ಪಟೇಲರ ಮೀಸಲಾತಿ ಹೋರಾಟಕ್ಕೆ ಮರುಜೀವ

Update: 2018-05-27 04:16 GMT

ಗಾಂಧಿ ನಗರ, ಮೇ 27: ಸರ್ಕಾರಿ ಉದ್ಯೋಗ ಮತ್ತು ಕಾಲೇಜು ಪ್ರವೇಶದಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನಡೆದ ಹಿಂಸಾತ್ಮಕ ಹೋರಾಟ ಇದೀಗ ಮರುಹುಟ್ಟು ಪಡೆದಿದೆ. ಮೀಸಲಾತಿ ಹೋರಾಟವನ್ನು ಮತ್ತೆ ಆರಂಭಿಸುವುದಾಗಿ ಪಾಟೀದಾರ ಮುಖಂಡ ಹಾರ್ದಿಕ್ ಪಟೇಲ್ ಘೋಷಿಸಿದ್ದಾರೆ.

ಸುರೇಂದ್ರ ನಗರದ ಮೋತಿ ಮಲ್ವಾನ್ ಗ್ರಾಮದಲ್ಲಿ ಶನಿವಾರ ಪಾಟಿದಾರ ನ್ಯಾಯ ಪಂಚಾಯ್ತಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೋರಾಟಕ್ಕೆ ಶಕ್ತಿ ತುಂಬುವ ನಿರ್ಧಾರವನ್ನು ಪ್ರಕಟಿಸಿದರು. ಎನ್‌ಡಿಎ ಸರ್ಕಾರದ ನಾಲ್ಕನೇ ವರ್ಷಾಚರಣೆ ದಿನವೇ ಹಾರ್ದಿಕ್ ಹೊಸ ಹೋರಾಟದ ರೂಪುರೇಷೆಗಳನ್ನು ವಿವರಿಸಿದರು.

"ನಮ್ಮ ಬೇಡಿಕೆಯನ್ನು ಒತ್ತಾಯಿಸುವ ಸಲುವಾಗಿ ಎಲ್ಲ ಪಾಟಿದಾರ ಶಾಸಕರನ್ನು ಸಭೆಗೆ ಆಹ್ವಾನಿಸಿದ್ದೆವು. ಸರ್ದಾರ್ ಪಟೇಲ್ ಅವರ ಕಾಂಗ್ರೆಸ್ ಶಾಸಕರು ಆಗಮಿಸಿದ್ದರು. ಆದರೆ ಅಮಿತ್ ಶಾ ಪಕ್ಷದ ಶಾಸಕರು ಆಗಮಿಸಲಿಲ್ಲ" ಎಂದು ಪಟೇಲ್ ಬಹಿರಂಗಪಡಿಸಿದರು.

ಪಟೇಲ್ ಅವರ ಆಹ್ವಾನದ ಮೇರೆಗೆ 12 ಕಾಂಗ್ರೆಸ್ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಬಿಜೆಪಿಯ 24 ಶಾಸಕರು ಆಹ್ವಾನಕ್ಕೆ ಸ್ಪಂದಿಸಿಲ್ಲ. ಬೇಡಿಕೆಯ ಹಕ್ಕೊತ್ತಾಯ ಮಂಡಿಸಲು ಜನಬೆಂಬಲ ಕೋರಿದ ಪಟೇಲ್, ಬೇಡಿಕೆ ಈಡೇರಿಗಾಗಿ ಮತ್ತೆ ಜೈಲಿಗೆ ಹೋಗಲೂ ಸಿದ್ಧ ಎಂದು ಗುಡುಗಿದರು.

ಪಟೇಲ್ ಮೇಲೆ ಹಲವು ದೊಂಬಿಗೆ ಪ್ರಚೋದನೆ ನೀಡಿದ ಪ್ರಕರಣಗಳು ಹಾಗೂ ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. "ನಾವು ಚಿನ್ನದ ಬಿಸ್ಕತ್ ಕೇಳಿದ್ದೇವೆಯೇ? ನಾವು ಕೇಳುತ್ತಿರುವುದು ಕಾಲೇಜು ಪ್ರವೇಶ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು. ಸಾವಿರಾರು ಮಂದಿಯ ಹತ್ಯೆಗೆ ಕಾರಣರಾದವರ ವಿರುದ್ಧ ನಮ್ಮ ಹೋರಾಟ" ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಿಮ್ಮಿಂದ ಬಹಳಷ್ಟು ನಿರೀಕ್ಷೆಗಳಿವೆ. ವಿಧಾನಸಭೆಯಲ್ಲಿ ನೀವು ನಮ್ಮ ಧ್ವನಿಯಾಗಬೇಕು. ಇಂದು ನೀವು 14 ಮಂದಿ ಇದ್ದೀರಿ. ನಾಳೆ 32 ಆಗಬಹುದು. ಆದರೆ ನೀವು ಸಮುದಾಯವನ್ನು ಬೆಂಬಲಿಸದಿದ್ದರೆ, ಸಮುದಾಯವೂ ನಿಮ್ಮನ್ನು ಬೆಂಬಲಿಸುವುದಿಲ್ಲ" ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News