ಎಂಎಚ್370 ವಿಮಾನದ ಶೋಧ ಕಾರ್ಯ ಅಂತ್ಯ

Update: 2018-05-29 17:17 GMT
ಸಾಂದರ್ಭಿಕ ಚಿತ್ರ

ಕೌಲಾಲಂಪುರ,ಮೇ 29: 2014ರ ಮಾರ್ಚ್‌ನಲ್ಲಿ ನಿಗೂಢವಾಗಿ ನಾಪತ್ತೆಯಾದ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನದ ಶೋಧ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಕೈಬಿಡಲಾಗುವುದೆಂದು ಶೋಧ ಸಂಸ್ಥೆಯೊಂದು ಸೋಮವಾರ ಘೋಷಿಸಿದೆ. ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾದ ವಿಮಾನದ ಪತ್ತೆಗಾಗಿ ಸತತ ಪ್ರಯತ್ನಗಳು ನಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. 2014ರ ಮಾರ್ಚ್‌ನಲ್ಲಿ 239 ಮಂದಿಯನ್ನು ಒಯ್ಯುತ್ತಿದ್ದ ಎಂಎಚ್ 370 ವಿಮಾನವು ಕೌಲಾಲಂಪುರದಿಂದ ಬೀಜಿಂಗ್‌ಗೆ ಪ್ರಯಾಣಿಸುತ್ತಿದ್ದಾಗ ನಿಗೂಢವಾಗಿ ನಾಪತ್ತೆಯಾಗಿತು. ವಿಮಾನ ಪ್ರಯಾಣಿಸಿದ ಪ್ರದೇಶದಲ್ಲಿರುವ 1.20 ಲಕ್ಷ ಚದರ ಕಿ.ಮೀ. ಸಮುದ್ರ ಪ್ರದೇಶದಲ್ಲಿ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಿದರೂ, ವಿಮಾನದ ಒಂದೇ ಒಂದು ಅವಶೇಷ ಪತ್ತೆಯಾಗಿಲ್ಲ.ಆನಂತರ ಆಸ್ಟ್ರೇಲಿಯ ನೇತೃತ್ವದಲ್ಲಿ ಜಗತ್ತಿನ ವಿಮಾನಯಾನ ಇತಿಹಾಸದಲ್ಲೇ ಅತಿ ದೊಡ್ಡದೆನ್ನಲಾದ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತಾದರೂ, ಅದೂ ಪ್ರಯೋಜನವಾಗದಿದ್ದಾಗ ಕಳೆದ ವರ್ಷದ ಜನವರಿಯಲ್ಲಿ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿತ್ತು.

  ಆನಂತರ ಸಂತ್ರಸ್ತ ಕುಟುಂಬಗಳ ಒತ್ತಡದ ಹಿನ್ನೆಲೆಯಲ್ಲಿ ಹಿಂದಿನ ಮಲೇಶ್ಯ ಸರಕಾರವು ನಾಪತ್ತೆಯಾದ ವಿಮಾನದ ಶೋಧ ಕಾರ್ಯಾಚರಣೆಯನ್ನು ಪುನಾರಂಭಿಸಲು ಅಮೆರಿಕದ ಸಾಗರ ಅನ್ವೇಷಣಾ ಸಂಸ್ಥೆ ಓಶಿಯನ್ ಇನ್‌ಫಿನಿಟಿ ಜೊತೆ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ ವಿಮಾನದ ಬ್ಲಾಕ್‌ಬಾಕ್ಸ್ ಪತ್ತೆಯಾದಲ್ಲಿ ಮಾತ್ರ ಹಣಪಾವತಿಸುವೆನೆಂಬ ಶರತ್ತನ್ನು ಅದು ಒಡ್ಡಿತ್ತು.

    ಶೋಧ ಕಾರ್ಯಾಚರಣೆ ಯಶಸ್ವಿಯಾದಲ್ಲಿ 70 ದಶಲಕ್ಷ ಡಾಲರ್ ಸಂಭಾವನೆ ನೀಡಬೇಕೆಂದು ಓಶಿಯನ್ ಇನ್‌ಫಿನಿಟಿ ಬೇಡಿಕೆಯಿಟ್ಟಿತ್ತು. ಆದರೆ ಅತ್ಯಾಧುನಿಕ ಶೋಧ ಉಪಕರಣಗಳ ಮೂಲಕ ಸಾಗರದ ತಳವನ್ನಿಡೀ ಜಾಲಾಡಿದರೂ ವಿಮಾನದ ಒಂದೇ ಒಂದು ಕುರುಹು ಕೂಡಾ ಪತ್ತೆಯಾಗಿಲ್ಲ. ಅಧಿಕೃತವಾಗಿ ಎಪ್ರಿಲ್ ತಿಂಗಳ ಕೊನೆಯಲ್ಲಿಯೇ ವಿಮಾನದ ಶೋಧ ಕಾರ್ಯಾಚರಣೆ ಮುಗಿಯಬೇಕಿತ್ತಾದರೂ, ಆನಂತರ ಅದನ್ನು ವಿಸ್ತರಿಸಲಾಗಿತ್ತು. ಆದಾಗ್ಯೂ ಇತ್ತೀಚೆಗೆ ಅಧಿಕಾರಕ್ಕೇರಿದ ಮಹಾತೀರ್ ಮುಹಮ್ಮದ್ ನೇತೃತ್ವದ ನೂತನ ಸರಕಾರವು ವಿಮಾನದ ಶೋಧ ಕಾರ್ಯಾಚರಣೆಯನ್ನು ಕೊನೆಗೊಳಿಸುವುದಾಗಿ ಕಳೆದ ವಾರ ಘೋಷಿಸಿತ್ತು.

ಟೆಕ್ಸಾಸ್ ಮೂಲದ ಓಶಿಯನ್ ಇನ್‌ಫಿನಿಟಿ ಸಂಸ್ಥೆಯ ವಕ್ತಾರರು ಮಂಗಳವಾರ ಹೇಳಿಕೆಯೊಂದನ್ನು ನೀಡಿ, ಎಂಎಚ್ 370 ವಿಮಾನದ ಶೋಧ ಕಾರ್ಯಾಚರಣೆಯು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆಯೆಂದು ತಿಳಿಸಿದ್ದರಾದರೂ, ನಿಖರ ದಿನಾಂಕವನ್ನು ಬಹಿರಂಗಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News