ಮೇ 30, 31ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ

Update: 2018-05-30 04:10 GMT

ಹೊಸದಿಲ್ಲಿ, ಮೇ 30: ದೇಶಾದ್ಯಂತ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಸರ್ಕಾರಿ ಬ್ಯಾಂಕ್ ಉದ್ಯೋಗಿಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ, ಹಣಕಾಸು ವಹಿವಾಟು ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಬುಧವಾರ ಹಾಗೂ ಗುರುವಾರ ಬ್ಯಾಂಕ್ ವಹಿವಾಟು ಸ್ಥಗಿತಗೊಳಿಸಿ ಮುಷ್ಕರ ನಡೆಸುವಂತೆ ಕರೆ ನೀಡಲಾಗಿದೆ.

ಮಾಸಾಂತ್ಯದಲ್ಲಿ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ವೇತನ ಬಟವಾಡೆ ಕೂಡಾ ವ್ಯತ್ಯಯವಾಗುವ ಸಾಧ್ಯತೆ ಇದೆ. ಎಟಿಎಂ ವಹಿವಾಟಿಗೂ ಧಕ್ಕೆಯಾಗುವ ಸಾಧ್ಯತೆ ಇದೆ. ಆದರೆ ಆನ್‌ಲೈನ್ ಬ್ಯಾಂಕಿಂಗ್ ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗದು.

ಬ್ಯಾಂಕ್ ಉದ್ಯೋಗಿಗಳಿಗೆ ನೀಡಿದ ಶೇಕಡ 2ರಷ್ಟು ವೇತನ ಹೆಚ್ಚುವರಿಗೆ ಕಾರ್ಮಿಕ ಸಂಘಟನೆಗಳು ಒಪ್ಪದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಉದ್ಯೋಗಿ ಸಂಘಗಳ ಜತೆ ನಡೆದ ಸಂಧಾನ ಮಾತುಕತೆಗಳು ವಿಫಲವಾಗಿವೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಮುಂದಿಟ್ಟಿರುವ ವೇತನ ಏರಿಕೆ ಪ್ರಸ್ತಾವನೆಯನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕಿಂಗ್ ಯೂನಿಯನ್ಸ್ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

ವೇತನ ಪರಿಷ್ಕರಣೆಗೆ ಆಗ್ರಹಿಸಿ ಮೇ 30 ಹಾಗೂ 31ರಂದು ದೇಶಾದ್ಯಂತ 10 ಲಕ್ಷ ಉದ್ಯೋಗಿಗಳು ಮುಷ್ಕರ ನಡೆಸಲಿದ್ದಾರೆ ಎಂದು ಬ್ಯಾಂಕ್ ಉದ್ಯೋಗಿಗಳ ಸಂಘದ ಉಪಾಧ್ಯಕ್ಷ ಅಶ್ವನಿ ರಾಣಾ ಹೇಳಿದ್ದಾರೆ. ಎಟಿಎಂ ಭದ್ರತಾ ಸಿಬ್ಬಂದಿ ಕೂಡಾ ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News