ತೂತುಕುಡಿ ಸ್ಫೋಟಗೊಂಡಿದ್ದೇಕೆ?

Update: 2018-05-31 18:19 GMT

ತಾವು ಸೇವಿಸುತ್ತಿರುವ ಗಾಳಿಯ ಗುಣಮಟ್ಟ ಕುಸಿಯುತ್ತಿರುವುದನ್ನು ಮತ್ತು ತಮ್ಮ ಪರಿಸರದಲ್ಲಿ ರೋಗಗಳ ಪ್ರಮಾಣ ಹೆಚ್ಚಿ ಜನರು ಅವಸ್ಥೆ ಪಡುತ್ತಿರುವುದನ್ನು ತಮ್ಮ ಅನುಭವದಿಂದಲೇ ಕಂಡುಕೊಂಡ ಜನರು ಇವೆಲ್ಲಕ್ಕೂ ಕಂಪೆನಿಯು ಹೊರಹಾಕುತ್ತಿರುವ ತ್ಯಾಜ್ಯಗಳೇ ಕಾರಣವೆಂದು ಅರ್ಥವಾದಾಗ ಸಹಜವಾಗಿಯೇ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವರ ಪ್ರಶ್ನೆಗಳಿಗೆ ಉತ್ತರ ನೀಡದೆ, ತೂತುಕುಡಿಯಲ್ಲಿ ಮಾಡಿದಂತೆ ಜನರನ್ನು ಹತ್ತಿಕ್ಕಲು ಪ್ರಾರಂಭಿಸಿಾಗ ಜನರು ಬೀದಿಗಿಳಿದೇ ಇಳಿಯುತ್ತಾರೆ.

ಇದೇ ಮೇ 22ರಂದು ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಕಾರ್ಪೊರೇಟ್ ಕಂಪೆನಿಗೆ ಸೇರಿದ ಸ್ಟರ್ಲೈಟ್ ತಾಮ್ರ ಘಟಕದ ವಿರುದ್ಧ ಹೋರಾಡುತ್ತಿದ್ದ ಸಾವಿರಾರು ಜನರ ಮೇಲೆ ತಮಿಳುನಾಡು ಪೊಲೀಸರು ಏಕಾಏಕಿ ಗೋಲಿಬಾರ್ ಮಾಡಿ 13 ಜನರನ್ನು ಕೊಂದರು. ಅಲ್ಲಿ ಅಂದು ಸಂಭವಿಸಿದ್ದೇನೆಂದು ಅರ್ಥ ಮಾಡಿಕೊಳ್ಳುವುದು ಹಲವಾರು ಕಾರಣಗಳಿಂದ ಅತಿ ಮುಖ್ಯವಾದದ್ದಾಗಿದೆ. ಎಲ್ಲಕ್ಕಿಂತ ತುಂಬಾ ಸ್ಪಷ್ಟವಾಗುವ ಮೊತ್ತ ಮೊದಲ ವಿಷಯವೆಂದರೆ ದೂರದರ್ಶನದಲ್ಲಿ ನಾವೆಲ್ಲರೂ ನೋಡಿದಂತೆ ತಮಿಳುನಾಡು ಪೊಲೀಸರು ಗುಂಪನ್ನು ಚದುರಿಸಲು ಅನುಸರಿಸಬೇಕಾದ ನಿಗದಿಯಾದ ಯಾವುದೇ ಪದ್ಧತಿಗಳನ್ನು ಅನುಸರಿಸಲಿಲ್ಲ. ಬದಲಿಗೆ ಜನರತ್ತ ಗುರಿಯಿಟ್ಟು ಕೊಂದುಹಾಕಲು ಗುರಿಕಾರ (ಶಾರ್ಪ್ ಶೂಟರ್ಸ್) ಬಂದೂಕುಧಾರಿಗಳನ್ನು ಬಳಸಿತು. ಸರಕಾರವು ಈ ಬಗ್ಗೆ ತನಿಖೆಗೆ ಆದೇಶ ನೀಡಿದೆ. ಆದರೆ ಇಂಥಾ ತನಿಖೆಗಳ ಭವಿಷ್ಯವನ್ನು ತಮ್ಮ ಹಿಂದಿನ ಅನುಭವಗಳಿಂದ ಜನರು ಅರ್ಥಮಾಡಿಕೊಂಡಿದ್ದಾರೆ. ಆದ್ದರಿಂದ ಈ ತನಿಖೆಯು ಜನರ ಆಕ್ರೋಶವನ್ನಾಗಲಿ ಅಥವಾ ತಮ್ಮ ಮನೆ ಸದಸ್ಯರನ್ನು ಕಳೆದುಕೊಂಡು ದಿಕ್ಕೆಟ್ಟಿರುವ ಕುಟುಂಬಗಳ ದುಃಖವನ್ನಾಗಲೀ ಸಮಾಧಾನ ಪಡಿಸಲಾರದು.

ಪರಿಸರಕ್ಕೆ ಮತ್ತು ಜನರ ಆರೋಗ್ಯಕ್ಕೆ ಹಾನಿ ಮಾಡದೆ ಕೈಗಾರೀಕರಣವನ್ನು ಹೇಗೆ ಮಾಡಬೇಕೆಂಬುದು ಆಳದಲ್ಲಿ ಇರುವ ಅಸಲಿ ಪ್ರಶ್ನೆಯಾಗಿದೆ. ಆದರೆ ಈ ಪ್ರಶ್ನೆಗೆ ಉತ್ತರ ನೀಡುವಲ್ಲಿ ಭಾರತ ಪದೇಪದೇ ಸೋಲುತ್ತಲೇ ಇದೆ. ಪರಿಸರ ಮತ್ತು ಜನರ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಹಲವಾರು ಕಾನೂನುಗಳು ಅಸ್ತಿತ್ವದಲ್ಲಿದೆಯಾದರೂ ಅಂಥಾ ಕಾನೂನುಗಳ ನಡುವೆ ತೂರಿ ಅಥವಾ ಕಣ್ತಪ್ಪಿಸಿ ಉದ್ದಿಮೆಗಳು ತಮ್ಮ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳುವುದು ಈಗ ಒಂದು ಕುಶಲಕಲೆಯಾಗಿಬಿಟ್ಟಿದೆ. ಬೇರೆಲ್ಲಕ್ಕಿಂತ ತೂತುಕುಡಿಯ ಸ್ಟರ್ಲೈಟ್‌ತಾಮ್ರ ಘಟಕದ ವಿಷಯದಲ್ಲಿ ಈ ಸಂಗತಿಯು ಸ್ಪಷ್ಟವಾಗಿ ಸಾಬೀತಾಗಿದೆ.
ಸಾರ್ವಜನಿಕ ನೆನಪು ಅಲ್ಪಕಾಲಿಕವಷ್ಟೆ. ಸಾವಿರಾರು ಜನರ ಪ್ರತಿರೋಧ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಚ್ಚಿದ್ದನ್ನು ಒಳಗೊಂಡಂತೆ ನಡೆದ ಹಿಂಸಾಚಾರ ಹಾಗೂ ಆ ನಂತರದಲ್ಲಿ ಪೊಲೀಸರು ಹರಿಬಿಟ್ಟ ಭೀಕರ ದಮನಗಳ ಛಾಯಾಚಿತ್ರಗಳು ಮಾಧ್ಯಮಗಳಲ್ಲಿ ಬಿತ್ತರಗೊಳ್ಳಲು ಪ್ರಾರಂಭಗೊಂಡ ನಂತರವೇ ಉಳಿದ ಭಾರತವು ಇದರ ಬಗ್ಗೆ ಎಚ್ಚೆತ್ತಿಕೊಂಡಿತು. ಆದರೂ ವಾಸ್ತವವೇನೆಂದರೆ ಸ್ಟರ್ಲೈಟ್ ತಾಮ್ರ ಘಟಕವು ತಮಿಳುನಾಡಿಗೆ ಕಾಲಿಟ್ಟಿದ್ದು ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಅಲ್ಲಿನ ಸ್ಥಳೀಯ ಸಮುದಾಯಗಳು ಈ ಸ್ಟರ್ಲೈಟ್ ತಾಮ್ರ ಘಟಕವನ್ನು ತಮ್ಮ ತಮ್ಮ ರಾಜ್ಯಗಳಿಂದ ಹೊರಗಟ್ಟಿದ ನಂತರವೇ. ವಾಸ್ತವವಾಗಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಈ ಘಟಕವನ್ನು ಸ್ಥಾಪಿಸುವ ಪ್ರಯತ್ನದಲ್ಲಿದ್ದಾಗ ಅಲ್ಲಿ ತೋಟಗಾರಿಕಾ ಕೃಷಿಯಲ್ಲಿ ತೊಡಗಿಕೊಂಡಿದ್ದ ರೈತರು ಈ ಘಟಕವು ಹೊರಸೂಸುವ ತ್ಯಾಜ್ಯದಿಂದಾಗಿ ಉಂಟಾಗುವ ಪರಿಸರ ಮಾಲಿನ್ಯವು ತಮ್ಮ ಬದುಕಿನ ಒಂದೇ ಆಸರೆಯಾಗಿರುವ ತೋಟಗಾರಿಕೆಯನ್ನೇ ನಿರ್ನಾಮ ಮಾಡಬಹುದೆಂಬುದನ್ನು ಮನಗಂಡು ಸಾವಿರಾರು ಸಂಖ್ಯೆಯಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಅಂತಿಮವಾಗಿ ರಾಜ್ಯ ಸರಕಾರವು ಅನಿವಾರ್ಯವಾಗಿ ಜನರ ಬೆಂಬಲಕ್ಕೆ ನಿಂತು ತನ್ನ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಸ್ಟರ್ಲೈಟ್ ಕಂಪೆನಿಗೆ ಆದೇಶಿಸಲೇ ಬೇಕಾಯಿತು.
ತಮಿಳುನಾಡಿನ ಕಥೆ ಒಂದು ಸ್ವಲ್ಪಭಿನ್ನವಾಗಿದೆ. ಸ್ಟರ್ಲೈಟ್ ಕಂಪೆನಿಯ ಸ್ಥಾಪನೆ ಪ್ರಾರಂಭವಾದಾಗಲೇ ಅದರ ತ್ಯಾಜ್ಯದಿಂದ ಉಂಟಾಗಬಹುದಾದ ಪರಿಣಾಮದ ಬಗ್ಗೆ ಸ್ಥಳೀಯ ಸಮುದಾಯ ಆತಂಕವನ್ನು ವ್ಯಕ್ತಪಡಿಸಿತ್ತು. ಆದರೆ ಜನರಿಗೆ ಉದ್ಯೋಗ ಸೃಷ್ಟಿಸಲು ಮತ್ತು ಕೈಗಾರೀಕರಣವನ್ನು ಸಾಧಿಸಲು ಇದು ಅತ್ಯಗತ್ಯ ಎಂದು ಪ್ರತಿಪಾದಿಸಿದ ಸರಕಾರ ಅದರ ಸ್ಥಾಪನೆಗೆ ಬೇಕಾದ ಎಲ್ಲಾ ಸಹಕಾರವನ್ನೂ ನೀಡಿತು. ಕಳೆದ ಮೂರು ದಶಕಗಳಲ್ಲಿ ಸ್ಟರ್ಲೈಟ್ ಕಂಪೆನಿಯು ಹೊರಹಾಕುತ್ತಿರುವ ತ್ಯಾಜ್ಯಗಳಿಂದ ಸುತ್ತಮುತ್ತಲಿನ ಗಾಳಿ, ನೀರು ಮತ್ತು ಮಣ್ಣಿನ ಗುಣಮಟ್ಟಗಳ ಮೇಲೆ ಎಂಥಾ ಹಾನಿಕರ ಪರಿಣಾಮ ಉಂಟಾಗಿದೆ ಎಂಬುದನ್ನು ಹಲವಾರು ಅಧ್ಯಯನಗಳು ಸಾಬೀತುಪಡಿಸಿದ್ದರೂ, ಕಂಪೆನಿಯು ನಿರಾತಂಕವಾಗಿ ತನ್ನ ಉತ್ಪಾದನೆಯನ್ನು ಮುಂದುವರಿಸಿತ್ತು. ಸುಪ್ರೀಂ ಕೋರ್ಟು ಸಹ ಇದೇ ಕಾರಣಕ್ಕಾಗಿ 100 ಕೋಟಿ ರೂ.ಗಳಷ್ಟು ದಂಡವನ್ನು ವಿಧಿಸಿದ್ದರೂ ಹಿಂದೆ ಸರಿಯದ ಕಂಪೆನಿ ಆ ಘಟಕವನ್ನು ವಿಸ್ತರಣೆ ಮಾಡುವ ಸನ್ನಾಹದಲ್ಲಿತ್ತು.


ಈ ವಿದ್ಯಮಾನದಲ್ಲಿ ಸರಿಯಾಗಿ ಗುರುತಿಸದೇ ಹೋಗಿರುವ ಮತ್ತೊಂದು ಸಂಗತಿಯೆಂದರೆ ತೂತುಕುಡಿಯಲ್ಲಿ ನಡೆದ ಪ್ರತಿಭಟನೆಗಳು ಇದ್ದಕ್ಕಿದ್ದಂತೆ ಹುಟ್ಟಿಕೊಂಡದ್ದೇನಲ್ಲ. ಅದು ಹಲವು ವರ್ಷಗಳಿಂದ ನಡೆಯುತ್ತಲೇ ಬರುತ್ತಿತ್ತು. ಮತ್ತು ಹೊಸದಾಗಿ ಪ್ರಾರಂಭವಾದ ಪ್ರತಿರೋಧಕ್ಕೆ ಮೇ 22 ರಂದು ನೂರು ದಿನಗಳು ತುಂಬಿತ್ತು. ಈ ಪರಿಸರ ಮಾಲಿನ್ಯದ ಬಗ್ಗೆ ಹೊರಗಿನಿಂದ ಬಂದ ಪರಿಸರವಾದಿಗಳು ಹಾಗೂ ಇತರರು ಸ್ಥಳೀಯರಿಗೆ ತಿಳುವಳಿಕೆ ಕೊಟ್ಟು ಒಂದು ಅಪರಾಧವನ್ನೇ ಮಾಡಿಬಿಟ್ಟರೆಂಬಂತಹ ಒಂದು ವಾದವನ್ನು ಹರಿಬಿಡಲಾಗುತ್ತಿದೆ. ಆದರೆ ಹೊರಗಿನವರು ಬಂದು ಹೇಳುವ ಅಗತ್ಯವೇ ಇಲ್ಲದ ರೀತಿಯಲ್ಲಿ ಈ ತಾಮ್ರ ಘಟಕದಿಂದ ಸುತ್ತಮುತ್ತಲಿನ ಪರಿಸರದ ಮೇಲೆ ಆಗುತ್ತಿದ್ದ ಹಾನಿಯ ಬಗೆ್ಗ ಸ್ಪಷ್ಟ ಮಾಹಿತಿ ಸಾರ್ವಜನಿಕರಿಗಿತ್ತು.
ತಾವು ಸೇವಿಸುತ್ತಿರುವ ಗಾಳಿಯ ಗುಣಮಟ್ಟ ಕುಸಿಯುತ್ತಿರುವುದನ್ನು ಮತ್ತು ತಮ್ಮ ಪರಿಸರದಲ್ಲಿ ರೋಗಗಳ ಪ್ರಮಾಣ ಹೆಚ್ಚಿನ ಜನರು ಅವಸ್ಥೆ ಪಡುತ್ತಿರುವುದನ್ನು ತಮ್ಮ ಅನುಭವದಿಂದಲೇ ಕಂಡುಕೊಂಡ ಜನರು ಇವೆಲ್ಲಕ್ಕೂ ಕಂಪೆನಿಯು ಹೊರಹಾಕುತ್ತಿರುವ ತ್ಯಾಜ್ಯಗಳೇ ಕಾರಣವೆಂದು ಅರ್ಥವಾದಾಗ ಸಹಜವಾಗಿಯೇ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವರ ಪ್ರಶ್ನೆಗಳಿಗೆ ಉತ್ತರ ನೀಡದೆ, ತೂತುಕುಡಿಯಲ್ಲಿ ಮಾಡಿದಂತೆ ಜನರನ್ನು ಹತ್ತಿಕ್ಕಲು ಪ್ರಾರಂಭಿಸಿಾಗ ಜನರು ಬೀದಿಗಿಳಿದೇ ಇಳಿಯುತ್ತಾರೆ.
 ಉದಾಹರಣೆಗೆ ಕೂಡಂಗುಳಂನಲ್ಲಿ ಸ್ಥಾಪನೆಯಾಗುತ್ತಿದ್ದ ಅಣುಸ್ಥಾವರದ ವಿರುದ್ಧ ಅಲ್ಲಿನ ಮೀನುಗಾರರು ಬೀದಿಗಿಳಿದದ್ದು, ಅದೇ ರೀತಿಯ ಅಣುಸ್ಥಾವರವೊಂದು ಜಪಾನಿನ ಫುಕುಷಿಮಾದಲ್ಲಿ 2011ರಲ್ಲಿ ಸಂಭವಿಸಿದ ಸುನಾಮಿಯಲ್ಲಿ ಕುಸಿದ ಸುದ್ದಿ ತಿಳಿದ ನಂತರ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆಗಲೂ ಸಹ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಈ ಎಲ್ಲಾ ಆತಂಕಗಳನ್ನು ಗಣನೆಗೆ ತೆಗೆದುಕೊಲಿಲ್ಲ. ಬದಲಿಗೆ ತಮಿಳುನಾಡಿನ ವಿದ್ಯುತ್ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡಾಗ ಅಣುಸ್ಥಾವರವನ್ನು ಸ್ಥಾಪಿಸಲು ಆಯ್ಕೆಯಾದ ಪ್ರದೇಶ ಸೂಕ್ತವಾಗಿದೆಯೆಂದೇ ಪ್ರತಿಪಾದಿಸಿತ್ತು. ಆದರೂ ಈ ವಿಷಯದಲ್ಲಿ ಸಂಭವಿಸಿದ ಒಂದು ಸಕಾರಾತ್ಮಕ ಸಂಗತಿಯೆಂದರೆ ಜನರಿಗೆ ಈಗ ಪರಿಸರದ ಮೇಲಾಗುವ ಅನಾಹುತದ ಪರಿಣಾಮಗಳ ಬಗ್ಗೆ ಅರಿವುಂಟಾಗಿದೆ. ಹೀಗಾಗಿ ಇನ್ನುಮುಂದೆ ಕೈಗಾರಿಕಾ ಸ್ಥಾಪನೆಗಳಿಗೆ ಪ್ರದೇಶಗಳನ್ನು ಆಯ್ಕೆ ಮಾಡುವಾಗ ಜನರ ಜೀವಕ್ಕೆ ಕುತ್ತುಂಟುಮಾಡಲಾರದಂಥ ಸ್ಥಳವನ್ನು ಆಯ್ಕೆ ಮಾಡುವಂಥ ನೀತಿಗಳಿಗೆ ಇದು ನಿಧಾನಕ್ಕೆ ಪ್ರೇರಕವಾಗಬಹುದು.
ಆದರೆ 1984ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದಿಂದ ನಾವೇನೂ ಕಲಿತಂತಿಲ್ಲ.ವಾಸ್ತವಾಗಿ ಭೋಪಾಲ್‌ನಲ್ಲಿ ಜನನಿಬಿಡ ಪ್ರದೇಶದಲ್ಲಿ ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದ್ದರಿಂದಲೇ ಅನಿಲ ಸೋರಿಕೆಯಾದಾಗ ಸಾವಿರಾರು ಜನರು ಸಾಯಬೇಕಾಯಿತು ಮತ್ತು ಅದಕ್ಕಿಂತಲೂ ಹೆಚ್ಚಿನ ಜನ ಶಾಶ್ವತ ವೈಕಲ್ಯಗಳಿಗೆ ಬಲಿಯಾಗಿ ಬದುಕುವ ದುಸ್ಥಿತಿಗೆ ಕಾರಣವಾಯಿತು. 1984ರಲ್ಲಿ ಅವಘಡವು ಸಂಭವಿಸುವ ಕೆಲವು ಸೂಚನೆಗಳು ಕಂಡುಬಂದರೂ ಅದನ್ನು ಅರ್ಥಮಾಡಿಕೊಳ್ಳುವಷ್ಟು ಅರಿವು ಯೂನಿಯನ್ ಕಾರ್ಬೈಡ್ ಕಂಪೆನಿಯ ಆಸುಪಾಸಿನಲ್ಲಿ ಬದುಕುತ್ತಿದ್ದ ಜನರಿಗಿರಲಿಲ್ಲ. ಆದರೆ ಇಂದು ಜನರಿಗೆ ಅರಿವುಂಟಾಗಿದೆ. ಆದ್ದರಿಂದಲೇ ಅವರು ಪ್ರತಿಭಟಿಸುತ್ತಿದ್ದಾರೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗಾರಿಕಾ ಸ್ಥಾವರಗಳನ್ನು ಸ್ಥಾಪಿಸುವಾಗ ಕೆಲವು ಕನಿಷ್ಟ ಮಾನದಂಡಗಳನ್ನು ಪಾಲಿಸಲೇ ಬೇಕಾಗುತ್ತದೆ ಮತ್ತು ಸ್ಥಳೀಯ ಸಮುದಾಯಗಳ ಆತಂಕಗಳನ್ನು ಪರಿಗಣಿಸಲೇ ಬೇಕಾಗುತ್ತದೆ. ಈ ಕಾಲಘಟ್ಟದಲ್ಲಿ ಹೇಗಾದರೂ ಸರಿಯೇ ಕೈಗಾರೀಕರಣವನ್ನು ಮಾಡಿಯೇ ತೀರುತ್ತೇವೆಂದು ಮುನ್ನು್ಗುವುದನ್ನು ಯಾರೂ ಒಪ್ಪುವುದಿಲ್ಲ.
ತಕ್ಷಣಕ್ಕೆ ತಮಿಳುನಾಡು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ಟರ್ಲೈಟ್ ತಾಮ್ರ ಘಟಕ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಇದರಿಂದಾಗಿ ಸಂದರ್ಭದಲ್ಲಿರುವ ಉದ್ವಿಗ್ನತೆಯು ಕೊಂಚ ಶಮನವಾಗಬಹುದು. ಆದರೆ ಆಳವಾದ ಮತ್ತು ದೀರ್ಘಕಾಲೀನ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿದ್ದು ಉತ್ತರಿಸಲೇ ಬೇಕಿದೆ.
ಪ್ರಬಲ ಮತ್ತು ಪ್ರಭಾವಶಾಲಿ ಉದ್ಯಮ ಸಂಸ್ಥೆಗಳು ಅಸ್ತಿತ್ವದಲ್ಲಿರುವ ಎಂಥಹುದೇ ಪರಿಸರ ಸಂಬಂಧಿ ನೀತಿ ಮತ್ತು ಕಾನೂನುಗಳನ್ನು ಮುರಿಯುತ್ತ ತಮ್ಮ ವ್ಯವಹಾರಗಳನ್ನು ಮುಂದುವರಿಸಿಕೊಂಡು ಹೋಗಲು ಹೇಗೆ ಸಾಧ್ಯವಾಗುತ್ತಿದೆ? ಹೀಗೆ ನೀತಿಗಳನ್ನು ಉಲ್ಲಂಘಿಸುವಾಗ ಪ್ರಭುತ್ವವು ಹೇಗೆಲ್ಲಾ ಉದ್ದಿಮೆಗಳ ಜೊತೆ ಕೈಗೂಡಿಸುತ್ತದೆ? ಭೋಪಾಲ್ ದುರಂತದ ನಂತರ ಯಾವುದೇ ಪ್ರದೇಶದಲ್ಲಿ ಸ್ಥಳೀಯ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆ ಇರುವ ಘಟಕಗಳನ್ನು ಸ್ಥಾಪಿಸುವ ಮುನ್ನ ಸ್ಥಳೀಯ ಜನತೆಯ ಜೊತೆ ಸಮಾಲೋಚನೆಮಾಡಬೇಕೆಂಬ ಕಾನೂನಿದ್ದರೂ ತೂತುಕುಡಿ ಜನತೆಯ ಆತಂಕಗಳನ್ನು ಏಕೆ ಪರಿಗಣಿಸಲಿಲ್ಲ?

 ಕೃಪೆ: Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ