ಎನ್‌ಕೌಂಟರ್ ಹೆಸರಿನ ಭೀಕರ ಕಗ್ಗೊಲೆಗಳು

Update: 2018-05-23 18:24 GMT

ಜನಬಂಡಾಯಗಳನ್ನು ನಿಗ್ರಹಿಸಲು ಉದ್ದೇಶಿಸಿರುವ ಸರಕಾರಿ ದಂಗೆ ನಿಗ್ರಹ ಕಾರ್ಯಾಚರಣೆಗಳು ಉದ್ದೇಶಪೂರ್ವಕವಾಗಿಯೇ ಶಸ್ತ್ರಧಾರಿಗಳು ಮತ್ತು ನಿರಾಯುಧ ನಾಗರಿಕರ ನಡುವಿನ ವ್ಯತ್ಯಾಸಗಳನ್ನು ಮರೆಮಾಚಲು ಯತ್ನಿಸುತ್ತವೆ. ಮಾವೋವಾದಿಗಳ ಪ್ರಕಾರ ಕೊಲ್ಲಲ್ಪಟ್ಟವರಲ್ಲಿ 22 ಜನ ಮಾತ್ರ ಅವರ ಕಾರ್ಯಕರ್ತರು.

ಎಪ್ರಿಲ್ 22ರ ಬೆಳಗ್ಗೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಭರಮ್‌ಗಡ್ ಉಪವಿಭಾಗದ ಬೋರಿಯಾ ಮತ್ತು ಕಸನ್‌ಸೂರ್ ಹಳ್ಳಿಗಳ ನಡುವೆ ಎಲ್ಲೋ ಒಂದು ಕಡೆ ಮಾವೋವಾದಿಗಳ ಒಂದು ಗುಂಪು ತಂಗಿತ್ತು. ಅವರಲ್ಲಿ ಕೆಲವರು ಬೆಳಗಿನ ತಿಂಡಿ ಸೇವಿಸುತ್ತಿದ್ದರೆ ಕೆಲವರು ವಿಶ್ರಮಿಸುತ್ತಿದ್ದರು. ಮಾವೋವಾದಿಗಳು ಇಲ್ಲ್ಲಿ ತಂಗಿರುವ ಬಗ್ಗೆ ಯಾರಿಂದಲೋ ಮಾಹಿತಿಯೊಂದು ಪೊಲೀಸರಿಗೆ ದೊರೆಯಿತೆಂದು ಹೇಳಲಾಗುತ್ತಿದೆ. ಹೀಗಾಗಿ ಮಾವೋವಾದಿ ಗುಂಪಿಗಿಂತ ಹೆಚ್ಚಿಗಿನ ಸಂಖ್ಯಾಬಲದೊಂದಿಗೆ ಕೇಂದ್ರೀಯ ಮೀಸಲು ರಕ್ಷಣಾ ಪಡೆ (ಸಿಆರ್‌ಪಿಎಫ್) ಮತ್ತು ಸಿ-60 ಕಮಾಂಡೋಗಳು ಮಾವೋವಾದಿಗಳನ್ನು ನಾಲ್ಕೂ ದಿಕ್ಕಿನಿಂದ ಸುತ್ತುವರಿದು ಗುಂಡುಗಳ ಮಳೆಯನ್ನೇ ಸುರಿಸಿದರು ಮತ್ತು ಅವರೆಲ್ಲರನ್ನೂ ಕೊಂದುಹಾಕಿದರು. ಸಿಆರ್‌ಪಿಎಫ್ ಪಡೆಯಲ್ಲಿ ಕೆಲವರ ಬಳಿ ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳೂ ಇದ್ದವು. ಪೊಲೀಸರು 16 ಮಾವೋವಾದಿಗಳನ್ನು ಕೊಂದುಹಾಕಿದ್ದೇವೆಂದು ಹೇಳಿಕೊಂಡರು. ಆದರೆ ಆಯ್ದ ಪತ್ರಕರ್ತರನ್ನು ಮಾತ್ರ ಆ ಜಾಗಕ್ಕೆ ಕರೆದೊಯ್ದರು. ಮತ್ತು ಆ ಪತ್ರಕರ್ತರು ತಮಗೆ ಪೊಲೀಸರು ಕೊಟ್ಟ ವರದಿಯನ್ನು ನಿಷ್ಠವಾಗಿ ವರದಿ ಮಾಡಿದರು. ಮರುದಿನ ಮತ್ತೊಂದು ಎನ್‌ಕೌಂಟರ್‌ನಲ್ಲಿ ಜಿಮಲ್‌ಘಟ್ಟ ಅರಣ್ಯ ಪ್ರದೇಶದ ರಾಜಾರಾಮ್ ಕಾಂಡ್ಲಾದಲ್ಲಿ ಇನ್ನೂ ಆರು ಮಾವೋವಾದಿಗಳನ್ನು ಕೊಂದಿರುವುದಾಗಿ ಪೊಲೀಸರು ಹೇಳಿಕೆ ನೀಡಿದರು. ಇದಾದ ಮರುದಿನ ಎಪ್ರಿಲ್ 24ರಂದು ತಾವು ಇಂದ್ರಾವತಿ ನದಿಯಲ್ಲಿ ತೇಲುತ್ತಿದ್ದ ಇನ್ನೂ 15 ಮಾವೋವಾದಿಗಳ ಮೃತದೇಹವನ್ನು ಪತ್ತೆಹಚ್ಚಿದ್ದೇವೆಂದೂ ಅವರೂ ಸಹ 22ರಂದು ಹತರಾದ ಮಾವೋವಾದಿಗಳೇ ಎಂದು ಪೊಲೀಸರು ಹೇಳಿದರು. ಆ ನಂತರದಲ್ಲಿ ಇನ್ನೂ ಮೂರು ಮೃತ ದೇಹಗಳು ನದಿಯಲ್ಲಿ ಪತ್ತೆಯಾದವು. ಹೀಗಾಗಿ ಎರಡು ಎನ್‌ಕೌಂಟರಿನಲ್ಲಿ ಒಟ್ಟು 40 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಈ ಎನ್‌ಕೌಂಟರ್ ಪರಿಣತರಿಗೆ ಪ್ರಶಸ್ತಿಗಳು ಮತ್ತು ಭಡ್ತಿಗಳು ಹೇಗಿದ್ದರೂ ಕಾಯುತ್ತಿರುತ್ತವೆ.
 ಜನಬಂಡಾಯಗಳನ್ನು ನಿಗ್ರಹಿಸಲು ಉದ್ದೇಶಿಸಿರುವ ಸರಕಾರಿ ದಂಗೆ ನಿಗ್ರಹ ಕಾರ್ಯಾಚರಣೆಗಳು ಉದ್ದೇಶಪೂರ್ವಕವಾಗಿಯೇ ಶಸ್ತ್ರಧಾರಿಗಳು ಮತ್ತು ನಿರಾಯುಧ ನಾಗರಿಕರ ನಡುವಿನ ವ್ಯತ್ಯಾಸಗಳನ್ನು ಮರೆಮಾಚಲು ಯತ್ನಿಸುತ್ತವೆ. ಮಾವೋವಾದಿಗಳ ಪ್ರಕಾರ ಕೊಲ್ಲಲ್ಪಟ್ಟವರಲ್ಲಿ 22 ಜನ ಮಾತ್ರ ಅವರ ಕಾರ್ಯಕರ್ತರು. ಈ ನಡುವೆ ಕೆಲವು ಪೋಷಕರು ತಮ್ಮ ಮಕ್ಕಳು ಕಾಣೆಯಾಗಿದ್ದರ ಬಗ್ಗೆ ದೂರು ಕೊಟ್ಟ ನಂತರ ಬೆಳಕಿಗೆ ಬರುತ್ತಿರುವ ಸಂಗತಿಯೇನೆಂದರೆ ಎಪ್ರಿಲ್ 21ರ ರಾತ್ರಿ ಎಂಟು ಜನ ಯುವಕ ಯುವತಿಯರು ಗಟ್ಟೆಪಲ್ಲಿ ಎಂಬ ಹಳ್ಳಿಯಿಂದ ಕಸನ್‌ಸೂರಿಗೆ ಮದುವೆಯೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಪೊಲೀಸರು ಅವರನ್ನು ಎಳೆದೊಯ್ದು ಕೊಂದುಹಾಕಿದ್ದಾರೆ. ಅವರ ದೇಹಗಳನ್ನೂ ಮಾವೋವಾದಿಗಳ ಮೃತದೇಹಗಳ ಜೊತೆಗೆ ಸೇರಿಸಿ ಎಪ್ರಿಲ್ 22ರಂದು ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತೆಂದು ಹೇಳಿದ್ದಾರೆ. ಇದಲ್ಲದೆ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತೆಂದು ಹೇಳಲಾಗುವ ಮಾವೋವಾದಿ ನಾಯಕನೊಬ್ಬನ ದೇಹದ ಮೇಲೆ ಕೊಡಲಿಯಿಂದ ಕೊಚ್ಚಿದ ಗುರುತಿರುವುದನ್ನು ಅವರ ತಂದೆ ಕಂಡಿದ್ದಾರೆ. ಇದು ಈ ಎನ್‌ಕೌಂಟರಿನಲ್ಲಿ ನಡೆದಿರಬಹುದಾದ ಕ್ರೌರ್ಯ ಮತ್ತು ಪಾಶವೀಕತೆಯನ್ನು ತೋರಿಸುತ್ತದೆ. ಆದರೆ ಆಡಳಿತ ವರ್ಗ ಅತ್ಯಂತ ಸಂವೇದನಾಶೂನ್ಯವಾಗಿದೆ.


 ದೊಡ್ಡ ದೊಡ್ಡ ಬಂಡವಾಳಶಾಹಿ ಸಂಸ್ಥೆಗಳು ತಮ್ಮ ಲೂಟಿಕೋರ ಗಣಿಗಾರಿಕಾ ಯೋಜನೆಗಳ ಮೂಲಕ ಲಾಭವನ್ನು ಸೂರೆ ಮಾಡಲು ಅನುವು ಮಾಡಿಕೊಟ್ಟು ಅದರಲ್ಲಿ ಒಂದು ಭಾಗವನ್ನು ಅಂತಹ ಯೋಜನೆಯು ಜಾರಿಗೆ ಬರಲು ಸಹಕರಿಸಿದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಹೇಗೆ ಸುಲಭವಾಗಿ ಹಂಚಿಕೊಳ್ಳುವಂತೆ ಮಾಡಬಹುದು ಎಂಬುದರ ಬಗ್ಗೆ ಮಾತ್ರ ವ್ಯವಸ್ಥೆಯು ಚಿಂತಿಸುತ್ತಿದೆ. ಈ ಗಣಿಗಾರಿಕಾ ಯೋಜನೆಗಳು ತಮ್ಮ ಕಾಡು, ನದಿ, ಗಿರಿ-ಕಾನನಗಳನ್ನು ನಾಶಗೊಳಿಸುವುದಷ್ಟೇ ಅಲ್ಲದೆ, ಅಲ್ಲಿ ಹಬ್ಬಿಕೊಳ್ಳುವ ಬಂಡವಾಳಶಾಹಿ ಸಂಸ್ಕೃತಿಯು ತಮ್ಮ ಸಂಸ್ಕೃತಿಯನ್ನು ವಿನಾಶಗೊಳಿಸುತ್ತದೆಂಬ ಕಾರಣಕ್ಕೆ ಆ ಅರಣ್ಯಗಳಲ್ಲಿ ವಾಸಿಸುತ್ತಿರುವ ಮಾದಿಯಾ ಗೊಂಡರು ಹಾಗೂ ಮತ್ತಿತರ ಆದಿವಾಸಿಗಳು ಈ ಯೋಜನೆಗಳನ್ನು ಖಂಡತುಂಡವಾಗಿ ವಿರೋಧಿಸುತ್ತಿವೆ. ಅವರು ಕೇಳುತ್ತಿರುವುದು ಕಿರು ಅರಣ್ಯ ಉತ್ಪತ್ತಿಗಳನ್ನು ಆಧರಿಸಿದ ಮತ್ತು ಗ್ರಾಮಸಭೆಗಳ ನಿಯಂತ್ರಣದಲ್ಲಿ ನಡೆಯುವ ಸಣ್ಣ ಕೈಗಾರಿಕೆಗಳನ್ನು. ಅವರು 2006ರ ಪರಿಶಿಷ್ಟ ವರ್ಗ ಮತ್ತಿತರ ಅರಣ್ಯವಾಸಿಗಳ ಅರಣ್ಯ ಹಕ್ಕಿನ ಕಾಯ್ದೆ ಮತ್ತು 1996ರ ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್ ಸಂಸ್ಥೆಗಳ ವಿಸ್ತರಣೆ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಥಾಕಥಿತ ಅಭಿವೃದ್ಧಿ ಯೋಜನೆಗಳಿಗೆ ಅರಣ್ಯಭೂಮಿಗಳನ್ನು ಹಸ್ತಾಂತರ ಮಾಡುವುದಕ್ಕೆ ಮುನ್ನ ಗ್ರಾಮಸಭೆಗಳಿಗೆ ಆ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟು ಅದರ ಪೂರ್ವ ಸಮ್ಮತಿಯನ್ನು ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಬೇಕೆಂಬುದು ಅವರ ಪ್ರಮುಖ ಆಗ್ರಹವಾಗಿದೆ. ಬದಲಿಗೆ ಅರಣ್ಯವಾಸಿಗಳು ಇಂತಹ ಹಕ್ಕುಗಳಿಗಾಗಿ ಆಗ್ರಹಿಸಿದಾಗ ಅವರ ಸ್ಥಳೀಯ ನಾಯಕರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ಪೊಲೀಸ್ ದಮನಕ್ಕೆ ಗುರಿಮಾಡಲಾಗುತ್ತದೆ. ತಮ್ಮ ದಮನವನ್ನು ಮುಂದುವರಿಸುವ ಮತ್ತು ನಿರಂತರಗೊಳಿಸುವ ಇಂತಹ ಹಿಂಸಾಚಾರಗಳಿಗೆ ಅವರು ಪ್ರತಿರೋಧಿಸಿದಾಗ ಸರಕಾರವು ಅವರಿಗೆ ಮಾವೋವಾದಿಗಳೆಂದು ಹಣೆಪಟ್ಟಿ ಕಟ್ಟುವುದು ಮಾತ್ರವಲ್ಲದೆ ಗಣಿಗಾರಿಕಾ ಯೋಜನೆಗಳ ಹಿತಾಸಕ್ತಿಗಾಗಿ ಇಡೀ ಪ್ರದೇಶವನ್ನು ಸೇನಾತ್ಮಕ ಉಸ್ತುವಾರಿಗೆ ಒಳಪಡಿಸುತ್ತದೆ.
2007ರಲ್ಲಿ ಲಾಯ್ಡ ಮೆಟಲ್ ಎಂಬ ಕಂಪೆನಿಯು ಗಡ್ಚಿರೋಲಿಯಲ್ಲಿ ಗಣಿಗಾರಿಕೆ ನಡೆಸಲು ಪರವಾನಿಗೆ ಪಡೆದುಕೊಳ್ಳುವುದರೊಂದಿಗೆ ಆ ಪ್ರದೇಶದಲ್ಲಿ ಜನರ ಪ್ರತಿರೋಧವೂ ಹುಟ್ಟಿಕೊಂಡಿತು. ಇಂತಹ ಹಲವಾರು ಯೋಜನೆಗಳಿಗೆ ಸರಕಾರ ಪರವಾನಿಗೆಯನ್ನು ಕೊಡುತ್ತಲೇ ಹೋಯಿತು. ಒಂದು ವರ್ಷದ ಕೆಳಗೆ ಕೇಂದ್ರದ ಪರಿಸರ ಇಲಾಖೆಯ ಅರಣ್ಯ ಸಲಹಾ ಸಮಿತಿಯು ಗೋಪಾನಿ ಉಕ್ಕು ಮತ್ತು ವಿದ್ಯುತ್ ಕಂಪೆನಿಗೆ ಗಣಿಗಾರಿಕಾ ಪರವಾನಿಗೆಯನ್ನು ನೀಡಿತು. ಮಾಡಿಯಾ ಗೊಂಡರಿಗೆ ಪವಿತ್ರವಾದ ಸೂರಜ್‌ಗಡ್ ಪರ್ವತವನ್ನೂ ಸಹ ಸರಕಾರವು ಬಿಡಲಿಲ್ಲ. ಮಾಡಿಯಾ ಗೊಂಡರು ಈ ಪರ್ವತವು ತಮ್ಮ ದೈವವಾದ ಥಾಕೂರ್ ದೇವರ ಆವಾಸ ಸ್ಥಾನವೆಂದು ನಂಬುವುದಲ್ಲದೆ, ತಮ್ಮ ನಾಯಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬಾಬೂರಾವ್ ಶೆದ್ಮಾಕೆಯು ಈ ಗುಡ್ಡಗಳನ್ನು ನೆಲೆಯಾಗಿರಿಸಿಕೊಂಡೇ 1857ರ ಸಂಗ್ರಾಮದಲ್ಲಿ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಹೋರಾಡಿದ ನೆನಪುಗಳನ್ನು ಹಸಿರಾಗುಳಿಸಿಕೊಂಡಿದ್ದಾರೆ. ಗಣಿಗಾರಿಕೆಯು ತಮ್ಮ ನೆಲೆಗಳ ಮೇಲೆ ಮಾಡುವ ‘ಆಳವಾದ ಕೆಂಪು ಗಾಯ’ಗಳೆಂದೂ, ಇದರಿಂದ ತಮ್ಮ ಸಂಸ್ಕೃತಿ ಮತ್ತು ಪರಿಸರ ವಿನಾಶವಾಗುತ್ತದೆಂದೂ, ಆಹಾರ ಮತ್ತು ಜಲಮೂಲಗಳನ್ನು ಕಳೆದುಕೊಳ್ಳುತ್ತೇವೆಂದೂ ಮತ್ತು ಆರ್ಥಿಕ ಅಸ್ತಿತ್ವವೇ ಅಪಾಯಕೊಳ್ಳಗಾಗುತ್ತದೆಂದೂ ಮಾಡಿಯಾ ಆದಿವಾಸಿಗಳು ಭಾವಿಸುತ್ತಾರೆ.
ಸರಕು ಲಾಭದ ಗೀಳಿಗೆ ಬಿದ್ದಿರುವ ಆಳುವ ವ್ಯವಸ್ಥೆ ಈ ‘ಆಳ ಕೆಂಪು ಗಾಯ’ಗಳಾಗುತ್ತಿರುವುದನ್ನೇ ನಿರಾಕರಿಸುತ್ತಿದ್ದಾರೆಂಬ ತೀರ್ಮಾನಕ್ಕೆ ಮಾಡಿಯಾ ಗೊಂಡರು ಬಂದಿದ್ದಾರೆ. ಗೃಹ ಇಲಾಖೆಯ ‘ಎಡಪಂಥೀಯ ಉಗ್ರಗಾಮಿಗಳ ವಿಭಾಗವು’ ಎಡಪಂಥೀಯ ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಎಡಪಂಥೀಯ ಉಗ್ರಗಾಮಿಗಳು ಆದಿವಾಸಿಗಳನ್ನು ಮತ್ತು ಸ್ಥಳೀಯರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಪ್ರತಿಪಾದಿಸುತ್ತದೆ. ಹೀಗಾಗಿ ಅವರ ‘ಪೊಲೀಸ್ ಪಡೆಗಳ ಸಮಗ್ರ ಆಧುನೀಕರಣದ ಯೋಜನೆ’ಗಳ ಭಾಗವಾಗಿ ‘ಮಾಧ್ಯಮ ಮತ್ತು ಪ್ರಚಾರ ಯೋಜನೆ’ಯೆಂಬ ಯೋಜನೆಯೂ ಇದೆ. ಅದರ ಪ್ರಕಾರ ಈ ಮಾವೋವಾದಿಗಳಿಂದಾಗಿ ಅವರ ಪ್ರಭಾವದಲ್ಲಿರುವ ಪ್ರದೇಶಗಳಲ್ಲಿ ‘ಅಭಿವೃದ್ಧಿಯು ಹಲವು ದಶಕಗಳ ಕಾಲದಷ್ಟು ಹಿಂದುಳಿದು ಹೋಗಿದೆ’ ಎಂಬುದನ್ನು ನಾಗರಿಕ ಸಮಾಜ ಮತ್ತು ಮಾಧ್ಯಮಗಳು ಗುರುತಿಸಬೇಕಿದೆ. ಆದರೆ ಇದರ ಬಗ್ಗೆ ವ್ಯವಸ್ಥೆಯು ನಿಶ್ಚಿಂತವಾಗಿರಬಹುದು. ಏಕೆಂದರೆ ಗಡ್ಚಿರೋಲಿಯಲ್ಲಿ ನಡೆದ ಮಾವೋವಾದಿಗಳ ಭೀಕರ ಮತ್ತು ಸಾಮೂಹಿಕ ಕಗ್ಗೊಲೆಯನ್ನು ಕೇವಲ ಕಮಾಂಡೋಗಳು ಮಾತ್ರವಲ್ಲದೆ ಕೆಲವು ಮಾಧ್ಯಮದವರೂ ಸಂಭ್ರಮಿಸಿದ್ದಾರೆ. ಇವೆಲ್ಲದರಿಂದ ಎಬಂಡವಾಳಶಾಹಿಗಳಿಗೆ ಆ ಪ್ರದೇಶದಲ್ಲಿ ನೆಲೆಯೂರಲು ಇದ್ದ ಅಡ್ಡಿಗಳು ಇದರಿಂದ ನಿವಾರಣೆಯಾಗುತ್ತದೆಯೆಂದೇ ಇಷ್ಟೆಲ್ಲ ಮಾಡಲಾಗುತ್ತಿದೆ.

ಕೃಪೆ: Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ