ಪಿಎನ್‌ಬಿ ಹಗರಣ : ಮೆಹುಲ್ ಚೋಕ್ಸಿ ವಿರುದ್ಧ ಜಾಮೀನುರಹಿತ ವಾರಂಟ್

Update: 2018-05-23 18:20 GMT

  ಮುಂಬೈ, ಮೇ 23: 12,636 ಕೋಟಿ ರೂ. ಮೊತ್ತದ ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ದ್ವಿತೀಯ ಆರೋಪಪಟ್ಟಿಯನ್ನು ಪರಿಗಣಿಸಿದ ವಿಶೇಷ ಸಿಬಿಐ ನ್ಯಾಯಾಲಯವು ಪ್ರಧಾನ ಆರೋಪಿಯಾಗಿರುವ ವಜ್ರಾಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರಾಂಟ್ ಜಾರಿಗೊಳಿಸಿದೆ.

ದ್ವಿತೀಯ ಆರೋಪಪಟ್ಟಿಯಲ್ಲಿ ಗೀತಾಂಜಲಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಮೆಹುಲ್ ಚೋಕ್ಸಿ, ಪಿಎನ್‌ಬಿ ಮಾಜಿ ಆಡಳಿತ ನಿರ್ದೇಶಕಿ ಹಾಗೂ ಸಿಇಒ ಉಷಾ ಅನಂತಸುಬ್ರಮಣಿಯನ್ ಹಾಗೂ ಪಿಎನ್‌ಬಿಯ ಹಾಲಿ ಕಾರ್ಯಕಾರಿ ನಿರ್ದೇಶಕರಾದ ಬ್ರಹ್ಮಾಜಿ ರಾವ್ ಮತ್ತು ಸಂಜೀವ್ ಶರಣ್, ಪಿಎನ್‌ಬಿ ಉಪ ವ್ಯವಸ್ಥಾಪಕ ಗೋಕುಲ್‌ನಾಥ್ ಶೆಟ್ಟಿ ಹಾಗೂ ಇತರರು ಸೇರಿದಂತೆ ಒಟ್ಟು 16 ಮಂದಿಯ ಹೆಸರಿದೆ. ಜಾಮೀನುರಹಿತ ವಾರಂಟ್ ಜಾರಿಗೊಳಿಸಿರುವುದರಿಂದ ಚೋಕ್ಸಿ, ನೀರವ್ ಮೋದಿ, ನಿಶಾಲ್ ಹಾಗೂ ನೀರವ್ ಮೋದಿ ಸಮೂಹ ಸಂಸ್ಥೆಯ ಅಧಿಕಾರಿ ಸುಭಾಷ್ ಪರಬ್ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಲು ಅವಕಾಶ ದೊರೆತಿದೆ ಎಂದು ಸಿಬಿಐ ಅಧಿಕಾರಿ ತಿಳಿಸಿದ್ದಾರೆ.

ನೀರವ್ ಮೋದಿ, ಆತನ ಸಹೋದರ ನಿಶಾಲ್ ಹಾಗೂ ಪರಬ್ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಗೊಳಿಸುವಂತೆ ಸೋಮವಾರ ನ್ಯಾಯಾಲಯ ಆದೇಶ ಹೊರಡಿಸಿತ್ತು. 2015ರಿಂದ 2018ರ ವರೆಗಿನ ಅವಧಿಯಲ್ಲಿ ‘ಗೀತಾಂಜಲಿ ಜೆಮ್ಸ್’ನ ಚೋಕ್ಸಿ ಹಾಗೂ ಇತರ ಅಧಿಕಾರಿಗಳು ಪಿಎನ್‌ಬಿ ಬ್ರಾಡಿ ಹೌಸ್ ಶಾಖೆಯ ಉಪವ್ಯವಸ್ಥಾಪಕರಾಗಿದ್ದ ಗೋಕುಲ್‌ನಾಥ್ ಶೆಟ್ಟಿ ಹಾಗೂ ಬ್ಯಾಂಕಿನ ಇತರ ಅಧಿಕಾರಿಗಳ ಜೊತೆ ಸೇರಿಕೊಂಡು ಕ್ರಿಮಿನಲ್ ಒಳಸಂಚು ನಡೆಸಿ ಅಕ್ರಮವಾಗಿ ಗೀತಾಂಜಲಿ ಸಮೂಹ ಸಂಸ್ಥೆಗೆ ‘ಲೆಟರ್ ಆಫ್ ಅಂಡರ್‌ಟೇಕಿಂಗ್’ ಹಾಗೂ ‘ಫಾರಿನ್ ಲೆಟರ್ ಆಫ್ ಕ್ರೆಡಿಟ್’ ದಾಖಲೆಪತ್ರವನ್ನು ಒದಗಿಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News