ಬೆಲ್ಜಿಯಂ: ಪೊಲೀಸ್ ಅಧಿಕಾರಿಗಳು ಸೇರಿ ಮೂವರನ್ನು ಹತ್ಯೆಗೈದ ದುಷ್ಕರ್ಮಿ

Update: 2018-05-29 17:20 GMT

ಬ್ರುಸೆಲ್ಸ್, ಮೇ 29: ಬೆಲ್ಜಿಯಂನ ಪೂರ್ವ ಭಾಗದ ನಗರವಾದ ಲಿಯಜ್‌ನಲ್ಲಿ ಮಂಗಳವಾರ ನಡೆದ ಶಂಕಿತ ಭಯೋತ್ಪಾದಕ ದಾಳಿಯೊಂದರಲ್ಲಿ ಬಂದೂಕುಧಾರಿಯೊಬ್ಬ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಮೂವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಆನಂತರ ನಡೆದ ಗುಂಡಿನ ಚಕಮಕಿಯಲ್ಲಿ ವಿಶೇಷ ಪೊಲೀಸ್ ಪಡೆಯು ಆತನನ್ನು ಹತ್ಯೆಗೈದಿದೆ.

      ಮಂಗಳವಾರ ಬೆಳಗ್ಗೆ 10.30ರ ವೇಳೆಗೆ ಲಿಜಿ ನಗರದ ಮುಖ್ಯ ರಸ್ತೆಯಲ್ಲಿರು ಶಾಲೆಯೊಂದರ ಬಳಿ ಶಂಕಿತ ಉಗ್ರನು , ಮಹಿಳಾ ಪೊಲೀಸರ ಮೇಲೆ ದಾಳಿ ನಡೆಸಿ ತನ್ನಲ್ಲಿದ್ದ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಆನಂತರ ಆತ ಅವರಲ್ಲೊಬ್ಬರ ಪಿಸ್ತೂಲ್ ಕಸಿದುಕೊಂಡು, ಇಬ್ಬರಿಗೂ ಗುಂಡಿಕ್ಕಿದ್ದಾನೆ. ಬಳಿಕ ದಾರಿಯಲ್ಲಿ ಹಾದುಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನೂ ಆತ ಗುಂಡಿಕ್ಕಿ ಕೊಂದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದೊಂದು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಲು ಕೆಲವೊಂದು ಪುರಾವೆಗಳು ಲಭಿಸಿರುವುದಾಗಿ ಬೆಲ್ಜಿಯಂನ ಫೆಡರಲ್ ಪ್ರಾಸಿಕ್ಯೂಶನ್ ಕಾರ್ಯಾಲಯದ ವಕ್ತಾರ ಎರಿಕ್ ವ್ಯಾನ್ ಡೆ ಸೆಪ್ಟ್ ತಿಳಿಸಿದ್ದಾರೆ.

 ಶಾಲೆಯ ಸಮೀಪದ ಕೆಫೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗುಂಡಿಕ್ಕಿ ಹತ್ಯೆಗೈದ ಹಂತಕನು ಆನಂತರ ಶಾಲೆಯೊಳಗೆ ನುಗ್ಗಿ , ಅಲ್ಲಿ ಯುವತಿಯೊಬ್ಬಳನ್ನು ಕೆಲವು ನಿಮಿಷಗಳ ಕಾಲ ಒತ್ತೆಯಾಳಾಗಿರಿಸಿದ್ದ. ಆನಂತರ ನಡೆದ ಗುಂಡಿನ ಕಾಳಗದಲ್ಲಿ ಪೊಲೀಸರು ಶಂಕಿತ ಉಗ್ರನನ್ನು ಹತ್ಯೆಗೈದಿದ್ದಾರೆ.

ಹಂತಕನು ಕಳೆದ ವಾರವಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದು, ಆತನ ವಿರುದ್ಧ ಈ ಹಿಂದೆ ಕೆಲವು ಸಣ್ಣಪುಟ್ಟ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಆದರೆ ಆತನಿಗೆ ಯಾವುದೇ ಭಯೋತ್ಪಾದಕ ನಂಟಿರುವ ಬಗ್ಗೆ ಈವರೆಗೆ ಯಾವುದೇ ಮಾಹಿತಿಯಿರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

  ಲಿಜಿಯಲ್ಲಿ ನಡೆದ ಶಂಕಿತ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಕೆಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ .ಯಾವುದೇ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ.

  2016ರ ಬ್ರುಸೆಲ್ಸ್‌ನಲ್ಲಿ ನಡೆದ ಐಸಿಸ್ ಉಗ್ರರು ನಡೆಸಿದ ಅವಳಿ ಆತ್ಮಹತ್ಯಾ ದಾಳಿಯಲ್ಲಿ 32 ಮಂದಿ ಮೃತಪಟ್ಟ ಘಟನೆಯ ಬಳಿಕ ಬೆಲ್ಜಿಯಂನಲ್ಲಿ ಭದ್ರತಾಕಟ್ಟೆಚ್ಚರವನ್ನು ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News