×
Ad

ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ವೀಡಿಯೊ ಬಿಡುಗಡೆಗೆ ದಿಲ್ಲಿ ಹೈಕೋರ್ಟ್ ತಡೆ

Update: 2018-05-25 20:36 IST

ಹೊಸದಿಲ್ಲಿ, ಮೇ 25: ಭಾರತೀಯ ಮಾಧ್ಯಮಗಳು ರಾಜಕೀಯ ಪಕ್ಷಗಳಿಂದ ಹಣಪಡೆದು ವಿರೋಧಪಕ್ಷಗಳ ನಾಯಕರ ಮಾನಹಾನಿ ಮಾಡಲು, ಹಿಂದುತ್ವ ಸಿದ್ಧಾಂತವನ್ನು ಪ್ರಚಾರ ಮಾಡಲು ಮತ್ತು ರಾಜಕೀಯ ಪಕ್ಷಗಳ ಪರ ಅಭಿಯಾನ ನಡೆಸಲು ಹಣವನ್ನು ಪಡೆದುಕೊಂಡಿವೆ ಎಂದು ಆರೋಪಿಸುವ ಸುದ್ದಿ ಜಾಲತಾಣ ‘ಕೋಬ್ರಾಪೋಸ್ಟ್’ ನಡೆಸಿದ ಕುಟುಕು ಕಾರ್ಯಾಚರಣೆ 'ಆಪರೇಶನ್ 136’ನ ಎರಡನೇ ಕಂತನ್ನು ಬಿಡುಗಡೆ ಮಾಡದಂತೆ ದಿಲ್ಲಿ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. 'ಆಪರೇಶನ್ 136' ವಿರುದ್ಧ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ಮಾಧ್ಯಮ ಸಂಸ್ಥೆ ದೈನಿಕ್ ಭಾಸ್ಕರ್, ಈ ವೀಡಿಯೊ ಬಿಡುಗಡೆಯಿಂದ ಸಂಸ್ಥೆಯು ಗಳಿಸಿರುವ ಖ್ಯಾತಿಗೆ ಸರಿಪಡಿಸಲಾಗದಷ್ಟು ಹಾನಿಯಾಗುವ ಸಾಧ್ಯತೆಯಿದೆ. ಹಾಗಾಗಿ 'ಆಪರೇಶನ್ 136’ನ ಎರಡನೇ ಕಂತನ್ನು ಬಿಡುಗಡೆ ಮಾಡದಂತೆ ತಡೆಯ ಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿತ್ತು. ನ್ಯಾಯಾಲಯ ನೀಡಿರುವ ತಡೆಯಾಜ್ಞೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ‘ಕೋಬ್ರಾಪೋಸ್ಟ್’, ನ್ಯಾಯಾಲಯವು ನಮ್ಮ ವಾದವನ್ನು ಆಲಿಸದೆ ಏಕಪಕ್ಷೀಯವಾಗಿ ತಡೆಯಾಜ್ಞೆ ವಿಧಿಸಿದೆ. ತಡೆ ಆದೇಶವನ್ನು ಪ್ರಶ್ನಿಸಿ ನಾವು ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದೆ. 'ಆಪರೇಶನ್ 136' ಎಂಬ ಕುಟುಕು ಕಾರ್ಯಾಚರಣೆ ನಡೆಸಿದ್ದ ಕೋಬ್ರಾಪೋಸ್ಟ್, ಹೇಗೆ ಭಾರತೀಯ ಮಾಧ್ಯಮಗಳು ಹಣಕ್ಕಾಗಿ ರಾಜಕೀಯ ಪಕ್ಷಗಳ ಜೊತೆ ಕೈಜೋಡಿಸಿ ವಿರೋಧ ಪಕ್ಷಗಳ ನಾಯಕರನ್ನು ಹಣಿಯುವ, ಒಂದು ರಾಜಕೀಯ ಪಕ್ಷದ ಸಿದ್ಧಾಂತವನ್ನು ಹರಡುವ, ಮತಗಳನ್ನು ಧ್ರುವೀಕರಿಸುವ ಮತ್ತು ಕೋಮು ಭಾವನೆಯನ್ನು ಜನರಲ್ಲಿ ಮೂಡಿಸುವ ಕೆಲಸ ಮಾಡುತ್ತಿವೆ ಎಂಬುದನ್ನು ಮಾರ್ಚ್ 26ರಂದು ಬಿಡುಗಡೆ ಮಾಡಿದ ‘ಆಪರೇಶನ್ 136’ನ ಮೊದಲ ಕಂತಿನಲ್ಲಿ ಬಹಿರಂಗಪಡಿಸಿತ್ತು. ಮೊದಲ ಕಂತಿನಲ್ಲಿ ಕೋಬ್ರಾಪೋಸ್ಟ್ ಹದಿನೇಳು ಭಾರತೀಯ ಮಾಧ್ಯಮಗಳ ಸಂಚನ್ನು ಬಯಲುಗೊಳಿಸಿತ್ತು.

ಕೆಲವು ಮಾಧ್ಯಮ ಸಂಸ್ಥೆಗಳು ಬಿಜೆಪಿ ನಾಯಕರು, ಕೇಂದ್ರ ಸಚಿವರು ಮತ್ತು ಆಡಳಿತ ಪಕ್ಷದ ಮಿತ್ರಪಕ್ಷದ ನಾಯಕರ ವಿರುದ್ಧ ಕಟ್ಟುಕತೆ ಸೃಷ್ಟಿಸಲು, ರಾಜಕೀಯ ಷಡ್ಯಂತ್ರವನ್ನು ರೂಪಿಸಲು ಮತ್ತು ಒಳಜಗಳದ ವರದಿಗಳನ್ನು ರಚಿಸಲು ಹಣವನ್ನು ಪಡೆದಿರುವುದಾಗಿಯೂ ಕೋಬ್ರಾಪೋಸ್ಟ್ ಕಾರ್ಯಾಚರಣೆ ಆರೋಪಿಸಿದೆ.

ಇದೀಗ ಈ ವಿಡಿಯೊದ ಎರಡನೇ ಕಂತನ್ನು ಶನಿವಾರ, ಮೇ 25ರಂದು ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆ ಮಾಡಲು ಕೋಬ್ರಾಪೋಸ್ಟ್ ಸಿದ್ಧತೆ ನಡೆಸಿತ್ತು. ಆದರೆ ದೈನಿಕ್ ಭಾಸ್ಕರ್ ಗುರುವಾರದಂದು ಈ ವಿಡಿಯೊ ಬಿಡುಗಡೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದೆ. ಸದ್ಯ ತನ್ನ ಜಾಲತಾಣದಲ್ಲಿ ಓಪರೇಶನ್ 136 ಎರಡನೇ ಕಂತಿನ ಪ್ರೋಮೊವನ್ನು ಬಿಡುಗಡೆ ಮಾಡಿರುವ ಕೋಬ್ರಾಪೋಸ್ಟ್ ಶೀಘ್ರದಲ್ಲಿ ಸಂಪೂರ್ಣ ವೀಡಿಯೊದೊಂದಿಗೆ ಬರುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News