ಸೀತಾಫಲದ ಅದ್ಭುತ ಆರೋಗ್ಯ ಲಾಭಗಳು

Update: 2018-05-26 10:53 GMT

ಹಣ್ಣುಗಳು ಆರೋಗ್ಯಕರವಾಗಿದ್ದು,ಸ್ವಾದಿಷ್ಟವೂ ಆಗಿವೆ. ಪ್ರತಿಯೊಬ್ಬರೂ ಹಣ್ಣುಗಳನ್ನು ತಿನ್ನುವುದು ಅಗತ್ಯ. ಪ್ರತಿಯೊಂದೂ ಹಣ್ಣು ತನಗೇ ವಿಶಿಷ್ಟವಾದ ಪೋಷಕಾಂಶಗಳನ್ನು ಹೊಂದಿರಬಹುದಾದ್ದರಿಂದ ಎಲ್ಲ ಬಗೆಯ ಹಣ್ಣುಗಳನ್ನೂ ತಿನ್ನುವುದು ಮುಖ್ಯವಾಗಿದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಹಿರಿಯರು ಈ ಹಣ್ಣು ಉಷ್ಣ,ಆ ಹಣ್ಣು ಶೀತ ಎನ್ನುತ್ತ ಕೆಲವು ಹಣ್ಣುಗಳನ್ನು ತಿನ್ನಲು,ವಿಶೇಷವಾಗಿ ಮಕ್ಕಳಿಗೆ ಅನುಮತಿ ನೀಡುವುದಿಲ್ಲ. ಮಾವು ಮತ್ತು ಪಪ್ಪಾಯದಂತಹ ಉಷ್ಣವಲಯದ ಹಣ್ಣುಗಳು ಶರೀರದಲ್ಲಿ ಉಷ್ಣತೆಯನ್ನುಂಟು ಮಾಡುತ್ತವೆ. ಬಾಳೇಹಣ್ಣು ಮತ್ತು ಸೀತಾಫಲದಂತಹ ಇತರ ಕೆಲವು ಹಣ್ಣುಗಳು ಅದನ್ನು ಹೆಚ್ಚಿಸುತ್ತವೆ.

 ಆಯುರ್ವೇದದಲ್ಲಿ ಹೆಚ್ಚಿನೆಲ್ಲ ಹಣ್ಣುಗಳನ್ನು ಉಷ್ಣ ಮತ್ತು ತಂಪು ಎಂದು ವರ್ಗೀಕರಿಸಲಾಗಿದೆ. ಇದು ಹಣ್ಣುಗಳು ನಮ್ಮ ಶರೀರದಲ್ಲಿ ಬೀರುವ ಪರಿಣಾಮಗಳನ್ನು ಆಧರಿಸಿದೆ. ಕೆಲವು ಹಣ್ಣುಗಳು ಶರೀರದ ಉಷ್ಣತೆಯನ್ನು ಹೆಚ್ಚಿಸಿದರೆ ಕೆಲವು ಹಣ್ಣುಗಳು ಅದನ್ನು ತಗ್ಗಿಸುತ್ತವೆ.

ಸೀತಾಫಲ ಶೀತಕಾರಕವೇ...?

ತೊಗಟೆಯಂತಹ ಮೃದುವಾದ ಸಿಪ್ಪೆಯಿರುವ ಸೀತಾಫಲ ಬೀಜಗಳಿಂದ ತುಂಬಿದ ರುಚಿಕರವಾದ ತಿರುಳನ್ನು ಹೊಂದಿದೆ. ಈ ಹಣ್ಣಿನ ಸವಿಯನ್ನು ಇಷ್ಟಪಡದವರಿಲ್ಲ.

ಸೀತಾಫಲವು ತಂಪು ವರ್ಗಕ್ಕೆ ಸೇರಿದ ಹಣ್ಣಾಗಿದ್ದು,ಶರೀರದ ಆಂತರಿಕ ತಾಪಮಾನವನ್ನು ತಗ್ಗಿಸುತ್ತದೆ.ಇದೇ ಕಾರಣದಿಂದ ಅದು ಶೀತದೊಂದಿಗೆ ಗುರುತಿಸಿಕೊಂಡಿದೆ.

ಆದರೆ ವಾಸ್ತವದಲ್ಲಿ ಸೀತಾಫಲವು ಶೀತಕ್ಕೆ ಕಾರಣವಾಗುವುದಿಲ್ಲ. ಸಾಮಾನ್ಯ ಶೀತವು ವೈರಾಣುಗಳಿಂದ ಉಂಟಾಗುತ್ತದೆಯೇ ಹೊರತು ಸೀತಾಫಲವನ್ನು ತಿನ್ನುವುದರಿಂದ ಅಲ್ಲ. ಸೀತಾಫಲವನ್ನು ತಿನ್ನುವುದರಿಂದ ಶೀತವುಂಟಾಗುತ್ತದೆ ಎನ್ನುವುದು ಕೇವಲ ಮಿಥ್ಯೆಯಾಗಿದೆ. ತಂಪು ವರ್ಗಕ್ಕೆ ಸೇರಿದ ಹಣ್ಣುಗಳು ಶರೀರದ ತಾಪಮಾನವನ್ನು ತಗ್ಗಿಸುತ್ತವೆ ಎನ್ನುವುದು ನಿಜವಾದರೂ ಒಂದೇ ಬಾರಿಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಮಾತ್ರ ತೊಂದರೆಯನ್ನುಂಟು ಮಾಡಬಹುದು,ಆದರೆ ಅಷ್ಟೊಂದು ಹಣ್ಣುಗಳನ್ನು ತಿನ್ನುವುದು ಸಾಮಾನ್ಯ ಮಾನವರಿಗೆ ಖಂಡಿತ ಸಾಧ್ಯವಿಲ್ಲ.

ಒಂದೇ ಬಾರಿಗೆ ಅತಿಯಾದ ಪ್ರಮಾಣದಲ್ಲಿ ಸೀತಾಫಲಗಳನ್ನು ತಿಂದರೆ ಶರೀರದ ಉಷ್ಣತೆಯು ಅಪಾಯಕಾರಿ ಮಟ್ಟಕ್ಕೆ ಇಳಿಯಬಹುದು. ಇದರಿಂದಾಗಿ ಶರೀರದ ರೋಗ ನಿರೋಧಕ ಶಕ್ತಿಯು ದುರ್ಬಲಗೊಳ್ಳುತ್ತದೆ ಮತ್ತು ಸಾಮಾನ್ಯ ಶೀತದಂತಹ ಸೋಂಕಿಗೆ ಗುರಿಯಾಗುವಂತೆ ಮಾಡುತ್ತದೆ.

ಸೀತಾಫಲವು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ.

►ಅದು ಕ್ಯಾನ್ಸರ್ ನಿರೋಧಕ

ಸೀತಾಫಲವು ಕ್ಯಾನ್ಸರ್ ನಿರೋಧಕ ಗುಣಗಳನ್ನು ಹೊಂದಿದೆ ಎಂದು ಸಂಶೋಧನೆಗಳು ತೋರಿಸಿವೆ. ಅದರಲ್ಲಿರುವ ಎಸಿಟೊಜೆನಿನ್ ಮತ್ತು ಅಲ್ಕಲಾಯ್ಡಾಗಳಂತಹ ಸಂಯುಕ್ತಗಳು ಕ್ಯಾನ್ಸರ್‌ಕಾರಕ ಜೀವಕೋಶಗಳ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತವೆ.

►ಸಮೃದ್ಧ ಕಬ್ಬಿಣವನ್ನು ಹೊಂದಿದೆ

ಸೀತಾಫಲವು ಕಬ್ಬಿಣವನ್ನು ಸಮೃದ್ಧವಾಗಿ ಹೊಂದಿರುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳು ಈ ಹಣ್ಣನ್ನು ತಿನ್ನುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಅದು ಹೆಮೊಗ್ಲೋಬಿನ್‌ನ್ನು ಸಾಗಿಸುವ ರಕ್ತದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆಯಲ್ಲದೆ,ದಣಿವನ್ನೂ ದೂರ ಮಾಡುತ್ತದೆ.

►ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು

ಸೀತಾಫಲವು ವಿಟಾಮಿನ್ ಬಿ ಕಾಂಪ್ಲೆಕ್ಸ್‌ನ್ನು ಒಳಗೊಂಡಿದ್ದು,ಅದು ಮಿದುಳಿನಲ್ಲಿಯ ಒತ್ತಡದ ಮಟ್ಟವನ್ನು ನಿಯಂತ್ರಿಸುತ್ತದೆ. ಅದು ಪಾರ್ಕಿನ್ಸನ್ಸ್ ಕಾಯಿಲೆಯಿಂದಲೂ ರಕ್ಷಣೆ ನೀಡುತ್ತದೆ.

►ಜೀರ್ಣವ್ಯವಸ್ಥೆಗೆ ಸಹಕಾರಿ

ಸೀತಾಫಲದಲ್ಲಿರುವ ನಾರು ಶರೀರದಲ್ಲಿನ ನಂಜುಗಳನ್ನು ಸುಲಭವಾಗಿ ನಿವಾರಿಸಲು ನೆರವಾಗುತ್ತದೆ. ಅದು ಆಮ್ಲೀಯತೆ ಮತ್ತು ಜಠರದುರಿತದಂತಹ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳನ್ನೂ ದೂರವಿಡುತ್ತದೆ.

►ತೂಕ ಹೆಚ್ಚಿಸಿಕೊಳ್ಳಲು ಒಳ್ಳೆಯದು

ಸೀತಾಫಲದಲ್ಲಿ ಹೆಚ್ಚಿನ ಕ್ಯಾಲರಿಗಳಿರುವುದರಿಂದ ಶರೀರದ ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸುವವರಿಗೆ ತಿನ್ನಲು ಸೂಕ್ತ ಹಣ್ಣಾಗಿದೆ. ಅದು ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುವ ಜೊತೆಗೆ ಹೆಚ್ಚಿನ ಹಸಿವನ್ನುಂಟು ಮಾಡುತ್ತದೆ.

►ಚರ್ಮಕ್ಕೆ ಹೊಳಪು ನೀಡುತ್ತದೆ

ಸೀತಾಫಲದ ನಿಯಮಿತ ಸೇವನೆಯು ಕೊಲಾಜೆನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಇದು ಚರ್ಮವು ತನ್ನ ಸ್ಥಿತಿಸ್ಥಾಪಕ ಗುಣವನ್ನು ಉಳಿಸಿಕೊಳ್ಳಲು ನೆರವಾಗುವ ಜೊತೆಗೆ ಹೊಳಪನ್ನು ನೀಡುತ್ತದೆ ಮತ್ತು ವಯಸ್ಸಾದ ಲಕ್ಷಣಗಳನ್ನು ದೂರವಿಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News