ಕದನವಿರಾಮ ಒಪ್ಪಂದ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಉಭಯ ದೇಶಗಳ ನಿರ್ಧಾರ
ಇಸ್ಲಾಮಾಬಾದ್,ಮೇ 29: ಉಭಯದೇಶಗಳ ನಡುವೆ ವಿಶ್ವಾಸ ವರ್ಧನೆಯ ಕಾರ್ಯತಂತ್ರವಾಗಿ ಭಾರತ ಹಾಗೂ ಪಾಕಿಸ್ತಾನದ ಸೇನೆಗಳು, 2003ರ ಕದನವಿರಾಮ ಒಪ್ಪಂದವನ್ನು ಗಡಿಯಲ್ಲಿ ಮರುಸ್ಥಾಪಿಸಲು ನಿರ್ಧರಿಸಿವೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಹಾಗೂ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವೆ ವಿಶೇಷ ಹಾಟ್‌ಲೈನ್ ಸಂಪರ್ಕವನ್ನು ಸ್ಥಾಪಿಸಲಾಗಿದೆಯೆಂದು ಪಾಕಿಸ್ತಾನ ಸೇನೆಯು ಮಂಗಳವಾರ ತಿಳಿಸಿದೆ. 2003ರಲ್ಲಿ ಎರಡು ದೇಶಗಳ ನಡುವೆ ಏರ್ಪಟ್ಟ ಕದನವಿರಾಮ ಒಪ್ಪಂದವನ್ನು ಮಾತು ಹಾಗೂ ಕೃತಿಯಲ್ಲಿ ಸಂಪೂರ್ಣವಾಗಿ ಜಾರಿಗೆ ತರಲು ಭಾರತ ಹಾಗೂ ಪಾಕ್ ಸೇನೆಗಳ ಡಿಜಿಎಂಓಗಳು ಸಮ್ಮತಿ ಸೂಚಿಸಿದ್ದಾರೆಂದು ಪಾಕ್ ಸೇನೆಯ ಅಂತರ್‌ಸೇವಾ ಸಾರ್ವಜನಿಕ ಸಂಪರ್ಕಗಳ ಇಲಾಖೆ (ಐಎಸ್‌ಪಿಆರ್)ನ ಮಾಧ್ಯಮ ವಿಭಾಗವು ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಮುಂದೆ, ಎರಡೂ ಕಡೆಗಳಿಂದಲೂ ಕದನವಿರಾಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಅವರು ನಿರ್ಧರಿಸಿದ್ದಾರೆಂದು ಹೇಳಿಕೆ ತಿಳಿಸಿದೆ.
ಒಂದು ವೇಳೆ ಗಡಿಯಲ್ಲಿ ಯಾವುದೇ ವಿವಾದ್ಯ ತಲೆದೋರಿದಲ್ಲಿ ಗರಿಷ್ಠ ಸಂಯಮವನ್ನು ಪಾಲಿಸಲಾಗುವುದು ಹಾಗೂ ಅವುಗಳನ್ನು ಹಾಟ್‌ಲೈನ್ ಸಂಪರ್ಕಗಳ ಮೂಲಕ ಹಾಗೂ ಸ್ಥಳೀಯ ಕಮಾಂಡರ್‌ಗಳ ಮಟ್ಟದಲ್ಲಿ ಧ್ವಜಸಭೆಗಳನ್ನು ನಡೆಸುವುದು ಸೇರಿದಂತೆ ಈಗ ಚಾಲ್ತಿಯಲ್ಲಿರುವ ಕಾರ್ಯತಂತ್ರಗಳ ಮೂಲಕ ಬಗೆಹರಿಸಲಾಗುವುದೆಂದು ಐಎಸ್‌ಪಿಆರ್ ಹೇಳಿಕೆ ತಿಳಿಸಿದೆ.
ಭಾರತದ ಗೃಹ ಸಚಿವಾಲಯದಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ ಈ ವರ್ಷದ ಮೊದಲ ಐದು ತಿಂಗಳುಗಳಲ್ಲಿ ಭಾರತ-ಪಾಕ್ ಗಡಿಯಲ್ಲಿ 1250ಕ್ಕೂ ಅಧಿಕ ಕದನವಿರಾಮ ಉಲ್ಲಂಘನೆಯ ಘಟನೆಗಳು ವರದಿಯಾಗಿದ್ದವು. 2017ರಲ್ಲಿ 971 ಹಾಗೂ 2016ರಲ್ಲಿ 449 ಮತ್ತು 2015ರಲ್ಲಿ 405 ಕದನವಿರಾಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.