ನಿಮಗೆ ಈ WWE ಸೂಪರ್‌ಸ್ಟಾರ್‌ಗಳ ಪಾರ್ಟ್-ಟೈಂ ಕೆಲಸಗಳು ಗೊತ್ತೇ....?

Update: 2018-05-20 12:52 GMT

ಯುವಜನರಲ್ಲಿ ತುಂಬ ಜನಪ್ರಿಯವಾಗಿರುವ ಡಬ್ಲ್ಯೂಡಬ್ಲ್ಯೂಇದಂತಹ ಮನೋರಂಜನಾ ಕ್ರೀಡೆಗಳು ಕ್ರೀಡಾಪಟುಗಳಿಂದ ಅತ್ಯಂತ ಹೆಚ್ಚಿನ ಕ್ಷಮತೆಯನ್ನು ಕೇಳುತ್ತವೆ. ಇದರ ಒತ್ತಡ ಎಷ್ಟಿರುತ್ತದೆ ಎಂದರೆ ಅದೆಷ್ಟೋ ಜನರು ಈ ರಂಗದಿಂದ ದೂರವಾಗಿ ಮತ್ತೆಂದೂ ಅದರ ಕಡೆಗೆ ಹೊರಳಿಯೂ ನೋಡುವುದಿಲ್ಲ. ಈ ರಂಗದಲ್ಲಿ ಸೂಪರ್‌ಸ್ಟಾರ್‌ಗಳೆನಿಸಿಕೊಂಡವರು ದಿನದಿನವೂ ತಮ್ಮ ಚಾಣಾಕ್ಷತೆ, ಚುರುಕುತನವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.

ಇದೇ ಕಾರಣದಿಂದ ಹಲವಾರು ಡಬ್ಲ್ಯೂಡಬ್ಲ್ಯೂಇ ಸೂಪರ್‌ಸ್ಟಾರ್‌ಗಳು ಈ ಕಾದಾಟದಿಂದ ಹೊರಗಿನ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಕೆಲವು ಜಟ್ಟಿಗಳು ಕಣದಲ್ಲಿ ಕಾದಾಟದ ಜೊತೆಗೇ ತಮ್ಮ ಕೌಶಲ್ಯವನ್ನು ಇತರ ಉದ್ಯಮಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಕೆಲವು ಜಟ್ಟಿಗಳ ಪಾರ್ಟ್-ಟೈಂ ಕೆಲಸಗಳ ಕುರಿತು ಮಾಹಿತಿಗಳು.....

► ಮೈಕ್ ಫಾಲೀ

ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಶಿಪ್‌ನ ಖ್ಯಾತ ಕ್ರೀಡಾಪಟು ಮೈಕ್ ಫಾಲೀ ಸಾಹಿತಿಯೂ ಆಗಿದ್ದಾರೆ ಮತ್ತು ಅವರ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತವೆ ಎನ್ನುವುದು ನಿಮಗೆ ಗೊತ್ತೇ? ಈ ನಾಲ್ಕು ಬಾರಿಯ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಕಣದಲ್ಲಿ ಗುದ್ದಾಟದ ನಡುವೆಯೇ ತನ್ನ ಬರೆಯುವ ಗೀಳನ್ನು ಬಿಟ್ಟಿಲ್ಲ. ಮಕ್ಕಳ ಪುಸ್ತಕಗಳು,ಕಾದಂಬರಿಗಳು ಮತ್ತು ಸ್ಮರಣ ಕಥನಗಳು ಸೇರಿದಂತೆ ಅವರ ಹಲವಾರು ಕೃತಿಗಳು ಪ್ರಕಟಗೊಂಡಿವೆ.

► ರ್ಯಾಂಡಿ ಸ್ಯಾವೇಜ್- ಸಂಗೀತಕಾರ

ಈ ‘ಮ್ಯಾಚೋ ಮ್ಯಾನ್’ ತನ್ನ 30 ವರ್ಷಗಳ ರೆಸ್ಲಿಂಗ್ ವೃತ್ತಿಜೀವನದಲ್ಲಿ 29 ಚಾಂಪಿಯನ್ ಶಿಪ್‌ಗಳನ್ನು ಗೆದ್ದಿದ್ದಾರೆ. ಸಂಗೀತ ಅವರ ಹವ್ಯಾಸವಾಗಿದ್ದು,ತನ್ನ ಹಲವಾರು ಹಾಡುಗಳ ಆಡಿಯೋಗಳನ್ನು ಬಿಡುಗಡೆಗೊಳಿಸಿದ್ದಾರೆ.

► ಕೆವಿನ್ ನ್ಯಾಷ್- ನಟ

 ಕೆವಿನ್ ನ್ಯಾಷ್ ಡಬ್ಲ್ಯೂಡಬ್ಲ್ಯೂಇ ಕಣದಲ್ಲಿ ಇದ್ದುಕೊಂಡೇ 90 ಹಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೊಂದು ದೊಡ್ಡ ನಟನಲ್ಲದಿದ್ದರೂ ಅಭಿನಯ ಜಗತ್ತಿನಲ್ಲಿ ತನ್ನದೇ ಆದ ಸ್ಥಾನವನ್ನು ಅವರು ಹೊಂದಿದ್ದಾರೆ. ಡಬ್ಲ್ಯೂಸಿಡಬ್ಲ್ಯೂದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೆಲವೇ ತಿಂಗಳಲ್ಲಿ ಅವರು ಅಭಿನಯ ಜಗತ್ತಿಗೆ ಕಾಲಿರಿಸಿದ್ದರು. ಟೀನೇಜ್ ಮ್ಯೂಟಂಟ್ ನಿಂಜಾ ಟರ್ಟಲ್ಸ್ 2,ದಿ ಲಾಂಗೆಸ್ಟ್ ಯಾರ್ಡ್ ಮತ್ತು ಮ್ಯಾಜಿಕ್ ಮೈಕ್ ಅವರ ಕೆಲವು ಚಿತ್ರಗಳಾಗಿವೆ.

► ಕ್ರಿಸ್ ಜೆರಿಕೋ-  ರಾಕ್ ಸ್ಟಾರ್

ವೈ2ಜೆ ಎಂದು ಕರೆಯಲಾಗುವ ಜೆರಿಕೋ ಪಾರ್ಟ್ ಟೈಂ ರಾಕ್ ಸ್ಟಾರ್ ಆಗಿದ್ದಾರೆ. ಹಲವಾರು ಆಲ್ಬಮ್‌ಗಳನ್ನು ಅವರು ಹೊರತಂದಿದ್ದಾರೆ. ಎರಡು ವೃತ್ತಿಗಳನ್ನು ಒಂದೇ ಬಾರಿ ಯಶಸ್ವಿಯಾಗಿ ನಿರ್ವಹಿಸಬಹುದು ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆಯಾಗಿದ್ದಾರೆ.

► ಆ್ಯಂಡ್ರೆ ದಿ ಜೈಂಟ್-  ಚಿತ್ರನಟ

 ಆ್ಯಂಡ್ರೆ ದಿ ಜೈಂಟ್ 70 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತನ್ನ ದ್ಯೆತ್ಯಾಕಾರದಿಂದಾಗಿ ಅವರು ವಿಶ್ವದಲ್ಲಿ ಅತ್ಯಂತ ಹೆಚ್ಚು ದುಡ್ಡು ಪಡೆಯುವ ರೆಸ್ಲರ್ ಆಗಿದ್ದು, ರಿಂಗ್‌ನಲ್ಲಿ ಅವರ ವಾರ್ಷಿಕ ನಾಲ್ಕು ಲಕ್ಷ ಡಾಲರ್‌ಗೂ ಹೆಚ್ಚಿನ ಆದಾಯ ಗಳಿಸಿದ್ದಾರೆ. ಇದೇ ಜನಪ್ರಿಯತೆ ಅವರಿಗೆ ಚಿತ್ರರಂಗದಲ್ಲಿ ಸ್ಥಾನವನ್ನು ಗಳಿಸಿಕೊಟ್ಟಿದೆ. ಹಾಲಿವುಡ್‌ನ ಯಾವದೇ ನಟ ಅವರಂತಹ ದೇಹವನ್ನು ಹೊಂದಿಲ್ಲ. 1967ರಿಂದ1981ರ ನಡುವೆ ರಿಂಗ್‌ನಲ್ಲಿ ಅಭಿಮಾನಿಗಳನ್ನು ತಣಿಸುತ್ತಲೇ ಹಲವಾರು ಹಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.

► ಡಾಲ್ಫ್ ಝಿಗ್ಲರ್- ಕಾಮೆಡಿಯನ್

ಝಿಗ್ಲರ್ ಕೆಫೆಗಳಲ್ಲಿ ಕಾಮೆಡಿಯನ್ ಆಗಿ ಕಾಣಿಸಿಕೊಳ್ಳುವುದನ್ನು ತನ್ನ ಪಾರ್ಟ್ ಟೈಮ್ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಹಾಸ್ಯ ಅವರಿಗೆ ಜನ್ಮದತ್ತವಾಗಿ ಒಲಿದಿದ್ದು,ಅದನ್ನೇ ರಿಂಗ್‌ನ ಹೊರಗೆ ಬಳಸಿಕೊಂಡಿದ್ದಾರೆ. ಮಾಜಿ ಇಂಟರ್‌ಕಾಂಟಿನೆಂಟಲ್ ಚಾಂಪಿಯನ್ ಆಗಿರುವ ಅವರು ಡಬ್ಲ್ಯೂಡಬ್ಲ್ಯೂಇ ಟೂರ್‌ಗಳಲ್ಲಿ ಸ್ಥಳೀಯ ಕೆಫೆಗಳಲ್ಲಿ ಕಾಮೆಡಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

► ಹಲ್ಕ್ ಹೋಗನ್- ಪಾಪ್ ಗಾಯಕ

 ರಿಂಗ್‌ನ ಹೊರಗೆ ಖ್ಯಾತ ಪಾಪ್ ಗಾಯಕರಾಗಿರುವ ಹೋಗನ್ ರಾಕಿ 3 ಚಿತ್ರದಲ್ಲಿ ನಟಿಸಿದ್ದಾರೆ. ಬಹುಶಃ ಎಲ್ಲ ಕಾಲದ ಪ್ರಸಿದ್ಧ ರೆಸ್ಲರ್ ಆಗಿರುವ ಹೋಗನ್ ರೆಸ್ಲಿಂಗ್ ಉದ್ಯಮವನ್ನು ಮುಖ್ಯವಾಹಿನಿಗೆ ತಂದವರಲ್ಲಿ ಪ್ರಮುಖರಾಗಿದ್ದಾರೆ. ರಿಂಗನಲ್ಲಿದ್ದುಕೊಂಡೇ ಚಿತ್ರಗಳು,ಮಕ್ಕಳ ಆ್ಯನಿಮೇಷನ್,ಟಿವಿ ಶೋಗಳು,ಜಾಹೀರಾತುಗಳಲ್ಲಿ ಹೆಸರು ಮಾಡಿರುವ ಅವರು ‘ಥಂಡರ್ ಮಿಕ್ಸರ್’ಎಂಬ ಆಲ್ಬಮ್‌ನ್ನೂ ಬಿಡುಗಡೆ ಮಾಡಿದ್ದಾರೆ. ಅವರು ರೆಸ್ಲಿಂಗ್ ಉದ್ಯಮದಿಂದ ಬಂದ ಮೊದಲ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

► ಅಂಡರ್‌ಟೇಕರ್- ರಿಯಲ್ ಎಸ್ಟೇಟ್ ಉದ್ಯಮಿ

ಡಬ್ಲ್ಯೂಡಬ್ಲ್ಯೂಇ ಇತಿಹಾಸದಲ್ಲಿ ಅತ್ಯಂತ ಖ್ಯಾತ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ಮಾರ್ಕ್ ಕಾಲವೇ ಅಲಿಯಾಸ್ ಅಂಡರ್‌ಟೇಕರ್ ವರ್ಷಕ್ಕೆ ಒಮ್ಮೆ ರೆಸ್ಲಿಂಗ್ ಕಣದಲ್ಲಿ ಕಾಣಿಸಿಕೊಂಡರೂ ಅದು ಭಾರೀ ಮಹತ್ವ ಪಡೆಯುತ್ತದೆ. ಕಣದಲ್ಲಿದ್ದುಕೊಂಡೇ ತನ್ನದೇ ಆದ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತನ್ನ ಉದ್ಯಮ ಪಾಲುದಾರ ಸ್ಕಾಟ್ ಎವರ್‌ಹಾರ್ಟ್ ಜೊತೆ ಸೇರಿ ಹಲವಾರು ಕಟ್ಟಡಗಳನ್ನು ನಿರ್ಮಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News