ನನ್ನ ಪ್ರಚಾರ ತಂಡದಲ್ಲಿ ಎಫ್‌ಬಿಐ ಏಜಂಟ್: ಟ್ರಂಪ್ ಆರೋಪ
ವಾಶಿಂಗ್ಟನ್, ಮೇ 19: ಕಾನೂನು ಇಲಾಖೆಯ ವಿರುದ್ಧದ ತನ್ನ ದಾಳಿಯನ್ನು ಶುಕ್ರವಾರ ಮುಂದುವರಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತನ್ನ 2016ರ ಪ್ರಚಾರ ತಂಡದಲ್ಲಿ ಮಾಹಿತಿದಾರನೋರ್ವನನ್ನು ಎಫ್‌ಬಿಐ ನೇಮಿಸಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಎಫ್‌ಬಿಐಯು ತನ್ನ ಚುನಾವಣಾ ಪ್ರಚಾರದ ಮೇಲೆ ಬೇಹುಗಾರಿಕೆ ನಡೆಸುತ್ತಿತ್ತು ಎಂಬ ನೇರ ಆರೋಪವನ್ನು ಟ್ರಂಪ್ ಮಾಡಲಿಲ್ಲವಾದರೂ, ರಾಜಕೀಯ ಕಾರಣಗಳಿಗಾಗಿ ತನ್ನ ಪ್ರಚಾರ ತಂಡದಲ್ಲಿ ಕನಿಷ್ಠ ಓರ್ವ ಎಫ್‌ಬಿಐ ಪ್ರತಿನಿಧಿಯನ್ನು ಪ್ರತಿಷ್ಠಾಪಿಸಲಾಗಿತ್ತು ಎಂದು ವರದಿಗಳನ್ನು ಉಲ್ಲೇಖಿಸಿ ಆರೋಪಿಸಿದರು.
‘‘ಇದು ಸತ್ಯವಾದರೆ, ಸಾರ್ವಕಾಲಿಕ ಅತಿ ದೊಡ್ಡ ರಾಜಕೀಯ ಹಗರಣವಾಗುತ್ತದೆ’’ ಎಂದು ಟ್ರಂಪ್ ಟ್ವೀಟ್ ಮಾಡಿದರು.
ಆದರೆ, ನ್ಯೂಯಾರ್ಕ್‌ನ ಮಾಜಿ ಮೇಯರ್ ಹಾಗೂ ಟ್ರಂಪ್‌ರ ಖಾಸಗಿ ವಕೀಲ ರುಡಾಲ್ಫ್ ಗಿಯುಲಿಯಾನಿ, ಟ್ರಂಪ್ ಪ್ರಚಾರ ತಂಡದಲ್ಲಿ ‘ಎಫ್‌ಬಿಐ ಮಾಹಿತಿದಾರ’ನ ಕುರಿತ ಊಹಾಪೋಹಗಳನ್ನು ಬಹುತೇಕ ತಳ್ಳಿಹಾಕಿದ್ದಾರೆ.
‘‘ಟ್ರಂಪ್ ಪ್ರಚಾರ ತಂಡದಲ್ಲಿ ಎಫ್‌ಬಿಐ ಪ್ರತಿನಿಧಿ ಇದ್ದರೇ ಎನ್ನುವುದು ಖಚಿತವಾಗಿ ನನಗೂ ಗೊತ್ತಿಲ್ಲ, ಟ್ರಂಪ್‌ಗೂ ಗೊತ್ತಿಲ್ಲ’’ ಎಂದು ಸಿಎನ್‌ಎನ್‌ಗೆ ಹೇಳಿದ್ದಾರೆ.