ಸಿಂಗಾಪುರದ ರಾಜತಾಂತ್ರಿಕನಿಗೆ ಪದ್ಮಶ್ರೀ ಪ್ರಶಸ್ತಿ ಹಸ್ತಾಂತರಿಸಿದ ಮೋದಿ

Update: 2018-06-01 17:13 GMT

ಸಿಂಗಾಪುರ, ಜೂ. 1: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಸಿಂಗಾಪುರದಲ್ಲಿ ಆ ದೇಶದ ಮಾಜಿ ರಾಜತಾಂತ್ರಿಕ ಟಾಮಿ ಕೊಹ್ ಅವರಿಗೆ ಹಸ್ತಾಂತರಿಸಿದರು.

ಈ ವರ್ಷ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸ್ವೀಕರಿಸಿದ 10 ಆಸಿಯಾನ್ (ಆಗ್ನೇಯ ಏಶ್ಯ ದೇಶಗಳ ಸಂಘಟನೆ) ದೇಶಗಳ ನಾಗರಿಕರ ಪೈಕಿ ಕೊಹ್ ಒಬ್ಬರಾಗಿದ್ದಾರೆ.

‘‘ಸಿಂಗಾಪುರ ಪ್ರಧಾನಿ ಲೀ ಹಸಿಯನ್ ಲೂಂಗ್ ಅವರ ಉಪಸ್ಥಿತಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಪದ್ಮಶ್ರೀ ಪ್ರಶಸ್ತಿಯನ್ನು ಸಿಂಗಾಪುರದ ಮಾಜಿ ರಾಜತಾಂತ್ರಿಕ ಪ್ರೊಫೆಸರ್ ಟಾಮಿ ಕೊಹ್ ಅವರಿಗೆ ಹಸ್ತಾಂತರಿಸಿದರು. ಭಾರತ-ಆಸಿಯಾನ್ ಭಾಗೀದಾರಿಕೆಯ ಬೆಳ್ಳಿಹಬ್ಬ ಮತ್ತು ನಮ್ಮ ಗಣರಾಜ್ಯೋತ್ಸವದ ಸಂದರ್ಭದಲ್ಲಿ 2018 ಜನವರಿಯಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗಿತ್ತು’’ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು.

 80 ವರ್ಷದ ಕೊಹ್ ಅಮೆರಿಕ ಮತ್ತು ವಿಶ್ವಸಂಸ್ಥೆಗೆ ಸಿಂಗಾಪುರದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. 1981 ಮತ್ತು 1982ರಲ್ಲಿ ವಿಶ್ವಸಂಸ್ಥೆಯ ಸಮುದ್ರ ಕಾನೂನು ಕುರಿತ ಮೂರನೇ ಸಮ್ಮೇಳನದ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ಅವರು ಈಗ ಸಿಂಗಾಪುರ ನ್ಯಾಶನಲ್ ವಿಶ್ವವಿದ್ಯಾನಿಲಯದಲ್ಲಿ ಅಂತಾರಾಷ್ಟ್ರೀಯ ಕಾನೂನು ಕೇಂದ್ರದ ಗವರ್ನರ್‌ಗಳ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News