ರಶ್ಯ: ಅತಿ ದೊಡ್ಡ ತೇಲುವ ಪರಮಾಣು ವಿದ್ಯುತ್ ಸ್ಥಾವರಕ್ಕೆ ಚಾಲನೆ

Update: 2018-05-20 17:15 GMT

ಮಾಸ್ಕೊ, ಮೇ 20: ಜಗತ್ತಿನ ಅತಿ ದೊಡ್ಡ ತೇಲುವ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬಂದರು ನಗರ ಮುರ್ಮನ್‌ಸ್ಕ್‌ನಲ್ಲಿ ರಶ್ಯ ಶನಿವಾರ ಚಾಲನೆ ನೀಡಿದೆ. ಅಲ್ಲಿ ಸ್ಥಾವರಕ್ಕೆ ಪರಮಾಣು ಇಂಧನವನ್ನು ತುಂಬಿಸಿದ ಬಳಿಕ ಸ್ಥಾವರವು ಪೂರ್ವ ಸೈಬೀರಿಯದತ್ತ ಚಲಿಸಲಿದೆ.

ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಿರ್ಮಿಸಲ್ಪಟ್ಟ ‘ಅಕಾಡೆಮಿಕ್ ಲೊಮೊನೊಸೊವ್’ ಗುರುವಾರ ಮುರ್ಮನ್‌ಸ್ಕ್ ಬಂದರು ತಲುಪಿತು. ಅಲ್ಲಿ ಈ ತೇಲುವ ಪರಮಾಣು ವಿದ್ಯುತ್ ಸ್ಥಾವರವನ್ನು ಪತ್ರಕರ್ತರಿಗೆ ಪ್ರದರ್ಶಿಸಲಾಯಿತು.

ಸರಕಾರಿ ಪರಮಾಣು ಶಕ್ತಿ ಸಂಸ್ಥೆ ‘ರೊಸಟೊಮ್’ ನಿರ್ಮಿಸಿರುವ 144 ಮೀಟರ್ ಉದ್ದ ಮತ್ತು 30 ಮೀಟರ್ ಅಗಲದ ನೌಕೆಯು ತಲಾ 35 ಮೆಗಾವ್ಯಾಟ್ ಸಾಮರ್ಥ್ಯದ ಎರಡು ರಿಯಾಕ್ಟರ್‌ಗಳನ್ನು ಹೊಂದಿದೆ.

21,000 ಟನ್ ಭಾರದ ಬಾರ್ಜ್‌ನ್ನು 2019ರ ಬೇಸಿಗೆಯಲ್ಲಿ ರಶ್ಯದ ತೀರಾ ಈಶಾನ್ಯದಲ್ಲಿರುವ ಸ್ವಾಯತ್ತ ಚುಕೋಟ್ಕ ವಲಯಕ್ಕೆ ತೆಗೆದುಕೊಂಡು ಹೋಗಲಾಗುವುದು. 2 ಲಕ್ಷ ನಿವಾಸಿಗಳ ಪಟ್ಟಣವೊಂದಕ್ಕೆ ಸಾಕಾಗುವಷ್ಟು ವಿದ್ಯುತ್ತನ್ನು ಈ ಬಾರ್ಜ್ ಉತ್ಪಾದಿಸುತ್ತದೆ.

ಈ ತೇಲುವ ವಿದ್ಯುತ್ ಸ್ಥಾವರವನ್ನು ರಶ್ಯವು ಮುಖ್ಯವಾಗಿ ತೈಲ ರಿಗ್‌ಗಳ ಕಾರ್ಯಾಚರಣೆಯಲ್ಲಿ ಬಳಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News