ಅಫ್ಘಾನಿಸ್ತಾನ ತಂಡ ಪ್ರಕಟ

Update: 2018-05-29 18:32 GMT

ಹೊಸದಿಲ್ಲಿ, ಮೇ 29: ಭಾರತ ವಿರುದ್ಧ ಬೆಂಗಳೂರಿನಲ್ಲಿ ಜೂ.14 ರಿಂದ ಆರಂಭವಾಗಲಿರುವ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯಕ್ಕೆ ಅಫ್ಘಾನಿಸ್ತಾನ ತಂಡ 15 ಸದಸ್ಯರನ್ನು ಒಳಗೊಂಡ ತಂಡವನ್ನು ಮಂಗಳವಾರ ಪ್ರಕಟಿಸಿದೆ.

ವಿಶ್ವದ ಪ್ರಮುಖ ಟ್ವೆಂಟಿ-20 ಬೌಲರ್ ರಶೀದ್ ಖಾನ್ ನಾಲ್ವರು ಬೌಲರ್‌ಗಳನ್ನೊಳಗೊಂಡ ಸ್ಪಿನ್ ದಾಳಿಯ ನೇತೃತ್ವ ವಹಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಹೊಸ ಸಂಚಲನ ಮೂಡಿಸಿದ ರಶೀದ್‌ರಲ್ಲದೆ ಯುವ ಆಟಗಾರ ಮುಜೀಬ್‌ವುರ್ ರಹ್ಮಾನ್, ಇತರ ಇಬ್ಬರು ಸ್ಪಿನ್ನರ್‌ಗಳಾದ ಝಹೀರ್ ಖಾನ್ ಹಾಗೂ ಆಮಿರ್ ಹಂಝಾ ಅವರಿದ್ದಾರೆ.

 ರಶೀದ್ ಹಾಗೂ ಮುಜೀಬ್ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆಯ ಮೂಲಕ ಇಡೀ ವಿಶ್ವವನ್ನು ತಮ್ಮತ್ತ ಸೆಳೆದಿದ್ದಾರೆ. ಆದರೆ, ಈ ಇಬ್ಬರು ಮೊದಲ ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಾಗಿದೆ. ರಶೀದ್ ಖಾನ್ ಈ ತನಕ ನಾಲ್ಕು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 17ರ ಹರೆಯದ ಮುಜೀಬ್ ಈ ತನಕ ದೀರ್ಘ ಮಾದರಿಯ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಅಫ್ಘಾನಿಸ್ತಾನದ ಬ್ಯಾಟಿಂಗ್ ಪ್ರಮುಖವಾಗಿ ನಾಯಕ ಸ್ಟಾನಿಕ್‌ಝೈ, ಆರಂಭಿಕ ಆಟಗಾರ ಮುಹಮ್ಮದ್ ಶಹಝಾದ್ ಹಾಗೂ ಬ್ಯಾಟಿಂಗ್ ಆಲ್‌ರೌಂಡರ್ ಮುಹಮ್ಮದ್ ನಬಿ ಅವರನ್ನು ಅವಲಂಬಿತವಾಗಿದೆ.

  ಒಟ್ಟಾರೆ ಅಫ್ಘಾನಿಸ್ತಾನ ತಂಡದ ಆಟಗಾರರಿಗೆ ಒಟ್ಟು 205 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅನುಭವವಿದೆ. ನಾಲ್ವರು ಆಟಗಾರರಿಗೆ 20ಕ್ಕೂ ಅಧಿಕ ಪ್ರಥಮ ದರ್ಜೆ ಪಂದ್ಯ ಆಡಿರುವ ಅನುಭವವಿದೆ. ನಬಿ ಕಳೆದ ಎರಡು ವರ್ಷಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದಾರೆ. ನಬಿ ಗರಿಷ್ಠ ಪ್ರಥಮ ದರ್ಜೆ ಪಂದ್ಯಗಳನ್ನು(32) ಆಡಿರುವ ಆಟಗಾರನಾಗಿದ್ದಾರೆ. ನಾಯಕ ಸ್ಟಾನಿಕ್‌ಝೈ(23 ಪಂದ್ಯಗಳು), ವೇಗದ ಬೌಲರ್ ಅಹ್ಮದ್‌ಝೈ(22 ಪಂದ್ಯಗಳು) ಹಾಗೂ ಶಹಝಾದ್ 20 ಪಂದ್ಯಗಳನ್ನಾಡಿದ್ದಾರೆ. ಅಫ್ಘಾನಿಸ್ತಾನ ತಂಡ ಅನುಭವಿ ವೇಗದ ಬೌಲರ್ ದೌಲತ್ ಝದ್ರಾನ್ ಸೇವೆಯಿಂದ ವಂಚಿತವಾಗಿದೆ. ಝದ್ರಾನ್ ಗಾಯದ ಸಮಸ್ಯೆಯಿಂದಾಗಿ ಭಾರತ ವಿರುದ್ಧ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಸಚಿನ್ ತೆಂಡುಲ್ಕರ್‌ರಿಂದ ವಿಶ್ವದ ಶ್ರೇಷ್ಠ ಟ್ವೆಂಟಿ-20 ಬೌಲರ್ ಎಂದು ಶ್ಲಾಘಿಸಲ್ಪಟ್ಟಿರುವ ರಶೀದ್ ಖಾನ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

 ‘‘ರಶೀದ್ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನ ಶ್ಲಾಘನಾರ್ಹ. ಈ ವರ್ಷದ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ರಶೀದ್ ಪ್ರದರ್ಶನ ಅತ್ಯುತ್ತಮವಾಗಿತ್ತು. ಅವರೊಬ್ಬ ಕ್ವಾಲಿಟಿ ಬೌಲರ್. ಅವರಿಗೆ ಪ್ರತಿಯೊಬ್ಬರು ಗೌರವ ನೀಡಬೇಕಾಗಿದೆ. ಅಫ್ಘಾನಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಕ್ರಿಕೆಟ್‌ನಲ್ಲಿ ಹಾಗೂ ನಮ್ಮ ಜೀವನದಲ್ಲಿ ಯಾರನ್ನೂ ಸುಲಭವಾಗಿ ತೆಗೆದುಕೊಳ್ಳಬಾರದು’’ ಎಂದು ಭಾರತದ ಹಂಗಾಮಿ ಟೆಸ್ಟ್ ನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.

‘‘ಟೆಸ್ಟ್ ಕ್ರಿಕೆಟ್ ಆಡುವುದಕ್ಕೆ ಅರ್ಹತೆ ಪಡೆದಿರುವುದು ಅಫ್ಘಾನಿಸ್ತಾನ ಕ್ರಿಕೆಟ್‌ಗೆ ದೊಡ್ಡ ವಿಚಾರವಾಗಿದೆ. ನಾವು ಇತರ ತಂಡಗಳಂತೆಯೇ ಅಫ್ಘಾನಿಸ್ತಾನ ವಿರುದ್ಧ ಆಡಿ ಗೆಲುವು ಸಾಧಿಸಲು ಶ್ರಮಿಸಲಿದ್ದೇವೆ’’ ಎಂದು ರಹಾನೆ ಹೇಳಿದ್ದಾರೆ.

ಅಫ್ಘಾನಿಸ್ತಾನ ಟೆಸ್ಟ್ ಕ್ರಿಕೆಟ್ ತಂಡ

ಅಶ್ಘರ್ ಸ್ಟಾನಿಕ್‌ಝೈ, ಮುಹಮ್ಮದ್ ಶಹಝಾದ್, ಜಾವೇದ್ ಅಹ್ಮದಿ, ರಹ್ಮತ್ ಶಾ, ಇಸಾನುಲ್ಲಾ ಜನ್ನತ್, ನಾಸಿರ್ ಜಮಾಲ್, ಹಶ್ಮತುಲ್ಲಾ ಶಾಹಿದಿ, ಅಫ್ಸರ್ ಝಝೈ, ಮುಹಮ್ಮದ್ ನಬಿ, ರಶೀದ್ ಖಾನ್, ಝಹೀರ್ ಖಾನ್, ಆಮಿರ್ ಹಂಝಾ, ಸೈಯದ್ ಅಹ್ಮದ್ ಶಿರ್ಝಾದ್, ಯಾಮಿನ್ ಅಹ್ಮದ್‌ಝೈ, ಮುಜೀಬ್‌ವುರ್ ರಹ್ಮಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News