು ಆರಂಭಿಸಿದ್ದರು ಹಾಗೂ ಗುಂಡು ಹಾರಿಸಿದ್ದಾರೆಂದು ಅವರು ಆರೋಪಿಸಿದ್ದಾರೆ. ವಿದ್ಯಾರ್ಥಿಗಳೇ ಪೊಲೀಸರನ್ನು ಹಾಗೂ ಓರ್ವ ಪತ್ರಿಕಾ ಛಾಯಾಗ್ರಾಹಕನನ್ನು ಥಳಿಸಿದ್ದರೆಂದು ಸವಿತಾ ದೂರಿದ್ದಾರೆ. ‘‘ಈ ಅಭಿಯಾನವು ಕೊನೆಗೊಳ್ಳಲು ನಾವು ಬಿಡಲಾರೆವು ಹಾಗೂ ಸಂಸ್ಥೆಯು ಬೇರೆಯೇ ರೀತಿಯಲ್ಲಿ ಚಳವಳಿಯನ್ನು ಮುಂದುವರಿಸಲಿದೆ’’ ಎಂದು ಸವಿತಾ ಹೇಳುತ್ತಾರೆ.

ಆದಾಗ್ಯೂ ಅಲಿಗಡ ನಗರದ ವಾಣಿಜ್ಯ ಚಟುವಟಿಕೆಗಳನ್ನು ಅಸ್ತವ್ಯಸ್ತ ಗೊಳಿಸುವಂತಹ ಯಾವುದೇ ಚಳವಳಿಯನ್ನು ತಾವು ಬೆಂಬಲಿಸುವುದಿಲ್ಲವೆಂದು ಕೌಶಲ್‌ನಾಥ್ ಸ್ಪಷ್ಟಪಡಿಸುತ್ತಾರೆ. ಆದರೆ ಜಿನ್ನಾ ಭಾವಚಿತ್ರ ವಿಷಯಕ್ಕೆ ಸಂಬಂಧಿಸಿ ತಾವು ರಾಜ್ಯದ ವಿಧಾನಸಭೆ ಅಥವಾ ಸಂಸತ್‌ವರೆಗೂ ಹೋಗಲು ಸಿದ್ಧರಿದ್ದೇವೆಂದು ಆತ ಹೇಳಿದ್ದಾರೆ.

ನಗರದಲ್ಲಿ ಅಶಾಂತಿಯ ವಾತಾವರಣ

 ಅಲಿಗಡ ವಿಶ್ವವಿದ್ಯಾನಿಲಯಕ್ಕೆ ಅಲಿಗಡ ನಗರದ ನಿವಾಸಿಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ವಿವಿಯಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಧರಣಿ ನಡೆಸಿದ ವಿದ್ಯಾರ್ಥಿಗಳಿಗೆ ಅವರು ಆಹಾರ ಹಾಗೂ ಕುಡಿಯುವ ನೀರನ್ನು ಕಳುಹಿಸಿಕೊಟ್ಟಿದ್ದರು. ಆದರೆ ನಗರದಲ್ಲಿ ಯಾವುದೇ ಕ್ಷಣದಲ್ಲಿ ಹಿಂಸೆ ಭುಗಿಲೇಳಬಹುದೆಂಬ ಭೀತಿಯು ವಿದ್ಯಾರ್ಥಿ ನಾಯಕರನ್ನು ಹಾಗೂ ಶಿಕ್ಷಕರನ್ನು ಆತಂಕದಲ್ಲಿ ದಿನಗಳೆಯುವಂತೆ ಮಾಡಿದೆ.

 ಆದರೆ ಹಿಂದೂಗಳು ಹಾಗೂ ಮುಸ್ಲಿಮರಿಬ್ಬರೂ ಪರಸ್ಪರ ಔದ್ಯಮಿಕ ಹಿತಾಸಕ್ತಿಗಳನ್ನು ಹೊಂದಿರುವುದು ನಗರದಲ್ಲಿ ಶಾಂತಿಪಾಲನೆಗೆ ನೆರವಾಗಲಿದೆಯೆಂದು ಅಲಿಗಡ ವಿವಿಯ ಸಂಶೋಧಕ ವಾಸೀಂ ಶೇಖ್ ಅಭಿಪ್ರಾಯಿಸುತ್ತಾರೆ. ‘‘ಇಲ್ಲಿ ಓರ್ವ ಬಾಗಿಲ ಲಾಕ್‌ಗಳನ್ನು ಮಾಡುವ ಕೆಲಸದಲ್ಲಿ ತೊಡಗಿದ್ದರೆ, ಇನ್ನೊಬ್ಬ ಬೀಗದ ಕೈಗಳನ್ನು ತಯಾರಿಸುತಾನೆ ಹೀಗೆ ಒಬ್ಬರ ವೃತ್ತಿಯು ಇನ್ನೊಬ್ಬರ ಉದ್ಯೋಗಕ್ಕೆ ಪೂರಕವಾಗಿರುತ್ತವೆ’’ ಎಂದವರು ಅಭಿಪ್ರಾಯಿಸುತ್ತಾರೆ. ಆದರೆ ವಿವಿಯ ಹಿಂದಿ ಪ್ರೊಫೆಸರ್ ಅಜಯ್ ಬಿಸಾರಿಯಾ, ಈ ಬಗ್ಗೆ ಆತಂಕ ಹೊಂದಿದ್ದಾರೆ. ಇಲ್ಲಿ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಅಥವಾ ಶೆಡ್‌ಗಳಲ್ಲಿ ಸಣ್ಣ ಗುಂಪುಗಳಾಗಿ ಕೆಲಸ ಮಾಡುತ್ತಾರೆ. ‘‘ವಿವಿಧ ಧರ್ಮೀಯರು ಪರಸ್ಪರ ಒಡನಾಟವಿರಿಸಿಕೊಳ್ಳಲು ಅವಕಾಶವಿರುವ ಬೃಹತ್ ಕಾರ್ಖಾನೆಗಳು ಇಲ್ಲ್ಲಿಲ್ಲ’’ ಎಂದವರು ಹೇಳುತ್ತಾರೆ.

ಕಳೆದ ಎರಡು ದಶಕಗಳಲ್ಲಿ ಅಲಿಗಡ ವಿಸ್ತಾರಗೊಂಡಿದೆಯಾದರೂ, ನಗರದಲ್ಲಿ ಹಿಂದೂ, ಮುಸ್ಲಿಂ ಸಮುದಾಯಗಳು ಪ್ರತ್ಯಪ್ರತ್ಯೇಕವಾಗಿ ನೆಲೆಸುವ ಪ್ರವೃತ್ತಿ ಹೆಚ್ಚುತ್ತಿದೆ. 2011ರ ಜನಗಣತಿಯ ಪ್ರಕಾರ, ನಗರಪ್ರದೇಶದ ಅಲಿಗಡದಲ್ಲಿ ಶೇ.55.36ರಷ್ಟು ಮಂದಿ ಹಿಂದೂಗಳಾಗಿದ್ದರೆ, ಶೇ.42.64 ಮಂದಿ ಮುಸ್ಲಿಮರು. ಆದರೆ ಹಳೆನಗರ ಪ್ರದೇಶದಲ್ಲಿತ ಹಿಂದೂಗಳು ಹಾಗೂ ಮುಸ್ಲಿಮರು ಅಕ್ಕಪಕ್ಕದಲ್ಲೇ ವಾಸಿಸುತ್ತಿದ್ದಾರೆ. ಆದರೆ ನಗರದ ಹೊಸ ಪ್ರದೇಶಗಳಲ್ಲಿ ಈ ಎರಡು ಸಮುದಾಯಗಳ ನಡುವಿನ ಅಂತರ ಹೆಚ್ಚಿದೆ.

ಹಿಂದೂ ಜಾಗಣ್ ಮಂಚವು ಅಲಿಗಡದ ಹಲವಾರು ಕೊಳೆಗೇರಿಗಳಲ್ಲಿ ಹಾಗೂ ಕಾಲನಿಗಳಲ್ಲಿ ಗ್ರಾಮ ರಕ್ಷಣಾ ಸಮಿತಿಗಳನ್ನು ಸ್ಥಾಪಿಸಿದೆಯೆಂದು ಸೋನು ಸವಿತಾ ಹೇಳುತ್ತಾರೆ. ಹಿಂದೂ ಯುವವಾಹಿನಿಯ ಸದಸ್ಯರೂ ಕೂಡಾ 10-12 ತಂಡಗಳಾಗಿ ವಿಭಜಿಸಲ್ಪಟ್ಟಿದ್ದಾರೆ. ರಮಝಾನ್ ತಿಂಗಳಲ್ಲಿ ಅಚಲ್ ತಾಲ್ ಪ್ರದೇಶದಲ್ಲಿ ಹಿಂದೂ ಜಾಗರಣ್ ಮಂಚ್ ಕಾರ್ಯಕರ್ತರು ಲೌಡ್‌ಸ್ಪೀಕರ್‌ಗಳ ಮೂಲಕ ಭಕ್ತಿಗೀತೆಗಳನ್ನು ಜೋರಾಗಿ ನುಡಿಸುವ ಮೂಲಕ ಜಾಗರಣೆಯೆಂಬ ಪೂಜಾವಿಧಾನವನ್ನು ಆಚರಿಸುತ್ತಾರೆ. ಇದುವೇ ತಮ್ಮ ಅತಿ ದೊಡ್ಡ ಸಾಧನೆಯೆಂದವರು ಹೇಳಿಕೊಳ್ಳುತ್ತಾರೆ.

1990ರಲ್ಲಿ ಅಲಿಗಡವು ಕೋಮುಗಲಭೆಗೆ ಸಾಕ್ಷಿಯಾಗಿತ್ತು ಎಂದು ಅಲಿಗಡದ ವಯೋವೃದ್ಧರೊಬ್ಬರು ನೆನಪಿಸಿಕೊಳ್ಳುತ್ತಾರೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಘಟನೆಯ ಬಳಿಕ ಇಲ್ಲಿ ಕೋಮುಧ್ರುವೀಕರಣ ಹೆಚ್ಚಿದೆಯೆಂದವರು ಹೇಳುತ್ತಾರೆ. ಈ ಸಂಘಟನೆಗಳು ದೇವರು ಹಾಗೂ ಧರ್ಮದ ಬಗ್ಗೆ ಮಾತನಾಡುತ್ತಿವೆ. ಆದರೆ ಜನಸಾಮಾನ್ಯರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಗಲಭೆ ಭುಗಿಲೆದ್ದಾಗ, ಈ ಗುಂಪುಗಳು ಸುಳ್ಳುವದಂತಿಗಳನ್ನು ಹರಡಲು ತಮ್ಮ ಪ್ರಭಾವವನ್ನು ಬಳಸಿಕೊಳ್ಳುತ್ತವೆ. ಆಗ ಜನರು ಅವುಗಳಿಗೆ ಮರುಳಾಗುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ಪ್ರತಿಯೊಬ್ಬರ ಮನಸ್ಸು ಕೂಡಾ ಮಲಿನಗೊಳ್ಳುತ್ತದೆಯೆಂದವರು ಹೇಳುತ್ತಾರೆ. ‘‘ಈ ಗುಂಪುಗಳ ವಿಚಾರಧಾರೆಗಳು ಒಂದೇ ಆಗಿದ್ದರೂ, ಬೇರೆ ಬೇರೆ ಹೆಸರುಗಳನ್ನಿಟ್ಟುಕೊಂಡು ಅವು ಕಾರ್ಯಾಚರಿಸುತ್ತವೆ. ಆ ಮೂಲಕ ಯಾವುದಾದರೂ ಅಹಿತಕರ ಘಟನೆಗಳಾದಾಗ, ಅದರಲ್ಲಿ ತಾವು ಶಾಮೀಲಾಗಿರುವುದನ್ನು ಅವು ನಿರಾಕರಿಸುತ್ತವೆ.’’

ಕೃಪೆ: scroll.in

Writer - ಶ್ರೇಯಾ ರಾಯ್ ಚೌಧುರಿ

contributor

Editor - ಶ್ರೇಯಾ ರಾಯ್ ಚೌಧುರಿ

contributor

Similar News

ಜಗದಗಲ

ಜಗ ದಗಲ