ಅಮೆರಿಕ ರಾಜತಾಂತ್ರಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಪಾಕ್: ಮೈಕ್ ಪಾಂಪಿಯೊ

Update: 2018-05-24 17:34 GMT

ವಾಶಿಂಗ್ಟನ್, ಮೇ 24: ಪಾಕಿಸ್ತಾನವು ಅಮೆರಿಕದ ರಾಜತಾಂತ್ರಿಕರನ್ನು ‘ಕೆಟ್ಟದಾಗಿ’ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ಅನುದಾನ, ಹಣಕಾಸು ನೆರವು ಮತ್ತು ಪರಿಹಾರಗಳ ರೂಪದಲ್ಲಿ ಆ ದೇಶಕ್ಕೆ ಅಮೆರಿಕ ನೀಡುತ್ತಿರುವ ನೆರವಿನ ಪ್ರಮಾಣವನ್ನು ಕಡಿತಗೊಳಿಸುವುದಾಗಿ ಹೇಳಿದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ವಿದೇಶ ವ್ಯವಹಾರಗಳ ಸಮಿತಿಯ ಮುಂದೆ ಬುಧವಾರ ವಿವರಣೆ ನೀಡಿದ ಪಾಂಪಿಯೊ, ರಿಪಬ್ಲಿಕನ್ ಸಂಸದ ಡಾನ ರೊಹ್ರಾಬ್ಯಾಕರ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು.

2011ರಲ್ಲಿ ಒಸಾಮಾ ಬಿನ್ ಲಾದನ್‌ನನ್ನು ಪತ್ತೆಹಚ್ಚಲು ಅಮೆರಿಕದ ಸೈನಿಕರಿಗೆ ನೆರವು ನೀಡಿರುವ ವೈದ್ಯ ಶಕೀಲ್ ಅಫ್ರಿದಿಯನ್ನು ಜೈಲಿಗಟ್ಟಿದ ಪಾಕಿಸ್ತಾನಕ್ಕೆ ಯಾಕೆ ನೆರವು ನೀಡಬೇಕು ಎಂಬುದಾಗಿ ರೊಹ್ರಾಬ್ಯಾಕರ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಹಿಂದಿನ ವರ್ಷಗಳಿಗೆ ಹೋಲಿಸಿದರೆ, 2018ರಲ್ಲಿ ಪಾಕಿಸ್ತಾನಕ್ಕೆ ಅತ್ಯಂತ ಕಡಿಮೆ ನಿಧಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು. ‘‘ನೀಡಬೇಕಾಗಿರುವ ಬಾಕಿ ಹಣದ ಬಗ್ಗೆ ಪರಿಶೀಲನೆ ನಡೆದಿದೆ. ಈ ಮೊತ್ತವು ಇನ್ನೂ ಕಡಿಮೆಯಾಗುತ್ತದೆ ಎಂದು ನಾನು ಭಾವಿಸಿದ್ದೇನೆ’’ ಎಂದು ಪಾಂಪಿಯೊ ನುಡಿದರು.

ಪಾಕಿಸ್ತಾನವು ಅಮೆರಿಕದ ರಾಜತಾಂತ್ರಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂಬುದಾಗಿಯೂ ಅವರು ಆರೋಪಿಸಿದರು. ರಸ್ತೆ ಅಪಘಾತವೊಂದರಲ್ಲಿ ಶಾಮೀಲಾಗಿರುವ ಅಮೆರಿಕ ರಾಜತಾಂತ್ರಿಕನೋರ್ವನನ್ನು ಉಲ್ಲೇಖಿಸಿ ಪಾಂಪಿಯೊ ಈ ವಿಷಯ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಸಂಚಾರಿ ನಿಯಮ ಉಲ್ಲಂಘಿಸಿ ಅಮೆರಿಕ ರಾಜತಾಂತ್ರಿಕನು ಕಾರು ಚಲಾಯಿಸಿದಾಗ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದರು. ರಾಜತಾಂತ್ರಿಕನ ವಿರುದ್ಧ ಮೊಕದ್ದಮೆ ದಾಖಲಾಗದಿದ್ದರೂ, ಆರಂಭದಲ್ಲಿ ಅಮೆರಿಕಕ್ಕೆ ವಾಪಸಾಗಲು ಪಾಕಿಸ್ತಾನ ಅವಕಾಶ ನೀಡಿರಲಿಲ್ಲ.

ಮೃತನ ಕುಟುಂಬಿಕರಿಗೆ ಪರಿಹಾರ ನೀಡಿದ ಬಳಿಕವಷ್ಟೇ ರಾಜತಾಂತ್ರಿಕನಿಗೆ ಅಮೆರಿಕಕ್ಕೆ ವಾಪಸಾಗಲು ಅವಕಾಶ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News