ಐಬಿಎಸ್ ಎಂದರೇನು ಗೊತ್ತೇ? ಇದು ನಿಮ್ಮನ್ನೂ ಕಾಡಬಹುದು

Update: 2018-05-20 10:40 GMT

ಬೆಳಿಗ್ಗೆ ನಿತ್ಯದಂತೆ ಎದ್ದು ಪ್ರಾತಃರ್ವಿಧಿಗಳನ್ನೆಲ್ಲ ಮುಗಿಸಿ,ಸ್ನಾನ ಮಾಡಿ ಚಹಾ-ತಿಂಡಿ ಪೂರೈಸಿ ಕಚೇರಿಗೆ ಹೊರಡಲು ಸಿದ್ಧರಾಗಿದ್ದೀರಿ ಎನ್ನುವಾಗಲೇ ಮತ್ತೆ ಟಾಯ್ಲೆಟ್‌ಗೆ ಹೋಗುವ ಅವಸರವಾದರೆ ಏನು ಮಾಡುತ್ತೀರಿ? ಇದೊಳ್ಳೆ ಫಜೀತಿಯ ವಿಷಯ ಮತ್ತು ಅದನ್ನು ಪೂರೈಸಿ ನೀವು ಕಚೇರಿಯನ್ನು ತಲುಪುವಾಗ ತಡವಾಗಿಬಿಟ್ಟಿರುತ್ತದೆ,ಅಲ್ಲವೇ?

ಇಂತಹ ಪ್ರಕರಣಗಳಲ್ಲಿ ದಿನಕ್ಕೆ ಹಲವಾರು ಬಾರಿ ಮಲ ವಿಸರ್ಜನೆಗೆ ಹೋಗಬೇಕು ಎಂದು ಅನ್ನಿಸುತ್ತಿದ್ದಾಗ ಸಾಮಾನ್ಯವಾಗಿ ಜನರು ತಮಗೆ ಹೊಟ್ಟೆ ಸೋಂಕು ಅಥವಾ ಭೇದಿ ಕಾಡುತ್ತಿದೆ ಎಂದು ಭಾವಿಸುತ್ತಾರೆ.

ಇಂತಹ ಸಂದರ್ಭ ಎಲ್ಲರಿಗೂ, ವಿಶೇಷವಾಗಿ ಕೆಟ್ಟ ಆಹಾರ ಸೇವಿಸಿದಾಗ ಎದುರಾಗುತ್ತಲೇ ಇರುತ್ತದೆ. ಸಾಮಾನ್ಯವಾಗಿ ಹೊಟ್ಟೆ ಸೋಂಕು ಮತ್ತು ಭೇದಿ ಜ್ವರದಂತಹ ಇತರ ಲಕ್ಷಣಗಳೊಂದಿಗೆ ಗುರುತಿಸಿಕೊಂಡಿವೆ.

ಆದರೆ ಯಾವುದೇ ಸೋಂಕು ಅಥವಾ ಜ್ವರದ ಲಕ್ಷಣವಿಲ್ಲದಿದ್ದಾಗ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮಲ ವಿಸರ್ಜನೆಗೆ ಹೋಗುವಂತಾದರೆ ಅದು ‘ಇರ್ರಿಟೇಬಲ್ ಬೊವೆಲ್ ಸಿಂಡ್ರೋಮ್(ಐಬಿಎಸ್)’ ಅಥವಾ ಅನಿಯಂತ್ರಿತ ಮಲವಿಸರ್ಜನೆ ರೋಗವನ್ನು ಸೂಚಿಸುತ್ತದೆ.

ಇದೊಂದು ಜೀರ್ಣ ಸಂಬಂಧಿ ರೋಗವಾಗಿದ್ದು, ಕರುಳು ಮತ್ತು ಜಠರದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಅದು ಸಾಕಷ್ಟು ಗಂಭೀರ ಸ್ಥಿತಿಗೆ ಕಾರಣವಾಗಬಹುದು.

ಐಬಿಎಸ್ ಕುರಿತು ಕೆಲವು ಅಗತ್ಯ ಮಾಹಿತಿಗಳಿಲ್ಲಿವೆ.......

ಐಬಿಎಸ್ ಸಾಮಾನ್ಯ ರೋಗವಾಗಿದ್ದು,ನಮ್ಮ ದೇಶದಲ್ಲಿ ಪ್ರತಿ ವರ್ಷ ಒಂದು ಮಿಲಿಯನ್‌ಗೂ ಅಧಿಕ ಜನರನ್ನು ಕಾಡುತ್ತಿದೆ. ಹದಿಹರೆಯದವರಲ್ಲಿ ಮತ್ತು 40 ವರ್ಷಕ್ಕೂ ಮೇಲಿನ ಪ್ರಾಯದವರನ್ನು,ಅದರಲ್ಲೂ ಪುರುಷರಿಗಿಂತ ಮಹಿಳೆಯರನ್ನು ಈ ರೋಗವು ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ನಿಖರವಾದ ಕಾರಣ ಗೊತ್ತಾಗಿಲ್ಲವಾದರೂ,ಮಹಿಳೆಯರಲ್ಲಿ ಕೆಲವು ಹಾರ್ಮೋನ್‌ಗಳ ಸ್ರವಿಸುವಿಕೆ ಇದಕ್ಕೆ ಕಾರಣವಾಗಿರಬಹುದು ಎಂದು ಕೆಲವು ಸಂಶೋಧನೆಗಳು ಪ್ರತಿಪಾದಿಸಿವೆ.

ಐಬಿಎಸ್ ಅನ್ನು ಜೀರ್ಣ ಸಂಬಂಧಿ ಕಾಯಿಲೆಯೆಂದು ವ್ಯಾಖ್ಯಾನಿಸಲಾಗಿದ್ದು,ದೊಡ್ಡಕರುಳು ಅಥವಾ ಜಠರ ಅಥವಾ ಎರಡನ್ನೂ ಬಾಧಿಸುತ್ತದೆ.

ಹೊಟ್ಟೆ ಉಬ್ಬರಿಸುವಿಕೆ,ವಾಯು,ಹಸಿವು ಕಡಿಮೆಯಾಗುವಿಕೆ ಇತ್ಯಾದಿಗಳು ಈ ರೋಗದ ಸಾಮಾನ್ಯ ಲಕ್ಷಣಗಳಾಗಿವೆ.

ಹೊಟ್ಟೆ ನೋವು,ತೆಳ್ಳಗಿನ ಮಲ ವಿಸರ್ಜನೆ,ಹೊಟ್ಟೆ ಖಾಲಿಯಿದ್ದರೂ ಮಲವಿಸರ್ಜನೆಗೆ ಹೋಗಬೇಕೆಂಬ ಒತ್ತಡ,ಮಲಬದ್ಧತೆ,ವಾಂತಿ,ಹೊಟ್ಟೆ ಕಿವಿಚಿದಂತಾಗುವುದು,ಗುದದ್ವಾರದಲ್ಲಿ ಉರಿ ಇತ್ಯಾದಿಗಳೂ ಈ ಲಕ್ಷಣಗಳಲ್ಲಿ ಸೇರಿವೆ.

 ಹಲವಾರು ವರ್ಷಗಳ ಸಂಶೋಧನೆ ಮತ್ತು ಅಧ್ಯಯನಗಳ ಬಳಿಕವೂ ಐಬಿಎಸ್‌ಗೆ ನಿಖರ ಕಾರಣಗಳನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ಇದೊಂದು ಜೀವನಶೈಲಿ ರೋಗವಾಗಿದ್ದು,ಅನಾರೋಗ್ಯಕರ ಆಹಾರ ಸೇವನೆ,ಅತಿಯಾದ ಧೂಮ್ರಪಾನ,ವ್ಯಾಯಾಮದ ಕೊರತೆ,ಬೊಜ್ಜು ಇತ್ಯಾದಿಗಳು ಕಾರಣವಾಗಿರಬಹುದು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಅತಿಯಾದ ಒತ್ತಡ,ಖಿನ್ನತೆ ಮತ್ತು ಉದ್ವೇಗಗಳೂ ಈ ತೊಂದರೆಗೆ ಕಾರಣವಾಗಬಹುದು ಎನ್ನಲಾಗಿದೆಯಾದರೂ ಈ ಮಾನಸಿಕ ಕಾಯಿಲೆಗಳಿಗೂ ಐಬಿಎಸ್‌ಗೂ ನಂಟು ಇದೆ ಎನ್ನುವುದು ನಿಖರವಾಗಿ ಸಾಬೀತಾಗಿಲ್ಲ.

ಐಬಿಎಸ್ ಭೇದಿ ಮತ್ತು ಮಲಬದ್ಧತೆಯನ್ನುಂಟು ಮಾಡುತ್ತದೆ ಎನ್ನುವುದು ಸಾಮಾನ್ಯ ಗ್ರಹಿಕೆಯಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಇದು ನಿಜವಾಗಿರಬಹುದಾದರೂ ಕೆಲವರು ಭೇದಿ ಅಥವಾ ಮಲಬದ್ಧತೆಯನ್ನು ಮಾತ್ರ ಅನುಭವಿಸುತ್ತಾರೆ. ಹೀಗಾಗಿ ಇದನ್ನು ಸರಿಯಾಗಿ ತಿಳಿದುಕೊಂಡರೆ ರೋಗವನ್ನು ಸಕಾಲದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.

ದುರದೃಷ್ಟವಶಾತ್ ಐಬಿಎಸ್‌ಗೆ ನಿಖರವಾದ ಚಿಕಿತ್ಸೆಯಿಲ್ಲ,ಆದರೂ ಗೊತ್ತಿರುವ ಚಿಕಿತ್ಸೆಯಿಂದ ಲಕ್ಷಣಗಳನ್ನು ತಗ್ಗಿಸಿ ನಿಯಂತ್ರಣಕ್ಕೆ ತರಬಹುದಾಗಿದೆ. ಐಬಿಎಸ್‌ಗೆ ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೆ ಅಪಾಯವಿಲ್ಲವಾದರೂ ಲಕ್ಷಣಗಳು ಇನ್ನಷ್ಟು ಹದಗೆಟ್ಟು ವ್ಯಕ್ತಿಯ ಆರೋಗ್ಯವನ್ನು ಮತ್ತು ಬದುಕನ್ನು ಸಂಕಷ್ಟದಲ್ಲಿ ಸಿಲುಕಿಸಬಹುದು.

ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳು ಮತ್ತು ಕೆಲವು ಔಷಧಿಗಳು ಈ ರೋಗದ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆರೋಗ್ಯಕರ ಆಹಾರ ಸೇವನೆ,ಎಣ್ಣೆ ಮತ್ತು ಮಸಾಲೆಯಿಂದ ಕೂಡಿದ ಆಹಾರದ ವರ್ಜನೆ,ನಿಯಮಿತ ವ್ಯಾಯಾಮ,ಒತ್ತಡವನ್ನು ನಿರ್ವಹಿಸುವಿಕೆ,ಖಿನ್ನತೆಗೆ ಚಿಕಿತ್ಸೆ ಇತ್ಯಾದಿಗಳು ಐಬಿಎಸ್‌ನ ಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತವೆ.

ಕೆಲವು ಆಹಾರಗಳಿಂದುಂಟಾಗುವ ಅಲರ್ಜಿಗಳು ದೊಡ್ಡ ಕರುಳಿನಲ್ಲಿ ತೊಂದರೆಗಳನ್ನುಂಟು ಮಾಡುವ ಮೂಲಕ ಐಬಿಎಸ್‌ಗೆ ಕಾರಣವಾಗಬಹುದು. ಹೀಗಾಗಿ ಐಬಿಎಸ್‌ನ್ನು ಉಂಟುಮಾಡುವ ಆಹಾರಗಳನ್ನು ಗುರುತಿಸಿ ಅವುಗಳ ಸೇವನೆಯಿಂದ ದೂರವಿರುವುದು ಒಳ್ಳೆಯದು. ಆಹಾರದಲ್ಲಿ ಅತಿಯಾದ ಪ್ರೋಟಿನ್ ಕೂಡ ಕೆಲವರಲ್ಲಿ ಐಬಿಎಸ್‌ಗೆ ಕಾರಣವಾಗಬಹುದು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News