ಕರ್ನಾಟಕ ಬಂದ್ ಎನ್ನುವ ತಪ್ಪು ಹೆಜ್ಜೆ

Update: 2018-05-27 18:32 GMT

ವಿಪರ್ಯಾಸವೆಂಬಂತೆ, ನೂತನ ಮೊತ್ತ ಮೊದಲ ಅಧಿವೇಶನವನ್ನು ‘ಸಭಾ ತ್ಯಾಗ’ದೊಂದಿಗೆ ವಿರೋಧ ಪಕ್ಷವಾದ ಬಿಜೆಪಿ ಉದ್ಘಾಟನೆ ಮಾಡಿದೆ. ಸಭಾತ್ಯಾಗಕ್ಕೆ ಸರಿಯಾದ ಕಾರಣವನ್ನು ನೀಡಲು ವಿರೋಧ ಪಕ್ಷದ ನಾಯಕರಾಗಿರುವ ಯಡಿಯೂರಪ್ಪ ವಿಫಲರಾಗಿದ್ದಾರೆ. ಇದೇ ಸಂದರ್ಭದಲ್ಲಿ ‘ರಾಜ್ಯ ಬಂದ್’ ಬೆದರಿಕೆಯನ್ನು ನಾಡಿನ ಜನತೆಗೆ ಉಡುಗೊರೆಯಾಗಿ ನೀಡಿದ್ದಾರೆ. ಅಂದರೆ ಮುಂದಿನ ದಿನಗಳಲ್ಲಿ ಯಾವ ವಿಧದಲ್ಲಾದರೂ ಸರಿ, ಸರಕಾರ ನೆಮ್ಮದಿಯಿಂದ ಆಡಳಿತ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ ಎನ್ನುವುದರ ಸೂಚನೆಯನ್ನು ಬಿಜೆಪಿ ನೀಡಿದೆ. ರೈತರ ಸಾಲ ಮನ್ನಾದ ಹೆಸರಿನಲ್ಲಿ ಬಿಜೆಪಿ ಬೆಂಬಲಿಸಿರುವ ಬಂದ್ ಕರೆಯಲ್ಲಿ ರೈತರ ಹಿತಾಸಕ್ತಿ ಶೂನ್ಯವಾಗಿದೆ. ಬದಲಿಗೆ, ಸರಕಾರ ರಚನೆ ಮಾಡಲು ಬೆಂಬಲ ನೀಡದ ಜೆಡಿಎಸ್‌ನ ಅಪ್ಪ-ಮಕ್ಕಳನ್ನು ಈ ಮೂಲಕ ಇಕ್ಕಟ್ಟಿಗೆ ಸಿಲುಕಿಸಿ ಸೇಡು ತೀರಿಸಿಕೊಳ್ಳುವುದೇ ವಿರೋಧಪಕ್ಷದ ಮುಖ್ಯ ಗುರಿಯಾಗಿದೆ.

    ವಿಶ್ವಾಸಮತ ಯಾಚನೆಯ ಸಂದರ್ಭ ಹಲವು ಕಾರಣಗಳಿಗಾಗಿ ಗಮನ ಸೆಳೆಯಿತು. ಅಂದು ಕೇಂದ್ರ ಸ್ಥಾನದಲ್ಲಿದ್ದುದು ಕುಮಾರಸ್ವಾಮಿಯಾದರೂ, ಸದನದಲ್ಲಿ ಗಮನ ಸೆಳೆದದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಸ್ಪೀಕರ್ ಆಯ್ಕೆಯ ಸಂದರ್ಭದಲ್ಲಿ, ಆ ಸ್ಥಾನದ ಜವಾಬ್ದಾರಿಯ ಕುರಿತಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಬುದ್ಧವಾದ ಮಾತುಗಳನ್ನಾಡಿದರು. ಸ್ಪೀಕರ್ ಸ್ಥಾನವನ್ನು ಅಲಂಕರಿಸಿದ ಹಿಂದಿನ ಹಲವು ಹಿರಿಯರನ್ನು ಸ್ಮರಿಸಿದ ಅವರು, ಹೇಗೆ ಹಲವು ಮುತ್ಸದ್ದಿ ನಾಯಕರಿಂದಾಗಿ ಸ್ಪೀಕರ್ ಸ್ಥಾನದ ಘನತೆ ಹೆಚ್ಚಿದೆ ಎನ್ನುವುದು ವೈಕುಂಠ ಬಾಳಿಗಾರಂತಹ ಹಿರಿಯರ ಹೆಸರನ್ನು ಉಲ್ಲೇಖಿಸಿ ಅವರು ವಿವರಿಸಿದರು. ಅಂತಿಮವಾಗಿ ಬಿಜೆಪಿಯ ಸ್ಪೀಕರ್ ಅಭ್ಯರ್ಥಿ ಸುರೇಶ್ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿದು, ಆ ಸ್ಥಾನದ ಘನತೆಯನ್ನು ಹೆಚ್ಚಿಸಿದರು. ಸ್ಪೀಕರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ರಮೇಶ್ ಕುಮಾರ್ ಕೂಡ ಅಂದಿನ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯನ್ನು ಅತ್ಯಂತ ಮುತ್ಸದ್ದಿತನದಿಂದ ನಿಭಾಯಿಸಿದರು. ಅಷ್ಟೇ ಅಲ್ಲ, ಸಿದ್ದರಾಮಯ್ಯರ ದೂರದೃಷ್ಟಿ ಆಳ್ವಿಕೆಯನ್ನು ಹೊಗಳಿದರು. ಹಲವು ಜನಪ್ರಿಯ ಭಾಗ್ಯಗಳನ್ನು ಸಿದ್ದರಾಮಯ್ಯ ಘೋಷಿಸಿದರಾದರೂ, ಅರ್ಥವ್ಯವಸ್ಥೆ ಹದಗೆಡಲಿಲ್ಲ. ಯಾವುದೇ ಸರಕಾರಿ ಚೆಕ್ ಬೌನ್ಸ್ ಆಗಲಿಲ್ಲ ಎನ್ನುವುದರ ಕಡೆಗೆ ಬೆಟ್ಟು ಮಾಡಿದರು. ಅಂದರೆ ಜನಪ್ರಿಯತೆಗಾಗಿ ರಾಜ್ಯದ ಅರ್ಥವ್ಯವಸ್ಥೆಯನ್ನು ಅವರು ದುರುಪಯೋಗ ಪಡಿಸಿಕೊಳ್ಳಲಿಲ್ಲ ಎನ್ನುವುದನ್ನು ಸದನಕ್ಕೆ ಸ್ಪಷ್ಟಪಡಿಸಿದರು. ಇದು ಸ್ಪೀಕರ್ ಒಬ್ಬರಿಂದ ಮಾಜಿ ಮುಖ್ಯಮಂತ್ರಿಗೆ ಸಿಕ್ಕಿದ ದೊಡ್ಡ ಪ್ರಮಾಣ ಪತ್ರವಾಗಿದೆ. ಇದು ಕುಮಾರಸ್ವಾಮಿಯಿಂದ ಮತ್ತೆ ಸಿದ್ದರಾಮಯ್ಯ ಕಡೆಗೆ ಜನರ ಕಣ್ಣು ಹೊರಳುವುದಕ್ಕೆ ಕಾರಣವಾಯಿತು. ಕಲಾಪದುದ್ದಕ್ಕೂ ಅದರ ಪರಿಣಾಮ ಎದ್ದು ಕಾಣುತ್ತಿತ್ತು.

ವಿಶ್ವಾಸ ಮತ ಯಾಚನೆ ಪ್ರಸ್ತಾವದ ಮೇಲೆ ಯಡಿಯೂರಪ್ಪ ಆಡಿದ ಮಾತುಗಳು ಸಂದರ್ಭಕ್ಕೆ ಪೂರಕವಾಗಿರದೆ ಚುನಾವಣಾ ಭಾಷಣದ ಮುಂದುವರಿದ ಭಾಗದಂತಿತ್ತು. ಸಭೆಯ ಗಾಂಭೀರ್ಯತೆಯನ್ನು ಸಂಪೂರ್ಣ ನಿರಾಕರಿಸಿ ಅವರು ಮಾತಿಗೆ ತೊಡಗಿದರು. ಯಾವ ರೀತಿಯಲ್ಲೂ ವಿಶ್ವಾಸಮತವನ್ನು ತಡೆಯಲು ಸಾಧ್ಯವಿಲ್ಲ ಎಂಬ ಹತಾಶೆಯೇ ಅವರಿಂದ ಅಂತಹ ಸ್ಥಿತಿಗೆ ಇಳಿಸಿರಬೇಕು. ‘ಕುದುರೆ ವ್ಯಾಪಾರಕ್ಕೆ’ ಜೆಡಿಎಸ್ ಕೈಗೆ ಸಿಗಲಿಲ್ಲ ಎನ್ನುವುದಷ್ಟೇ ಅಲ್ಲ, 104 ಸ್ಥಾನಗಳನ್ನು ಪಡೆದು ಮುಖ್ಯಮಂತ್ರಿಯಾಗಬೇಕಾದ ತನ್ನ ಬದಲಿಗೆ ಬರೇ 38 ಸ್ಥಾನಗಳನ್ನು ಗಳಿಸಿದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ನಿಂತಿದ್ದಾರಲ್ಲ ಎನ್ನುವ ಅಸಹನೆಯೂ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು. ಜೊತೆಗೆ ಸರಕಾರವನ್ನು ಒಡೆದು ಆಳುವ ಯತ್ನ ಮಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೊಗಳಿರುವುದು ಈ ತಂತ್ರದ ಭಾಗವಾಗಿದೆ. ಸಿದ್ದರಾಮಯ್ಯ ಹೊರತು ಪಡಿಸಿದಂತೆ ಪರಮೇಶ್ವರ್, ಡಿಕೆಶಿಯಂತಹ ನಾಯಕರು ಈ ಫಲಿತಾಂಶದ ದೆಸೆಯಿಂದ ಮುನ್ನೆಲೆಗೆ ಬರುವಂತಾಗಿದೆ. ಸಿದ್ದರಾಮಯ್ಯ ತಾನಾಗಿಯೇ ಹಿಂದೆ ಸರಿಯಬೇಕಾಗಿದೆ. ಸಿದ್ದರಾಮಯ್ಯ ಮತ್ತು ಜೆಡಿಎಸ್ ನಡುವಿನ ಹಿಂದಿನ ತಿಕ್ಕಾಟಗಳು ಎಲ್ಲರಿಗೂ ಗೊತ್ತಿರುವುದೇ.

ಸರಕಾರ ರಚನೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ತಮ್ಮ ಹೊಣೆಗಾರಿಕೆಯನ್ನು ಸರಿಯಾಗಿಯೇ ನಿಭಾಯಿಸಿದ್ದಾರಾದರೂ, ಪ್ರಮಾಣವಚನದ ವೇಳೆ ಅವರು ವೇದಿಕೆಯಲ್ಲಿ ಆದ್ಯತೆಯನ್ನು ಪಡೆದುಕೊಂಡಿಲ್ಲ. ಸಿದ್ದರಾಮಯ್ಯ ಬಗ್ಗೆ ಇರುವ ಅನುಕಂಪವನ್ನು ಯಡಿಯೂರಪ್ಪ ತನಗೆ ಪೂರಕವಾಗಿ ಬಳಸಿಕೊಳ್ಳಲು ಯತ್ನಿಸಿದರು. ಇದೇ ಸಂದರ್ಭದಲ್ಲಿ, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿರುವ ಡಿಕೆಶಿಯನ್ನೂ ಹೊಗಳಿದಂತೆ ಮಾಡಿ ಅವರನ್ನೂ ಜೆಡಿಎಸ್‌ನ ವಿರುದ್ಧ ಎತ್ತಿಕಟ್ಟಲು ಯತ್ನಿಸಿದ್ದಾರೆ. ಅಂದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ಹಿರಿಮೆ ಜೆಡಿಎಸ್‌ಗಿಂತ ದೊಡ್ಡದು ಎನ್ನುವುದನ್ನು ಸದನದಲ್ಲಿ ಯಡಿಯೂರಪ್ಪ ನೆನಪಿಸಿಕೊಟ್ಟಿದ್ದಾರೆ. ಉಪಚುನಾವಣೆ ಮತ್ತು ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ನೀವು ನಿಮ್ಮ ಆತ್ಮಾಭಿಮಾನವನ್ನು ಕಾಪಾಡಿಕೊಳ್ಳಿ, ಇಲ್ಲವಾದರೆ ಜೆಡಿಎಸ್ ನಿಮ್ಮನ್ನು ಸರ್ವನಾಶ ಮಾಡುತ್ತದೆ ಎಂದು ಯಡಿಯೂರಪ್ಪ ನೀಡಿರುವ ಎಚ್ಚರಿಕೆ ಇದಾಗಿದೆ. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಸದಾ ಕಾಂಗ್ರೆಸ್‌ನ ಮೇಲೆ ಹರಿಹಾಯುತ್ತಿದ್ದ ಯಡಿಯೂರಪ್ಪ ಜೆಡಿಎಸ್‌ನ ಅಪ್ಪ-ಮಕ್ಕಳ ಬಗ್ಗೆ ಸದಾ ಮೃದುವಾಗಿದ್ದರು. ಕಾರಣ, ಅತಂತ್ರ ವಿಧಾನಸಭೆಯ ಸಂದರ್ಭದಲ್ಲಿ ಅವರ ಅವಶ್ಯಕತೆ ಇದೆ ಎನ್ನುವುದರ ಅರಿವು ಅವರಿಗಿತ್ತು. ಆದರೆ ಅವರ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಯಡಿಯೂರಪ್ಪ ಕಣ್ಣೆದುರೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ನಿಂತಿದ್ದಾರೆ. ಈ ಕಾರಣದಿಂದಲೇ ಅವರು ಕಾಂಗ್ರೆಸನ್ನು ಸಂಪೂರ್ಣ ಪಕ್ಕಕ್ಕಿಟ್ಟು, ನೇರವಾಗಿ ಜೆಡಿಎಸ್‌ನ ವಿರುದ್ಧ ಮುಗಿ ಬಿದ್ದರು. ಆದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ದ ಮೈತ್ರಿ ಮುರಿದರೆ ಮತ್ತೆ ಜೆಡಿಎಸ್ ಸಹಕಾರದಿಂದಲೇ ಬಿಜೆಪಿ ಅಧಿಕಾರ ಹಿಡಿಯಬೇಕಾಗುತ್ತದೆ ಹೊರತು ಕಾಂಗ್ರೆಸ್ ಸಹಕಾರ ನೀಡುವುದಿಲ್ಲ ಎನ್ನುವ ಅರಿವು ಯಡಿಯೂರಪ್ಪರಿಗೆ ಇರಬೇಕಾಗಿತ್ತು. ಭವಿಷ್ಯದಲ್ಲಿ ತಂದೆ-ಮಕ್ಕಳ ಸಹಕಾರದ ಅಗತ್ಯ ಬೀಳುವುದೇ ಇಲ್ಲವೇನೋ ಎಂಬ ರೀತಿಯಲ್ಲಿ ಯಡಿಯೂರಪ್ಪ ಜೆಡಿಎಸ್ ವಿರುದ್ಧ ಸದನದಲ್ಲಿ ಮಾತನಾಡಿದ್ದಾರೆ. ಮುಂದೊಂದು ದಿನ ಬಿಜೆಪಿಗೆ ಜೆಡಿಎಸ್‌ನ ಬೆಂಬಲ ಅಗತ್ಯ ಬೀಳುವಾಗ, ಇದನ್ನೇ ನೆನಪಲ್ಲಿಟ್ಟು ಯಡಿಯೂರಪ್ಪ ವಿರುದ್ಧ ತಂದೆ-ಮಕ್ಕಳು ಸೇಡು ತೀರಿಸಿಕೊಳ್ಳಲಾರರು ಎನ್ನುವಂತಿಲ್ಲ. ಇದೇ ಸಂದರ್ಭದಲ್ಲಿ, ವಿಶ್ವಾಸ ಮತ ಯಾಚನೆಯ ಬೆನ್ನಿಗೇ ರೈತರ ಸಾಲಮನ್ನಾ ವಿಷಯದಲ್ಲಿ ಯಡಿಯೂರಪ್ಪ ‘ಕರ್ನಾಟಕ ಬಂದ್’ ಘೋಷಿಸಿದ್ದಾರೆ. ಈ ಘೋಷಣೆ ಸ್ವತಃ ಬಿಜೆಪಿಗೇ ತಿರುಗುಬಾಣವಾಗಲಿದೆ. ಉಪ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಬಂದ್ ಘೋಷಿಸಿರುವುದು ಬಿಜೆಪಿಯ ದುರುದ್ದೇಶವನ್ನು ಹೇಳುತ್ತದೆ.

ಚುನಾವಣೆಯ ಮೇಲೆ ಬಂದ್ ತನ್ನ ಪರಿಣಾಮವನ್ನು ಬೀರುವುದಿಲ್ಲ ಎನ್ನುವಂತಿಲ್ಲ. ಜೊತೆಗೆ, ಜನರು ಈ ಬಂದ್‌ನ್ನು ಸ್ವೀಕರಿಸುವ ಮನಸ್ಥಿತಿಯನ್ನು ಹೊಂದಿಲ್ಲ. 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿದ್ದು ನಿಜ. ಆದರೆ ಇಂದು ರಾಜ್ಯದಲ್ಲಿರುವುದು ಮೈತ್ರಿ ಸರಕಾರವಾದುದರಿಂದ ಅವರೊಬ್ಬರೇ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸನ್ನಿವೇಶ ಇಲ್ಲ. ರೈತರ ಮೇಲೆ ಅಷ್ಟೊಂದು ಪ್ರೀತಿಯಿದ್ದಿದ್ದರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಈ ಹಿಂದೆ ಯಾಕೆ ಸಾಲಮನ್ನಾ ಮಾಡಲು ಕೇಂದ್ರಕ್ಕೆ ಒತ್ತಡ ಹೇರಲಿಲ್ಲ? ಎನ್ನುವ ಪ್ರಶ್ನೆಗೂ ಅವುರ ಎದೆಗೊಡಬೇಕಾಗುತ್ತದೆ. ವಿಶ್ವಾಸ ಮತ ಯಾಚನೆಯಲ್ಲಿ ಸೋತ ಯಡಿಯೂರಪ್ಪ, ಹತಾಶೆಯಲ್ಲಿ ಮತ್ತೆ ಮತ್ತೆ ತಪ್ಪು ಹೆಜ್ಜೆಗಳನ್ನೇ ಇಡುತ್ತಾ ಮುಂದುವರಿಯುತ್ತಿದ್ದಾರೆ. ತಾನೊಬ್ಬ ವಿರೋಧ ಪಕ್ಷದ ನಾಯಕ ಎನ್ನುವ ಅರಿವನ್ನು ಇಟ್ಟುಕೊಂಡು ಯಡಿಯೂರಪ್ಪ ಮುಂದುವರಿಯಬೇಕಾಗಿದೆ. ಯಾಕೆಂದರೆ ಯಡಿಯೂರಪ್ಪ ಜಾರಿ ಬೀಳುವುದನ್ನು ಕಾಯುತ್ತಿರುವವರಲ್ಲಿ ಬಿಜೆಪಿಯೊಳಗಿರುವ ನಾಯಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News