ಗೋವಾ ಪ್ರವೇಶಕ್ಕೆ ನಿಷೇಧ: ಅರ್ಜಿಯ ತಿದ್ದುಪಡಿ ಮಾಡುವಂತೆ ಮುತಾಲಿಕ್‌ಗೆ ಸುಪ್ರೀಂ ಸೂಚನೆ

Update: 2018-05-21 15:32 GMT

ಹೊಸದಿಲ್ಲಿ,ಮೇ 21: ತನ್ನ ಅರ್ಜಿಯನ್ನು ತಿದ್ದುಪಡಿ ಮಾಡುವಂತೆ ಮತ್ತು ರಾಜ್ಯದಲ್ಲಿ ತನ್ನ ಪ್ರವೇಶವನ್ನು ನಿಷೇಧಿಸಿರುವ ಗೋವಾ ಸರಕಾರದ ಇತ್ತೀಚಿನ ಅಧಿಸೂಚನೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಷ್ಟ್ರಿಯ ಹಿಂದೂ ಸೇನಾದ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಸೂಚಿಸಿದೆ.

ಗೋವಾ ಸರಕಾರವು ಕುಚೇಷ್ಟೆಯನ್ನು ನಡೆಸಿದೆ ಮತ್ತು ತನ್ನ ಕಕ್ಷಿದಾರನ ಪ್ರವೇಶದ ಮೇಲಿನ ನಿಷೇಧವನ್ನು ವಿಸ್ತರಿಸಿ ಇನ್ನೊಂದು ನಿಷೇಧಾಜ್ಞೆಯನ್ನು ಹೊರಡಿಸಿದೆ ಎಂದು ಮುತಾಲಿಕ್ ಪರ ವಕೀಲರು ತಿಳಿಸಿದಾಗ,ಅಂತಹ ಇತ್ತೀಚಿನ ಅಧಿಸೂಚನೆಯಿದ್ದರೆ ಅದನ್ನು ತನ್ನ ಮುಂದೆ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ನವೀನ್ ಸಿನ್ಹಾ ಅವರ ಪೀಠವು ಸೂಚಿಸಿತು. ಇದಕ್ಕೆ ತನಗೆ ಕಾಲಾವಕಾಶ ನೀಡುವಂತೆ ವಕೀಲರು ಕೋರಿದರು.

ಅರ್ಜಿಯನ್ನು ವಿರೋಧಿಸಿದ ಗೋವಾ ಪರ ವಕೀಲರು,ತನ್ನ ವಿರುದ್ಧ 50ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಮುತಾಲಿಕ್ ಉಚ್ಚ ನ್ಯಾಯಾಲಯವನ್ನು ಮೊದಲು ಸಂಪರ್ಕಿಸಬೇಕು ಎಂದು ವಾದಿಸಿದರು. ಮುತಾಲಿಕ್ ವಿರುದ್ಧ ಹಿಂಸೆಯನ್ನು ಪ್ರಚೋದಿಸುತ್ತಾರೆ ಎಂಬ ಆರೋಪಗಳಿವೆ ಎಂದು ಅವರು ಹೇಳಿದರು.

ಇದನ್ನು ವಿರೋಧಿಸಿದ ಮುತಾಲಿಕ್ ಪರ ವಕೀಲರು,ಹೆಚ್ಚಿನ ಪ್ರಕರಣಗಳಲ್ಲಿ ತನ್ನ ಕಕ್ಷಿದಾರರು ಖುಲಾಸೆಗೊಂಡಿದ್ದಾರೆ ಮತ್ತು ಜೂ.1ರಂದು ಅವರು ಗೋವಾಕ್ಕೆ ತೆರಳಬೇಕಿದೆ ಎಂದು ತಿಳಿಸಿದರು. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಆಗಸ್ಟ್ ಮೊದಲ ವಾರಕ್ಕೆ ನಿಗದಿಗೊಳಿಸಿದೆ.  ರಾಜ್ಯದಲ್ಲಿ ಮುತಾಲಿಕ್ ಪ್ರವೇಶಕ್ಕೆ ನಿಷೇಧವನ್ನು ವಿಸ್ತರಿಸಿ ಗೋವಾ ಸರಕಾರವು ಹಲವಾರು ನಿಷೇಧಾಜ್ಞೆಗಳನ್ನು ಹೊರಡಿಸುತ್ತಲೇ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News