ಉತ್ತರ ಪ್ರದೇಶ: ನ್ಯಾಯಾಂಗ ಮೀರಿದ ಹತ್ಯೆಗಳ ತನಿಖೆಯ ಅಗತ್ಯ

Update: 2018-05-23 18:24 GMT

ಭಾಗ-2

‘‘ಉತ್ತರಪ್ರದೇಶದಲ್ಲಿ ರಾಜ್ಯ ಪ್ರಾಯೋಜಿತ ಹತ್ಯೆಗಳಲ್ಲಿ ಭಾಗಿಗಳಾದ ಪೊಲೀಸರಿಗೆ ಶಿಕ್ಷೆಯಿಂದ ಸಂಪೂರ್ಣ ವಿನಾಯಿತಿಗೆ ಕಾರಣವಾಗುವ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ರಾಜ್ಯದ ಆಡಳಿತ ಯಂತ್ರವು ನಡೆಸಿರುವ ಭಯಾನಕ ಕೃತ್ಯಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಂತ್ರಸ್ತರ ಕುಟುಂಬಗಳಿಗೆ ದಾರಿಯೇ ಇಲ್ಲವಾಗಿದೆ. ಆ ಕುಟುಂಬಗಳಿಗೆ ರಕ್ಷಣೆಯಾಗಲಿ, ಪರಿಹಾರವಾಗಲಿ ಸಿಗದಂತಹ ಸ್ಥಿತಿ ಬಂದಿದೆ’’ ಎಂದಿರುವ ಮಾನವ ಹಕ್ಕು ಆಯೋಗದ ಮಾತುಗಳು ಉತ್ತರಪ್ರದೇಶದಲ್ಲಿ ಯಾವ ರೀತಿಯ ಪೊಲೀಸ್ ಾಜ್ ಇದೆ ಎಂಬುದನ್ನು ಸೂಚಿಸುತ್ತದೆ

ಸುಪ್ರಿಂಕೋರ್ಟ್ ಮತ್ತು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಎನ್‌ಕೌಂಟರ್ ಹೆಸರಿನಲ್ಲಿ ನಡೆಯುವ ಹತ್ಯೆಗಳನ್ನು ತಡೆಯುವಂತೆ ರಾಜ್ಯ ಸರಕಾರಕ್ಕೆ ಆಗಾಗ್ಗೆ ನಿರ್ದಿಷ್ಟ ಮಾರ್ಗದರ್ಶಿ ನಿಯಮಗಳನ್ನು ನೀಡಿತ್ತು. ಆದಾಗ್ಯೂ ಕಾನೂನು ವಂಚಕರಿಗೆ (ಪೊಲೀಸರಿಗೆ) ಶಿಕ್ಷೆಯಿಂದ ವಿನಾಯಿತಿ ನೀಡಿದಂತೆ ಕಾಣುವ ಸನ್ನಿವೇಶದಲ್ಲಿ ಈ ಅಕ್ರಮ ಹತ್ಯೆ ಮುಂದುವರಿದಿದೆ. ಪೊಲೀಸರು ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶಗಳ ಪ್ರಕಾರವೇ ‘‘2017ರ ಮಾರ್ಚ್‌ನಿಂದ 2018ರ ಜನವರಿಯವರೆಗೆ 1,444 ಎನ್‌ಕೌಂಟರ್‌ಗಳು ನಡೆದಿವೆ; ಅವುಗಳಲ್ಲಿ 34 ಕ್ರಿಮಿನಲ್‌ಗಳು ಕೊಲ್ಲಲ್ಪಟ್ಟಿದ್ದಾರೆ ಮತ್ತು 2,744 ಮಂದಿ ಬಂಧಿಸಲ್ಪಟ್ಟಿದ್ದಾರೆ.’’

ಬಹುಪಾಲು ಎನ್ ಕೌಂಟರ್ ಹತ್ಯೆಗಳಲ್ಲಿ ಒಂದೇ ರೀತಿಯ ಸನ್ನಿವೇಶಗಳು
ಆಯೋಗಕ್ಕೆ ನೀಡಲಾದ ದೂರಿನಲ್ಲಿ ಉಲ್ಲೇಖಿಸಲಾದ ಒಂಬತ್ತು ಪ್ರಕರಣಗಳ ಪೈಕಿ ಏಳು ಪ್ರಕರಣಗಳಲ್ಲಿ ಪ್ರತ್ಯಕ್ಷದರ್ಶಿಗಳು ಹೇಳುವಂತೆ ಸಮವಸ್ತ್ರ ಅಥವಾ ಸಾಮಾನ್ಯ ಉಡುಪು ಧರಿಸಿರುವ ಪೊಲೀಸರು ಸಶಸ್ತ್ರ ಮುಖಾಮುಖಿಯಲ್ಲಿ ಹತ್ಯೆಯಾದರು ಎನ್ನಲಾದ ಬಲಿಪಶುಗಳನ್ನು ಅವರು ಹತ್ಯೆಯಾಗುವ ಒಂದು ದಿನದ ಮೊದಲೇ ಅಪಹರಿಸುತ್ತಾರೆ. ಅಲ್ಲದೆ ಒಂಬತ್ತು ಹತ್ಯೆಗಳಲ್ಲಿ ಮೂರು ಪ್ರಕರಣಗಳಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿ ಪೊಲೀಸರ ಕಸ್ಟಡಿಯಲ್ಲಿ ಇದ್ದಾನೆಂದು ಆತನ ಕುಟುಂಬದವರಿಗೆ ತಿಳಿದಿತ್ತು. ಈ ಪ್ರಕರಣಗಳಲ್ಲಿ ಹತ್ಯೆಯಾದ ವ್ಯಕ್ತಿಗಳು ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದಾರೆಂದು ಮೊದಲು ಹೇಳುವುದು, ಆ ಬಳಿಕ ಅವರ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ ಎನ್ನುವುದು ಮತ್ತು ಆಮೇಲೆ ‘‘ಅವರು ಒಂದು ಎನ್‌ಕೌಂಟರ್‌ನಲ್ಲಿ ಹತ್ಯೆಯಾದರು’’ ಎಂದು ತೋರಿಸುವುದು ಹೆಚ್ಚಿನ ಎನ್‌ಕೌಂಟರ್‌ಗಳಲ್ಲಿ ಮಾಮೂಲಿ ಸನ್ನಿವೇಶಗಳಾಗಿವೆ.
ಹತ್ಯೆಯಾದ ಹೆಚ್ಚಿನವರ ದೇಹಗಳ ಮೇಲೆ ಚಿತ್ರಹಿಂಸೆಯ ಗುರುತುಗಳಿದ್ದವು. ಅವರಿಗೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿತ್ತು. ಒಂಬತ್ತು ಪ್ರಕರಣಗಳ ಪೈಕಿ ಏಳು ಪ್ರಕರಣಗಳಲ್ಲಿ ಹತ್ಯೆಗೈಯಲ್ಪಟ್ಟವರ ದೇಹದ ಮೇಲೆ ಪೊಲೀಸರು ನೀಡಿದ್ದ ಚಿತ್ರಹಿಂಸೆಯ ಗುರುತುಗಳಿದ್ದವು ಎಂಬುದನ್ನು ಮಾನವ ಹಕ್ಕು ಆಯೋಗ ಗಮನಿಸಿತ್ತು. ‘‘ಒಂಬತ್ತರಲ್ಲಿ ಆರು ಪ್ರಕರಣಗಳಲ್ಲಿ ದೇಹದ ಮೇಲೆ, ತಲೆ, ಮುಖ, ಅಥವಾ ಎದೆಗೆ ಹೊಡೆದ ಪೆಟ್ಟುಗಳ ಗುರುತುಗಳಿದ್ದವು. ಹೆಚ್ಚಿನ ಶೂಟೌಟ್‌ಗಳಲ್ಲಿ ಹೀಗಾಗುವ ಸಂಭಾವ್ಯತೆ ಇರುವುದಿಲ್ಲ.’’ ಇಷ್ಟೇ ಅಲ್ಲದೆ ಒಂಬತ್ತರಲ್ಲಿ ಐದು ಪ್ರಕರಣಗಳಲ್ಲಿ ಪೊಲೀಸರು ಬಲಿಪಶುಗಳನ್ನು ‘ಮೋಸ್ಟ್ ವಾಂಟೆಡ್’ ಯಾದಿಯಲ್ಲಿ ಸೇರಿಸಿದ್ದರು; ಅವರನ್ನು ಹಿಡಿದುಕೊಟ್ಟವರಿಗೆ ಬಹುಮಾನಗಳನ್ನು ಘೋಷಿಸಿದ್ದರು. ಆದರೆ ಅವರು ಹೀಗೆ ಮಾಡಿದ್ದು ಘಟನೆ (ಎನ್ ಕೌಂಟರ್) ನಡೆದ ಬಳಿಕ. ಹಾಗಾದರೆ ಹತ್ಯೆಗಳನ್ನು ಮಾಡಿದ್ದು ಬಹುಮಾನದ ಹಣಕ್ಕಾಗಿಯೇ?

ಪೊಲೀಸರು ನೀಡುವ ಹೇಳಿಕೆ ನಂಬಲರ್ಹವಲ್ಲ
 ಪೊಲೀಸರು ತಮ್ಮ ಎಫ್‌ಐಆರ್‌ನಲ್ಲಿ ದಾಖಲಿಸಿರುವ ಎನ್‌ಕೌಂಟರ್ ನಡೆಯುವ ತನಕದ ಘಟನೆಗಳ ಸರಣಿ, ಅನುಕ್ರಮವು ಸುಮಾರಾಗಿ ಒಂದೇ ತೆರನಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಎನ್‌ಕೌಂಟರ್‌ನಲ್ಲಿ ಆದ ಗಾಯಗಳ ಮಾದರಿ ಕೂಡ ಕನಿಷ್ಠ ಗಾಯಗಳಾದ ಒಂದೇ ತೆರನಾದ ಮಾದರಿಯನ್ನು ತೋರಿಸುತ್ತದೆ. ಎಲ್ಲ ಪ್ರಕರಣಗಳಲ್ಲೂ ಕ್ರಿಮಿನಲ್ ಗಳು ನಂಬಲಿಕ್ಕೆ ಸಾಧ್ಯವಿಲ್ಲದಂತಹ ರೀತಿಯಲ್ಲಿ ತಪ್ಪಿಸಿಕೊಂಡು ಹೋಗಿರುತ್ತಾನೆ/ರೆ. ಎನ್‌ಕೌಂಟರ್ ನಡೆಯುವ ಮೊದಲು ಪೊಲೀಸರು ಬಲಿಪಶುಗಳನ್ನು ಕರೆದೊಯ್ಯುವುದನ್ನು ಕಂಡ ಪ್ರತ್ಯಕ್ಷದರ್ಶಿಗಳು ಹಲವರಿದ್ದರೂ ಅಂತಹ ಪ್ರತ್ಯಕ್ಷದರ್ಶಿಗಳಿಲ್ಲ ವೆಂದು ಪೊಲೀಸರು ಹೇಳುತ್ತಾರೆ.

ಪೊಲೀಸರಿಂದ ಪ್ರತೀಕಾರ 
ಕುಟುಂಬದ ಸದಸ್ಯರು ಅಥವಾ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಅಥವಾ ಎನ್‌ಕೌಂಟರ್‌ಗಳ ವಿವರಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ ಅಥವಾ ದೂರುಗಳ ವಿಚಾರಣೆಗಳನ್ನು ನಡೆಸದ ಸಂದರ್ಭಗಳನ್ನು ಕೂಡ ದೂರುದಾರರು ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ ಎಂದು ಮಾನವ ಹಕ್ಕು ಆಯೋಗ ಹೇಳಿದೆ.
ಅಲ್ಲದೆ ದೂರುದಾರರಿಗೇ ಪೊಲೀಸರು ನೇರ ಬೆದರಿಕೆ ಹಾಕುವುದು ಅಥವಾ ದೂರುಗಳಲ್ಲಿರುವ ಆಪಾದನೆಗಳ ವಿಚಾರಣೆ ನಡೆಸಲೇಬೇಕೆಂದು ಅವರು ಪಟ್ಟು ಹಿಡಿದಲ್ಲಿ ಅವರನ್ನು ‘ಸುಳ್ಳು ಮೊಕದ್ದಮೆ’ಗಳಲ್ಲಿ ಸಿಲುಕಿಸಲಾಗುವುದೆಂದು ಅವರಿಗೆ ಬೆದರಿಕೆ ಹಾಕಿರುವುದಾಗಿಯೂ ದೂರುದಾರರು ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಸಂಬಂಧಿಸಿದ ಎನ್‌ಕೌಂಟರ್‌ಗಳನ್ನು ನಡೆಸಿದ ಪೊಲೀಸರ ವಿರುದ್ಧ ಅವರು ಶಸ್ತ್ರಗಳನ್ನು ಬಳಸಿದ್ದಕ್ಕಾಗಿ ಯಾವ ಒಂದು ಪ್ರಕರಣದಲ್ಲೂ ಅವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಿಲ್ಲ.
ಪೊಲೀಸರು ಮಾಡಿದ ಇನ್ನೊಂದು ದೊಡ್ಡ ತಪ್ಪು ಎಂದರೆ ಬಹುಪಾಲು ಎನ್‌ಕೌಂಟರ್ ಪ್ರಕರಣಗಳಲ್ಲಿ ಹತ್ಯೆಯಾದ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಸರಕಾರದ ಸಂಬಂಧಿತ ಅಧಿಕಾರಿಗಳು ಹತ್ಯೆಗೊಂಡ ವ್ಯಕ್ತಿಯ ಸಾವಿನ ಸುದ್ದಿಯನ್ನು ಆದಷ್ಟು ಬೇಗ ತಿಳಿಸಲೇ ಇಲ್ಲ. ಆ ಸುದ್ದಿ ಅವರಿಗೆ ಹಳ್ಳಿಗರ ಅಥವಾ ವಾರ್ತಾ ರದಿಗಳ ಮೂಲಕವಷ್ಟೇ ತಿಳಿಯಿತು.
ಸಂಕ್ಷಿಪ್ತತೆ ಮತ್ತು ಅನುಕೂಲದ ದೃಷ್ಟಿಯಿಂದ ಹತ್ತು ಎನ್‌ಕೌಂಟರ್ ಹತ್ಯೆಗಳು ಮತ್ತು ಎಂಟು ಎಕ್ಸ್‌ಟ್ರಾ ಜುಡಿಶಿಯಲ್ ಹತ್ಯೆಗಳನ್ನು ಒಟ್ಟಿಗೆ ಪರಿಶೀಲಿಸಲು ಮಾನವ ಹಕ್ಕು ಆಯೋಗ ನಿರ್ಧರಿಸಿದೆ. ಈ ಎರಡೂ ದೂರುಗಳ ಸಮರ್ಥನೆಗೆ ಅಗತ್ಯವಾದ ಹಲವಾರು ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಈ ದಾಖಲೆಗಳನ್ನು ಪರಿಶೀಲಿಸುವಾಗ ಸುಪ್ರೀಂ ಕೋರ್ಟ್ ಮತ್ತು ಮಾನವ ಹಕ್ಕು ಆಯೋಗ ಕಾಲಕಾಲಕ್ಕೆ ನೀಡಿದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲು ರಾಜ್ಯ ಸರಕಾರವು ವಿಫಲವಾಗಿರುವ ಸಾಧ್ಯತೆಗಳಿವೆ ಎಂದು ಆಯೋಗ ಸ್ಪಷ್ಟವಾಗಿ ಹೇಳಿದೆ.
ಆದ್ದರಿಂದ ‘‘ಎನ್‌ಕೌಂಟರ್ ಹತ್ಯೆಗಳೆನ್ನಲಾದ ಹತ್ಯೆಗಳನ್ನು ನಡೆಸುವ ವೇಳೆ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳು ನ್ಯಾಯಾಂಗದ ವ್ಯಾಪ್ತಿಯನ್ನು ಮತ್ತು ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರಿರಬಹುದು’’
ಕೃಪೆ: thewire.in

Writer - ಗೌರವ್ ವಿವೇಕ್ ಭಟ್ನಾಗರ್

contributor

Editor - ಗೌರವ್ ವಿವೇಕ್ ಭಟ್ನಾಗರ್

contributor

Similar News

ಜಗದಗಲ
ಜಗ ದಗಲ