ಯಡಿಯೂರಪ್ಪ ಅವರ ಕೀಲು ಮುರಿದದ್ದು..
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಮತ್ತು ರಾಜ್ಯದಲ್ಲಿನ ಇತರೆ ನಾಯಕರುಗಳು ಯಡಿಯೂರಪ್ಪ ಅವರನ್ನು ಸಿ.ಎಂ ಎಂದೇ ಒತ್ತಿ ಒತ್ತಿ ಹೇಳುತ್ತಿದ್ದರು. ಆ ಮೂಲಕ ಓಟ್ ಬ್ಯಾಂಕ್ ನ್ನು ಗಟ್ಟಿಮಾಡಿಕೊಳ್ಳುವುದೇ ಅದರ ಉದ್ದೇಶವಾಗಿತ್ತು. ಆದರೆ ಚುನಾವಣೆಯಲ್ಲಿ 104 ಸ್ಥಾನ ಗಳಿಸಿಕೊಂಡ ಮೇಲೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ ಹೈಕಮಾಂಡ್ ಆಸಕ್ತಿ ತೋರಲಿಲ್ಲವೇಕೆ?
ಯಡಿಯೂರಪ್ಪ ಅವರು ವಿಶ್ವಾಸ ಮತಗಳಿಸಿ ರಾಜ್ಯವಾಳುವಲ್ಲಿ ಯಶಸ್ವಿಯಾಗಲಿಲ್ಲ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅದಕ್ಕೆ ಅವಕಾಶ ಕೊಡಲಿಲ್ಲ. ಆಪರೇಶನ್ ಕಮಲ ಈ ಬಾರಿ ಕೈಗೂಡಲಿಲ್ಲ..ಇವಿಷ್ಟು ಜನರಿಗೆ ಮೇಲ್ನೋಟಕ್ಕೆ ಕಾಣುತ್ತಿರುವ ರಾಜಕೀಯ ನಡಾವಳಿಗಳು.
ಆದರೆ ಬಿಜೆಪಿಯ ಆಂತರ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ಬೇಕಿರಲಿಲ್ಲ ಎಂದರೆ ನಂಬುವಿರಾ?
ಇಂತಹ ಅನುಮಾನಗಳಿಗೆ ಕಳೆದ ಒಂದು ತಿಂಗಳ ಚುನಾವಣಾ ಕಾಲಘಟ್ಟದ ಬಿಜೆಪಿಯಲ್ಲಿನ ವಿದ್ಯಮಾನಗಳನ್ನು ಅವಲೋಕಿಸಿದರೆ ಸ್ಪಷ್ಟವಾಗಿ ಕಾಣುತ್ತದೆ.
ಬಿಜೆಪಿ ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ್ದರ ಹಿಂದೆ ಅಧಿಕಾರ ಹಿಡಿಯುವ ಸ್ಟ್ಯಾಟಜಿ ಇತ್ತೇ ಹೊರತು , ಇದೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ ಇರಲಿಲ್ಲ ಏಕೆ?
ಯಡಿಯೂರಪ್ಪ ಪ್ರಬಲ ಲಿಂಗಾಯತ ಸಮುದಾಯದ ನಾಯಕ, ಅವರ ಹಿಂದೆ ಲಿಂಗಾಯತ ಮತಗಳು ಇವೆ ಎಂಬುದು ಈ ಚುನಾವಣೆಯಲ್ಲೂ ಸಾಬೀತಾಯಿತು.
ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯದಲ್ಲಿನ ಇತರ ನಾಯಕರುಗಳು ಯಡಿಯೂರಪ್ಪ ಅವರನ್ನು ಸಿ.ಎಂ ಎಂದೇ ಒತ್ತಿ ಒತ್ತಿ ಹೇಳುತ್ತಿದ್ದರು. ಆ ಮೂಲಕ ಓಟ್ ಬ್ಯಾಂಕ್ ನ್ನು ಗಟ್ಟಿಮಾಡಿಕೊಳ್ಳುವುದೇ ಅವರ ಉದ್ದೇಶವಾಗಿತ್ತು. ಆದರೆ ಚುನಾವಣೆಯಲ್ಲಿ 104 ಸ್ಥಾನ ಗಳಿಸಿಕೊಂಡ ಮೇಲೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ ಹೈಕಮಾಂಡ್ ಆಸಕ್ತಿ ತೋರಲಿಲ್ಲವೇಕೆ?
ಚಾಣಕ್ಯ ಅಮಿತ್ ಶಾ ರಾಜ್ಯಕ್ಕೆ ಬಂದು ಕೂರುತ್ತಾರೆ, ರಾಜ್ಯದಲ್ಲಿ ಬಿಜೆಪಿ ಆಡಳಿತ ಶುರು ಎಂದೆಲ್ಲಾ ಇಲೆಕ್ಟ್ರಾನಿಕ್ ಸುದ್ದಿಮಾಧ್ಯಮಗಳು ಪುಂಖಾನುಪುಂಖ ಶಂಖ ಊದತೊಡಗಿದವು. ಆದರೆ ಅಮಿತ್ ಶಾ ಬರುವುದಿರಲಿ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗವಾಗಿ ವಿಶ್ ಕೂಡ ಮಾಡಲಿಲ್ಲ.
ಬದಲಾಗಿ ನೀವೇ ಶಕ್ತಿ ಕ್ರೋಡೀಕರಿಸಿಕೊಂಡು ಮುಖ್ಯಮಂತ್ರಿ ಪದವಿ ಉಳಿಸಿಕೊಳ್ಳಿ ಎಂದು ಹೈಕಮಾಂಡ್ ಕೈ ಚೆಲ್ಲಿತು. ಯಡಿಯೂರಪ್ಪ ಅದೇ ರೆಡ್ಡಿ ಗ್ಯಾಂಗ್‌ನ್ನು ನಂಬಿಕೊಂಡು ಆಪರೇಶನ್ ಕಮಲಕ್ಕಿಳಿದರೂ ಅದೂ ಕೈಗೂಡಲಿಲ್ಲ.
ರಾಜ್ಯದ ಬಿಜೆಪಿಯ ಯಾವ ನಾಯಕರೂ ಯಡಿಯೂರಪ್ಪರಿಗೆ ಸಾಥ್ ನೀಡಲಿಲ್ಲ. ಯಡಿಯೂರಪ್ಪ ಓರ್ವ ಮಾಸ್ ಲೀಡರ್. ತಮ್ಮ ಶಕ್ತಿ ಏನೆಂಬುದನ್ನು ಬಿಜೆಪಿಯನ್ನು ಬಿಟ್ಟು ಕೆಜೆಪಿ ಕಟ್ಟಿ ಬಿಜೆಪಿಯ ಕಿಬ್ಬೊಟ್ಟೆಯ ಕೀಲು ಮುರಿದು ಸಾಬೀತು ಮಾಡಿದ್ದರು.
ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪನವರ ತೀರ್ಮಾನಗಳನ್ನು ಧಿಕ್ಕರಿಸಲಾಯಿತು. ಕೇವಲ ನಾವು ಹೇಳಿದಂತೆ ಕೇಳಬೇಕೆಂಬ ಫರ್ಮಾನುಗಳಿಗೆ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲಾಯಿತು. ಇದರ ಸ್ಯಾಂಪಲ್ ಗಳೆಂದರೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರನಿಗೆ ಟಿಕೆಟ್ ನಿರಾಕರಿಸಿದ್ದು, ಶೋಭಕರಂದ್ಲಾಜೆ ಅವರನ್ನು ನೇಪಥ್ಯಕ್ಕೆ ಸರಿಸಿದ್ದು. ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ಅವರು ಯಾರ ಕೈಲೂ ಇರುವುದಿಲ್ಲ ಎನ್ನುವ ವಿಷಯವನ್ನು ರಾಜ್ಯ ಬಿಜೆಪಿಯಲ್ಲಿನ ವಿರೋಧಿ ಪಾಳೆಯ ಹೈಕಮಾಂಡ್ ಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿಗೆ ಅಧಿಕಾರ ಬೇಕು ನಿಜ, ಆದರೆ ರಾಜ್ಯ ಬಿಜೆಪಿಯಲ್ಲಿನ ಯಡಿಯೂರಪ್ಪ ಅವರ ವಿರೋಧಿ ಪಾಳೆಯಕ್ಕೆ ಯಡಿಯೂರಪ್ಪ ಸಿ.ಎಂ ಮಾತ್ರ ಆಗಿರಬಾರದು. 2019 ರ ಲೋಕಸಭಾ ಚುನಾವಣೆವರೆಗೂ ಯಡಿಯೂರಪ್ಪ ಬಿಜೆಪಿಗೆ ಬೇಕಾಗಿದ್ದಾರೆ. ಪ್ರಾದೇಶಿಕ ನಾಯಕತ್ವವನ್ನು ಆಯಾ ಕಾಲಕ್ಕೆ ಬಳಸಿಕೊಂಡು ಆನಂತರ ಅದನ್ನು ಹೊಸಕಿ ಹಾಕುವುದು ಬಿಜೆಪಿಯ ಇತಿಹಾಸ ಹೇಳುತ್ತದೆ. ಅಸಲಿಗೆ ಯಡಿಯೂರಪ್ಪ ಅವರ ಸಿಎಂ ಕುರ್ಚಿ ಕಾಲು ಮುರಿದವರಲ್ಲಿ ಅವರದ್ದೇ ಮಂದಿ ಇದ್ದಾರೆ.
ಧರ್ಮ ಮತ್ತು ವ್ಯಕ್ತಿ ಪೂಜೆಯ ಸನ್ನಿಪೀಡಿತ ರಾಜಕಾರಣಕ್ಕೆ ಪ್ರತಿಯಾದ ಜನಪರ ರಾಜಕಾರಣ ಹೊಸ ಹೊಳಹೊಂದನ್ನು ಕಾಣತೊಡಗಿದೆ. ಇದು ಅನಿವಾರ್ಯವಾಗದೇ ಹೋದರೆ ಪ್ರಜಾಪ್ರಭುತ್ವವೆಂಬುದು ಮನುಸ್ಮತಿ ಎಂಬ ‘ಕೇಡಿನ’ ಕಾಲಾಳಾಗಿ ನಲುಗಿ ಹೋಗುವುದು ನಿಚ್ಚಳ.
2019 ರ ಲೋಕಸಭಾ ಚುನಾವಣೆಗೆ ದೇಶ ಎಚ್ಚೆತ್ತುಕೊಳ್ಳುವ ಕಾಲವೊಂದು ಸನ್ನಿಹಿತವಾಗಿದೆ. ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗಳಿಸಿತ್ತಾದರೂ ಅದು ಸ್ಪಷ್ಟ ಜನಾದೇಶ ಪಡೆಯುವಲ್ಲಿ ವಿಫಲವಾಗಿದೆ. ತಂತ್ರ, ಕುತಂತ್ರಗಳ ಮೂಲಕ ಸರಕಾರ ರಚಿಸುವ ಕಸರತ್ತು ನಡೆಸಿತ್ತಾದರೂ ಅದು ಕೈಗೂಡಲಿಲ್ಲ. ಕಾಂಗ್ರೆಸ್ -ಜೆಡಿಎಸ್ ಪರಸ್ಪರ ಹಗೆ ಮರೆತು ಕೈಜೋಡಿಸಿರುವುದು ಕೇವಲ ಕರ್ನಾಟಕದ ಮಟ್ಟಿಗೆ ಅದೊಂದು ರಾಜಕೀಯಾಧಿಕಾರದ ಹಂಚಿಕೆಯಲ್ಲ. ಇಡೀ ರಾಷ್ಟ್ರ ರಾಜಕಾರಣದ ಹೊಸ ದಿಸೆಯ ಮುಖ್ಯ ಭೂಮಿಕೆಯಾಗಿದೆ.
ಕಳೆದ ನಾಲ್ಕುವರ್ಷಗಳ ಕಾಲ ಕೇಂದ್ರ ಮೋದಿ ಸರಕಾರ ನಡೆದುಕೊಂಡ ಆಕ್ರಮಣಕಾರಿ ಆಡಳಿತ ನೀತಿ, ಪ್ರವೃತ್ತಿ ಬಿಜೆಪಿಯೇತರ ಸೆಕ್ಯುಲರ್ ಸಿದ್ಧಾಂತ ಆಧಾರಿತ ರಾಜಕೀಯ ಶಕ್ತಿಗಳನ್ನು ನಾಶಪಡಿಸುವ ಅಜೆಂಡಾವೂ ಆಗಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 2019 ರ ಲೋಕಸಭಾ ಚುನಾವಣಾ ವೇಳೆಗೆ ಬಿಜೆಪಿಯೇತರ ಸೆಕ್ಯುಲರ್ ಶಕ್ತಿಗಳ ‘ಫೆಡರಲ್ ಫ್ರೆಂಟ್’ ವೊಂದು ಮೈದಳೆಯುವ ಯೋಚನೆಗೆ ಕರ್ನಾಟಕದ ರಾಜಕಾರಣ ಪ್ರಚೋದಕ ಶಕ್ತಿಯಾಗಿ ಹೊರಹೊಮ್ಮಿದೆ.
ದೇವೇಗೌಡ, ಮಾಯಾವತಿ, ಮಮತಾ ಬ್ಯಾನರ್ಜಿ, ಕೆ.ಸಿ ಚಂದ್ರಶೇಖರ್, ಚಂದ್ರಬಾಬು ನಾಯ್ಡು ಸೇರಿದಂತೆ ಪ್ರಾದೇಶಿಕ ಪಕ್ಷಗಳು ಮತ್ತು ಕಾಂಗ್ರೆಸ್ ಒಟ್ಟಾಗಿ ಸಮರ್ಥವಾದ ಫೆಡರಲ್ ಫ್ರೆಂಟ್ ವೊಂದನ್ನು ಕಟ್ಟುವ ಕೆಲಸಕ್ಕೆ ಚಾಲನೆ ಸಿಕ್ಕಂತಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಯ ಕರ್ನಾಟಕ ರಾಜಕಾರಣ ಧರ್ಮಾಧಾರಿತ ಮತ್ತು ಕೋಮುಶಕ್ತಿ ನಿರ್ದೇಶಿತ ರಾಷ್ಟ್ರ ರಾಜಕಾರಣಕ್ಕೆ ಜಾತ್ಯತೀತ ಪ್ರತಿರಾಜಕಾರಣದ ಬೀಜವೊಂದು ಮೊಳಕೆಯೊಡೆದಿದೆ. ಅದನ್ನು ಬೆಳೆಸಿ ಉಳಿಸಿಕೊಳ್ಳದೆ ಇದ್ದರೆ ಜಾಲಿ ಮರವೆಂಬ ಮೋದಿಯ ಮುಳ್ಳಿನೊಂದಿಗೆ ನಲುಗಬೇಕಾದೀತು.
ಕೃಪೆ avadhi