ಲಿಬಿಯ: ಮಾನವಕಳ್ಳಸಾಗಣೆದಾರರಿಂದ ಹತ್ಯಾಕಾಂಡ

Update: 2018-05-26 17:14 GMT

ನ್ಯೂಯಾರ್ಕ್, ಮೇ 26: ವಾಯುವ್ಯ ಲಿಬಿಯದಲ್ಲಿ ತಮ್ಮನ್ನು ಕೂಡಿಹಾಕಿದ್ದ ರಹಸ್ಯ ಬಂಧೀಖಾನೆಯಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ 40ಕ್ಕೂ ಅಧಿಕ ವಲಸಿಗರು ಹಾಗೂ ನಿರಾಶ್ರಿತರನ್ನು ಮಾನವಕಳ್ಳಸಾಗಣೆದಾರರು ಗುಂಡಿಕ್ಕಿ ಹತ್ಯೆಗೈದಿದ್ದಾರೆಂದು ‘ಮೆಡಿಸಿನ್ಸ್ ಸ್ಯಾನ್ಸ್ ಫ್ರಂಟಿಯರ್’ ಸಂಘಟನೆ ತಿಳಿಸಿದೆ.

 ಲಿಬಿಯದ ಬಾನಿ ವಾಲಿದ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ರಹಸ್ಯ ಕಾರಾಗೃಹದಿಂದ ಪರಾರಿಯಾಗುತ್ತಿದ್ದ ಹಲವಾರು ಮಂದಿಯನ್ನು ಭದ್ರತಾಪಡೆಗಳು, ಆಸ್ಪತ್ರೆ ಹಾಗೂ ಪೌರಾಡಳಿತ ಉದ್ಯೋಗಿಗಳು ರಕ್ಷಿಸಲು ಯತ್ನಿಸಿದರಾದರೂ, ಅವರನ್ನು ಬಂಧನದಲ್ಲಿಟ್ಟಿದ್ದ ಮಾನವಕಳ್ಳಸಾಗಣೆದಾರರು ಬೆನ್ನಟ್ಟಿ ಗುಂಡಿಕ್ಕಿ ಹತ್ಯೆಗೈದಿದ್ದಾರೆಂದು ಎಂಎಸ್‌ಎಫ್ ಹೇಳಿದೆ.

  ಬುಧವಾರ ರಾತ್ರಿ ಈ ಹತ್ಯಾಕಾಂಡ ನಡೆದಿದ್ದು, ಘಟನೆಯಲ್ಲಿ ಸುಮಾರು 15ರಿಂದ 40ರಷ್ಟು ಮಂದಿ ಹತ್ಯೆಯಾಗಿದ್ದಾರೆ ಹಾಗೂ ಅವರಲ್ಲಿ ಬಹುತೇಕ ಮಂದಿ ಮಹಿಳೆಯರೆಂದು ಅದು ಹೇಳಿದೆ.

 ಮಾನವಕಳ್ಳಸಾಗಣೆದಾರರ ಗುಂಡೇಟಿನಿಂದ ಗಾಯಗೊಂಡ 25 ಮಂದಿ ಗಾಯಾಳುಗಳಿಗೆ ಬಾನಿವಾಲಿದ್ ಸರಕಾರಿ ಆಸ್ಪತ್ರೆಯಲ್ಲಿ ಎಂಎಸ್‌ಎಫ್ ಸಿಬ್ಬಂದಿ ಚಿಕಿತ್ಸೆ ನೀಡಲು ನೆರವಾಗುತ್ತಿದ್ದಾರೆ. ಗಾಯಾಳುಗಳಲ್ಲಿ ಏಳುಮಂದಿಗೆ ಗಂಭೀರವಾದ ಗುಂಡೇಟಿನ ಗಾಯಗಳಾಗಿವೆ ಹಾಗೂ ದೇಹದ ಹಲವೆಡೆಗೆ ಮೂಳೆಗಳಿಗೆ ಪೆಟ್ಟಾಗಿದೆಯೆಂದು ಎಂಎಸ್‌ಎಫ್ ಹೇಳಿಕೆಯಲಿ ತಿಳಿಸಿದೆ.

ಮಾನವಕಳ್ಳಸಾಗಣೆದಾರರ ಬಲೆಯಿಂದ ತಪ್ಪಿಸಿಕೊಎಂಡವಲ್ಲಿ ಬಹುತೇಕ ಮಂದಿ ಎರಿತ್ರಿಯಾ,ಇತಿಯೋಪಿಯಾ ಹಾಗೂ ಸೋಮಾಲಿಯಾ ದೇಶಗಳಿಗೆ ಸೇರಿದ ಹದಿಹರೆಯದ ವಯಸ್ಸಿನವರೆಂದು ತಿಳಿದುಬಂದಿದೆ.

ತಮ್ಮನ್ನು ಸುಮಾರು ಮೂರು ವರ್ಷಗಳಿಂದ ಬಂಧನದಲ್ಲಿಡಲಾಗಿತ್ತೆಂದು ಗುಂಡೇಟಿನಿಂದ ಪಾರಾದ ಹಲವರು ನಿರಾಶ್ರಿತರು ಎಂಎಸ್‌ಎಫ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News