ಕನ್ನಡಿಗ ಪ್ರಶಾಂತ್ ರೈ 79 ಲಕ್ಷ ರೂ.ಗೆ ಹರಾಜು
ಮುಂಬೈ, ಮೇ 31: ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜಿನ ಎರಡನೇ ದಿನವಾದ ಗುರುವಾರ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಅತ್ಯಂತ ಹೆಚ್ಚು ಮೊತ್ತಕ್ಕೆ ಹರಾಜಾಗಿ ಗಮನ ಸೆಳೆದರು.
ಪ್ರಶಾಂತ್‌ರನ್ನು ಯುಪಿ ಯೋಧಾ ತಂಡ 79 ಲಕ್ಷ ರೂ.ಗೆ ಖರೀದಿಸಿತು. ಯೋಧಾ ತಂಡ ಹರಾಜಿನ ಮೊದಲ ದಿನವಾದ ಬುಧವಾರ ಇನ್ನೋರ್ವ ಕನ್ನಡಿಗ ರಿಶಾಂಕ್ ದೇವಾಡಿಗರನ್ನು 1.11 ಕೋ.ರೂ. ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಎರಡು ದಿನಗಳ ಕಾಲ ನಡೆದ ಕಬಡ್ಡಿ ಆಟಗಾರರ ಹರಾಜಿನಲ್ಲಿ 200 ಆಟಗಾರರು 12 ಕಬಡ್ಡಿ ತಂಡಗಳ ಪಾಲಾದರು. ಆರನೇ ಆವೃತ್ತಿಯ ಕಬಡ್ಡಿ ಲೀಗ್‌ಗಾಗಿ 2 ದಿನಗಳ ಕಾಲ ಆಟಗಾರರ ಹರಾಜು ಪ್ರಕ್ರಿಯೆ ನಡೆದಿತ್ತು. ಹರಾಜಿನ ವೇಳೆ ಹಣ ಹೂಡಿಕೆ ಹಾಗೂ ಬಿಡ್‌ಗಳ ಸಲ್ಲಿಕೆಯ ವೇಳೆ ಹಲವು ದಾಖಲೆ ಮುರಿಯಲ್ಪಟ್ಟವು.
ಹರ್ಯಾಣ ಸ್ಟೀಲರ್ಸ್ ತಂಡ 1.51 ಕೋ.ರೂ.ಗೆ ರೈಡರ್ ಮೋನು ಗೊಯತ್‌ರನ್ನು ಖರೀದಿಸಿತ್ತು. ಮೋನು ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ತೆಲುಗು ಟೈಟಾನ್ಸ್ ತಂಡ ರಾಹುಲ್ ಚೌಧರಿ ಅವರನ್ನು 1.29 ಕೋ.ರೂ.ಗೆ ಖರೀದಿಸಿತು.
ದೀಪಕ್ ಹೂಡ ಹಾಗೂ ನಿತಿನ್ ಥೋಮರ್‌ರನ್ನು ಕ್ರಮವಾಗಿ ಜೈಪುರ ಹಾಗೂ ಪುಣೇರಿ ತಂಡಗಳು ತಲಾ 1.15 ಕೋ.ರೂ.ನೀಡಿ ಖರೀದಿಸಿದವು. ಯು ಮುಂಬಾ ತಂಡ 1 ಕೋ.ರೂ. ನೀಡಿ ಇರಾನ್‌ನ ಫಝಲ್ ಅಟ್ರಾಚಲಿ ಅವರನ್ನು ಖರೀದಿಸಿತು. ಫಝಲ್ ಅತ್ಯಂತ ಹೆಚ್ಚು ಬೆಲೆಗೆ ಹರಾಜಾದ ವಿದೇಶಿ ಕಬಡ್ಡಿ ಆಟಗಾರನಾಗಿದ್ದಾರೆ.