ಗಡಿ ಸಮೀಪದ ತಟಸ್ಥ ನೆಲದಿಂದ ಹೋಗಿ

Update: 2018-05-20 17:55 GMT

ಟೊಂಬ್ರು (ಬಾಂಗ್ಲಾದೇಶ), ಮೇ 20: ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳ ನಡುವಿನ ತಟಸ್ಥ ನೆಲವನ್ನು ತಕ್ಷಣ ತೊರೆಯುವಂತೆ ರೊಹಿಂಗ್ಯಾ ಮುಸ್ಲಿಮರಿಗೆ ಮ್ಯಾನ್ಮಾರ್ ಸೈನಿಕರು ಆದೇಶಿಸಿದ್ದಾರೆ. ಈ ಸಂಬಂಧ ಸೈನಿಕರು ಗಡಿ ಸಮೀಪ ಧ್ವನಿವರ್ಧಕಗಳ ಮೂಲಕ ಘೋಷಣೆಗಳನ್ನು ಮಾಡಿದ್ದಾರೆ ಎಂದು ನಿರಾಶ್ರಿತರು ರವಿವಾರ ಹೇಳಿದ್ದಾರೆ.

 ಕಳೆದ ವರ್ಷದ ಆಗಸ್ಟ್‌ನಲ್ಲಿ ಮ್ಯಾನ್ಮಾರ್ ಸೈನಿಕರು ನಡೆಸಿದ ಅಮಾನುಷ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿರುವುದನ್ನು ಸ್ಮರಿಸಬಹುದಾಗಿದೆ. ಈ ಪೈಕಿ ಸುಮಾರು 6,000 ನಿರಾಶ್ರಿತರು ಉಭಯ ದೇಶಗಳ ನಡುವೆ ಯಾರಿಗೂ ಸೇರದ ಕಿರಿದಾದ ಜಮೀನಿನಲ್ಲಿ ವಾಸಿಸುತ್ತಿದ್ದಾರೆ.

ರೊಹಿಂಗ್ಯಾ ನಿರಾಶ್ರಿತರ ಪೈಕಿ ಹೆಚ್ಚಿನವರು ಬಾಂಗ್ಲಾದೇಶದ ಬೃಹತ್ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ತಟಸ್ಥ ನೆಲದಲ್ಲಿ ವಾಸಿಸುತ್ತಿರುವ ನಿರಾಶ್ರಿತರು ಅಲ್ಲಿಂದ ಬಾಂಗ್ಲಾದೇಶಕ್ಕೆ ಹೋಗಬೇಕೆಂದು ಈ ಹಿಂದೆಯೂ ಮ್ಯಾನ್ಮಾರ್ ಧ್ವನಿವರ್ಧಕಗಳ ಮೂಲಕ ಸೂಚನೆಗಳನ್ನು ನೀಡಿತ್ತು. ಆದಾಗ್ಯೂ, ಈ ರೀತಿಯಾಗಿ ಧ್ವನಿವರ್ಧಕಗಳ ಮೂಲಕ ಆದೇಶ ನೀಡುವುದನ್ನು ನಿಲ್ಲಿಸಲು ಮ್ಯಾನ್ಮಾರ್ ಫೆಬ್ರವರಿಯಲ್ಲಿ ಒಪ್ಪಿತ್ತು.

ತಟಸ್ಥ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಭಾರೀ ಪ್ರಮಾಣದ ಸೈನಿಕರನ್ನೂ ಮ್ಯಾನ್ಮಾರ್ ಹಿಂದಕ್ಕೆ ಪಡೆದುಕೊಂಡಿತ್ತು. ಈ ಸೈನಿಕರು ತಂತಿ ಬೇಲಿಯ ಮತ್ತೊಂದು ಬದಿಯಲ್ಲಿ ವಾಸಿಸುತ್ತಿದ್ದ ತಮಗೆ ಬೆದರಿಕೆಯುಡ್ಡುತ್ತಿದ್ದರು ಎಂಬುದಾಗಿ ರೊಹಿಂಗ್ಯಾ ಮುಸ್ಲಿಮರು ಆರೋಪಿಸಿದ್ದರು.

ಆದರೆ, ಈ ವಾರಾಂತ್ಯದಲ್ಲಿ ಮ್ಯಾನ್ಮಾರ್ ಸೈನಿಕರು ಧ್ವನಿವರ್ಧಕಗಳ ಮೂಲಕ ಸ್ಥಳ ಬಿಟ್ಟು ಹೋಗುವಂತೆ ಆದೇಶಿಸುವುದನ್ನು ಮುಂದುವರಿಸಿದ್ದಾರೆ ಎಂದು ರೊಹಿಂಗ್ಯಾ ಸಮುದಾಯದ ನಾಯಕರು ಆರೋಪಿಸಿದ್ದಾರೆ. ಇದರೊಂದಿಗೆ, ಈಗಾಗಲೇ ಉದ್ವಿಗ್ನತೆ ನೆಲೆಸಿರುವ ಬಾಂಗ್ಲಾದೇಶ-ಮ್ಯಾನ್ಮಾರ್ ಗಡಿಯ ಪರಿಸ್ಥಿತಿ ಹದಗೆಟ್ಟಿದೆ.

‘‘ಅವರು ನಿನ್ನೆ ಹಲವು ಬಾರಿ ಈ ಘೋಷಣೆಗಳನ್ನು ಕೇಳಿಸಿದ್ದಾರೆ. ಇಂದು ಬೆಳಗ್ಗೆಯೂ ಅದನ್ನು ಪುನರಾವರ್ತಿಸಿದ್ದಾರೆ. ಇದು ತುಂಬಾ ಆತಂಕಕಾರಿಯಾಗಿದೆ ಹಾಗೂ ನಾವು ಹೆದರಿದ್ದೇವೆ’’ ಎಂದು ತಟಸ್ಥ ಪ್ರದೇಶದಲ್ಲಿ ನೆಲೆಸಿರುವ ರೊಹಿಂಗ್ಯಾ ಸಮುದಾಯದ ನಾಯಕ ಮುಹಮ್ಮದ್ ಆರಿಫ್ ಹೇಳಿದರು.

ಅದು ನಮ್ಮ ತಾಯ್ನೆಲ, ನಾವ್ಯಾಕೆ ಹೋಗಬೇಕು?

‘‘ಮ್ಯಾನ್ಮಾರ್ ವ್ಯಾಪ್ತಿಯಲ್ಲಿ ಬರುವ ಸ್ಥಳದಿಂದ ಹೋಗಿ, ಇಲ್ಲವೇ ಶಿಕ್ಷೆ ಎದುರಿಸಿ’’ ಎಂಬ ಘೋಷಣೆಗಳನ್ನು ಬರ್ಮಿಶ್ ಮತ್ತು ರೊಹಿಂಗ್ಯಾ ಭಾಷೆಗಳಲ್ಲಿ ಪ್ರಸಾರಿಸಲಾಗುತ್ತಿದೆ.

‘‘ನಾವು ಮ್ಯಾನ್ಮಾರ್‌ನ ಪ್ರಜೆಗಳು. ಅದು ನಮ್ಮ ತಾಯ್ನೆಲ. ಅಲ್ಲಿರುವ ಎಲ್ಲ ಹಕ್ಕುಗಳು ನಮಗಿವೆ. ನಾವು ಬೇರೆ ಕಡೆ ಯಾಕೆ ಹೋಗಬೇಕು?’’ ಎಂದು ಸಮುದಾಯದ ಇನ್ನೋರ್ವ ನಾಯಕ ದಿಲ್ ಮುಹಮ್ಮದ್ ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News