ನಡಾಲ್, ಸೆರೆನಾ ಮೂರನೇ ಸುತ್ತಿಗೆ ತೇರ್ಗಡೆ

Update: 2018-06-01 18:39 GMT

ಪ್ಯಾರಿಸ್, ಜೂ.1: ಹಾಲಿ ಚಾಂಪಿಯನ್ ರಫೆಲ್ ನಡಾಲ್ ಹಾಗೂ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್‌ನಲ್ಲಿ ಮೂರನೇ ಸುತ್ತಿನಲ್ಲಿ ಸ್ಥಾನ ಪಡೆದಿದ್ದಾರೆ.

ನಡಾಲ್ ಗುರುವಾರ ನಡೆದ ಪುರುಷರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನದ ಗುಡೊ ಪೆಲ್ಲಾರನ್ನು 6-2, 6-1, 6-1 ನೇರ ಸೆಟ್‌ಗಳಿಂದ ಸದೆ ಬಡಿದರು. ಟೆನಿಸ್ ಕೋರ್ಟ್ ನಲ್ಲಿ ತುಂತುರು ಮಳೆ ಸುರಿದರೂ ಅದನ್ನು ಲೆಕ್ಕಿಸದೇ ಆಡಿದ 31ರ ಹರೆಯದ ನಡಾಲ್ 78ನೇ ರ್ಯಾಂಕಿನ ಪೆಲ್ಲಾ ವಿರುದ್ಧ ಮೇಲುಗೈ ಸಾಧಿಸಿದರು.

ಸ್ಪೇನ್ ಆಟಗಾರ ನಡಾಲ್ ಫ್ರೆಂಚ್ ಓಪನ್‌ನಲ್ಲಿ 27ನೇ ಸೆಟ್‌ನ್ನು ಗೆದ್ದುಕೊಂಡಿದ್ದು ಒಂದೂ ಸೆಟ್ ಕೈಚೆಲ್ಲದೆ ಕಳೆದ ವರ್ಷ 10ನೇ ಪ್ರಶಸ್ತಿ ಜಯಿಸಿದ್ದರು. ನಡಾಲ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕಟ್‌ರನ್ನು ಎದುರಿಸಲಿದ್ದಾರೆ.

 ಶನಿವಾರ ನಡೆಯಲಿರುವ ಪಂದ್ಯದಲ್ಲಿ ರಿಚರ್ಡ್‌ರನ್ನು ಎದುರಿಸಲಿರುವ ನಡಾಲ್ 16ನೇ ಬಾರಿ ಮುಖಾಮುಖಿಯಾಗಲಿ ದ್ದಾರೆ. ವೃತ್ತಿಪರ ಟೆನಿಸ್‌ನಲ್ಲಿ ರಿಚರ್ಡ್ ವಿರುದ್ಧ ಈ ತನಕ ಆಡಿರುವ ಎಲ್ಲ 15 ಪಂದ್ಯಗಳಲ್ಲಿ ನಡಾಲ್ ಜಯಭೇರಿ ಬಾರಿಸಿದ್ದರು. ಇದೇ ವೇಳೆ ಸೆರೆನಾ ವಿಲಿಯಮ್ಸ್ ಮಹಿಳೆಯರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಅಶ್ಲೆಲೆಘ್‌ರನ್ನು 3-6, 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

  ಮೂರು ಬಾರಿಯ ಚಾಂಪಿಯನ್ ಸೆರೆನಾ ಮತ್ತೊಮ್ಮೆ ಕಪ್ಪು ಬಣ್ಣದ ಬಟ್ಟೆ ಧರಿಸಿ ಆಡಿದರು. ಸೆರೆನಾ 2017ರಲ್ಲಿ ಆಸ್ಟೇಲಿಯನ್ ಓಪನ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿ ಗೆದ್ದ ಬಳಿಕ ಇದೇ ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಆಡುತ್ತಿದ್ದಾರೆ. 36ರ ಹರೆಯದ ಸೆರೆನಾ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಅಂತಿಮ-16ನೇ ಸುತ್ತಿನಲ್ಲಿ ಸ್ಥಾನ ಪಡೆಯಲು ಮೂರನೇ ರೌಂಡ್‌ನಲ್ಲಿ ಜರ್ಮನಿಯ ಜುಲಿಯಾ ಜಾರ್ಜರ್ಸ್‌ರನ್ನು ಎದುರಿಸಲಿದ್ದಾರೆ. ಒಂದು ವೇಳೆ ಸೆರೆನಾ ಮೂರನೇ ಸುತ್ತಿನಲ್ಲಿ ಜಯ ಸಾಧಿಸಿದರೆ ಕ್ವಾರ್ಟರ್ ಫೈನಲ್‌ನಲ್ಲಿ ಹಳೆ ಬದ್ಧ ಎದುರಾಳಿ ರಶ್ಯದ ಮರಿಯಾ ಶರಪೋವಾರನ್ನು ಎದುರಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News