ತೂತುಕುಡಿ ಘಟನೆ: ಬ್ರಿಟನ್‌ನಲ್ಲಿ ವೇದಾಂತ ವಿರುದ್ಧ ಭುಗಿಲೆದ್ದ ಆಕ್ರೋಶ

Update: 2018-05-26 17:32 GMT

ಲಂಡನ್, ಮೇ 26: ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರಲೋಹ ಮಿಶ್ರಣ ಘಟಕದ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯ ವೇಳೆ ಪೊಲೀಸರ ಗೋಲಿಬಾರ್‌ಗೆ 13 ಮಂದಿ ನಾಗರಿಕರು ಮೃತಪಟ್ಟಿರುವ ಘಟನೆಯ ಹಿನ್ನೆಲೆಯಲ್ಲಿ, ಮಾಲಕ ಕಂಪೆನಿಯಾದ ವೇದಾಂತವನ್ನು ಲಂಡನ್ ಶೇರು ವಿನಿಮಯ ಕೇಂದ್ರದಿಂದ ಕೈಬಿಡಬೇಕೆಂದು ಬ್ರಿಟನ್‌ನ ಪ್ರಮುಖ ಪ್ರತಿಪಕ್ಷವಾದ ಲೇಬರ್ ಪಾರ್ಟಿಯು ಶನಿವಾರ ಕರೆ ನೀಡಿದೆ.ಲೇಬರ್ ಪಕ್ಷದ ಚಾನ್ಸಲರ್ ಆಗಿರುವ ಜಾನ್ ಮ್ಯಾಕ್‌ಡೊನೊಲ್ ಶನಿವಾರ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಹಲವು ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಪುಂಡು ಕಂಪೆನಿಯಾದ  ‘ವೇದಾಂತ’ವನ್ನು ಲಂಡನ್ ಶೇರು ಮಾರುಕಟ್ಟೆಯಿಂದ ಕೈಬಿಟ್ಟಲ್ಲಿ ಲಂಡನ್‌ನ ವಿತ್ತ ಮಾರುಕಟ್ಟೆಯ ವರ್ಚಸ್ಸಿಗೆ ಹಾನಿಉಂಟಾಗುವುದನ್ನು ತಡೆಯಲಿದೆಯೆಂದು ಹೇಳಿದ್ದಾರೆ.

  ಈ ವಾರ ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ಹತ್ಯಾಕಾಂಡದ ಬಳಿಕ ಶೇರು ಮಾರುಕಟ್ಟೆ ನಿಯಂತ್ರಕರು ಕ್ರಮ ಕೈಗೊಳ್ಳಬೇಕಾಗಿದೆ ಎಂದವರು ಹೇಳಿದ್ದಾರೆ.

 ಬಹುರಾಷ್ಟ್ರೀಯ ವೇದಾಂತ ಕಂಪೆನಿಯು ನಡೆಸುತ್ತಿರುವ ತಾಮ್ರ ಮಿಶ್ರಣ ಘಟಕವು ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದು, ಅದನ್ನು ಮುಚ್ಚುಗಡೆಗೊಳಿಸಬೇಕೆಂದು ಆಗ್ರಹಿಸಿ ಮಂಗಳವಾರ ತೂತುಕುಡಿಯಲ್ಲಿ ನಡೆದ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದಾಗ, ಪೊಲೀಸರು ನಡೆಸಿದ ಗೋಲಿಬಾರ್‌ಗೆ 13 ಮಂದಿ ಬಲಿಯಾಗಿದ್ದರು.

   ‘‘ ವೇದಾಂತ ಕಂಪೆನಿಯನ್ನು ವಿರೋಧಿಸಿದ 13 ಮಂದಿ ಪ್ರತಿಭಟನಕಾರರ ಹತ್ಯೆಯ ಸುದ್ದಿಯು ಆಘಾತಕಾರಿಯಾಗಿದೆ ಹಾಗೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಬಹುರಾಷ್ಟ್ರೀಯ ಕಂಪೆನಿಯಾದ ವೇದಾಂತವು ಹಲವಾರು ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆಯನ್ನು ನಡೆಸುತ್ತಾ ಬಂದಿದೆ. ಪರಿಸರಕ್ಕೆ ಮಾಲಿನ್ಯವನ್ನು ಸುರಿಯುತ್ತಿರುವ ಈ ಸಂಸ್ಥೆಯು, ಬಲವಂತವಾಗಿ ಜನರನ್ನು ಹೊರದಬ್ಬುತ್ತಿದೆ’’ ಎಂದು ಜಾನ್ ಮ್ಯಾಕ್ ಡೊನೆಲ್ ಆರೋಪಿಸಿದ್ದಾರೆ.

   ಈ ಮಧ್ಯೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಸೇರಿದಂತೆ ಹಲವಾರು ಮಾನವಹಕ್ಕು ಸಂಘಟನೆಗಳು ವೇದಾಂತದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ. ಭಾರತ, ಜಿಂಬಾಬ್ವೆ ಹಾಗೂ ಜಗತ್ತಿನ ವಿವಿಧೆಡೆ ವೇದಾಂತ ಕಂಪೆನಿಯು ಮಾನವಹಕ್ಕುಗಳ ಸರಣಿ ಉಲ್ಲಂಘನೆ ಮಾಡುತ್ತಿದೆ ಹಾಗೂ ಪರಿಸರದ ಮೇಲೆ ದೌರ್ಜನ್ಯವೆಸಗುತ್ತಿದೆಯೆಂದು ಆರೋಪಿಸಿದೆ.

ಭಾರತೀಯ ಹೈಕಮೀಶನ್ ಕಚೇರಿ ಮುಂದೆ ಪ್ರತಿಭಟನೆ

ತೂತುಕುಡಿಯಲ್ಲಿ ನಡೆದ ಗೋಲಿಬಾರ್ ಘಟನೆಯನ್ನು ಖಂಡಿಸಿ, ಶನಿವಾರ ಮಧ್ಯಾಹ್ನ ಲಂಡನ್‌ನಲ್ಲಿರುವ ಭಾರತೀಯ ಹೈಕಮೀಶನ್ ಕಚೇರಿಯ ಮುಂದೆ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಫಾಯಿಲ್ ವೇದಾಂತ, ಬ್ರಿಟನ್‌ನಲ್ಲಿರುವ ತಮಿಳು ಜನತೆ, ಪೆರಿಯಾರ್ ಅಂಬೇಡ್ಕರ್ ಸ್ಟಡಿ ಸರ್ಕಲ್, ದಕ್ಷಿಣ ಏಶ್ಯ ಏಕತಾ ಸಮೂಹ, ತಮಿಳು ಸಾಲಿಡಾರಿಟಿ, ಪಾರಾಯಿ ವಾಯ್ಸ್ ಆಫ್ ಫ್ರೀಡಂ ಹಾಗೂ ವೀರ ತಮಿಳರ್ ಮುನ್ನನಿ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದೊಂದು ಕಾರ್ಪೊರೇಟ್ ಹತ್ಯಾಕಾಂಡವೆಂದು ಬಣ್ಣಿಸಿದ ಪ್ರತಿಭಟನಕಾರರು, ತಮಿಳುನಾಡು ಸರಕಾರವು ವೇದಾಂತದ ಜೊತೆ ಶಾಮೀಲಾಗಿದೆಯೆಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News