ಜನಾಂಗೀಯ ಅಸಹನೆಯ ಇನ್ನೊಂದು ಮುಖ

Update: 2018-05-26 04:26 GMT

ಸಾಮಾಜಿಕ ಜಾಲ ತಾಣಗಳ ದುರುಪಯೋಗದಿಂದಾಗಿ, ಸತ್ಯದ ವೇಗ ಇನ್ನಷ್ಟು ಕಡಿಮೆಯಾಗಿದೆ. ಮಿಥ್ಯೆಯ ಕಣ್ಣು ಕೋರೈಸುವ ಬೆಳಕಿಗೆ ಜನರು ಸತ್ಯಕ್ಕೆ ಒಂದು ರೀತಿಯಲ್ಲಿ ಕುರುಡಾಗಿದ್ದಾರೆ. ಪರಿಣಾಮವಾಗಿ ಸತ್ಯಕ್ಕಿಂತ ವೇಗವಾಗಿ ವದಂತಿಗಳು ಜನರನ್ನು ತಲುಪುತ್ತಿವೆ. ಸತ್ಯ ಯಾವತ್ತೂ ರೋಚಕವಾಗಿರುವುದಿಲ್ಲ. ಆದುದರಿಂದ ಅದು ತಕ್ಷಣ ಆಕರ್ಷಿಸುವುದಿಲ್ಲ. ಆದರೆ ವದಂತಿಗಳು ಬೆಂಕಿಯ ಹಾಗೆ. ಸದಾ ಆತಂಕಗಳನ್ನು ಎದುರು ನೋಡುತ್ತಿರುವ ಜನರ ಮುಂದೆ ಇಂತಹ ವದಂತಿಗಳು ಎದುರಾದಾಗ ಅವು ತಕ್ಷಣ ರೆಕ್ಕೆ ಪುಕ್ಕಗಳನ್ನು ಪಡೆದು, ನಿಜವೋ ಎನ್ನುವಂತೆ ಹರಡಿಕೊಳ್ಳುತ್ತವೆ. ವದಂತಿಗಳು ಜನರಲ್ಲಿ ಬಿತ್ತುವ ಭಯ, ಆತಂಕ, ಪೂರ್ವಾಗ್ರಹಗಳ ಪರಿಣಾಮವಾಗಿ ತಕ್ಷಣ ಅವರು ಭಾವೋದ್ವೇಗಗಳಿಗೆ ಬಲಿಯಾಗುತ್ತಾರೆ. 

ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಇಂತಹದೇ ಒಂದು ಪ್ರಕರಣದಲ್ಲಿ, ಚಾಮರಾಜಪೇಟೆಯ ಸಮೀಪದ ಓರ್ವ ರಾಜಸ್ಥಾನದ ಕೂಲಿ ಕಾರ್ಮಿಕನನ್ನು ಸಾರ್ವಜನಿಕರು ಬರ್ಬರವಾಗಿ ಥಳಿಸಿ ಕೊಂದಿದ್ದಾರೆ. ಸಾಮಾಜಿಕ ತಾಣದಲ್ಲಿ ‘ಮಕ್ಕಳ ಕಳ್ಳ’ರ ಕುರಿತಂತೆ ಹರಿದಾಡುತ್ತಿರುವ ವದಂತಿಯ ಹಿನ್ನೆಲೆಯಲ್ಲಿ, ಈ ಕೊಲೆ ನಡೆದಿದೆ. ಆತ ಒಂದು ಮಗುವನ್ನು ಮಾತನಾಡಿಸಿದ್ದೇ ತಪ್ಪಾಗಿದೆ. ಅಷ್ಟಕ್ಕೇ ಆತ ಮಕ್ಕಳ ಕಳ್ಳ ಎಂದು ಜನರು ನಿರ್ಧರಿಸಿ ಬಿಟ್ಟಿದ್ದಾರೆ. ಗುಂಪಿನಲ್ಲಿ ಸೇರಿದಾಕ್ಷಣ ಎಂತಹ ದುರ್ಬಲರಲ್ಲೂ ಶೌರ್ಯ ನರನರಗಳಲ್ಲಿ ಹರಿದಾಡಿ ಬಿಡುತ್ತದೆ. ನಮ್ಮಾಳಗೆ ತಣ್ಣಗೆ ಮಲಗಿರುವ ಕೌರ್ಯ ಒಮ್ಮೆಲೇ ಜೀವ ಪಡೆಯುತ್ತದೆ. ಸಂತ್ರಸ್ತ ಒಬ್ಬಂಟಿ ಮತ್ತು ದುರ್ಬಲ ಎನ್ನುವುದು ಮನವರಿಕೆಯಾದಾಗ ಈ ಕೌರ್ಯ ಬಹಿರಂಗವಾಗಿ ಹೆಡೆ ಬಿಚ್ಚುತ್ತದೆ. ಪರಿಣಾಮವಾಗಿ ಹಾಡಹಗಲೇ ರಾಕ್ಷಸರ ಕೈಗೆ ಸಿಲುಕಿ ಕಾರ್ಮಿಕ ಮೃತಪಟ್ಟಿದ್ದಾನೆ. ಇದೀಗ ಆತ ಮಕ್ಕಳ ಕಳ್ಳ ಅಲ್ಲ ಎನ್ನುವುದು ಗೊತ್ತಾಗಿದೆ. ಹತ್ಯೆಯಲ್ಲಿ ಪಾಲುಗೊಂಡ ದುಷ್ಕರ್ಮಿಗಳನ್ನು ಇದೀಗ ಗುರುತಿಸುವ ಕಾರ್ಯ ನಡೆಯುತ್ತಿದೆ. ಉತ್ತರ ಭಾರತದಲ್ಲಿ ಸಾಮಾನ್ಯವಾಗಿರುವ ಈ ಗುಂಪು ಥಳಿತವೆನ್ನುವ ಮೃಗೀಯ ಕೃತ್ಯಗಳು ಇದೀಗ ಕರ್ನಾಟಕಕ್ಕೂ ಕಾಲಿಟ್ಟಿರುವುದು ಅತ್ಯಂತ ಆತಂಕಕಾರಿಯಾಗಿದೆ.

‘ಮಕ್ಕಳ ಕಳ್ಳರಿದ್ದಾರೆ’ ಎಂಬ ವದಂತಿಗಳನ್ನು ನಂಬಿ ಕಳೆದ 25 ದಿನಗಳಲ್ಲಿ 81 ಮಂದಿ ಅಮಾಯಕರಿಗೆ ವಿವಿಧೆಡೆಗಳಲ್ಲಿ ಥಳಿಸಲಾಗಿದೆ ಎನ್ನುವುದು ಪೊಲೀಸ್ ಇಲಾಖೆಯ ಮೂಲಕ ಬಹಿರಂಗವಾಗಿದೆ. ತಮಿಳು ನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಕ್ಕಳ ಕಳ್ಳರ ವದಂತಿ ಇತ್ತೀಚೆಗೆ ತೀವ್ರ ಸುದ್ದಿ ಮಾಡಿತ್ತು. ಈ ಕಳ್ಳರಿಗೆ ಹೆದರಿ ಜನರು ಹಗಲು ರಾತ್ರಿ ಆತಂಕದಿಂದ ನಿದ್ದೆಗೆಡಬೇಕಾಯಿತು. ಇದೀಗ ತಮಿಳು ನಾಡು, ಆಂಧ್ರದ ಆತಂಕ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಹರಡಿಕೊಂಡಿದೆ. ನಿಪಾಹ್ ರೋಗಾಣುಗಳಿಗಿಂತಲೂ ವೇಗವಾಗಿ ಈ ರೋಗಾಣು ಜನರ ಮೆದುಳನ್ನು ಪ್ರವೇಶಿಸಿದ ಪರಿಣಾಮವಾಗಿ ಅಮಾಯಕ ಕಾರ್ಮಿಕರು, ಭಿಕ್ಷುಕರ ಮೇಲೆ ಗುಂಪು ಹಲ್ಲೆಗಳು ನಡೆಯಲಾರಂಭಿಸಿವೆ. ಅಂತಿಮವಾಗಿ ಓರ್ವ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು.

   ಗುಂಪಿನಿಂದ ನಡೆಯುವ ಹಲ್ಲೆ, ಕೊಲೆಗಳಿಗೆ ಮೇಲ್ನೋಟಕ್ಕೆ ವದಂತಿಗಳು ಕಾರಣವಾದರೂ ಅದರ ಆಳದಲ್ಲಿ ಜನಾಂಗೀಯ ಅಸಹನೆಗಳಿರುವುದನ್ನು ಗಮನಿಸಬೇಕಾಗಿದೆ. ಉತ್ತರ ಭಾರತದಲ್ಲಿ ಇಂತಹ ಗುಂಪು ಹತ್ಯೆಗಳು ಸಾಮಾನ್ಯವಾಗಿವೆ. ಜಾರ್ಖಂಡ್, ಹರ್ಯಾಣದಂತಹ ಪ್ರದೇಶಗಳಲ್ಲಿ ದಲಿತ ಮಹಿಳೆಯರನ್ನು ‘ಮಾಟಗಾತಿಯರು’ ಎಂಬ ಆರೋಪ ಹೊರಿಸಿ ಸಾಮೂಹಿಕವಾಗಿ ಥಳಿಸಿ ಕೊಂದು ಹಾಕಿರುವ ಹಲವು ಪ್ರಕರಣಗಳು ವರದಿಯಾಗಿವೆ. ಸಾಧಾರಣವಾಗಿ ಒಂಟಿಯಾಗಿರುವ ಮಹಿಳೆಯರ ಆಸ್ತಿಗಳನ್ನು ಕಬಳಿಸುವುಕ್ಕಾಗಿ ದುಷ್ಕರ್ಮಿಗಳು ವದಂತಿಗಳನ್ನು ಹಬ್ಬಿಸಿ ಬಳಿಕ ಗುಂಪಾಗಿ ಸೇರಿ ಅವರನ್ನು ಥಳಿಸಿ ಕೊಂದು ಹಾಕಿದ ಉದಾಹರಣೆಗಳಿವೆ. ಇತ್ತೀಚೆಗೆ ಪಾಲಕ್ಕಾಡ್‌ನಲ್ಲಿ ಆಹಾರ ಕದ್ದನೆಂದು ಅಮಾಯಕನೊಬ್ಬನನ್ನು ದುಷ್ಕರ್ಮಿಗಳು ಕೊಂದು ಹಾಕಿದ ಘಟನೆಯೂ ಜನಾಂಗೀಯ ಮನಸ್ಥಿತಿಗೆ ಹಿಡಿದ ಕನ್ನಡಿಯೇ ಆಗಿದೆ. ಆದಿವಾಸಿ ಸಮುದಾಯಕ್ಕೆ ಸೇರಿರುವ ಈತ ಸಮಾಜದ ಪೂರ್ವಾಗ್ರಹ ಪೀಡಿತ ಮನಸ್ಥಿತಿಯ ಬಲಿಪಶು. ಹರ್ಯಾಣ, ಜಾರ್ಖಂಡ್‌ನಲ್ಲಿ ದನದ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುವ ಹಲ್ಲೆಗಳೂ ಇದಕ್ಕೆ ಭಿನ್ನವಾಗಿಯೇನೂ ಇಲ್ಲ.

ಮುಸ್ಲಿಮನೊಬ್ಬ ದನ ಸಾಗಿಸಿದರೆ ಅದು ಕಸಾಯಿಖಾನೆಗೇ ಇರಬೇಕು ಎಂದು ಯೋಚಿಸುವವರಲ್ಲಿ ದನದ ಮೇಲಿರುವ ಪ್ರೀತಿಗಿಂತ ಮುಸ್ಲಿಮರ ಮೇಲಿರುವ ದ್ವೇಷ ಎದ್ದು ಕಾಣುತ್ತದೆ. ಹರ್ಯಾಣ ಸೇರಿದಂತೆ ವಿವಿಧೆಡೆ ನಡೆದಿರುವ ಹೆಚ್ಚಿನ ಹಲ್ಲೆ, ಥಳಿತಗಳು ದನಗಳ ಮೇಲಿನ ಪ್ರೀತಿಯಿಂದಲ್ಲ, ಮುಸ್ಲಿಮರ ಮೇಲಿನ ದ್ವೇಷದಿಂದ ನಡೆದಿದೆ. ಹಾಗೆ ನೋಡಿದರೆ ಇಂತಹ ಸಣ್ಣ ಪುಟ್ಟ ಗುಂಪು ಹಲ್ಲೆಗಳೇ ವಿಸ್ತರಿಸುತ್ತಾ ಸಿಖ್ ಹತ್ಯಾಕಾಂಡ, ಗುಜರಾತ್ ಹತ್ಯಾಕಾಂಡಗಳಾಗಿ ಪರಿವರ್ತನೆಯಾಗಿವೆ. ಕರ್ನಾಟಕದ ವಿವಿಧೆಡೆ ನಡೆದಿರುವ ಗುಂಪು ಹಲ್ಲೆ ಪ್ರಕರಣಗಳನ್ನೇ ತೆಗೆದುಕೊಳ್ಳೋಣ.

ಹಲ್ಲೆಗೊಳಗಾದವರಲ್ಲಿ ಬಹುತೇಕರು ಅನ್ಯ ಭಾಷೆಯನ್ನಾಡುವ ಜನರು. ಬಿಹಾರ, ರಾಜಸ್ಥಾನ ಮೊದಲಾದ ರಾಜ್ಯಗಳಿಂದ ಕೂಲಿ ಕೆಲಸಗಳಿಗಾಗಿ ನಮ್ಮಲ್ಲಿಗೆ ಬಂದವರು. ವೇಷಭೂಷಣಗಳು ಕಳಪೆಯಾಗಿದ್ದಾಕ್ಷಣ ಆತನನ್ನು ಕಳ್ಳನೆಂದು ನಾವು ಯಾಕೆ ಅನುಮಾನಿಸಬೇಕು? ಇಂದು ದೇಶದ ಕೋಟ್ಯಂತರ ರೂಪಾಯಿಗಳನ್ನು ದೋಚಿ ವಿದೇಶದಲ್ಲಿ ಅಡಗಿಕೊಂಡವರೆಲ್ಲ ಸೂಟುಬೂಟುಗಳನ್ನು ಧರಿಸಿದವರು. ಭೂಗತ ದೊರೆಗಳೊಂದಿಗೆ ನೇರ ಸಂಬಂಧ ಇಟ್ಟುಕೊಂಡವರೂ ದುಬಾರಿ ಧಿರಿಸುಗಳನ್ನೇ ಧರಿಸುತ್ತಾರೆ. ಅಷ್ಟೇ ಏಕೆ, ಮನುಷ್ಯರ ಅಂಗಾಂಗಗಳನ್ನು ದೋಚುವ ದಂಧೆಯ ಹಿಂದಿರುವವರು ಕೂಡ ಸೂಟುಬೂಟು ಧಾರಿಗಳೇ ಆಗಿದ್ದಾರೆ.

ವೈದರೂ ಈ ಮಾಫಿಯಾದ ಜೊತೆಗೆ ಕೈಜೋಡಿಸಿರುತ್ತಾರೆ. ಆದರೆ ಇವರೆಲ್ಲರ ಮೇಲೆ ಇಲ್ಲದ ಆಕ್ರೋಶ ಒಬ್ಬ ಸಾಮಾನ್ಯ ಕಾರ್ಮಿಕನ ಮೇಲೆ ಯಾಕೆ ಸಾರ್ವಜನಿಕರು ಪ್ರದರ್ಶಿಸುತ್ತಾರೆ? ಒಬ್ಬ ಬಡವ ಮಕ್ಕಳನ್ನು ಮಾತನಾಡಿಸಿದಾಕ್ಷಣ ಆತನನ್ನು ಮಕ್ಕಳ ಕಳ್ಳನೆಂದು ತೀರ್ಪುಕೊಡುವ ನಾವು, ಒಬ್ಬ ನಿಜವಾದ ಕಳ್ಳ ಸೂಟುಬೂಟು ಧರಿಸಿ ಬಂದು ಮಕ್ಕಳನ್ನು ಮಾತನಾಡಿಸಿದರೆ ಅದೇ ರೀತಿ ವರ್ತಿಸುತ್ತೇವೆಯೆ? ಇಂದು ಉತ್ತರ ಕರ್ನಾಟಕದಿಂದ ಬೆಂಗಳೂರು, ಮಂಗಳೂರು ನಗರಗಳಿಗೆ ಆಗಮಿಸುವ ಕೂಲಿ ಕಾರ್ಮಿಕರ ಕುರಿತಂತೆಯೂ ಇಂತಹದೇ ಜನಾಂಗೀಯ ಅಸಹನೆಗಳು ಬೇರೆ ಬೇರೆ ರೂಗಳಲ್ಲಿ ಪ್ರಕಟವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಬಸ್ಸುಗಳಲ್ಲಿ ನಿರ್ವಾಹಕರು ಇವರೊಂದಿಗೆ ವರ್ತಿಸುವ ರೀತಿ, ಏಕವಚನದ ಬಳಕೆ, ಸಾರ್ವಜನಿಕವಾಗಿ ನಿಂದನೆ ಇವೆಲ್ಲವುಗಳೂ ಜನಾಂಗೀಯ ದ್ವೇಷದ ಬೇರೆ ಬೇರೆ ಮುಖಗಳೇ ಆಗಿವೆ. ಆದುದರಿಂದ ಇತ್ತೀಚೆಗೆ ನಡೆದಿರುವ ಹಲ್ಲೆಗಳಲ್ಲಿ ‘ಮಕ್ಕಳ ಕಳ್ಳರು’ ಎಂಬ ಭಯ ನೆಪ ಮಾತ್ರ. ಈ ಕಾರಣದಿಂದ ಗುಂಪಿನಲ್ಲಿ ಸೇರಿಕೊಂಡು ಒಬ್ಬ ಕಾರ್ಮಿಕನನ್ನು ಬರ್ಬರವಾಗಿ ಹತ್ಯೆ ಮಾಡಿದರೆ ಕಾನೂನಿಂದ ಪಾರಾಗಬಹುದು ಎಂದು ನಂಬಿ ದುಷ್ಕೃತ್ಯಗಳನ್ನು ಎಸಗುವವರನ್ನು ಗುರುತಿಸಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಕಾನೂನು ವ್ಯವಸ್ಥೆ ನೋಡಿಕೊಳ್ಳಬೇಕಾಗಿದೆ. ಒಂದು ವೇಳೆ ಸತ್ತವನು ಮಕ್ಕಳ ಕಳ್ಳನೇ ಆಗಿದ್ದರೂ ಆತನನ್ನು ಬಹಿರಂಗ ಕೊಂದುಹಾಕುವ ಅಧಿಕಾರ ಯಾರಿಗೂ ಇಲ್ಲ. ಸಾಮೂಹಿಕವಾಗಿ ಒಬ್ಬನನ್ನು ಕೊಂದಾಕ್ಷಣ ಕೊಲೆಗಾರ ಪಾರಾಗಬಹುದು ಎನ್ನುವ ನಂಬಿಕೆಯನ್ನು ಹುಸಿ ಮಾಡಿ, ಇಂಥವರಿಗೆ ಕನಿಷ್ಠ ಜೀವಾವಧಿ ಶಿಕ್ಷೆಯಾದರೂ ದೊರಕುವಂತೆ ಮಾಡಬೇಕು. ಆಗಷ್ಟೇ ನಾಗರಿಕ ವೇಷದಲ್ಲಿರುವ ವೇಷದಲ್ಲಿರುವ ಈ ಅಸಲಿ ಕೊಲೆಗಾರರಿಗೆ ಕಡಿವಾಣವನ್ನು ಹಾಕಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News