ಕ್ರಿಕೆಟಿಗ ವಿರಾಟ್ ಕೊಹ್ಲಿಯ ಕುರಿತು ನಿಮಗೆ ಗೊತ್ತಿಲ್ಲದ ಎಂಟು ಸಂಗತಿಗಳು

Update: 2018-05-22 12:04 GMT

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬೆಳೆದು ಬಂದಿರುವ ಬಗೆ ಎಲ್ಲರಿಗೂ ಗೊತ್ತಿದೆ. ಆದರೆ ಈ ಪ್ರತಿಭಾವಂತ ಆಟಗಾರನ ಅದೆಷ್ಟೋ ಮುಖಗಳು ಎಲ್ಲರಿಗೂ ಗೊತ್ತಿಲ್ಲ. ಅಂತಹ ಕೆಲವು ಮಾಹಿತಿಗಳು ಇಲ್ಲಿವೆ....

► ಜಪಾನಿ ಖಾದ್ಯದ ಆರಾಧಕ

ಕೊಹ್ಲಿ ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವ ಅವರು ಸದಾ ಸಮತೋಲಿತ ಆಹಾರವನ್ನು ಸೇವಿಸುತ್ತಾರೆ. ಪಂಜಾಬಿ ಕುಟುಂಬದ ಅವರು ಚಿಕನ್ ಬಟರ್ ಮಸಾಲಾ ಅಥವಾ ಬಟರ್ ರೋಟಿಯಂತಹ ಎಣ್ಣೆಯ ಖಾದ್ಯಗಳನ್ನೇ ಹೆಚ್ಚಾಗಿ ತಿಂದು ಬೆಳೆದವರು. ಆದರೆ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬಳಿಕ ಅವರು ಶರೀರ ಕ್ಷಮತೆಯನ್ನು ಕಾಯ್ದಕೊಳ್ಳಲು ಇಂತಹ ಆಹಾರಗಳಿಗೆ ತಿಲಾಂಜಲಿ ನೀಡಿದ್ದರು. ಜಪಾನಿ ಖಾದ್ಯಗಳು, ವಿಶೇಷವಾಗಿ ಸುಷಿಯ ಬಗ್ಗೆ ಅವರು ಹೆಚ್ಚಿನ ಒಲವು ಹೊಂದಿದ್ದಾರೆ. ತನಗೆ ಪರ್ಯಾಯ ಆಯ್ಕೆಯಿದ್ದರೆ ದಿನಕ್ಕೆ ಮೂರು ಸಲ ಅದನ್ನೇ ತಿಂದುಕೊಂಡಿರುತ್ತಿದ್ದೆ ಎಂದು ಸಂದರ್ಶನ ವೊಂದರಲ್ಲಿ ಹೇಳಿಕೊಂಡಿದ್ದರು.

► ನಾಯಿಗಳೆಂದರೆ ತುಂಬ ಅಚ್ಚುಮೆಚ್ಚು

ನಾಯಿಗಳನ್ನು ಬಹುವಾಗಿ ಪ್ರೀತಿಸುವ ಕೊಹ್ಲಿ ಅದನ್ನು ವಿಶ್ವಕ್ಕೆ ತೋರಿಸುವ ಒಂದೂ ಅವಕಾಶವನ್ನು ಬಿಡುವುದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ತನ್ನ ಪ್ರೀತಿಯ ನಾಯಿಗಳಾದ ಬೀಗಲ್ ಮತ್ತು ಬ್ರುನೊ ಜೊತೆ ಅವರು ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದಿಷ್ಟೇ ಅಲ್ಲ,ಕ್ರಿಕೆಟ್ ಅಂಗಳಗಳ ನೇಪಥ್ಯದಲ್ಲಿ ಕಾವಲು ನಾಯಿಗಳನ್ನೂ ಮುದ್ದಿಸುತ್ತಿರುತ್ತಾರೆ. ಅವರು ಕಳೆದ ವರ್ಷ ಬೆಂಗಳೂರಿನ ಚಾರ್ಲಿಸ್ ಆ್ಯನಿಮಲ್ ರಿಸ್ಕೂ ಸೆಂಟರ್‌ನಲ್ಲಿಯ 15 ನಾಯಿಗಳನ್ನು ದತ್ತು ಕೂಡ ಪಡೆದಿದ್ದಾರೆ.

► ಶಾಲೆಯಲ್ಲಿ ಇತಿಹಾಸ ನೆಚ್ಚಿನ ವಿಷಯವಾಗಿತ್ತು

ಕ್ರಿಕೆಟ್‌ಗೆ ತನ್ನನ್ನು ಅರ್ಪಿಸಿಕೊಂಡ ನಂತರ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಲು ಕೊಹ್ಲಿಗೆ ಸಾಧ್ಯವಾಗಲಿಲ್ಲ ಎನ್ನುವುದು ಹೆಚ್ಚಿನವರಿಗೆ ಗೊತ್ತು. ತನ್ನ ಎಳೆವಯಸ್ಸಿನಲ್ಲಿಯೇ ಕ್ರಿಕೆಟ್‌ನ್ನು ಅಪ್ಪಿಕೊಂಡಿದ್ದ ಅವರಿಗೆ ಕಾಲೇಜಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ದಿಲ್ಲಿಯ ಪಶ್ಚಿಮ ವಿಹಾರ್‌ನ ಸೇವಿಯರ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಯಾಗಿದ್ದ ಅವರು ಪ್ರತಿಭಾವಂತರಾಗಿದ್ದರು. ಗಣಿತಕ್ಕೆ ತುಂಬ ಹೆದರಿಕೊಳ್ಳುತ್ತಿದ್ದ ಅವರು ಒಂದು ಬಾರಿ ಪರೀಕ್ಷೆಯಲ್ಲಿ ಆ ವಿಷಯದಲ್ಲಿ ಗಳಿಸಿದ ಅಂಕ ಎರಡಂಕಿಯನ್ನೂ ತಲುಪಿರಲಿಲ್ಲ. ಶಾಲೆಯಲ್ಲಿ ಇತಿಹಾಸ ಅವರ ನೆಚ್ಚಿನ ವಿಷಯವಾಗಿತ್ತು.

► ಅಂಡರ್-19ರ ದಿನಗಳಲ್ಲಿ ತೆಂಡುಲ್ಕರ್ ಅವರ ನೆಚ್ಚಿನ ಆಟಗಾರರಾಗಿರಲಿಲ್ಲ

ಕೊಹ್ಲಿಯವರನ್ನು ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್‌ಗೆ ಹೋಲಿಸಲಾಗುತ್ತಿದೆ. ಅವರು ತೆಂಡುಲ್ಕರ್‌ರ ಶತಕಗಳ ದಾಖಲೆಯನ್ನು ಮುರಿಯುವರೇ? ಲಾರ್ಡ್ಸ್‌ನಲ್ಲಿ ತೆಂಡುಲ್ಕರ್‌ಗೆ ಸಾಧ್ಯವಾಗದ ಶತಕ ಅವರಿಗೆ ಒಲಿಯುವುದೇ ಎಂಬೆಲ್ಲ ಪ್ರಶ್ನೆಗಳು ಕೇಳಿ ಬರುತ್ತಲೇ ಇರುತ್ತವೆ.

ತೆಂಡುಲ್ಕರ್ ಅವರು ತನ್ನ ಸ್ಫೂರ್ತಿಯ ಮೂಲವಾಗಿದ್ದಾರೆ ಮತ್ತು ಅವರಿಂದ ಪ್ರೇರಣೆ ಪಡೆದೇ ತಾನು ಬದುಕಿನಲ್ಲಿ ಕ್ರಿಕೆಟ್‌ಗೆ ಮೊದಲ ಆದ್ಯತೆಯನ್ನು ನೀಡಿದ್ದು ಎಂದು ಕೊಹ್ಲಿ ಸದಾ ಹೇಳಿಕೊಳ್ಳುತ್ತಾರಾದರೂ ಅವರು ಅಂಡರ್-19 ತಂಡದಲ್ಲಿ ಆಡುತ್ತಿದ್ದಾಗ ಅವರ ನೆಚ್ಚಿನ ಆಟಗಾರ ಮಾತ್ರ ತೆಂಡುಲ್ಕರ್ ಆಗಿರಲಿಲ್ಲ. ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ಅವರ ನೆಚ್ಚಿನ ಆಟಗಾರರಾಗಿದ್ದರು.

► ಕಾರುಗಳ ಬಗ್ಗೆ ಅತೀವ ಪ್ರೀತಿ

ಕೊಹ್ಲಿ ವಿವಾದಾತೀತವಾಗಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ ಮತ್ತು ಅದು ಇಂಡಿಯಾ ಟುಡೇ ಪವರ್ ಲಿಸ್ಟ್ ಆಗಿರಲಿ ಅಥವಾ ಟೈಮ್ ಮ್ಯಾಗಝಿನ್‌ನ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಾಗಿರಲಿ...ದೇಶದ ಮತ್ತು ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಗುಂಪಿನಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಐಷಾರಾಮಿ ಕಾರುಗಳ ಬಗ್ಗೆ ವಿಶೇಷ ಒಲವು ಹೊಂದಿರುವ ಅವರು ವಿಶ್ವದ ಕೆಲವು ಅತ್ಯಂತ ಖ್ಯಾತ ಕಾರುಗಳ ಮಾಲಿಕರಾಗಿದ್ದಾರೆ. ಅವರು ಜರ್ಮನ್ ಕಾರು ತಯಾರಕ ಆಡಿಯ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಅವರು ಲ್ಯಾಂಡ್ ರೋವರ್ ರೇಂಜ್ ವೋಗ್ ಮತ್ತು ಐದು ಆಡಿ ಕಾರುಗಳೂ ಸೇರಿದಂತೆ ಹಲವಾರು ಕಾರುಗಳನ್ನು ಹೊಂದಿದ್ದಾರೆ.

► ಮಕ್ಕಳೊಂದಿಗೆ ಒಡನಾಟ ಅಚ್ಚುಮೆಚ್ಚು

ಕೊಹ್ಲಿ ಮಕ್ಕಳನ್ನು ಬಹುವಾಗಿ ಇಷ್ಟ ಪಡುತ್ತಾರೆ. ತಮ್ಮ ಬಾಲ್ಯದ ಬದುಕಿನ ಹಲವಾರು ಹಕ್ಕುಗಳಿಂದ ವಂಚಿತರಾಗಿರುವ ಮಕ್ಕಳಿಗೆ ನೆರವಾಗಲು ತನ್ನದೇ ಆದ ದತ್ತಿ ಪ್ರತಿಷ್ಠಾನವನ್ನೂ ಅವರು ನಡೆಸುತ್ತಿದ್ದಾರೆ. ಸೌಲಭ್ಯ ವಂಚಿತ ಮಕ್ಕಳ ಬದುಕಿನಲ್ಲಿ ಬದಲಾವಣೆಗಳನ್ನು ತರಲು ಅವರ ವಿರಾಟ್ ಕೊಹ್ಲಿ ಫೌಂಡೇಷನ್ ಸ್ಮೈಲ್ ಫೌಂಡೇಷನ್‌ನಂತಹ ದೇಶದ ಕೆಲವು ಅತಿದೊಡ್ಡ ಎನ್‌ಜಿಒಗಳೊಂದಿಗೆ ಕೈಜೋಡಿಸಿದೆ. ಕಳೆದ ವರ್ಷ ಐಪಿಎಲ್ ಸಂದರ್ಭದಲ್ಲಿ ಶೇನ್ ವಾಟ್ಸನ್ ಮತ್ತು ಎಬಿ ಡಿ ವಿಲಿಯರ್ಸ್ ಜೊತೆಗೆ ಆಶ್ರಮವೊಂದರಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ಕೆಲವು ಸಮಯ ಕಳೆದಿದ್ದರು.

► ನಿಕ್‌ನೇಮ್ ‘ಚೀಕು’ ಹಿಂದಿನ ಕಥೆ

ಎಂ.ಎಸ್.ಧೋನಿ ಅವರು ಕೆಲವೊಮ್ಮೆ ವಿಕೆಟ್‌ಗಳ ಹಿಂದಿನಿಂದ ಕೊಹ್ಲಿಯವರನ್ನು ‘ಚೀಕು’ ಎಂದು ಕರೆಯುತ್ತಿರುತ್ತಾರೆ. ಈ ವಿಲಕ್ಷಣ ಅಡ್ಡಹೆಸರನ್ನು ಕೊಹ್ಲಿ ಭಾರತಕ್ಕಾಗಿ ಆಡುವ ಮುನ್ನವೇ ಹೊಂದಿದ್ದರು. ಅಂದೊಮ್ಮೆ ರಣಜಿ ಟ್ರಾಫಿಗಾಗಿ ದಿಲ್ಲಿ ತಂಡದಲ್ಲಿ ಆಡುತ್ತಿದ್ದಾಗ ಅವರ ತಲೆಗೂದಲುಗಳು ಏಕಾಏಕಿ ಉದುರತೊಡಗಿದ್ದವು. ಆತಂಕಗೊಂಡ ಅವರು ಸಮೀಪದ ಸಲೂನಿಗೆ ಧಾವಿಸಿ ತಲೆಗೂದಲನ್ನು ಸಣ್ಣದಾಗಿ ಕ್ರಾಪ್ ಮಾಡಿಸಿಕೊಂಡು ಬಂದಿದ್ದರು. ದೊಡ್ಡ ಕಿವಿಗಳು ಮತ್ತು ಹೆಚುಕಡಿಮೆ ಸಂಪೂರ್ಣ ಶೇವ್ ಆದಂತಿದ್ದ ತಲೆಯೊಂದಿಗೆ ಕೊಹ್ಲಿಯ ರೂಪ ಟೀಮ್‌ಮೇಟ್‌ಗಳಿಗೆ ವಿಲಕ್ಷಣವಾಗಿ ಕಂಡುಬಂದಿತ್ತು. ದಿಲ್ಲಿ ತಂಡದ ಆಗಿನ ಸಹಾಯಕ ಕೋಚ್ ಅಜಿತ ಚೌಧರಿಯವರು ಕೊಹ್ಲಿ ಮುಖವು ಈಗ ಮಕ್ಕಳ ಕಾಮಿಕ್ಸ್ ಪುಸ್ತಕ ‘ಚಂಪಕ್’ನಲ್ಲಿಯ ಮೊಲದ ಕಾರ್ಟೂನ್ ಪಾತ್ರ ’ಚೀಕು’ವನ್ನು ಹೋಲುತ್ತಿದೆ ಎಂದು ತಮಾಷೆ ಮಾಡಿದ್ದರು. ಅಂದಿನಿಂದ ಈ ಹೆಸರು ಕೊಹ್ಲಿಗೆ ಅಂಟಿಕೊಂಡಿದೆ. ಇಂದಿಗೂ ಧೋನಿ ಮತ್ತು ಯುವರಾಜ ಸಿಂಗ್‌ರಂತಹ ಆಪ್ತಮಿತ್ರರು ಅವರನ್ನು ಪ್ರೀತಿಯಿಂದ ಚೀಕು ಎಂದೇ ಕರೆಯುತ್ತಾರೆ.

► ಪ್ರಬಲ ಸ್ತ್ರೀ ಸ್ವಾತಂತ್ರವಾದಿ

ಲಿಂಗ ಸಮಾನತೆಗಾಗಿ ಧ್ವನಿಯೆತ್ತುತ್ತಿರುವ ಕೆಲವೇ ಸೆಲೆಬ್ರಿಟಿಗಳಲ್ಲಿ ಕೊಹ್ಲಿ ಕೂಡ ಒಬ್ಬರು. ದೇಶವು ಎಷ್ಟೇ ಮುಂದುವರಿದಿದ್ದರೂ ಭಾರತೀಯ ಸಮಾಜದಲ್ಲಿ ಇಂದಿಗೂ ಮಹಿಳೆ ಕಡೆಗಣಿಸಲ್ಪಟ್ಟಿದ್ದಾಳೆ. ನಾವು ಬದುಕಿರುವ ಈ ದುರಭಿಮಾಮಿ ಜಗತ್ತನ್ನು ಎದುರಿಸಲು ಸ್ತ್ರೀ ಸ್ವಾತಂತ್ರವಾದಿಗಳಾಗುವಂತೆ ಸಂದರ್ಶನವೊಂದರಲ್ಲಿ ಪ್ರತಿಯೊಬ್ಬ ರನ್ನೂ ಆಗ್ರಹಿಸಿದ್ದ ಕೊಹ್ಲಿ ತಾನೋರ್ವ ಪ್ರಬಲ ಸ್ತ್ರೀ ಸ್ವಾತಂತ್ರವಾದಿ ಎನ್ನುವುದನ್ನು ಒಪ್ಪಿಕೊಂಡಿದ್ದರು.

 ಮಹಿಳೆಯರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಅವರು,ಕಳೆದ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನದಂದು ಒಣ ಶುಭಾಶಯಗಳನ್ನು ಕೋರುವ ಬದಲು ಪುರುಷರಿಂದ ಕಿರುಕುಳಗಳು ಆಗುತ್ತಿರುವ ಬಗ್ಗೆ ಇಡೀ ಮಹಿಳಾ ಸಮುದಾಯ ಕ್ಷಮೆಯನ್ನು ಯಾಚಿಸಿದ್ದರು. ತನ್ನ ತಾಯಿ ಸರೋಜ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ತನ್ನ ಬದುಕಿನ ಎರಡು ಆಧಾರ ಸ್ತಂಭಗಳಾಗಿದ್ದಾರೆ ಎಂದು ಕೊಹ್ಲಿ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News