ಮಣಿಪುರ ‘ನಕಲಿ’ ಎನ್‌ಕೌಂಟರ್ ಪ್ರಕರಣ : ರಕ್ಷಣಾ ಇಲಾಖೆ ನಡೆಗೆ ಸುಪ್ರೀಂ ಅತೃಪ್ತಿ

Update: 2018-05-19 18:10 GMT

ಹೊಸದಿಲ್ಲಿ, ಮೇ 19: ಸೇನಾಪಡೆ, ಅಸ್ಸಾಂ ರೈಫಲ್ಸ್ ಪಡೆ ಹಾಗೂ ಪೊಲೀಸರು ಮಣಿಪುರದಲ್ಲಿ ನಡೆಸಿದ್ದಾರೆ ಎನ್ನಲಾಗಿರುವ ನ್ಯಾಯಾಂಗ ಬಾಹಿರ ಹತ್ಯೆ ಹಾಗೂ ನಕಲಿ ಎನ್‌ಕೌಂಟರ್ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐನ ವಿಶೇಷ ತನಿಖಾ ತಂಡ(ಎಸ್‌ಐಟಿ) ಬರೆದಿರುವ ಯಾವುದೇ ಪತ್ರಗಳಿಗೆ ಉತ್ತರಿಸುವ ಗೋಜಿಗೇ ಹೋಗದಿರುವ ರಕ್ಷಣಾ ಇಲಾಖೆಯ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿದೆ.

ಕೆಲವು ವಿವರಗಳನ್ನು ಕೋರಿ 2018ರ ಫೆಬ್ರವರಿಯಲ್ಲಿ ರಕ್ಷಣಾ ಇಲಾಖೆಗೆ ಎಸ್‌ಐಟಿ ಪತ್ರ ಬರೆದಿತ್ತು. ಆದರೆ ಇದುವರೆಗೂ ರಕ್ಷಣಾ ಇಲಾಖೆಯಿಂದ ಇವುಗಳಿಗೆ ಉತ್ತರ ಬಂದಿಲ್ಲ ಎಂಬುದನ್ನು ಗಮನಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿತು. ನ್ಯಾಯಾಂಗ ತನಿಖೆ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸಂಬಂಧಿಸಿದ ಮತ್ತು ಗುವಾಹಟಿ ಹೈಕೋರ್ಟ್ ವಿಚಾರಣೆ ನಡೆಸಿರುವ ಪ್ರಕರಣಗಳ ಕುರಿತ ತನಿಖೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ನ್ಯಾಯಾಧೀಶರಾದ ಮದನ್ ಬಿ.ಲೋಕೂರ್ ಹಾಗೂ ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಎಸ್‌ಐಟಿಗೆ ಸೂಚಿಸಿದೆ.

ಈ ಬಗ್ಗೆ ರಕ್ಷಣಾ ಇಲಾಖೆಯನ್ನು ಸಂಪರ್ಕಿಸಿ ಅಗತ್ಯವಿರುವ ಸಹಕಾರವನ್ನು ಅವರಿಂದ ಕೋರಲಾಗುವುದು ಎಂದು ಸಿಬಿಐ ಪರ ವಕೀಲರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣೀಂದರ್ ಸಿಂಗ್ ನ್ಯಾಯಪೀಠಕ್ಕೆ ತಿಳಿಸಿದರು. ತನಿಖಾ ಕಾರ್ಯಕ್ಕೆ ಅಗತ್ಯವಿರುವ ದಾಖಲೆಗಳನ್ನು ಪಟ್ಟಿಮಾಡಿ ಮಣಿಪುರದ ಪೊಲೀಸ್ ಮಹಾನಿರ್ದೇಶಕರು ಹಾಗೂ ಸರಕಾರದ ಮುಖ್ಯಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. ಈ ಪಟ್ಟಿಯನ್ನು ವಾರದೊಳಗೆ ಸಲ್ಲಿಸುವಂತೆ ಎಸ್‌ಐಟಿ ಉಸ್ತುವಾರಿ ಅಧಿಕಾರಿ ಶರದ್ ಅಗರ್‌ವಾಲ್‌ಗೆ ಸೂಚಿಸಿದ ಸುಪ್ರೀಂಕೋರ್ಟ್, ಮುಖ್ಯಕಾರ್ಯದರ್ಶಿ ಹಾಗೂ ಡಿಜಿಪಿ ಈ ಕುರಿತು ಮೂರು ವಾರಗಳೊಳಗೆ ರಚನಾತ್ಮಕವಾಗಿ ಪ್ರತಿಕ್ರಿಯಿಸುವರು ಎಂದು ವಿಶ್ವಾ ಸ ವ್ಯಕ್ತಪಡಿಸಿತು.

ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ (ಸಿಎಫ್‌ಎಸ್‌ಎಲ್)ದ ವರದಿ, ದಾಖಲೆಗಳು, ಸಾಕ್ಷಿಗಳ ಹೇಳಿಕೆಗಳ ಆಧಾರದಲ್ಲಿ 2018ರ ಜೂನ್ 30ರ ಒಳಗೆ ಎಸ್‌ಐಟಿ ತನಿಖೆಯನ್ನು ಪೂರ್ಣಗೊಳಿಸುವುದಾಗಿ ನಿರೀಕ್ಷಿಸುತ್ತಿದ್ದೇವೆ ಎಂದು ನ್ಯಾಯಪೀಠ ತಿಳಿಸಿದೆ. ಅಪರಾಧ ಘಟನೆಯ ದೃಶ್ಯಗಳ ಮರುನಿರೂಪಣಾ ಕಾರ್ಯ ತ್ವರಿತವಾಗಿ ಸಾಗುತ್ತಿದ್ದು , ಬಾಕಿ ಉಳಿದಿರುವ ಕೆಲಸಗಳನ್ನು ಕ್ಷಿಪ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಸಿಎಫ್‌ಎಸ್‌ಎಲ್‌ನ ನಿರ್ದೇಶಕರು ಭರವಸೆ ನೀಡಿದರು. ಮಣಿಪುರದಲ್ಲಿ ನಡೆದಿರುವ ಸುಮಾರು 1,528 ನ್ಯಾಯಾಂಗ ಬಾಹಿರ ಹತ್ಯೆಯ ಪ್ರಕರಣಗಳ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News