ಇನ್ನೂರು ವರ್ಷ ಹಳೆಯ ಮಸೀದಿಯಿಂದ ‘ಹಸಿರು ಇಫ್ತಾರ್’

Update: 2018-05-22 18:41 GMT

ಎರಡು ಶತಮಾನಗಳ ಹಿಂದೆ ತಿರುವನಂತಪುರಂನ ಸೈನಿಕರಿಗಾಗಿ ನಿರ್ಮಿಸಲ್ಪಟ್ಟಿದ್ದ ಮಸೀದಿಯ ನಿರ್ಮಾಣದ ಕಾಲದಲ್ಲಿ ಅದಕ್ಕೆ ಗುಂಬಝ ಅಥವಾ ಮಿನಾರಗಳು ಇರಲಿಲ್ಲ. ಹಿಂದೂ ಶ್ರದ್ಧಾಕೇಂದ್ರದ ಜೊತೆ ಅಂಚನ್ನು ಹಂಚಿಕೊಂಡಿದ್ದ ಈ ಮಸೀದಿಯನ್ನು ರಾಜರ ಸೇನೆಯಲ್ಲಿದ್ದ ಮುಸ್ಲಿಂ ಸೈನಿಕರು ತಮ್ಮ ವಾಸಸ್ಥಾನದ ಸಮೀಪವೇ ಪ್ರಾರ್ಥನೆ ಸಲ್ಲಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ನಿರ್ಮಿಸಲಾಗಿತ್ತು.

ಅದನ್ನು ಈಗ ಇರುವಂತೆ ಅತ್ಯದ್ಭುತ ರೀತಿಯಲ್ಲಿ ರೂಪಾಂತರಗೊಳಿಸಿದ ನಂತರ ದಶಕಗಳಿಂದಲೂ ರಮಝಾನ್ ತಿಂಗಳಲ್ಲಿ ತನ್ನ ವಿಶಿಷ್ಟವಾದ ಇಫ್ತಾರ್ ಕೂಟ, ಜಾತ್ಯತೀತ ಕೂಡುವಿಕೆಯಿಂದಾಗಿ ಮುಸ್ಲಿಮೇತರನ್ನೂ ಕೈಬೀಸಿ ಕರೆಯುತ್ತಿದೆ.
ಪವಿತ್ರ ತಿಂಗಳಲ್ಲಿ ಶತಮಾನಗಳಷ್ಟು ಪ್ರಾಚೀನವಾಗಿರುವ ಈ ಮಸೀದಿಗೆ ಸಮೀಪದ ರಾಜ್ಯಗಳ ಪ್ರತಿನಿಧಿಗಳು, ಚಾಲಕರು, ವ್ಯಾಪಾರಿಗಳು, ಪ್ರವಾಸಿಗಳು ಹಾಗೂ ಇತರರು ಭೇಟಿ ನೀಡುತ್ತಾರೆ. ಹಸಿರು ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿರುವ ಈ ಮಸೀದಿಯಲ್ಲಿ ಪರಿಸರಸ್ನೇಹಿ ವಿಧಾನದಲ್ಲಿ ತಯಾರಿಸಿ, ಬಡಿಸಲಾಗುವ ವಿಶಿಷ್ಟ ಔಷಧೀಯ ಭೋಜನ, ಔಷಧ ಗಂಜಿ ಈ ಮಸೀದಿಯ ಇಫ್ತಾರ್ ಭೋಜನವನ್ನು ವಿಶಿಷ್ಟವಾಗಿಸುತ್ತದೆ.
ತಿರುವನಂತಪುರಂ ಸೇನೆಗಾಗಿ ನಿರ್ಮಿಸಲಾಗಿದ್ದ ಕಾರಣದಿಂದಾಗಿ ಪಾಲಯಂ ಜುಮಾ ಮಸೀದಿಯನ್ನು ಪಟ್ಟಲಪಳ್ಳಿ ಎಂದು ಕರೆಯಲಾಗುತ್ತಿತ್ತು.
ಮಸೀದಿಯ ಆಡಳಿತ ಮಂಡಳಿಯ ಪ್ರಕಾರ, ಮುಸ್ಲಿಮೇತರರೂ ಸೇರಿ 900-1200ಕ್ಕೂ ಅಧಿಕ ಮಂದಿ ಪೌಷ್ಟಿಕವಾದ ಔಷಧ ಗಂಜಿಯನ್ನು ಪವಿತ್ರ ತಿಂಗಳ ರಮಝಾನ್ ಪ್ರತಿದಿನ ಇಫ್ತಾರ್ ಸಂದರ್ಭದಲ್ಲಿ ಸವಿಯುತ್ತಾರೆ. ನಗರದ ಹೃದಯಭಾಗದಲ್ಲಿ ಸ್ಥಾಪಿಸಲಾಗಿರುವ ಈ ಮಸೀದಿಯಲ್ಲಿ ಮಹಿಳೆಯರು ನಮಾಝ್ ಮಾಡಲು ಮತ್ತು ಉಪವಾಸ ಮುರಿಯಲು ವಿಶೇಷ ಸೌಲಭ್ಯಗಳನ್ನು ಮಾಡಲಾಗಿದೆ.
ಪಾಲಯಂ ಇಮಾಮರಾಗಿರುವ ವೌಲ್ವಿ ವಿ.ಪಿ ಸುಹೈಬ್ ತಿಳಿಸುವಂತೆ ಈ ಮಸೀದಿಯನ್ನು 1813ರಲ್ಲಿ ನಿರ್ಮಿಸಲಾಯಿತು ಮತ್ತು ಕಳೆದೊಂದು ಶತಮಾನದಿಂದ ಇಲಿ್ಲ ಇಫ್ತಾರ್ ಆಯೋಜಿಸುವ ಪರಿಪಾಠವಿದೆ.

 ಈ ಮಸೀದಿಯನ್ನು ನಿರ್ಮಿಸಿದಾಗ ಅದು ಕೇವಲ ಒಂದು ಕಟ್ಟಡದಂತಿತ್ತು. ನಂತರ 1960ರಲ್ಲಿ ಅದರ ಜೀರ್ಣೋದ್ಧಾರ ಮಾಡಿದ ನಂತರ ಈಗಿನ ರೂಪಕ್ಕೆ ತರಲಾಗಿದೆ ಎಂದು ಅವರು ತಿಳಿಸುತ್ತಾರೆ. ಕಳೆದ ಹಲವು ದಶಕಗಳಿಂದ ಪಾಲಯಂ ಮಸೀದಿಯು ಮುಸ್ಲಿಂ ಸಮುದಾಯಕ್ಕೆ ಒಂದು ಯಾತ್ರಾ ಕೇಂದ್ರವಾಗಿದೆ ಮತ್ತು ಈ ಮಸೀದಿಯ ಒಂದು ಪಾರ್ಶ್ವದಲ್ಲಿ ಹಿಂದೂ ಮಂದಿರ, ರಸ್ತೆಯ ಮತ್ತೊಂದು ಭಾಗದಲ್ಲಿ ಕ್ರೈಸ್ತರ ಚರ್ಚ್ ಇರುವುದರಿಂದ ಇದು ಜಾತ್ಯತಿೀತತೆಗೆ ಉತ್ತಮ ಉದಾಹರಣೆಯಾಗಿದೆ.


ರಮಝಾನ್ ಸಮಯದಲ್ಲಿ ಸ್ವಾದಿಷ್ಟ ನೋಂಬುಗಂಜಿಯನ್ನು ಸವಿಯುವ ಅವಕಾಶವನ್ನು ಈ ಮಸೀದಿಯಲ್ಲಿ ಎಲ್ಲರಿಗೂ ನೀಡಲಾಗುತ್ತದೆ. ಪ್ರತಿದಿನ ಕಡಿಮೆಯೆಂದರೂ ಸುಮಾರು 1,200 ಮಂದಿ ಈ ಅನ್ನವನ್ನು ಸೇವಿಸು್ತಾರೆ ಎಂದು ಇಮಾಮ್ ತಿಳಿಸುತ್ತಾರೆ.
ಅಕ್ಕಿ ಮತ್ತು ತುಪ್ಪದ ಹೊರತಾಗಿ ಖರ್ಜೂರ, ಕರಿಮೆಣಸು, ಲವಂಗ, ಏಲಕ್ಕಿ, ಹಳದಿ, ಕೊತ್ತಂಬರಿ, ಶುಂಠಿ, ಅನನಾಸು, ಟೊಮ್ಯಾಟೊ ಹೀಗೆ 20ಕ್ಕೂ ಅಧಿಕ ಪದಾರ್ಥಗಳನ್ನು ಸೇರಿಸಿ ಮಾಡಲಾಗುವ ನೋಂಬುಗಂಜಿ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಇದನ್ನು ನುರಿತ ಅಡುಗೆಯವರು ಮಸೀದಿಯ ಆವರಣದೊಳಗೆ ಕಟ್ಟಿಗೆಯ ಒಲೆಯಲ್ಲಿ ಪರಿಸರಸ್ನೇಹಿ ರೀತಿಯಲ್ಲಿ ತಯಾರಿಸುತ್ತಾರೆ. ನಂತರ ಇದನ್ನು ಇಫ್ತಾರ್ ವೇಳೆ ಸಮುದಾಯ ಭವನದಲ್ಲಿ ಸ್ಟೀಲ್ ಪಾತ್ರೆಗಳಲ್ಲಿ ಸೇವಿಸಲು ನೀಡಲಾಗುತ್ತದೆ.
ಸೂರ್ಯಾಸ್ತದ ನಂತರ ಖರ್ಜೂರ ಹಾಗೂ ಹಣ್ಣುಗಳನ್ನು ತಿಂದು ಉಪವಾಸ ಬಿಡುವ ಭಕ್ತರಿಗೆ ನಂತರ ಹೆಸರು ಬೇಳೆಯೊಂದಿಗೆ ಔಷಧೀಯ ಗಂಜಿಯನ್ನು ಸೇವಿಸಲು ನೀಡಲಾಗುತ್ತದೆ.
ನಾವು ಸಂಪೂರ್ಣವಾಗಿ ಹಸಿರು ನೀತಿಯನ್ನು ಅನುಸರಿಸುತ್ತೇವೆ. ನಾವು ಗಂಜಿಯನ್ನು ತಯಾರಿಸುವ ಅಥವಾ ಬಡಿಸುವ ಸಮಯದಲ್ಲಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದಿಲ್ಲ. ಅದಕ್ಕಾಗಿ ನಾವು ಸ್ಟೀಲ್ ಪಾತ್ರೆಗಳನ್ನೇ ಬಳಸುತ್ತೇವೆ ಎಂದು ಇಮಾಮ್ ಹೇಳುತ್ತಾರೆ.
ಈ ಔಷಧೀಯ ಗಂಜಿಯನ್ನು ಮನೆಗೆ ಕೊಂಡೊಯ್ಯಲು ಪ್ಲಾಸ್ಟಿಕ್ ಚೀಲಗಳು ಅಥವಾ ಪಾತ್ರೆಗಳೊಂದಿಗೆ ಬರುವವರಿಗೂ ನಾವು ಗಂಜಿ ನೀುವುದಿಲ್ಲ ಎಂದವರು ಹೇಳುತ್ತಾರೆ.
ಇತಿಹಾಸಕಾರರ ಪ್ರಕಾರ, ತಿರುವನಂತಪುರವನ್ನು ಆಳಿದ ರಾಜರು ತಮ್ಮ ಸೈನಿಕರಿಗಾಗಿ ಈ ಮಸೀದಿಯನ್ನು ನಿರ್ಮಿಸಿದ್ದರು. ಹಿಂದೂ ಸೈನಿಕರಿಗಾಗಿ ಗಣಪತಿ ದೇವಾಲಯವನ್ನು ನಿರ್ಮಿಸಿದ ನಂತರ ಅದರ ಪಕ್ಕದಲ್ಲೇ ಮುಸ್ಲಿಂ ಸೈನಿಕರಿಗಾಗಿ ಈ ಮಸೀದಿಯನ್ನು ನಿರ್ಮಿಸಲಾಯಿತು. ಈ ಪ್ರದೇಶದಲ್ಲಿ ರಾಜರ ಸೇನೆ ನೆಲೆಸಿದ್ದ ಕಾರಣ ಅದಕ್ಕೆ ಪಾಲಯಂ ಎಂಬ ಹೆಸರು ಬಂತು. ಸ್ಥಳೀಯ ಭಾಷೆಯಲ್ಲಿ ಪಾಲಯಂ ಎಂದರೆ ಸೇನಾ ಶಿಬಿರ ಎಂದರ್ಥ.
ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪ್ರತಿಷ್ಠಿತ ಇಂಡಿಯನ್-ಇಂಗ್ಲಿಷ್ ಲೇಖಕಿ ಕಮಲಾದಾಸ್ ಅಲಿಯಾಸ್ ಸುರಯ್ಯಿ ಅವರ ಸಮಾಧಿ ಈ ಜುಮಾ ಮಸೀದಿಯ ಆವರಣದಲ್ಲಿದೆ.

Writer - ಲಕ್ಷ್ಮೀ ಗೋಪಾಲಕೃಷ್ಣನ್

contributor

Editor - ಲಕ್ಷ್ಮೀ ಗೋಪಾಲಕೃಷ್ಣನ್

contributor

Similar News

ಜಗದಗಲ
ಜಗ ದಗಲ