ಕಾರು ಅಪಹರಣಕ್ಕೆ ವಿಫಲ ಯತ್ನದ ವೇಳೆ 9 ವರ್ಷದ ಎನ್‌ಆರ್‌ಐ ಬಾಲಕಿ ಹತ್ಯೆ

Update: 2018-05-29 17:45 GMT

   ಜೊಹಾನ್ಸ್‌ಬರ್ಗ್,ಮೇ 29: ಕಾರು ಅಪಹರಣಕ್ಕೆ ಯತ್ನಿಸಿದ ದುಷ್ಕರ್ಮಿಗಳ ಗುಂಪೊಂದು 9 ವರ್ಷದ ಭಾರತೀಯ ಮೂಲದ ಬಾಲಕಿಗೆ ಗುಂಡಿಕ್ಕಿದ ಪರಿಣಾಮ ಆಕೆ ಮೃತಪಟ್ಟ ಘಟನೆ ದ.ಆಫ್ರಿಕದ ನಗರ ಡರ್ಬಾನ್‌ನಲ್ಲಿ ಸೋಮವಾರ ನಡೆದಿದೆ. ಈ ಬರ್ಬರ ಘಟನೆಯ ವಿರುದ್ಧ ರೊಚ್ಚಿಗೆದ್ದ ಡರ್ಬಾನ್‌ನ ಅನಿವಾಸಿ ಭಾರತೀಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಡರ್ಬಾನ್‌ನ ಚಾಟ್ಸ್‌ವರ್ತ್ ಪ್ರದೇಶದ ನಿವಾಸಿ, ನಾಲ್ಕನೆ ತರಗತಿಯ ವಿದ್ಯಾರ್ಥಿನಿ, ಸಾದಿಯಾ ಸುಖ್‌ರಾಜ್ ಸೋಮವಾರ ತನ್ನ ತಂದೆಯೊಂದಿಗೆ ಶಾಲೆಗೆ ತೆರಳುತ್ತಿದ್ದಾಗ ಮೂವರು ಶಸ್ತ್ರಧಾರಿಗಳ ತಂಡವೊಂದು ಅವರಿದ್ದ ಕಾರನ್ನು ತಡೆದು ನಿಲ್ಲಿಸಿತ್ತು. ಬಲವಂತವಾಗಿ ಬಾಲಕಿಯ ತಂದೆಯನ್ನು ಹೊರದಬ್ಬಿದ ದುಷ್ಕರ್ಮಿಗಳು, ಕಾರಿನೊಂದಿಗೆ ಆಕೆಯನ್ನು ಅಪಹರಿಸಿ ಪರಾರಿಯಾಗಿದ್ದರು.

 ಆಗ ಅಲ್ಲಿದ್ದ ಸ್ಥಳೀಯರು ಕಾರನ್ನು ಬೆನ್ನಟ್ಟಿದಾಗ, ಎರಡೂ ತಂಡಗಳ ನಡುವೆ ಗುಂಡಿನ ಚಕಮಕಿ ನಡೆಯಿತು. ಪರಾರಿಯಾಗುವ ಧಾವಂತದಲ್ಲಿದ್ದ ಅಪಹರಣಕಾರರು ಪಾರ್ಕೊಂದರ ಸಮೀಪ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಗಂಭೀರ ಗುಂಡೇಟಿನ ಗಾಯಗಳಾಗಿದ್ದ ಸಾದಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಕಾರು ಅಪಘಾತದ ವೇಳೆ ಓರ್ವ ಅಪಹರಣಕಾರ ಮೃತಪಟ್ಟಿದ್ದು, ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮೂರನೆ ಆರೋಪಿ ನಾಪತ್ತೆಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಚಾಟ್ಸ್‌ವರ್ತ್ ಪ್ರದೇಶದ 3 ಸಾವಿರಕ್ಕೂ ಅಧಿಕ ಭಾರತೀಯ ಮೂಲದವರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News