ಹೊರಗಿನವನಾಗಿರುವುದರಿಂದ ನಾನೊಂದು ಟಾರ್ಗೆಟ್ ಆಗಿದ್ದೇನೆ -ಸಂಸ್ಕೃತ ವಿದ್ವಾಂಸ ಶೆಲ್ಡನ್ ಪೊಲಾಕ್

Update: 2018-05-31 09:00 GMT

ಭಾಗ-1

 ಇತ್ತೀಚೆಗೆ ಭಾರತದಲ್ಲಿದ್ದ, 70ರ ಹರೆಯದ ಅಮೆರಿಕದ ಖ್ಯಾತ ಸಂಸ್ಕೃತ ವಿದ್ವಾಂಸ ಶೆಲ್ಡನ್ ಪೊಲಾಕ್ ಭಾರತದಲ್ಲಿ ಇಂದು ಸಂಸ್ಕೃತದ ಪ್ರಸ್ತುತತೆ, ತಾನೇಕೆ ಎಂದೂ ಧರ್ಮದ ಕಣ್ಣಿನ ಮೂಲಕ ಸಂಸ್ಕೃತವನ್ನು ಅಧ್ಯಯನ ಮಾಡಿಲ್ಲ ಮತ್ತು ಇಂದು ದೇಶದಲ್ಲಿರುವ ದ್ವೇಷದ ವಾತಾವರಣದ ಬಗ್ಗೆ ಇಲ್ಲಿ ಮಾತಾಡಿದ್ದಾರೆ. 

♦ ನೀವು ಸಂಸ್ಕೃತದ ಕಾಸ್ಮಾಪಾಲಿಟಿನ್ ಒಳಗೊಳ್ಳುವಿಕೆಯ ಬಗ್ಗೆ ಮಾತಾಡಿದ್ದೀರಿ. ಈ ಬಗ್ಗೆ ಸ್ವಲ್ಪ ವಿವರಿಸಬಹುದೇ ? 
ಪೊಲಾಕ್: ನಾಗರಿಕತೆಯ ಪ್ರತಿಯೊಂದು ದಾಖಲೆಯೂ, ಏಕಕಾಲದಲ್ಲಿ ಬರ್ಬರತೆಯ ಒಂದು ದಾಖಲೆಯೂ ಆಗಿರುತ್ತದೆ ಎಂಬ ವಾಲ್ಟರ್ ಬೆಂಜಮಿನ್ ಮಾತನ್ನು ನಾನು ಆಗಾಗ ಕೋಟ್ ಮಾಡುತ್ತಿರುತ್ತೇನೆ. ಸೌಂದರ್ಯದ ಒಂದು ವಸ್ತು ಬಹಳ ಸಂದರ್ಭಗಳಲ್ಲಿ ತುಂಬ ಕೊಳಕಾದ ಬುನಾದಿಗಳ ಮೇಲೆ ನಿಂತಿರುತ್ತದೆ. ವಿದ್ವಾಂಸನ ಕೆಲಸ ಸೌಂದರ್ಯ ಮತ್ತು ಕೊಳಕು ಎರಡಕ್ಕೂ ಗಮನ ಕೊಡುವುದು.
ಭಾರತದ ಜಾತಿ ವ್ಯವಸ್ಥೆಯ ಶೋಚನೀಯ ಸ್ಥಿತಿಗಳ, ಸಂಕಟಗಳ ಬಗ್ಗೆ ಮಾತಾಡದೆ ನಾವು ಭಾರತದ ವೈಭವಗಳ, ಭವ್ಯತೆಗಳ ಬಗ್ಗೆ ಮಾತಾಡಲು ಸಾಧ್ಯವಿಲ್ಲ. ವಿಶ್ವಾತ್ಮಕವಾಗಿ ಒಂದು ಸಾಹಿತ್ಯಿಕ ಹಾಗೂ ತತ್ವಶಾಸ್ತ್ರೀಯ ಅಭಿವ್ಯಕ್ತಿಯಾಗಿ ಲಭ್ಯವಾದದ್ದೇ ಸಂಸ್ಕೃತದ ಅಸಾಮಾನ್ಯವಾದ ಸಾಮರ್ಥ್ಯ, ಹಿರಿಮೆ. ಇದರಿಂದಾಗಿಯೇ ಸಂಸ್ಕೃತಕ್ಕೆ ಅದರ ಕಾಸ್ಮಾಪಾಲಿಟನ್ ಗುಣ ಬಂದಿದೆ. 12ನೇ ಶತಮಾನದಲ್ಲಿ ಕಾಂಬೋಡಿಯಾದ ರಾಜಕುಮಾರಿಯರು ಸಂಸ್ಕೃತ ಕಾವ್ಯವನ್ನು ಬರೆದು ಸ್ತಂಭಗಳ ಮೇಲೆ ಅದನ್ನು ಕೆತ್ತಿಸಿದ್ದರು. ದೂರದ ಜಾವಾ, ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ನೇಪಾಳದಲ್ಲಿ ಜನರು ಸಂಸ್ಕೃತ ಕಾವ್ಯ ಬರೆದಿದ್ದರು.
 ಆರಂಭದಲ್ಲಿ ಸಂಸ್ಕೃತದ ವಿರುದ್ಧವಿದ್ದ, ಬುದ್ಧರು ಮತ್ತು ಜೈನರು ಅಂತಿಮವಾಗಿ ಇದು (ಸಂಸ್ಕೃತ) ಇಲ್ಲದೆ ಏನೂ ನಡೆಯುವುದಿಲ್ಲವೆಂದು ಮನಗಂಡರು. ಇತರ ಯಾವುದೇ ಮುಖ್ಯಭಾಷೆಯ ಹಾಗೆ ಸ್ಥಳೀಯ ಭಾಷೆಗಳನ್ನು, ನಾಶಮಾಡುವ ಬದಲಾಗಿ, ಶ್ರೀಮಂತಗೊಳಿಸುವ ಭಾಷೆ ಸಂಸ್ಕೃತ. ಸಂಸ್ಕೃತ ಎಲ್ಲೆಲ್ಲಿಗೆ ಹೋಯಿತೋ, ಅಲ್ಲೆಲ್ಲ ಅದು ದೇಶ ಭಾಷೆ (ಸ್ಥಳೀಯ ಭಾಷೆ) ಯನ್ನು ಸಾಧ್ಯವಾಗಿಸಿತು. ಸಂಸ್ಕೃತದ ಸಾಮಾಜಿಕ ಇತಿಹಾಸ ತುಂಬ ಸಂಕೀರ್ಣವಾದ ಒಂದು ವಿಷಯ. ಸಂಸ್ಕೃತದ ಕೆಳ ವರ್ಗದ ಸಂಸ್ಕೃತ ಕವಿಗಳು ಬಹಳ ಮಂದಿ ಇದ್ದಾರೆ. ಬ್ರಾಹ್ಮಣರು ಮಾತ್ರ ಸಂಸ್ಕೃತವನ್ನು ನಿಯಂತ್ರಿಸಿದರು ಎಂಬುದು ಒಂದು ವಸಾಹತುಶಾಹಿ ಕಲ್ಪನೆ ಮತ್ತು ಪರಿಕಲ್ಪನೆ.

♦ ಇವತ್ತು ಸಂಸ್ಕೃತವನ್ನು ಅಧ್ಯಯನ ಮಾಡುವುದರಿಂದ ಏನಾದರೂ ಉಪಯೋಗವಿದಯೇ?

ಪೊಲಾಕ್: ಕೆಲವು ಮಟ್ಟಗಳಲ್ಲಿ, ಉಪಯೋಗ ಮತ್ತು ಉದ್ಯೋಗಗಳ ಪ್ರಶ್ನೆ ಸರಿ, ನ್ಯಾಯಯುತವಾದದ್ದೆ. ಮೂರು ವರ್ಷಗಳ ಕಾಲ ಕಲಿತು ನೀವು ಕಾಲೇಜಿನಿಂದ ಸಂಸ್ಕೃತದಲ್ಲಿ ಒಂದು ಪದವಿ ಪಡೆದರೆ, ನಿಮಗೆ ಸಿಗುವ ಒಂದೇ ಒಂದು ಉದ್ಯೋಗ ಎಂದರೆ ಹೋಮ, ಹವನಗಳನ್ನು ಮಾಡಿಸುವುದು. ಅಂದರೆ, ಪಾರೋಹಿತ್ಯ, ಅರ್ಚಕನ ವೃತ್ತಿ. ಇತ್ತೀಚೆಗೆ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು) ಪೂಜಾರಿಗಳ ತರಬೇತಿ ನಡೆಸುತ್ತಿದೆ ಅಂತ ಕಾಣುತ್ತಿದೆ. ಮಾನವಿಕ ವಿಷಯಗಳಲ್ಲಿ ನೀವು ಪಡೆಯುವ ಒಂದು ಪದವಿಯು ನಿಮ್ಮ ಬದುಕನ್ನು ಶ್ರೀಮಂತಗೊಳಿಸುವುದಲ್ಲದೆ, ನಿಮ್ಮನ್ನು ಸಬಲರನ್ನಾಗಿಸಲು ನಿಮಗೆ ಹಲವು ಕೌಶಲ್ಯಗಳನ್ನು ಕಲಿಸುವಂತಿರಬೇಕು. ನೀವು ಭಾರತೀಯ ಶಾಸ್ತ್ರೀಯ ಸಂಗೀತದ ವಿನ್ಯಾಸ, ಚೌಕಟ್ಟಿನ ಬಗ್ಗೆ ಸ್ವಲ್ಪವಾದರೂ ಕಲಿಯುವುದು ಬೇಡವೇ? ನಿಮ್ಮ ಸುತ್ತಮುತ್ತ ಇರುವ ಸೌಂದರ್ಯವನ್ನು ನೀವು ಅರ್ಥಮಾಡಿಕೊಳ್ಳದೇ ಇದ್ದರೆ ನೀವು ಬದುಕುವುದಾದರೂ ಯಾಕೆ? ಇದು ಸಂಸ್ಕೃತವನ್ನು ಕಲಿಯಲು ಇರುವ ಒಂದು ಕಾರಣ: ನಿಮ್ಮ ಪರಂಪರೆಯ ಅಭಿಜಾತ ಕೃತಿ (ಕ್ಲಾಸಿಕ್ಸ್)ಗಳನ್ನು ಓದುವ ನಿಮ್ಮ ಸಾಮರ್ಥ್ಯವನ್ನು ವೃದ್ಧಿಸುವುದು. ನಾವೇಕೆ ಸಾಹಿತ್ಯವನ್ನು ಓದುತ್ತೇವೆ? ಯಾಕೆಂದರೆ ನಾವು ಒಂದು ಕತೆಯಲ್ಲಿ ಕಳೆದುಹೋಗಲು, ಮುಳುಗಿ ಹೋಗಲು ಬಯಸುತ್ತೇವೆ; ಒಂದು ಕವನದ, ಕಾವ್ಯದ ಸೌಂದರ್ಯದಿಂದ ಆನಂದ ಪಡೆಯಲು ಬಯಸುತ್ತೇವೆ; ಹಳೆಯ ಧ್ವನಿಗಳು ನಮ್ಮಿಡನೆ ಮಾತಾಡುವುದನ್ನು ಕೇಳಲು ಬಯಸುತ್ತೇವೆ, ಮತ್ತು ನಮಗೆ ಅಪರಿಚಿತವಾದ ಮಾನವ ಪ್ರಜ್ಞೆಯ ಸಾಧ್ಯತೆಗಳನ್ನು ನೋಡಲು, ತಿಳಿಯಲು ಬಯಸುತ್ತೇವೆ. ಭಾರತದ ಪಠ್ಯಗಳು ಮಾನವ ಪ್ರಜ್ಞೆಯ 3,000 ವರ್ಷಗಳನ್ನು ತಮ್ಮೆಳಗೆ ದಾಸ್ತಾನು ಇಟ್ಟುಕೊಂಡಿವೆ. ಇದು ಭಾರೀ ಬೃಹತ್ ಆದ ವಿಚಾರಗಳ ದಾಸ್ತಾನು. ನಾವು ಇದನ್ನೆಲ್ಲ ಎಸೆದುಬಿಡಬೇಕೆ?

♦ಹಾಗಾದರೇ, ನೀವು ಇವತ್ತು ಭಾರತದಲ್ಲಿ ಸಂಸ್ಕೃತದ ಸ್ಥಾನ ಎಲ್ಲಿ ಎನ್ನುತ್ತೀರಿ? ಅದನ್ನು ಎಲ್ಲಿ ಲೊಕೇಟ್ ಮಾಡುತ್ತೀರಿ?

ಪೊಲಾಕ್: ನನಗೆ ಭಾರತದಲ್ಲಿ ಹಲವು ಸಂಸ್ಕೃತ ವಿದ್ವಾಂಸರ, ಪಂಡಿತರ ಜೊತೆ ಸಂಸ್ಕೃತ ಕಲಿಯುವ ಬಹಳ ದೊಡ್ಡ ಅವಕಾಶ, ಭಾಗ್ಯ ದೊರಕಿದೆ. ಪೂನಾದಲ್ಲಿ ಶ್ರೀನಿವಾಸ ಶಾಸ್ತ್ರಿ, ಆಂಧ್ರ ಪ್ರದೇಶದ ಮಂತ್ರಾಲಯದಲ್ಲಿ ಬಾಲಸುಬ್ರಮಣಿಯಮ್ ಶಾಸ್ತ್ರಿ ಮತ್ತು ಮೈಸೂರಿನಲ್ಲಿ ನಾನು ಹಳೆಗನ್ನಡ ಓದಲು ನೆರವಾದ ವೆಂಕಟಾಚಲ ಶಾಸ್ತ್ರಿ. 1990ರ ದಶಕದ ಮಧ್ಯಭಾಗದಿಂದ ನಾನು ಸಾಂಪ್ರದಾಯಿಕ, ಪಾರಂಪರಿಕ ವಿದ್ವಾಂಸರ ಜತೆ ಕುಳಿತು ಪಠ್ಯಗಳನ್ನು ಅಕ್ಷರ ಅಕ್ಷರ ಓದಿದೆ, ಅಧ್ಯಯನ ಮಾಡಿದೆ. ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಅವಿರತವಾಗಿ ನಾನು ಅಧ್ಯಯನ ಮಾಡಿದೆ. ಆ ಪಠ್ಯಗಳನ್ನು ಓದಬಲ್ಲ ಈ ವಿದ್ವಾಂಸರಂತಹ ಜನ ಈಗ ಭಾರತದಲ್ಲಿದ್ದಾರೆಯೇ? ಇಲ್ಲವೆಂದಾದಲ್ಲಿ ಸಂಸ್ಕೃತ ದೊಡ್ಡ ಗಂಡಾಂತರದಲ್ಲಿದೆ, ದೊಡ್ಡ ಸಮಸ್ಯೆಯಲ್ಲಿದೆ. *ನಿಮಗೆ ಗೊತ್ತಿರಬೇಕು. ಇಂತಹ ವಿದ್ವಾಸರು ಇದ್ದಾರೆಯೇ?
ಪೊಲಾಕ್: ಭಾರತ ಒಂದು ದೊಡ್ಡ ದೇಶ ಮತ್ತು ನಾನು ಒಬ್ಬ ಸಣ್ಣ ವ್ಯಕ್ತಿ. ದಿಲ್ಲಿಯಲ್ಲಿ ನನ್ನ ವಿದ್ಯಾರ್ಥಿಯೊಬ್ಬನಿಗೆ ಸಂಸ್ಕೃತ ಅಧ್ಯಯನಕ್ಕೆ ನೆರವಾಗಲು ನಾನು ಒಬ್ಬ ವಿದ್ವಾಂಸರನ್ನು ಶಿಫಾರಸು ಮಾಡಬೇಕಾಗಿತ್ತು. ರಾಮ್ ಕರಣ್ ಶರ್ಮಾರವರ ಹೆಸರು ನನಗೆ ಹೊಳೆಯಿತು. ಅವರು ವಾರಣಾಸಿಯಲ್ಲಿ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದವರು. ಆದರೆ ಅವರಿಗೀಗ 95 ವರ್ಷ ವಯಸ್ಸು, ಗಾಲಿ ಕುರ್ಚಿಯಲ್ಲಿ ಓಡಾಡುವ ಅವರು ಈಗ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳದೆ ಇರಬಹುದು. ಆದ್ದರಿಂದ ನಾನು ದಿಲ್ಲಿ ವಿಶ್ವವಿದ್ಯಾನಿಲಯ ಮತ್ತು ಜೆಎನ್‌ಯುವಿನ ವೆಬ್‌ಸೈಟ್‌ಗಳನ್ನು ನೋಡಿದೆ, ನನ್ನ ಮಿತ್ರರಿಗೆ ಫೋನ್ ಮಾಡಿದೆ. ಆದರೆ ಅವರ್ಯಾರಿಗೂ ಭಾರತದ ರಾಜಧಾನಿಯಲ್ಲಿ ಒಬ್ಬನೇ ಒಬ್ಬ ವಿದ್ವಾಂಸನ ಹೆಸರು ನೀಡಲು ಸಾಧ್ಯವಾಗಲಿಲ್ಲ. ಓರ್ವ ವಿದ್ಯಾರ್ಥಿಯಾಗಿ ನಾನು ಅದೃಷ್ಟಶಾಲಿಯಾಗಿದ್ದೆ. ನನಗೆ ದೊರೆತ ಭಾರತದ ವಿದ್ವತ್‌ನಲ್ಲಿ ಎಸ್. ದಾಸಗುಪ್ತ, ವಿ. ರಾಘವನ್, ಪಿ.ವಿ. ಕಾಣೆಯಂತಹ  ಮಹಾವಿದ್ವಾಂಸರಿದ್ದರು. ಆ ಮಟ್ಟದ ವಿದ್ವತ್ ನನಗೆ ಈಗ ಎಲ್ಲಿಯೂ ಕಂಡು ಬರುತ್ತಿಲ್ಲ. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆ ಮಾಡುವ ಬಗ್ಗೆಯೇ ಎಲ್ಲ ಕಡೆಯೇ ಕೇಳಿಬರುವ ಮಾತು. ಸಂಸ್ಕೃತದಲ್ಲಿ ಒಂದು ಸಾಲು ಓದಲು ಬರದವರು ಸಂಸ್ಕೃತ ಅಧ್ಯಯನಕ್ಕಾಗಿ ಇಡೀ ಜೀವಮಾನವನ್ನೆ ಕಳೆದವರ ಮೇಲೆ ದಾಳಿ ನಡೆಸುವುದು ಕಾಣಿಸುತ್ತದೆ.

♦ ವಿಮರ್ಶೆ ನಿಮ್ಮನ್ನು ಕಾಡುತ್ತದೆಯೇ? ಸ್ವಲ್ಪ ಸಮಯದ ಹಿಂದೆ ‘ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ’ದ ಮುಖ್ಯ ಸಂಪಾದಕತ್ವದಿಂದ ನಿಮ್ಮನ್ನು ತೆಗೆದುಹಾಕಬೇಕೆಂಬ ಒಂದು ಚಳವಳಿ ನಡೆಯಿತು....
ಪೊಲಾಕ್: ನನಗೆ ಸರಿ ಅನಿಸಿದ್ದನ್ನು ನಾನು ಬರೆಯುತ್ತೇನೆ ಮತ್ತು ಅದರ ಪರಿಣಾಮಗಳನ್ನು ಎದುರಿಸುತ್ತೇನೆ. ಜನರೊಂದಿಗೆ ಚರ್ಚಿಸುವುದು ಕಷ್ಟ. ನಿಜವಾಗಿ ಸಂಸ್ಕೃತ ತಿಳಿದವರೊಂದಿಗೆ ಸಂಸ್ಕೃತದ ಬಗ್ಗೆ ಮಾತನಾಡಲು ನನಗೆ ಸಂತೋಷವಾಗುತ್ತದೆ. ಪ್ರಾಚೀನ ಹಸ್ತಪ್ರತಿಗಳು, ತಾಳೆಗರಿಗಳು, ಮ್ಯೂಸಿಯಂಗಳಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ ಧೂಳು ತಿನ್ನುತ್ತ ಬಿದ್ದಿವೆ. ಅದನ್ನೆಲ್ಲ ಯಾರೂ ಓದುವುದಿಲ್ಲ; ಅದರ ಫೋಟೊ ತೆಗೆಯಲು ಬಿಡುವುದಿಲ್ಲ. ನಾವು ವಿದೇಶಿಯರು ವೇದ ಕಾಲದ ಪಠ್ಯಗಳಲ್ಲಿ ಪರಮಾಣು ಸತ್ಯಗಳನ್ನು ಪತ್ತೆ ಮಾಡಿ ವಿದೇಶಗಳಿಗೆ ಸಾಗಿಸುತ್ತೇವೆ ಎಂಬ ಭಯ ಜನರಿಂದ ದೂರವಾಗುತ್ತದೆ ಎಂದು ಭಾವಿಸುತ್ತೇನೆ.
ಕೃಪೆ: indianexpress.com

Writer - ತನುಶ್ರೀ ಘೋಷ್

contributor

Editor - ತನುಶ್ರೀ ಘೋಷ್

contributor

Similar News

ಜಗದಗಲ
ಜಗ ದಗಲ