ಸಾರ್ವತ್ರಿಕ ಆರೋಗ್ಯ ಸುರಕ್ಷತೆ ಮತ್ತು ರೋಗ ನಿರ್ಣಯದ ಪಾತ್ರ

Update: 2018-05-21 18:25 GMT

ಕ್ಷಿಪ್ರ ಪರೀಕ್ಷೆ ಮತ್ತು ರೋಗಲಕ್ಷಣದ ಮೇಲೆ ಚಿಕಿತ್ಸೆ ನೀಡುವ ಪದ್ಧತಿ ಬಡದೇಶಗಳಿಗೆ ಸಾಕು ಎಂಬ ಮನೋಭಾವವನ್ನು ತಿರಸ್ಕರಿಸಲು ಹಾಗೂ ಎಲ್ಲ ದೇಶಗಳಿಗೆ ಕಾರ್ಯಸಾಧು ಎನಿಸುವ, ವಿವಿಧ ಸ್ತರಗಳ, ಗುಣಮಟ್ಟ ಖಾತ್ರಿಯ ಪ್ರಯೋಗಾಲಯ ಮೂಲಸೌಕರ್ಯ ವ್ಯವಸ್ಥೆಯನ್ನು ಎಲ್ಲ ದೇಶಗಳಿಗೂ ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಇದು ಸಕಾಲ.
ಸಾಂವಿಧಾನಾತ್ಮಕ ಸಾರ್ವತ್ರಿಕ ಆರೋಗ್ಯ ಸುರಕ್ಷೆಗೆ ಮುಖ್ಯವಾಗಿ ಅಗತ್ಯ ರೋಗನಿರ್ಣಯದ ಅನಿವಾರ್ಯತೆ ಇದೆ ಹಾಗೂ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸೂಕ್ತ ಹೂಡಿಕೆ ಮಾಡದೇ ಇಂಥ ಸೇವೆ ನೀಡಲು ಸಾಧ್ಯವಿಲ್ಲ.

ಆರೋಗ್ಯ ಮಾನವನ ಹಕ್ಕು. ಇಷ್ಟಾಗಿಯೂ ಕಟು ವಾಸ್ತವವೆಂದರೆ, ಎಲ್ಲರಿಗೂ ಆರೋಗ್ಯ ಎಂಬ ಅಲ್ಮಾ ಆಟಾ ಒಪ್ಪಂದ ಜಾರಿಗೆ ಬಂದ 40 ವರ್ಷಗಳ ಬಳಿಕ ಕೂಡಾ, ವಿಶ್ವದಲ್ಲಿ ಅರ್ಧದಷ್ಟು ಮಂದಿಗೆ ಅಗತ್ಯ ಆರೋಗ್ಯ ಸೇವೆಗಳ ಲಭ್ಯತೆ ಇಲ್ಲ.

ಜಾಗತಿಕ ಮಟ್ಟದ ಆರೋಗ್ಯ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ, ಎಲ್ಲ ದೇಶಗಳು 2030ರ ಸುಸ್ಥಿರ ಅಭಿವೃದ್ಧಿ ಗುರಿಯತ್ತ ಬದ್ಧತೆ ತೋರಬೇಕಿದ್ದು, ಇದರಲ್ಲಿ ಸಾರ್ವತ್ರಿಕ ಆರೋಗ್ಯ ಸುರಕ್ಷೆ ಕೂಡಾ ಸೇರಿದೆ. ಇದರಲ್ಲಿ ಹಣಕಾಸು ಅಪಾಯ ಸುರಕ್ಷೆ, ಗುಣಮಟ್ಟದ ಅಗತ್ಯ ಆರೋಗ್ಯ ಸೇವೆಯ ಲಭ್ಯತೆ ಮತ್ತು ಸುರಕ್ಷಿತ, ಪರಿಣಾಮಕಾರಿ, ಗುಣಮಟ್ಟದ ಮತ್ತು ಕೈಗೆಟಕುವ ಔಷಧಿಗಳು ಮತ್ತು ಲಸಿಕೆಗಳು ಎಲ್ಲರಿಗೂ ಲಭ್ಯವಾಗಬೇಕು.
ಕ್ರಾಂತಿಕಾರಕ ಬೆಳವಣಿಗೆಯಲ್ಲಿ ಮೊತ್ತಮೊದಲ ಅಗತ್ಯ ಔಷಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ 40 ವರ್ಷಗಳ ಬಳಿಕ, ವಿಶ್ವ ಆರೋಗ್ಯ ಸಂಸ್ಥೆ ಈ ವಾರ ಮೊತ್ತಮೊದಲ ಬಾರಿಗೆ ಅಗತ್ಯ ರೋಗನಿರ್ಣಯ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಹೊಸ ಪಟ್ಟಿಯು ಪ್ರಮುಖವಾಗಿ ಅಗತ್ಯ ಔಷಧಗಳ ಪಟ್ಟಿಯ ಪರಿಣಾಮವನ್ನು ವಿಸ್ತೃತಗೊಳಿಸಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಗತ್ಯ ಔಷಧಿಗಳಿಗೆ ಅಗತ್ಯ ರೋಗನಿರ್ಣಯ ಅಗತ್ಯವಿದೆ.
ಅಗತ್ಯ ಔಷಧಗಳು ಮತ್ತು ಲಸಿಕೆಗಳ ಅಗತ್ಯತೆಯ ಮಹತ್ವವನ್ನು ಎಲ್ಲರೂ ಒಪ್ಪುತ್ತಾರಾದರೂ, ರೋಗನಿರ್ಣಯದ ಮಹತ್ವದ ಬಗ್ಗೆ ಅರಿವು ಸೀಮಿತ. ವಾಸ್ತವವಾಗಿ ಇದು ಎಲ್ಲ ರೋಗಗಳ ನಿರ್ವಹಣೆಯಲ್ಲಿ ಪ್ರಮುಖ ಹಾಗೂ ಮೊತ್ತಮೊದಲ ಹೆಜ್ಜೆ.
ರೋಗ ನಿರ್ಣಯವು ಆರೋಗ್ಯ ಸೇವೆ ನಿರ್ಧಾರಗಳಲ್ಲಿ ಶೇ. 70ರಷ್ಟು ಪ್ರಭಾವ ಬೀರುತ್ತದೆ. ಇಷ್ಟಾಗಿಯೂ ಆರೋಗ್ಯಸೇವೆಗೆ ಮಾಡುವ ಒಟ್ಟು ವೆಚ್ಚಕ್ಕೆ ಹೋಲಿಸಿದರೆ, ಶೇ. 3ರಿಂದ 5ರಷ್ಟು ಮೊತ್ತವನ್ನು ಮಾತ್ರ ತಪಾಸಣೆಗಳಿಗೆ ವೆಚ್ಚ ಮಾಡಲಾಗುತ್ತದೆ.

ರೋಗನಿರ್ಣಯ ಅಂತರದ ಸಮಸ್ಯೆ ನಿವಾರಣೆ
ಕ್ಷಯರೋಗಕ್ಕೆ ರೋಗನಿರ್ಣಯವಿಲ್ಲದೇ ಚಿಕಿತ್ಸೆ ನೀಡುವುದನ್ನು ಕಲ್ಪಿಸಿಕೊಳ್ಳಿ ಅಥವಾ ಪ್ರಯೋಗಾಲಯದ ನೆರವಿಲ್ಲದೇ ಮಧುಮೇಹ ನಿರ್ವಹಿಸುವುದನ್ನು ಕಲ್ಪಿಸಿಕೊಳ್ಳಿ.

2018ರಲ್ಲಿ ಶೇ. 40ರಷ್ಟು ಕ್ಷಯರೋಗ ಪ್ರಕರಣಗಳಲ್ಲಿ ರೋಗನಿರ್ಣಯವಾಗಿಲ್ಲ ಅಥವಾ ಇಂಥ ಪ್ರಕರಣಗಳನ್ನು ವರದಿ ಮಾಡಿಲ್ಲ. ಒಂದು ಅಂದಾಜಿನ ಪ್ರಕಾರ, ವಿಶ್ವದಾದ್ಯಂತ ಟೈಪ್-2 ಮಧುಮೇಹ ಹೊಂದಿರುವ ಶೇ. 46ರಷ್ಟು ವಯಸ್ಕರಲ್ಲಿ ರೋಗನಿರ್ಣಯವಾಗಿಲ್ಲ. ತೀವ್ರ ಜ್ವರದ ಲಕ್ಷಾಂತರ ಪ್ರಕರಣಗಳಲ್ಲಿ ವೈದ್ಯರು ಯಾವುದೇ ರೋಗನಿರ್ಣಯ ಪರೀಕ್ಷೆ ಮಾಡದೇ ಔಷಧಿ ನೀಡುತ್ತಾರೆ. ಜನಸಾಮಾನ್ಯರ ರೋಗನಿರ್ಣಯಕ್ಕೆ ತಪಾಸಣೆ ಮಾಡದೇ ಅಥವಾ ಆದ್ಯತೆಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದು ಹೇಗೆ ಸಾಧ್ಯ? ಯಾವುದೇ ರೋಗ ಹರಡುವ ಸಂದರ್ಭದಲ್ಲಿ ಯಾವ ರೋಗದ ವಿರುದ್ಧ ನಾವು ಹೋರಾಡುತ್ತಿದ್ದೇವೆ ಎಂದು ತಿಳಿದುಕೊಳ್ಳದೆ, ಅದನ್ನು ಪತ್ತೆ ಮಾಡುವುದು ಅಥವಾ ನಿಯಂತ್ರಿಸಲು ಹೇಗೆ ಸಾಧ್ಯ?
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ, ಮೊತ್ತಮೊದಲ ಅಗತ್ಯ ರೋಗನಿರ್ಣಯ ಪಟ್ಟಿ (ಇಡಿಎಲ್) ಪ್ರಕಟಿಸುವ ಮೂಲಕ ರೋಗನಿರ್ಣಯ ಕ್ಷೇತ್ರದ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಸಾಮಾನ್ಯ ಸ್ಥಿತಿಯ ರೋಗನಿರ್ಣಯ ಮತ್ತು ಜಾಗತಿಕ ಆದ್ಯತೆಯ ರೋಗಗಳ ನಿರ್ಣಯಕ್ಕೆ ಕಡ್ಡಾಯವಾಗಿ ಮಾಡಬೇಕಾದ ತಪಾಸಣೆಗಳನ್ನು ಪಟ್ಟಿ ಮಾಡಲಾಗಿದೆ.
ಅಗತ್ಯ ರೋಗನಿರ್ಣಯವನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಆದ್ಯತೆಯ ಆರೋಗ್ಯ ಸೇವೆಗೆ ಜನಸಾಮಾನ್ಯರಿಗೆ ತೃಪ್ತಿಕರ ಎನಿಸುವ ರೋಗಪತ್ತೆ ವಿಧಾನ, ಸಾರ್ವಜನಿಕ ಆರೋಗ್ಯ ಪ್ರಸ್ತುತತೆ, ಕ್ಷಮತೆಯ ಪುರಾವೆ ಮತ್ತು ನಿಖರತೆ ಹಾಗೂ ಸಮಗ್ರ ಮಿತವೆಚ್ಚದಾಯಕವಾದ ತಪಾಸಣೆ.

ಮೊದಲ ಇಡಿಎಲ್‌ನಲ್ಲಿ ಏನು ಸೇರಿದೆ?
ವಿಶ್ವ ಆರೋಗ್ಯ ಸಂಸ್ಥೆ ಕ್ರೋಡೀಕರಿಸಿ ಸಿದ್ಧಪಡಿಸಿದ ಮೊತ್ತಮೊದಲ ಇಡಿಎಲ್‌ನಲ್ಲಿ ತಜ್ಞರು ನಿರ್ಣಯಿಸಿದ 113 ತಪಾಸಣೆಗಳು ಸೇರಿವೆ.
ಇದರಲ್ಲಿ ವಿಸ್ತೃತವಾದ ಸಾಮಾನ್ಯ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗ ಪತ್ತೆ ಮತ್ತು ರೋಗ ನಿರ್ಣಯದ ದೃಷ್ಟಿಯಿಂದ ನಡೆಸುವ 58 ಮೂಲ ತಪಾಸಣೆಗಳು (ಉದಾಹರಣೆಗೆ ಹಿಮೋಗ್ಲೋಬಿನ್, ರಕ್ತದ ಗ್ಲೂಕೋಸ್, ಪೂರ್ಣ ರಕ್ತಕಣಗಳ ಸಂಖ್ಯೆ, ಮೂತ್ರ ತಪಾಸಣೆ ಸೇರುತ್ತವೆ.
ಈ ಮೂಲಭೂತ ಪ್ರಯೋಗಾಲಯ ಪರೀಕ್ಷೆಗಳು ಪ್ರಾಥಮಿಕ ಮತ್ತು ಉನ್ನತ ಹಂತದ ಪರೀಕ್ಷಾ ಪ್ಯಾಕೇಜ್‌ಗಳಿಗೆ ಆಧಾರವಾಗುತ್ತವೆ. ಉಳಿದ 55 ಪರೀಕ್ಷೆಗಳನ್ನು ಆದ್ಯತಾ ಸೋಂಕುಗಳಾದ ಎಚ್‌ಐವಿ, ಕ್ಷಯ, ಹೆಪಟೈಟಸ್ ಬಿ ಮತ್ತು ಸಿ, ಹ್ಯೂಮನ್ ಪಪಿಲೋಮಾವೈರಸ್ (ಎಚ್‌ಪಿವಿ) ಮತ್ತು ಸಿಪ್ಲಿಸ್ ರೋಗ ಪತ್ತೆ, ರೋಗನಿರ್ಣಯಕ್ಕಾಗಿ ನಿರ್ವಹಿಸಲಾಗುತ್ತದೆ.
ಅಗತ್ಯ ರೋಗನಿರ್ಣಯ ಪಟ್ಟಿಯಲ್ಲಿ ಸೇರಿದ ಎಲ್ಲ ಪರೀಕ್ಷೆಗಳಿಗೆ ಕೂಡಾ ಪ್ರಸ್ತುತ ಇರುವ ವಿಶ್ವ ಆರೋಗ್ಯಸಂಸ್ಥೆಯ ಪುರಾವೆ ಆಧರಿತ ನಿಯಮಾವಳಿಗಳಿವೆ. ಈ ಪಟ್ಟಿಯನ್ನು ಎರಡು ಹಂತಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಅವುಗಳೆಂದರೆ ಪ್ರಾಥಮಿಕ ಆರೋಗ್ಯ ಸೇವೆ ಮತ್ತು ಕ್ಲಿನಿಕಲ್ ಪ್ರಯೋಗಾಲಯಗಳೊಂದಿಗೆ ಇರುವ ಆರೋಗ್ಯ ಸೇವಾ ಸೌಲಭ್ಯಗಳು.
ವಿಶ್ವ ಆರೋಗ್ಯ ಸಂಸ್ಥೆ ಈ ಪಟ್ಟಿಯನ್ನು ಇಎಂಎಲ್ ಪರಿಷ್ಕರಣೆ ಮಾದರಿಯಲ್ಲಿ ನಿಯಮಿತವಾಗಿ ಪರಿಷ್ಕರಿಸುತ್ತದೆ. ಮುಂದಿನ ಕೆಲ ವರ್ಷಗಳಲ್ಲಿ ಈ ಪಟ್ಟಿಯ ವಿಸ್ತೃತ ವಿಸ್ತರಣೆಗೆ ಯೋಚಿಸಿದೆ. ಇದರಲ್ಲಿ ಆ್ಯಂಟಿಮೈಕ್ರೊಬಿಯಲ್ ಪ್ರತಿರೋಧ, ಹೊಸದಾಗಿ ಪತ್ತೆಯಾಗುವ ಸೋಂಕುಗಳು, ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳು, ಸಾಂಕ್ರಾಮಿಕವಲ್ಲದ ಹೆಚ್ಚುವರಿ ರೋಗಗಳು ಸೇರುತ್ತವೆ.

ಫಲಿತಾಂಶಕ್ಕಾಗಿ ಅನುಷ್ಠಾನ
ಅಗತ್ಯ ರೋಗನಿರ್ಣಯ ಪಟ್ಟಿಯಿಂದ 10 ಸಂಭಾವ್ಯ ಲಾಭಗಳಿವೆ. ರೋಗಿಗಳ ಆರೈಕೆಯಲ್ಲಿ ಸುಧಾರಣೆ, ರೋಗ ಹರಡುವಿಕೆ ಪತ್ತೆಗೆ ನೆರವಾಗುವುದು, ವೈದ್ಯಕೀಯ ಪರೀಕ್ಷೆಗಳು ಕೈಗೆಟಕುವಂತೆ ಮಾಡುವುದು, ಇಂಥ ತಪಾಸಣೆಗಳಿಗೆ ರೋಗಿಗಳು ಕೈಯಿಂದಲೇ ಮಾಡುವ ಖರ್ಚನ್ನು ಕಡಿಮೆ ಮಾಡುವುದು, ಆ್ಯಂಟಿಬಯಾಟಿಕ್ ದುರ್ಬಳಕೆ ಕಡಿಮೆ ಮಾಡುವುದು, ನಿಯಂತ್ರಣ ವ್ಯವಸ್ಥೆ ಸುಧಾರಣೆ ಮತ್ತು ರೋಗನಿರ್ಣಯ ತಪಾಸಣೆಗಳ ಗುಣಮಟ್ಟ ಸುಧಾರಣೆ, ಮಾನ್ಯತೆ ಮತ್ತು ಪ್ರಯೋಗಾಲಯ ಗುಣಮಟ್ಟ ವ್ಯವಸ್ಥೆಯನ್ನು ಬಲಗೊಳಿಸುವುದು, ಪೂರೈಕೆ ಸರಣಿಯಲ್ಲಿ ಸುಧಾರಣೆ ಮತ್ತು ಹೊಸ ರೋಗನಿರ್ಣಯ ಸಾಧನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ನೆರವಾಗುವುದು ಮುಖ್ಯ ಪ್ರಯೋಜನಗಳು.
ವಿಶ್ವ ಆರೋಗ್ಯ ಸಂಸ್ಥೆಯ ಅಗತ್ಯ ರೋಗನಿರ್ಣಯ ಪಟ್ಟಿ ಸ್ವಾಗತಾರ್ಹ ಬೆಳವಣಿಗೆಯಾಗಿದ್ದರೂ, ಈ ಪಟ್ಟಿಯೇ ನಿರೀಕ್ಷಿತ ಫಲಿತಾಂಶ ನೀಡಲಾರದು. ಇದರ ಅರ್ಥಪೂರ್ಣ ಫಲಿತಾಂಶ ಪಡೆಯಬೇಕಾದರೆ, ದೇಶಗಳು ವಿಶ್ವ ಆರೋಗ್ಯ ಸಂಸ್ಥೆಯ ಪಟ್ಟಿಯ ಆಧಾರದಲ್ಲಿ ತಮ್ಮ ದೇಶಕ್ಕೆ ತಮ್ಮದೇ ಪಟ್ಟಿಯನ್ನು ರೂಪಿಸುವುದು ಕೂಡಾ ಅಗತ್ಯ.

ಇಂಥ ಪಟ್ಟಿಗಳು ಕ್ರಮಬದ್ಧವಾಗಿ ತಯಾರಾದಾಗ, ಇದರ ಲಭ್ಯತೆ, ಪರೀಕ್ಷೆಯ ಗುಣಮಟ್ಟ ಮತ್ತು ಕೈಗೆಟಕುವಿಕೆಯನ್ನು ಸುಧಾರಿಸುವ ವ್ಯವಸ್ಥೆ ಜಾರಿಗೆ ತರಬಹುದು. ಉದಾಹರಣೆಗೆ ಭಾರತದಲ್ಲಿ, ರಾಷ್ಟ್ರೀಯ ಅಗತ್ಯ ರೋಗನಿರ್ಣಯ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗಿದೆ. ಇತರ ದೇಶಗಳು ಕೂಡಾ ಇದನ್ನು ಅನುಸರಿಸುವ ನಿರೀಕ್ಷೆ ಇದ್ದು, ತಮ್ಮ ದೇಶಗಳ ವ್ಯವಸ್ಥೆಗೆ ತಕ್ಕಂತೆ ಇಡಿಎಲ್ ರಚಿಸಿಕೊಳ್ಳಬಹುದಾಗಿದೆ.

ಪ್ರಯೋಗಾಲಯ ಹೂಡಿಕೆಗೆ ಸಕಾಲ
ರಾಷ್ಟ್ರಮಟ್ಟದ ಇಡಿಎಲ್ ಅಭಿವೃದ್ಧಿಯ ಜತೆಗೆ, ದೇಶಗಳು ಪ್ರಯೋಗಾಲಯ ಜಾಲವನ್ನು ಬಲಗೊಳಿಸುವ ನಿಟ್ಟಿನಲ್ಲೂ ಹೂಡಿಕೆ ಮಾಡುವುದು ಅನಿವಾರ್ಯ. ಹಲವು ಕಡಿಮೆ ಆದಾಯದ ದೇಶಗಳಲ್ಲಿ ಪ್ರಯೋಗಾಲಯ ಸಾಮರ್ಥ್ಯ ದುರ್ಬಲವಾಗಿದ್ದು, ಇದಕ್ಕೆ ಮುಖ್ಯವಾಗಿ ಅಸಮರ್ಪಕ ಮಾನವ ಸಂಪನ್ಮೂಲ, ಅಸಮರ್ಪಕ ಶಿಕ್ಷಣ ಮತ್ತು ತರಬೇತಿ, ಅಸಮರ್ಪಕ ಮೂಲಸೌಕರ್ಯ ಮತ್ತು ಅಸಮರ್ಪಕ ಗುಣಮಟ್ಟ, ಮಾನದಂಡ ಮತ್ತು ಮಾನ್ಯತಾ ವ್ಯವಸ್ಥೆ ಹೀಗೆ ನಾಲ್ಕು ಕಾರಣಗಳಿವೆ.
ದೇಶಗಳು ಪ್ರಯೋಗಾಲಯದ ಮೇಲೆ ಏಕೆ ಕಡಿಮೆ ಹೂಡಿಕೆ ಮಾಡಿವೆ? ಸುದೀರ್ಘ ಕಾಲದಿಂದಲೂ, ಜಾಗತಿಕ ಆರೋಗ್ಯ ಸಮುದಾಯ ಅದರಲ್ಲೂ ಮುಖ್ಯವಾಗಿ ಕಡಿಮೆ ಆದಾಯ ದೇಶಗಳು ವ್ಯವಸ್ಥಿತವಾಗಿ ಪ್ರಾಯೋಗಿಕ ಅಥವಾ ರೋಗಲಕ್ಷಣ ಚಿಕಿತ್ಸಾ ವಿಧಾನವನ್ನೇ ಅನುಸರಿಸುತ್ತಾ ಬಂದಿವೆ. ಇಂಥ ಕಡೆಗಳಲ್ಲಿ ನ್ಯಾಯೋಚಿತ ಪ್ರಯೋಗಾಲಯ ಮೂಲಸೌಕರ್ಯವನ್ನು ನಿರ್ಮಿಸುವುದು ತೀರಾ ಕಷ್ಟ ಹಾಗೂ ವೆಚ್ಚದಾಯಕ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಇದು 40 ವರ್ಷಗಳಿಗೂ ಅಧಿಕ ಕಾಲ ಅಗತ್ಯ ಔಷಧಿಗಳಿಗೆ ಒತ್ತು ನೀಡುತ್ತಾ ಬಂದದ್ದನ್ನು ಹಾಗೂ ಇದುವರೆಗೂ ಇದ್ದ ಅಗತ್ಯ ರೋಗನಿರ್ಣಯ ಪಟ್ಟಿಯ ಕೊರತೆಯನ್ನು ವಿವರಿಸುತ್ತದೆ.
ಆ ಬಳಿಕ 1990ರ ದಶಕದಲ್ಲಿ ಪ್ರಯೋಗಾಲಯ ಮೂಲಸೌಕರ್ಯಗಳ ಕೊರತೆ ಇದ್ದರೂ, ಪ್ರಮುಖವಾಗಿ ಮಲೇರಿಯಾ ಮತ್ತು ಎಚ್‌ಐವಿ ಕಾರಣದಿಂದ ಸರಳ ಕ್ಷಿಪ್ರ ಪರೀಕ್ಷೆಗಳನ್ನು ಜಾರಿಗೊಳಿಸುವ ಮತ್ತು ಇವುಗಳ ಸುತ್ತ ಮಾರುಕಟ್ಟೆ ಸೃಷ್ಟಿಸುವ ಕಾರ್ಯಕ್ಕೆ ಒತ್ತು ನೀಡಲಾಯಿತು. ಆದಾಗ್ಯೂ ಕ್ಷಿಪ್ರ ಹಾಗೂ ಸೇವಾ ಕೇಂದ್ರದಲ್ಲೇ ಒದಗಿಸುವ ಈ ಪರೀಕ್ಷಾ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಿದ್ದು, ಪ್ರಯೋಗಾಲಯ ವ್ಯವಸ್ಥೆ ಬಲಗೊಳಿಸುವ ಪ್ರಯತ್ನಗಳನ್ನು ಮತ್ತಷ್ಟು ಹಿಂದಕ್ಕೆ ತಳ್ಳಿತು.
ಪ್ರಯೋಗಾಲಯಗಳ ಸುಧಾರಣೆ ಮತ್ತು ಆರೋಗ್ಯ ವ್ಯವಸ್ಥೆ ಬಲಗೊಳಿಸುವುದನ್ನು ಇಂದಿಗೂ ತೀರಾ ವೆಚ್ಚದಾಯಕ ಮತ್ತು ಕಠಿಣ ಎಂದೇ ಬಹುತೇಕ ಸರಕಾರ ಮತ್ತು ದಾನಿಗಳು ಪರಿಗಣಿಸುತ್ತಾರೆ. ಉತ್ತಮ ಕ್ಷಿಪ್ರ ಪರೀಕ್ಷೆಗಳು ಇಲ್ಲದ ರೋಗಗಳನ್ನು ನಿರ್ವಹಿಸಲು ನಾವು ಏಕೆ ಹೆಣಗಾಡುತ್ತಿದ್ದೇವೆ ಎನ್ನುವುದನ್ನು ಇದು ವಿವರಿಸುತ್ತದೆ. ದುರ್ಬಲ ಪ್ರಯೋಗಾಲಯ ಮೂಲಸೌಕರ್ಯವನ್ನು ಹೊಂದಿದ ಆರೋಗ್ಯ ವ್ಯವಸ್ಥೆ, ರೋಗ ಹರಡುವಿಕೆಯನ್ನು ತ್ವರಿತವಾಗಿ ಏಕೆ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಅಥವಾ ಆ್ಯಂಟಿ ಮೈಕ್ರೋಬಿಯಲ್ ಪ್ರತಿರೋಧ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳನ್ನು ಒಳಗೊಂಡಂತೆ ಸಮಗ್ರವಾದ ರೋಗನಿರ್ಣಯ ಸೇವೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ವಿವರಿಸುತ್ತವೆ.
ಕ್ಷಿಪ್ರ ಪರೀಕ್ಷೆ ಮತ್ತು ರೋಗಲಕ್ಷಣದ ಮೇಲೆ ಚಿಕಿತ್ಸೆ ನೀಡುವ ಪದ್ಧತಿ ಬಡದೇಶಗಳಿಗೆ ಸಾಕು ಎಂಬ ಮನೋಭಾವವನ್ನು ತಿರಸ್ಕರಿಸಲು ಹಾಗೂ ಎಲ್ಲ ದೇಶಗಳಿಗೆ ಕಾರ್ಯಸಾಧು ಎನಿಸುವ, ವಿವಿಧ ಸ್ತರಗಳ, ಗುಣಮಟ್ಟ ಖಾತ್ರಿಯ ಪ್ರಯೋಗಾಲಯ ಮೂಲಸೌಕರ್ಯ ವ್ಯವಸ್ಥೆಯನ್ನು ಎಲ್ಲ ದೇಶಗಳಿಗೂ ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಇದು ಸಕಾಲ.
ಸಾಂವಿಧಾನಾತ್ಮಕ ಸಾರ್ವತ್ರಿಕ ಆರೋಗ್ಯ ಸುರಕ್ಷೆಗೆ ಮುಖ್ಯವಾಗಿ ಅಗತ್ಯ ರೋಗನಿರ್ಣಯದ ಅನಿವಾರ್ಯತೆ ಇದೆ ಹಾಗೂ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸೂಕ್ತ ಹೂಡಿಕೆ ಮಾಡದೇ ಇಂಥ ಸೇವೆ ನೀಡಲು ಸಾಧ್ಯವಿಲ್ಲ.

ಕೃಪೆ: thewire

Writer - ಮಧುಕರ್ ಪೈ

contributor

Editor - ಮಧುಕರ್ ಪೈ

contributor

Similar News

ಜಗದಗಲ
ಜಗ ದಗಲ