ಪತ್ನಿ ತ್ಯಜಿಸಿದ ಐವರು ಅನಿವಾಸಿಗಳಿಗೆ ಶಿಕ್ಷೆ ಏನು ಗೊತ್ತೇ ?

Update: 2018-05-30 03:44 GMT

ಹೊಸದಿಲ್ಲಿ, ಮೇ 30: ವಿವಾಹವಾದ ಕೆಲವೇ ಸಮಯದಲ್ಲಿ ಪತ್ನಿಯರನ್ನು ವಿದೇಶದಲ್ಲಿ ತ್ಯಜಿಸಿದ ಆರೋಪದಲ್ಲಿ ಐವರು ಅನಿವಾಸಿ ಭಾರತೀಯರ ಪಾಸ್‌ಪೋರ್ಟನ್ನು ಭಾರತ ಸರ್ಕಾರ ರದ್ದುಪಡಿಸಿದೆ. ಇಂಥ ಆರೋಪದಲ್ಲಿ ಪಾಸ್‌ಪೋರ್ಟ್ ರದ್ದು ಮಾಡಿರುವುದು ಇದೇ ಮೊದಲು.

ಅನಿವಾಸಿ ಭಾರತೀಯರ ವೈವಾಹಿಕ ವ್ಯಾಜ್ಯ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಲ್ಲಿಸಿದ ಪ್ರಸ್ತಾವನೆಯನ್ನು ಒಪ್ಪಿಕೊಂಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕ್ರಮ ಕೈಗೊಂಡಿದೆ.

ಆದರೆ ಇಂಥ ಪ್ರಕರಣಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್ ಮೂಲಕ ಆರೋಪಿಗಳಿಗೆ ಸಮನ್ಸ್ ನೀಡಬೇಕು ಎಂಬ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯ ತಳ್ಳಿಹಾಕಿದೆ. ಕಾನೂನು ಸಮಸ್ಯೆ ಹಿನ್ನೆಲೆಯಲ್ಲಿ ಇದು ಅಸಾಧ್ಯ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

"ಅನಿವಾಸಿ ಭಾರತೀಯರು ಕ್ಷುಲ್ಲಕ ಕಾರಣ ನೀಡಿ ತಗಾದೆ ತೆಗೆದು ಹೊಸದಾಗಿ ವಿವಾಹವಾದ ಪತ್ನಿಯನ್ನು ತ್ಯಜಿಸುವ ಚಾಳಿಯನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ. ವೇಗವಾಗಿ ಬೆಳೆಯುತ್ತಿರುವ ಈ ಪ್ರವೃತ್ತಿಗೆ ಕಡಿವಾಣ ಹಾಕುವುದು ಅಗತ್ಯ" ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಸ್‌ಪೋರ್ಟ್ ರದ್ದುಪಡಿಸುವುದರಿಂದ ಇಂಥ ಪುರುಷರು ಭಾರತಕ್ಕೆ ವಾಪಸ್ಸಾಗಿ ವಿಚಾರಣೆ ಎದುರಿಸುವುದು ಅನಿವಾರ್ಯವಾಗುತ್ತದೆ. ಆದರೆ ಈ ಮುನ್ನ ಜಾಮೀನು ರಹಿತ ವಾರೆಂಟ್ ಹೊರಡಿಸಿದರೂ, ಸಮನ್ಸ್‌ಗಳಿಗೆ ಸ್ಪಂದಿಸದೇ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ಅಧಿಕಾರಿ ವಿವರಿಸಿದ್ದಾರೆ. ನಿಗದಿತ ಕಾರ್ಯಾಚರಣೆ ಪ್ರಕ್ರಿಯೆ ಅನ್ವಯ ಈ ಸಂಬಂಧ ಕಳೆದ ತಿಂಗಳು ಸುತ್ತೋಲೆ ಹೊರಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News