ಭಾರತದ ನಿವೃತ್ತ ಗುಪ್ತಚರ ಅಧಿಕಾರಿ ಜೊತೆ ಪುಸ್ತಕ ಬರೆದ ಮಾಜಿ ಐಎಸ್‌ಐ ವರಿಷ್ಠನಿಗೆ ಪಾಕ್ ಸೇನೆ ಸಮನ್ಸ್

Update: 2018-05-26 17:19 GMT

ಇಸ್ಲಾಮಾಬಾದ್,ಮೇ 26: ಭಾರತದ ಬೇಹುಗಾರಿಕಾ ಸಂಸ್ಥೆ ‘ರಾ’ದ ಮಾಜಿ ಅಧಿಕಾರಿಯೊಬ್ಬರ ಬರೆದ ವಿವಾದಾತ್ಮಕ ಪುಸ್ತಕಕ್ಕೆ ಸಹಲೇಖಕರಾಗಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಮಾಜಿ ವರಿಷ್ಠ(ನಿವೃತ್ತಿ) ಅಸಾದ್ ದುರಾನಿಯವರಿಗೆ ಪಾಕಿಸ್ತಾನ ಸೇನೆಯು ಶನಿವಾರ ಸಮನ್ಸ್ ಜಾರಿಗೊಳಿಸಿದೆ.

  ‘ಸ್ಪೈ ಕ್ರೊನಿಕಲ್ಸ್’ ಕೃತಿಯಲ್ಲಿ ತಾವು ವ್ಯಕ್ತಪಡಿಸಿದ ಅನಿಸಿಕೆಗಳ ಕುರಿತು ತಮ್ಮ ನಿಲುವನ್ನು ವಿವರಿಸುವಂತೆ ಅಸ್ಸಾದ್ ದುರಾನಿಯವರಿಗೆ ಸೂಚನೆ ನೀಡಲಾಗಿದೆ. ಕೃತಿಯಲ್ಲಿ ಅಸ್ಸಾದ್ ಅವರ ಅನಿಸಿಕೆಗಳನ್ನು ಸೇವೆಯಲ್ಲಿರುವ ಹಾಗೂ ನಿವೃತ್ತಿ ಹೊಂದಿರುವ ಎಲ್ಲಾ ಸೇನಾ ಸಿಬ್ಬಂದಿಗೆ ಅನ್ವಯವಾಗುವಂತಹ ಸೇನಾ ನೀತಿ ಸಂಹಿತೆಯ ಉಲ್ಲಂಘನೆಯೆಂದು ಪರಿಗಣಿಸಲಾಗುವುದು’’ ಎಂದು ಡಿಜಿ ಐಎಸ್‌ಪಿಆರ್ ಮೇಜರ್ ಜನರಲ್ ಆಸೀಫ್ ಗಫೂರ್ ಟ್ವೀಟ್ ಮಾಡಿರುವುದನ್ನು ಉಲ್ಲೇಖಿಸಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

 ಭಾರತದ ಬೇಹುಗಾರಿಕಾ ಸಂಸ್ಥೆ ‘ರಾ’ ದ ವರಿಷ್ಠ ಅಮರ್‌ಜಿತ್ ಸಿಂಗ್ ದುಲತ್ ಹಾಗೂ ಭಾರತೀಯ ಪತ್ರಕರ್ತ ಆದಿತ್ಯ ಸಿನ್ಹಾ ಜೊತೆಗೂಡಿ ಬರೆದಿದ್ದ ‘ದಿ ಸ್ಪೈ ಕ್ರಾನಿಕಲ್ಸ್: ರಾ, ಐಎಸ್‌ಐ ಆ್ಯಂಡ್ ದಿ ಇಲ್ಯೂಶನ್ ಆಫ್ ಪೀಸ್’ ಕೃತಿಗೆ ದುರಾನಿಯವರು ಸಹಲೇಖಕರಾಗಿದ್ದರು.

  ದುರಾನಿಯವರು ಈ ಕೃತಿಯಲ್ಲಿ ಆಗಿನ ಪಾಕ್ ಪ್ರಧಾನಿ ಯೂಸುಫ್ ರಾಝಾ ಗಿಲಾನಿ ಅವರಿಗೆ ಅಬೊಟಾಬಾದ್‌ನಲ್ಲಿ ಉಸಮಾಬಿನ್ ಲಾದೆನ್‌ನ ಅಡಗುದಾಣದ ಮೇಲೆ ಅಮೆರಿಕದ ನೇವಿ ಸೀಲ್ಸ್ ಪಡೆಗಳು ನಡೆಸಿದ ಕಾರ್ಯಾಚರಣೆಯ ಸಂಪೂರ್ಣ ಅರಿವಿತ್ತು ಹಾಗೂ ಈ ವಿಷಯವಾಗಿ ಮೊದಲೇ ಅಮೆರಿಕ ಹಾಗೂ ಪಾಕಿಸ್ತಾನದ ಸರಕಾರಗಳ ನಡುವೆ ವಿಶೇಷವಾದ ಡೀಲ್ ಕೂಡಾ ಏರ್ಪಟ್ಟಿತ್ತು ಎಂದು ದುರಾನಿ ಅಭಿಪ್ರಾಯಿಸಿದರು.

  ಬೇಹುಗಾರಿಕೆಯ ಆರೋಪದಲ್ಲಿ ಪಾಕ್‌ನಲ್ಲಿ ಬಂಧಿತರಾಗಿರುವ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣವನ್ನು ಪಾಕಿಸ್ತಾನವು ತಪ್ಪಾಗಿ ನಿಭಾಯಿಸಿದೆ ಎಂದು ದುರಾನಿ ಈ ಕೃತಿಯಲ್ಲಿ ಪ್ರತಿಪಾದಿಸಿದ್ದರು.

 ಈ ಮಧ್ಯೆ ಮಾಜಿ ಬೇಹುಗಾರಿಕಾ ವರಿಷ್ಠ ದುರ್ರಾನಿಯವರಿಗೆ ಸಮನ್ಸ್ ಕಳುಹಿಸಿರುವ ತನ್ನ ಕ್ರಮವನ್ನು ಸೇನೆಯು ಸಮರ್ಥಿಸಿದ್ದು, ಯಾರೂ ಕೂಡಾ ಕಾನೂನಿಗಿಂತ ಮೇಲಲ್ಲವೆಂದು ಹೇಳಿದೆ.

‘ರಾ’ದ ಮಾಜಿ ವರಿಷ್ಠರೊಂದಿಗೆ ಸೇರಿಕೊಂಡು ಪಾಕ್‌ಸೇನೆಯ ನಿವೃತ್ತ ಜನರಲ್ ಒಬ್ಬರು ಹೇಗೆ ಪುಸ್ತಕ ರಚಿಸಲು ಸಾಧ್ಯವಾಯಿತೆಂದು ಪಾಕ್‌ನ ಕೆಲವು ರಾಜಕಾರಣಿಗಳು ಸೇರಿದಂತೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ದುರಾನಿಯವರಿಗೆ ಪಾಕ್ ಸೇನೆ ಸಮನ್ಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News