ಕಾಲು ಉಳುಕಿದೆಯೇ?: ಹಾಗಾದರೆ ಈ ಕೆಲಸಗಳನ್ನು ಮೊದಲು ಮಾಡಿ

Update: 2018-05-29 12:37 GMT

ಕಣಕಾಲು,ಮಂಡಿ ಅಥವಾ ಮಣಿಗಂಟು ಉಳುಕಿನ ಅನುಭವ ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ಸಲ ಆಗಿರುತ್ತದೆ. ಅದರ ನೋವು ಅನುಭವಿಸಿದವರಿಗೇ ಗೊತ್ತು. ಹೀಗೆ ಉಳುಕು ಉಂಟಾದಾಗ ನೀವು ಮೊದಲು ಮಾಡಬೇಕಾದ ಕೆಲಸ RICE ,ಅಂದರೆ ರೆಸ್ಟ್,ಐಸ್,ಕಂಪ್ರೆಷನ್ ಮತ್ತು ಎಲಿವೇಷನ್.

►ರೆಸ್ಟ್: ಕೈಕಾಲು ಉಳುಕಿದ್ದರೂ ಹಿಡಿದ ಕಾರ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಿದರೆ ಅದು ಅತ್ಯಂತ ಕೆಟ್ಟ ಕೆಲಸವಾಗುತ್ತದೆ. ನೀವು ಯಾವುದೇ ಕೆಲಸ ಮಾಡುತ್ತಿದ್ದಾಗ ಅಥವಾ ಆಟವಾಡುತ್ತಿದ್ದಾಗ ಉಳುಕು ಉಂಟಾದರೆ ಅದನ್ನು ಸಂಪೂರ್ಣವಾಗಿ ನಿಲ್ಲಿಸಿ ಮತ್ತು ಸಂಪೂರ್ಣ ವಿಶ್ರಾಂತಿಯನ್ನು ಪಡೆಯಿರಿ. ಜಖಂ ಆಗಿರುವ ಭಾಗಕ್ಕೆ ಇನ್ನಷ್ಟು ಒತ್ತಡವುಂಟಾದರೆ ಅದು ನೋವನ್ನು ತೀವ್ರಗೊಳಿಸುವ ಜೊತೆಗೆ ಗುಣವಾಗುವ ಪ್ರಕ್ರಿಯೆಯನ್ನೂ ಲಂಬಿಸುತ್ತದೆ.

►ಐಸ್: ಉಳುಕು ಉಂಟಾದಾಗ ತಕ್ಷಣವೇ ಐಸ್ ಪ್ಯಾಕ್‌ನ್ನು ಬಳಸಿ. ಇದರಿಂದ ನೋವು ಮತ್ತು ಬಾವು ಕಡಿಮೆಯಾಗುತ್ತವೆ. ಐಸ್ ಪ್ಯಾಕ್‌ನ್ನು ಉಳುಕಿರುವ ಭಾಗದ ಮೇಲೆ ಕನಿಷ್ಠ 20 ನಿಮಿಷಗಳ ಕಾಲ ಇಟ್ಟುಕೊಳ್ಳಿ. ಪ್ರತಿ 3-4 ಗಂಟೆಗಳಿಗೊಮ್ಮೆ ಇದನ್ನು ಪುನರಾವರ್ತಿಸಿ. ಮಂಜುಗಡ್ಡೆಯ ತುಂಡುಗಳನ್ನು ನೇರವಾಗಿ ಪೀಡಿತ ಭಾಗದ ಚರ್ಮದ ಮೇಲಿರಿಸಬೇಡಿ,ಹಾಗೆ ಮಾಡಿದರೆ ಅದು ಹಿಮಹುಣ್ಣಿಗೆ ಕಾರಣವಾಗಬಹುದು.

►ಕಂಪ್ರೆಷನ್: ಬಾವನ್ನು ತಗ್ಗಿಸಲು ಮತ್ತು ಯಾವುದೇ ಆಂತರಿಕ ರಕ್ತಸ್ರಾವವನ್ನು ತಗ್ಗಿಸಲು ಪೀಡಿತ ಭಾಗಕ್ಕೆ ಇಲಾಸ್ಟಿಕ್ ಮೆಡಿಕಲ್ ಬ್ಯಾಂಡೇಜ್‌ನ್ನು ಸುತ್ತಿ. ಆದರೆ ಹೆಚ್ಚು ಬಿಗಿಯಾಗಿ ಸುತ್ತಬೇಡಿ,ಹಾಗೆ ಮಾಡುವುದರಿಂದ ರಕ್ತ ಸಂಚಾರಕ್ಕೆ ತಡೆಯುಂಟಾಗುತ್ತದೆ. ನೋವು ಹೆಚ್ಚಿದ,ಮರಗಟ್ಟಿದ,ಜುಮುಗುಡುವ,ತಣ್ಣಗಾದಂತೆ ಮತ್ತು ಊತ ಹೆಚ್ಚಿದ ಅನುಭವವಾದರೆ ಅದು ಬ್ಯಾಂಡೇಜ್ ತುಂಬ ಬಿಗಿಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ತಕ್ಷಣವೇ ಅದನ್ನು ಸಡಿಲಿಸಿ. ಲಕ್ಷಣಗಳು ಹಾಗೆಯೇ ಉಳಿದುಕೊಂಡರೆ ವೈದ್ಯರನ್ನು ಸಂಪರ್ಕಿಸಿ.

ಬ್ಯಾಂಡೇಜ್ ಕಟ್ಟಿಕೊಂಡಿದ್ದರೆ ರಾತ್ರಿ ಮಲಗುವ ಮುನ್ನ ಅದನ್ನು ತೆಗೆಯಿರಿ.ಇದರಿಂದಾಗಿ ಪೀಡಿತ ಭಾಗದ ಚರ್ಮಕ್ಕೆ ಗಾಳಿಯಾಡುತ್ತದೆ.

►ಎಲಿವೇಷನ್: ವಿಶ್ರಾಂತ ಸ್ಥಿತಿಯಲ್ಲಿ ಮಲಗಿಕೊಂಡು ಉಳುಕಿದ ಭಾಗವನ್ನು ಹೃದಯದ ಮಟ್ಟಕ್ಕಿಂತ ಮೇಲಕ್ಕೆತ್ತಿರಿ. ಇದು ಊತವನ್ನು ತಗ್ಗಿಸಲು ನೆರವಾಗುತ್ತದೆ. ಅಲ್ಲದೆ ಪೀಡಿತ ಭಾಗದಲ್ಲಿಯ ಒತ್ತಡ ಕಡಿಮೆಯಾಗುವುದರಿಂದ ನೋವು ಕೂಡ ಕ್ರಮೇಣ ಕಡಿಮೆಯಾಗುತ್ತದೆ.

ಆದರೆ ಈ ಎಲ್ಲ ಪ್ರಥಮ ಚಿಕಿತ್ಸೆಗಳ ಎರಡು ದಿನಗಳ ಬಳಿವೂ ಉಳುಕಿನ ನೋವು ಹಾಗೆಯೇ ಉಳಿದುಕೊಂಡಿದ್ದರೆ ಅದು ಲಘು ಮೂಳೆ ಮುರಿತ ಅಥವಾ ಆಂತರಿಕ ಗಾಯಗಳನ್ನು ಸೂಚಿಸಬಹುದಾದ್ದರಿಂದ ವೈದ್ಯರನ್ನು ಸಂಪರ್ಕಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News