ಸಿರಿಯ ವಿರುದ್ಧ ನಿರ್ಬಂಧ ವಿಸ್ತರಿಸಿದ ಇಯು

Update: 2018-05-28 17:21 GMT

 ಬ್ರುಸೆಲ್ಸ್,ಮೇ 28: ಸಿರಿಯದಲ್ಲಿ ನಾಗರಿಕರ ವಿರುದ್ಧ ದಮನಕಾರ್ಯಾಚರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಸರಕಾರದ ವಿರುದ್ಧ ವಿಧಿಸಿದ್ದ ನಿರ್ಬಂಧಗಳನ್ನು ಯುರೋಪ್ ಒಕ್ಕೂಟ(ಇಯು)ವು ಇನ್ನೂ ಒಂದು ವರ್ಷದವರೆಗೆ ವಿಸ್ತರಿಸಿದೆ.

 ಬ್ರುಸೆಲ್ಸ್‌ನಲ್ಲಿ ಸೋಮವಾರ ನಡೆದ ಯುರೋಪ್ ಒಕ್ಕೂಟದ 28 ವಿದೇಶಾಂಗ ಸಚಿವರ ಸಭೆಯಲ್ಲಿ ಸಿರಿಯ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಆಡಳಿತದ ವಿರುದ್ಧ 2019ರ ಜೂನ್ 1ರವರೆಗೂ ನಿರ್ಬಂಧಗಳನ್ನು ವಿಧಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

    ಯುರೋಪ್ ಒಕ್ಕೂಟವು ಪ್ರಸ್ತುತ ಸಿರಿಯ ವಿರುದ್ಧ ತೈಲ ಮಾರಾಟವನ್ನು ನಿರ್ಬಂಧಿಸಿರುವ ಜೊತೆಗೆ ಸಿರಿಯದ ಕೇಂದ್ರೀಯ ಬ್ಯಾಂಕ್‌ನ ಆಸ್ತಿಗಳಿಗೆ ಮುಟ್ಟುಗೋಲು ಹಾಕಿದೆ ಹಾಗೂ ನಾಗರಿಕರ ದಮನಕ್ಕಾಗಿ ಬಳಕೆಯಾಗುವ ಸಾಧನಗಳ ರಫ್ತಿನ ಮೇಲೂ ನಿರ್ಬಂಧಗಳನ್ನು ವಿಧಿಸಿದೆ.

 2011ರಿಂದೀಚೆಗೆ ಸಿರಿಯದಲ್ಲಿ ಭುಗಿಲೆದ್ದಿರುವ ಅಂತರ್ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ನೇತೃತ್ವದಲ್ಲಿ ಜಿನೇವಾದಲ್ಲಿ ನಡೆಯುತ್ತಿದ್ದ ಮಾತುಕತೆಯನ್ನು ಪುನಾರಂಭಿಸಲು ಯುರೋಪ್ ಒಕ್ಕೂಟವು ಪ್ರಯತ್ನಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News