ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಮಾವೋವಾದಿ ಬೆಂಬಲಿತ ಪಕ್ಷವನ್ನು ಬೆಂಬಲಿಸಿದ ಬಿಜೆಪಿ

Update: 2018-05-30 09:43 GMT

ಕೊಲ್ಕತ್ತಾ, ಮೇ 30: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗಳಲ್ಲಿ ಆದಿವಾಸಿ ಬಾಹುಳ್ಯದ ಝಾರ್ ಗ್ರಾಮ್ ಹಾಗೂ ಪುರುಲಿಯಾ ಬಂಗಾಳ ಪಂಚಾಯತ್ ನ ಕೆಲ ಕಡೆಗಳಲ್ಲಿ ಬಿಜೆಪಿಯು ಮಾವೋ ಬೆಂಬಲಿತ ಪಕ್ಷವನ್ನು ಬೆಂಬಲಿಸಿತ್ತು ಎನ್ನಲಾಗಿದೆ.

 ಝಾರ್ ಗ್ರಾಮ್ ನ ಕನಿಷ್ಠ ಒಂದು ಬ್ಲಾಕ್ ನಲ್ಲಿ ಬಿಜೆಪಿಯು ಮಾವೋವಾದಿ ಬೆಂಬಲಿತ ಆದಿವಾಸಿ ಸಮನ್ವಯ್ ಮಂಚ್ ಗೆ ಸ್ಪರ್ಧಿಸಲು ಅನುವು ಮಾಡಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿರಲಿಲ್ಲ. ತಮ್ಮ ಪಕ್ಷ ಆದಿವಾಸಿ ಸಮನ್ವಯ್ ಸಮಿತಿ ಜತೆ ಸೀಟು ಹೊಂದಾಣಿಕೆ ಮಾಡಿದ್ದನ್ನು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್  ಒಪ್ಪಿಕೊಂಡಿದ್ದಾರೆ. “ಮತ ವಿಭಜನೆ ತಪ್ಪಿಸುವ ಉದ್ದೇಶ ನಮಗಿತ್ತು. ಮೇಲಾಗಿ ನಾವು ಟಿಎಂಸಿ ವಿರುದ್ಧ ಹೋರಾಡುತ್ತಿದ್ದುದರಿಂದ ಎಎಸ್‍ಎಂ ಸ್ಪರ್ಧಿಸಿದ ಕಡೆ ನಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿಲ್ಲ. ಅವರು ನಮಗೆ ಗೊತ್ತು ಹಾಗೂ ಭವಿಷ್ಯದಲ್ಲಿ ನಾವು ಜತೆಯಾಗಿ ಕೆಲಸ ಮಾಡಬಹುದು. ಆದರೆ ಯಾವುದೇ ಅಧಿಕೃತ ಹೊಂದಾಣಿಕೆ ಮಾಡಲಾಗಿಲ್ಲ'' ಎಂದು ಘೋಷ್ ಹೇಳಿದ್ದಾರೆ.

ಬಿಜೆಪಿ ಮಾವೋವಾದಿಗಳ ಜತೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂಬ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆರೋಪವನ್ನು ಅವರು ನಿರಾಕರಿಸಿದ್ದಾರೆ.

ಎಎಸ್‍ಎಂ ನ ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಚುನಾವಣೆಗಿಂತ ಮುಂಚೆ ಮಾವೋವಾದಿಗಳು ಅಪೀಲು ಮಾಡಿದ್ದರೆಂದು ರಾಜ್ಯ ಗುಪ್ತಚರ ಅಧಿಕಾರಿಗಳು ದೃಢಪಡಿಸಿದ್ದಾರೆ. “ಅವರು ಪೋಸ್ಟರ್ ಗಳನ್ನೂ ಹಾಕಿದ್ದರು. ಅವರ ಕೆಲ ಸದಸ್ಯರು ಮಾವೋವಾದಿಗಳ ಜತೆಗಿದ್ದರು'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಬಿಜೆಪಿ ಜತೆಗಿರುವ ಮಾಜಿ ಟಿಎಂಸಿ ನಾಯಕ ಮುಕುಲ್ ರಾಯ್ ಈ ಕ್ಷೇತ್ರದಲ್ಲಿ ಚುನಾವಣೆಗಿಂತ ಮೊದಲು ಬಹಳ ಸಮಯ ಕಳೆದಿದ್ದರಲ್ಲದೆ 2009ರಲ್ಲಿ ಅಂದಿನ ಸರಕಾರ ಮಾವೋವಾದಿಗಳ ಜತೆ ನಂಟು ಹೊಂದಿದ್ದಕ್ಕಾಗಿ ಬಂಧಿಸಿದ್ದ ಛತ್ರಧರ್ ಮಹತೋ ಕುಟುಂಬವನ್ನೂ ಈ ಸಂದರ್ಭ ಅವರು ಭೇಟಿಯಾಗಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News