ಯಾವುದು ಹೆಚ್ಚು ಆರೋಗ್ಯಕರ.... ಕಂದುಬಣ್ಣದ ಮೊಟ್ಟೆಯೋ ಬಿಳಿಯ ಮೊಟ್ಟೆಯೋ ?

Update: 2018-05-21 11:07 GMT

ಯಾವ ಮೊಟ್ಟೆ ಹೆಚ್ಚು ಆರೋಗ್ಯಕರ ಎಂದು ಯಾರನ್ನಾದರೂ ಪ್ರಶ್ನಿಸಿದರೆ ಕಂದುಬಣ್ಣದ ಅಥವಾ ನಾಟಿಕೋಳಿಗಳ ಮೊಟ್ಟೆಗಳು ಎಂಬ ಸಿದ್ಧ ಉತ್ತರ ಸಾಮಾನ್ಯವಾಗಿದೆ. ಆದರೆ ಇದು ನಿಜವೇ? ನಿಜವೆಂದಾದರೆ ಬಿಳಿಯ ಮೊಟ್ಟೆಗೆ ಹೋಲಿಸಿದರೆ ಅದ್ಯಾವ ಅಂಶ ಕಂದು ಮೊಟ್ಟೆಗಳನ್ನು ಹೆಚ್ಚು ಪೌಷ್ಟಿಕವಾಗಿಸಿದೆ? ನಿಜವಲ್ಲದಿದ್ದರೆ ನೀವು ಕಂದು ಮೊಟ್ಟೆಗಳ ಬದಲು ಬಿಳಿಯ ಮೊಟ್ಟೆಗಳನ್ನು ಸೇವಿಸಬೇಕೇ?

ಕಂದು ಮತ್ತು ಬಿಳಿಯ ಮೊಟ್ಟೆಗಳ ಬಣ್ಣ,ಪೌಷ್ಟಿಕಾಂಶ ಮತ್ತು ರುಚಿಯ ಬಗ್ಗೆ ಸಂಶೋಧನೆಗಳು ಏನು ಹೇಳುತ್ತವೆ ಎನ್ನುವುದನ್ನು ಓದಿ......

► ನಾಟಿಕೋಳಿಗಳ ಬಣ್ಣವೇಕೆ ಕಂದು?

ಮೊಟ್ಟೆಗಳ ಬಣ್ಣವನ್ನು ವಂಶವಾಹಿಯು ನಿರ್ಧರಿಸುತ್ತದೆ. ಆದರೂ ವಾತಾವರಣ,ಹೇಂಟೆಯು ಸೇವಿಸುವ ಆಹಾರ ಮತ್ತು ಅದರ ತೂಕದಂತಹ ಇತರ ಅಂಶಗಳೂ ಮೊಟ್ಟೆಯ ಬಣ್ಣದ ಮೇಲೆ ಪರಿಣಾಮವನ್ನು ಬೀರಬಹುದು.

► ಕಂದು ಮೊಟ್ಟೆ ನಿಜಕ್ಕೂ ಹೆಚ್ಚು ಆರೋಗ್ಯಕರವೇ?

ಬಿಳಿಯ ಮೊಟ್ಟೆಗಳಿಗೆ ಹೋಲಿಸಿದರೆ ಕಂದು ಮೊಟ್ಟೆಗಳು ಹೆಚ್ಚು ನೈಸರ್ಗಿಕ ಎಂದು ಹೆಚ್ಚಿನವರು ನಂಬಿರುವುದರಿಂದ ಅವುಗಳನ್ನೇ ಸೇವಿಸಲು ಹೆಚ್ಚು ಇಷ್ಟಪಡುತ್ತಾರೆ. ಆದರೆ ಇದು ನಿಜವಲ್ಲ. ಹೆಲ್ತ್ ಜರ್ನಲ್‌ವೊಂದರಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯಂತೆ ಮೊಟ್ಟೆಗಳ ಗಾತ್ರ ಮತ್ತು ಅವುಗಳ ಕವಚದ ಬಣ್ಣ ಏನೇ ಇದ್ದರೂ ಎಲ್ಲವೂ ಸಮಾನ ಪೌಷ್ಟಿಕತೆಯನ್ನು ಹೊಂದಿರುತ್ತವೆ. ಎಲ್ಲ ಕೋಳಿ ಮೊಟ್ಟೆಗಳು ಸಮಾನ ಪ್ರಮಾಣದಲ್ಲಿ ವಿಟಾಮಿನ್‌ಗಳು,ಖನಿಜಗಳು ಮತ್ತು ಪ್ರೋಟಿನ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಅಷ್ಟೇ ಪ್ರಮಾಣದಲ್ಲಿ ಕ್ಯಾಲೊರಿಗಳನ್ನು ಒದಗಿಸುತ್ತವೆ. ಮೊಟ್ಟೆಯ ಗುಣಮಟ್ಟ ಮತ್ತು ಅದರಲ್ಲಿಯ ಪೌಷ್ಟಿಕಾಂಶಗಳ ಸಂಯೋಜನೆಯ ಮೇಲೆ ಕವಚದ ಬಣ್ಣವು ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ.

► ಪೌಷ್ಟಿಕಾಂಶಗಳಿರುವ ಮೊಟ್ಟೆಯ ಆಯ್ಕೆ ಹೇಗೆ?

ಹೇಂಟೆಗಳು ಬೆಳೆದ ವಾತಾವರಣ ಮತ್ತು ಅವುಗಳಿಗೆ ತಿನ್ನಿಸಲಾದ ಆಹಾರ ಮೊಟ್ಟೆಗಳಲ್ಲಿಯ ಪೌಷ್ಟಿಕಾಂಶಗಳ ಮೇಲೆ ಪರಿಣಾಮವನ್ನು ಹೊಂದಿರುತ್ತವೆ. ಸೂರ್ಯನ ಬಿಸಿಲಿನಲ್ಲಿ ಓಡಾಡಿಕೊಂಡಿರುವ ಮತ್ತು ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳಿರುವ ಆಹಾರವನ್ನು ತಿಂದುಕೊಂಡಿ ರುವ ಕೋಳಿಗಳ ಮೊಟ್ಟೆಗಳಲ್ಲಿ ಇವೆರಡೂ ಸೌಲಭ್ಯಗಳಿಂದ ವಂಚಿತವಾದ ಕೋಳಿಗಳ ಮೊಟ್ಟೆಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್ ಡಿ ಮತ್ತು ಒಮೆಗಾ-3 ಕೊಬ್ಬು ಇರುತ್ತವೆ.

► ಕಂದು ಅಥವಾ ಬಿಳಿಯ ಮೊಟ್ಟೆ...ಯಾವುದು ಹೆಚ್ಚು ರುಚಿಕರ?

 ಪೌಷ್ಟಿಕಾಂಶ ವೌಲ್ಯಗಳಂತೆ ಕಂದು ಮತ್ತು ಬಿಳಿಯ ಮೊಟ್ಟೆೆಗಳ ರುಚಿಗಳ ನಡುವೆಯೂ ಯಾವುದೇ ಗಣನೀಯ ವ್ಯತ್ಯಾಸವಿರುವುದಿಲ್ಲ. ಆದರೆ ಕೋಳಿಗಳು ಸೇವಿಸುವ ಆಹಾರ ಮತ್ತು ಮೊಟ್ಟೆಗಳ ತಾಜಾತನ ಅವುಗಳ ರುಚಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ. ಮೊಟ್ಟೆಗಳ ರುಚಿ ಮತ್ತು ಪೌಷ್ಟಿಕಾಂಶಗಳನ್ನು ಸಂರಕ್ಷಿಸಲು ಅವುಗಳನ್ನು ಫ್ರಿಜ್‌ನಲ್ಲಿ ದಾಸ್ತಾನಿರಿಸುವುದು ಅಗತ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News