21ನೇ ಶತಮಾನದ ರೋಗ ‘ಟೆಕ್ಸ್ಟ್ ನೆಕ್’ ಬಗ್ಗೆ ನಿಮಗೆಷ್ಟು ಗೊತ್ತು...?

Update: 2018-05-28 11:11 GMT

ನೀವು ಬಸ್‌ನಲ್ಲಿರಿ ಅಥವಾ ವೈದ್ಯರ ಕ್ಲಿನಿಕ್‌ನಲ್ಲಿರಿ, ಅಲ್ಲಿರುವವರಲ್ಲಿ ಕನಿಷ್ಠ ಅರ್ಧದಷ್ಟಾದರೂ ಜನರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವ್ಯಸ್ತರಾಗಿರುವುದನ್ನು ನೀವು ಗಮನಿಸಿರಬಹುದು. ನಮ್ಮಲ್ಲಿ ಹೆಚ್ಚಿನವರು ಗಂಟೆಗಟ್ಟಲೆ ಕಾಲ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಗಳಂತಹ ಕೈಯಲ್ಲಿ ಹಿಡಿದುಕೊಳ್ಳುವ ಸಾಧನಗಳಿಗೆ ಅಂಟಿಕೊಂಡಿರುತ್ತೇವೆ. ಮಕ್ಕಳೂ ಇದಕ್ಕೆ ಹೊರತಲ್ಲ, ಅವರನ್ನು ವೀಡಿಯೊ ಗೇಮ್‌ಗಳು ಸೆಳೆಯುತ್ತಿರುತ್ತವೆ.

ಆದರೆ ವಿಶ್ವದಲ್ಲಿ ಕೋಟ್ಯಂತರ ಜನರಿಗೆ ಅಂಟಿಕೊಂಡಿರುವ ಈ ಗೀಳು ಬೆನ್ನುಮೂಳೆ ಮತ್ತು ಕುತ್ತಿಗೆಗೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತೇ?

ಏನಿದು ಟೆಕ್ಸ್ಟ್ ನೆಕ್?

ಟರ್ಟಲ್ ನೆಕ್ ಸಿಂಡ್ರೋಮ್ ಎಂದೂ ಕರೆಯಲಾಗುವ ಟೆಕ್ಸ್ಟ್ ನೆಕ್ 21ನೇ ಶತಮಾನದ ರೋಗವಾಗಿದ್ದು,ತುಂಬ ಹೊತ್ತು ಬಗ್ಗಿ ಮೊಬೈಲ್ ಸ್ಕ್ರೀನ್ ಅಥವಾ ಟ್ಯಾಬ್ಲೆಟ್‌ನ್ನು ನೋಡುವುದರಿಂದ ಕುತ್ತಿಗೆಯ ಮೇಲೆ ನಿರಂತರವಾಗಿ ಬೀಳುವ ಒತ್ತಡವು ಇದಕ್ಕೆ ಕಾರಣವಾಗಿದೆ.

ಒಂದು ಅಧ್ಯಯನದಂತೆ ನಾವು 15 ಡಿಗ್ರಿ ಕೋನದಲ್ಲಿ ಕುತ್ತಿಗೆಯನ್ನು ಬಗ್ಗಿಸಿದಾಗ ನಮ್ಮ ಬೆನ್ನುಮೂಳೆಯ ಮೇಲೆ 12 ಕೆಜಿಗಳಷ್ಟು ಒತ್ತಡವುಂಟಾಗುತ್ತದೆ. 30 ಡಿಗ್ರಿ ಬಗ್ಗಿಸಿದರೆ 18 ಕೆ.ಜಿ.,45 ಡಿಗ್ರಿ ಬಗ್ಗಿಸಿದರೆ 22 ಕೆ.ಜಿ.ಗಳಷ್ಟು ಒತ್ತಡವುಂಟಾಗುತ್ತದೆ. ಹಾಗೆಯೇ ಫೋನ್‌ನಲ್ಲಿ ಟೆಕ್ಸ್ಟ್ ಕಳುಹಿಸಲು ಮತ್ತು ಚಾಟಿಂಗ್ ನಡೆಸಲು ಕುತ್ತಿಗೆಯನ್ನು 60 ಡಿಗ್ರಿಗಳಷ್ಟು ಬಗ್ಗಿಸಿದಾಗ ಬೆನ್ನುಮೂಳೆಯ ಮೇಲೆ ಒತ್ತಡ 27 ಕೆ.ಜಿ.ಗೆ ಹೆಚ್ಚುತ್ತದೆ.

ಸುಮಾರು 10 ವರ್ಷಗಳಿಂದಲೂ ಚಾಟಿಂಗ್‌ಗೆ ಪ್ರತಿ ಸಲ ಐದು ಸೆಕೆಂಡ್‌ಗಿಂತ ಹೆಚ್ಚು ಸಮಯವನ್ನು ಕಳೆದಿದ್ದರೆ ನಿಮ್ಮ ಕುತ್ತಿಗೆ ಮತ್ತು ಬೆನ್ನುಮೂಳೆ ಎಷ್ಟು ಒತ್ತಡಕ್ಕೊಳಗಾಗಿರಬಹುದು ಎನ್ನುವುದನ್ನು ಊಹಿಸಿಕೊಳ್ಳಿ.

ಮಕ್ಕಳು ಮತ್ತು ಹದಿಹರೆಯದವರಿಗೂ ಅಪಾಯ

ವಿಶ್ವದಲ್ಲಿ 18ರಿಂದ 34 ವರ್ಷ ವಯೋಮಾನದ ಗುಂಪಿನವರಲ್ಲಿ ಶೇ.75 ರಷ್ಟು ಜನರು ಕೈಯಲ್ಲಿ ಹಿಡಿಯುವ ಡಿಜಿಟಲ್ ಸಾಧನಗಳೊಂದಿಗೆ ಗಂಟೆಗಟ್ಟಲೆ ಕಾಲವನ್ನು ಕಳೆಯುತ್ತಾರೆ ಎಂದು ಅಂದಾಜಿಸಲಾಗಿದೆ ಮತ್ತು ಅಷ್ಟೂ ಹೊತ್ತು ಅವರ ತಲೆಗಳು ಮುಂದಕ್ಕೆ ಬಗ್ಗಿರುತ್ತವೆ. ವಯಸ್ಕರಲ್ಲಿ ಮಾತ್ರವಲ್ಲ,ವೀಡಿಯೊ ಗೇಮ್‌ಗಳಲ್ಲಿ ಕಾಲ ಕಳೆಯುವ ಮಕ್ಕಳು ಮತ್ತು ವರ್ಷಕ್ಕೆ 2000 ಗಂಟೆಗೂ ಅಧಿಕ ಸಮಯವನ್ನು ಸ್ಮಾರ್ಟ್ ಫೋನ್‌ಗಳಲ್ಲಿಯೇ ಕಳೆಯುತ್ತಿರುವ ಯುವಜನರಲ್ಲಿಯೂ ಇದು ಸಾಮಾನ್ಯವಾಗಿಬಿಟ್ಟಿದೆ.

ಟೆಕ್ಸ್ಟ್ ನೆಕ್‌ನ ಲಕ್ಷಣಗಳು

ಕುತ್ತಿಗೆ ನೋವು, ಪೆಡಸುತನ, ಸ್ನಾಯುಗಳ ದುರ್ಬಲತೆ, ಬೆನ್ನುಮೂಳೆ ಮತ್ತು ಭುಜಗಳಲ್ಲಿ ನೋವು ಇವು ಈ ರೋಗದ ಲಕ್ಷಣಗಳಾಗಿವೆ. ನೀವು ದಿನದ ಹೆಚ್ಚಿನ ಸಮಯ ಲ್ಯಾಪ್‌ಟಾಪ್ ಅಥವಾ ಮೊಬೈಲ್‌ನಲ್ಲಿ ನೋಡುತ್ತಿದ್ದರೆ ಅಥವಾ ಟೈಪ್ ಮಾಡುತ್ತಿದ್ದರೆ ಮತ್ತು ನಿಮ್ಮ ತಲೆಯು ಮುಂದಕ್ಕೆ ಬಗ್ಗಿರುತ್ತಿದ್ದರೆ ನೀವು ಟೆಕ್ಸ್ಟ್ ನೆಕ್‌ಗೆ ಗುರಿಯಾಗುವ ಅಪಾಯದಲ್ಲಿದ್ದೀರಿ. ಹೀಗಾಗಿ ಮೇಲೆ ಹೇಳಿರುವ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ.

ಟೆಕ್ಸ್ಟ್ ನೆಕ್ ಲಕ್ಷಣಗಳನ್ನು ನೀವೇಕೆ ಕಡೆಗಣಿಸಬಾರದು?

ಈ ಲಕ್ಷಣಗಳನ್ನು ನೀವು ಕಡೆಗಣಿಸಿದರೆ ಟೆಕ್ಸ್ಟ್ ನೆಕ್ ಭುಜ, ಬೆನ್ನಿನ ಮೇಲ್ಭಾಗಗಳಲ್ಲಿ ನೋವು ಮತ್ತು ತಲೆನೋವಿಗೆ ಕಾರಣವಾಗುತ್ತದೆ ಮತ್ತು ತೀವ್ರ ಸ್ವರೂಪದ ಬೆನ್ನುಗೂನನ್ನೂ ಉಂಟು ಮಾಡಬಹುದು. ಅಲ್ಲದೆ ತಲೆಯನ್ನು ಮುಂದಕ್ಕೆ ಬಗ್ಗಿಸಿದ ಭಂಗಿಯು ಶ್ವಾಸಕೋಶಗಳ ಕಾರ್ಯ ನಿರ್ವಹಣೆಯ ಮೇಲೂ ಪರಿಣಾಮವನ್ನು ಬೀರುತ್ತದೆ ಮತ್ತು ಅವುಗಳ ಸಾಮರ್ಥ್ಯವನ್ನು ಶೇ.30ರಷ್ಟು ತಗ್ಗಿಸುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ.

ಟೆಕ್ಸ್ಟ್ ನೆಕ್ ತಡೆಯುವುದು ಹೇಗೆ?

ಸ್ಮಾರ್ಟ್‌ಫೋನ್ ಅಥವಾ ಇತರ ಯಾವುದೇ ಹ್ಯಾಂಡ್ ಹೆಲ್ಡ್ ಡಿವೈಸ್‌ಗಳನ್ನು ಬಳಸುವಾಗ ಕುತ್ತಿಗೆ ಮತ್ತು ಬೆನ್ನುಮೂಳೆಯ ಮೇಲಿನ ಒತ್ತಡವನ್ನು ತಗ್ಗಿಸಲು ಈ ಕೆಲವು ಸರಳ ಮಾರ್ಗಗಳನ್ನು ಅನುಸರಿಸಬಹುದಾಗಿದೆ.

ಫೋನ್‌ಗಳಲ್ಲಿ ಸುದೀರ್ಘ ಕಾಲ ಟೈಪ್ ಮಾಡುವುದರಿಂದ ಅಥವಾ ಸ್ವೈಪಿಂಗ್‌ನಿಂದ ದೂರವಿರಿ. ನಿಮ್ಮ ಫೋನ್‌ನಿಂದ ಆಗಾಗ್ಗೆ ಹೊರಬನ್ನಿ. ಒಂದೇ ಭಂಗಿಯಲ್ಲಿ ಕುಳಿತುಕೊಳ್ಳಬೇಡಿ ಮತ್ತು ಮೊಬೈಲ್‌ನ್ನು ಕಣ್ಣಿನ ಮಟ್ಟದಲ್ಲಿ ಹಿಡಿದುಕೊಳ್ಳಿ. ಇದರಿಂದ ಕುತ್ತಿಗೆಯನ್ನು ಬಗ್ಗಿಸಬೇಕಿಲ್ಲ ಮತ್ತು ನಿಮ್ಮ ಬೆನ್ನುಮೂಳೆಯ ಮೇಲೆ ಹೆಚ್ಚಿನ ಒತ್ತಡವುಂಟಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News