ಬಾಲಾಪರಾಧಿಗಳ ಜೈಲಿನಲ್ಲಿ ದೊಂಬಿ: 9 ಬಾಲ ಕೈದಿಗಳ ಜೀವಂತ ದಹನ

Update: 2018-05-26 17:27 GMT
ಸಾಂದರ್ಭಿಕ ಚಿತ್ರ

ರಿಯೊ ಡಿ ಜನೈರೊ,ಮೇ 26: ಬ್ರೆಝಿಲ್‌ನ ಬಾಲಾಪರಾಧಿಗಳ ಕಾರಾಗೃಹವೊಂದರಲ್ಲಿ, ಕೆಲವು ಬಂಧಿತರು ಹಾಸುಕಂಬಳಿಗೆ ಬೆಂಕಿ ಹಚ್ಚಿದ್ದರಿಂದ ಭಾರೀ ಬೆಂಕಿಅನಾಹುತವುಂಟಾಗಿ, ಕನಿಷ್ಠ 9 ಮಂದಿ ಬಾಲಕೈದಿಗಳು ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

 ಗೊಯಿಯಾನಿಯಾ ನಗರದಲ್ಲಿರುವ ಈ ಕಾರಾಗೃಹದಲ್ಲಿ 13ರಿಂದ 17 ವರ್ಷ ವಯೋಮಾನದೊಳಗಿನ ಬಾಲಾಪರಾಧಿಗಳನ್ನು ಇರಿಸಲಾಗುತ್ತಿತ್ತು. ಕೆಲವು ಬಂಧಿತರನ್ನು ಒಂದು ಸೆಲ್‌ನಿಂದ ಇನ್ನೊಂದು ಸೆಲ್‌ಗೆ ಕೊಂಡೊಯ್ಯಲು ಯತ್ನಿಸಿದಾಗ ಜೈಲಿನಲ್ಲಿ ಗಲಭೆ ಸ್ಫೋಟಿಸಿತ್ತು ಎಂದು ಗೊಯಿಯಾಸ್ ರಾಜ್ಯದ ಮಾನವಹಕ್ಕುಗಳ ಆಯೋಗದ ನ್ಯಾಯವಾದಿ ಗಿಲ್ಲೆಸ್ ಸೆಬಾಸ್ಟಿಯನ್ ಗೋಮ್ಸ್ ಹೇಳಿದ್ದಾರೆ.

   ಈ ಜೈಲಿನ ಸಾಮರ್ಥ್ಯ ಕೇವಲ 50 ಮಂದಿ ಕೈದಿಗಳಾದರೂ, ಅಲ್ಲಿ 80-90ಷ್ಟು ಕೈದಿಗಳನ್ನು ಇರಿಸಲಾಗಿತ್ತೆಂದು ಗೋಮ್ಸ್ ಆಪಾದಿಸಿದ್ದಾರೆ. ಜೈಲಿನ ಕೊಠಡಿಗಳು ಸಣ್ಣದಾಗಿವೆ ಹಾಗೂ ಕೈದಿಗಳಿಂದ ತುಂಬಿತುಳುಕುತ್ತಿವೆ ಹಾಗೂ ಅಲ್ಲಿ ಗಣನೀಯವಾಗಿ ಸಿಬ್ಬಂದಿಯ ಕೊರತೆಯಿದೆ ಎಂದವರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ತನಿಖೆ ನಡೆಸಲಾಗುವುದು ಹಾಗೂ ಸಂತ್ರಸ್ತ ಕುಟುಂಬಗಳಿಗೆ ನೆರವು ಒದಗಿಸಲಾಗುವುದೆಂದು ಗೊಯಿಯಾಸ್ ರಾಜ್ಯ ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News