ವಾಹನಗಳ ಇನ್ಶೂರನ್ಸ್: ನಕಲಿ ಪಾಲಿಸಿಗಳ ಬಗ್ಗೆ ಎಚ್ಚರಿಕೆಯಿರಲಿ

Update: 2018-06-02 14:10 GMT

ನಕಲಿ ವಾಹನ ವಿಮಾ ಪಾಲಿಸಿಯೇ? ಅದು ಹೇಗೆ ಸಾಧ್ಯ ಎಂದುಕೊಳ್ಳಬೇಡಿ. ಆದರೆ ಇದು ಕಟು ಸತ್ಯ. ನೀವು ನಿಮ್ಮ ವಾಹನಕ್ಕಾಗಿ ಖರೀದಿಸಿರುವ ವಿಮೆ ಪಾಲಿಸಿಯು ನಕಲಿಯಾಗಿರಬಹುದು ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ವಿಮಾ ಹಣವನ್ನು ನೀಡಲು ಕಂಪನಿಯು ನಿರಾಕರಿಸಬಹುದು. ಹೀಗಾಗಿ ನಿಮ್ಮ ವಾಹನಕ್ಕೆ ವಿಮೆ ಮಾಡಿಸುವಾಗ ನೇರವಾಗಿ ಕಂಪನಿಯನ್ನು ಸಂಪರ್ಕಿಸಿ ಅಥವಾ ವಿಶ್ವಾಸಾರ್ಹ ಮಧ್ಯವರ್ತಿಯ ಮೂಲಕವೇ ಆ ಕೆಲಸವನ್ನು ಮಾಡಿ.

ವಾಸ್ತವದಲ್ಲಿ ಭಾರತವು ಸೇರಿದಂತೆ ವಿಶ್ವಾದ್ಯಂತ ವಿಮೆ ವಂಚನೆಗಳ ಹಾವಳಿ ಹೆಚ್ಚುತ್ತಿದೆ. ಇಂತಹ ವಂಚನೆಗಳಿಂದಾಗಿ ಭಾರತದಲ್ಲಿ ವಿಮಾ ಕ್ಷೇತ್ರವು ವಾರ್ಷಿಕ 30,000 ಕೋ.ರೂ.ಗೂ ಅಧಿಕ ನಷ್ಟವನ್ನು ಅನುಭವಿಸುತ್ತಿರಬಹುದು ಎನ್ನುವುದು ಉದ್ಯಮದ ಅಂದಾಜು. ಒಟ್ಟು ವಿತರಣೆಯಾಗುವ ಪಾಲಿಸಿಗಳ ಪೈಕಿ ಶೇ.1ರಿಂದ ಶೇ.2ರಷ್ಟು ನಕಲಿಯಾಗಿರುತ್ತವೆ ಮತ್ತು ಇದರಿಂದ ವಾರ್ಷಿಕ 500-800 ಕೋ.ರೂ.ಗಳಷ್ಟು ವಾಹನ ವಿಮೆ ವ್ಯವಹಾರವನ್ನು ಉದ್ಯಮವು ಕಳೆದುಕೊಳ್ಳುತ್ತಿದೆ ಎಂದೂ ಅದು ಅಂದಾಜಿಸಿದೆ.

ನಕಲಿ ವಾಹನ ವಿಮಾ ಪಾಲಿಸಿ ಮೋಸಕ್ಕೆ ಸಿಲುಕದಿರಲು ಅನುಸರಿಸಬಹುದಾದ ವಿಧಾನಗಳಿಲ್ಲಿವೆ.....

►ವಿಶ್ವಾಸಾರ್ಹ ಮೂಲಗಳಿಂದಲೇ ಪಾಲಿಸಿ ಖರೀದಿಸಿ

ಪಾಲಿಸಿಯ ಮೇಲೆ ಕಣ್ಣು ಹಾಯಿಸಿದ ಮಾತ್ರಕ್ಕೆ ನಕಲಿ ವಾಹನ ವಿಮೆಯನ್ನು ಗುರುತಿಸುವುದು ಸುಲಭವಲ್ಲ. ಆದ್ದರಿಂದ ನೇರವಾಗಿ ವಿಮೆ ಕಂಪನಿಯಿಂದ ಅಥವಾ ವಿಶ್ವಾಸಾರ್ಹ ಅಗ್ರಿಗೇಟರ್‌ಗಳ ವೆಬ್‌ಸೈಟ್‌ನಿಂಂದ ಪಾಲಿಸಿಯನ್ನು ಖರೀದಿಸುವುದು ವಿವೇಕದ ಕ್ರಮವಾಗಿದೆ.

►ಚೆಕ್ ಅಥವಾ ಆನ್‌ಲೈನ್ ಮೂಲಕವೇ ಹಣ ಪಾವತಿಸಿ

ನೀವು ಆಫ್‌ಲೈನ್‌ನಲ್ಲಿ ಪಾಲಿಸಿಯನ್ನು ಖರೀದಿಸುತ್ತಿದ್ದರೆ ಹಣವನ್ನು ಚೆಕ್ ಮೂಲಕವೇ ಪಾವತಿಸಿ. ಇಂತಹ ಚೆಕ್ ಅನ್ನು ವಿಮಾ ಕಂಪನಿಯ ಹೆಸರಿಗೆ ಬರೆದಿರಬೇಕೇ ಹೊರತು ಯಾವುದೇ ವ್ಯಕ್ತಿಯ ಹೆಸರಿನಲ್ಲಲ್ಲ. ನಕಲಿ ಪಾಲಿಸಿಗೆ ಬಲಿಯಾಗುವುದನ್ನು ತಪ್ಪಿಸಲು ಯಾವುದೇ ಕಾರಣಕ್ಕೆ ನಗದು ಹಣವನ್ನು ಪಾವತಿಸುವ ಗೋಜಿಗೆ ಹೋಗಬೇಡಿ. ಯಾವುದೇ ಅಪಾಯವನ್ನು ತಪ್ಪಿಸಲು ಮತ್ತು ಹೆಚ್ಚಿನ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕ ಹಣ ಪಾವತಿ ಸುರಕ್ಷಿತ ವಿಧಾನವಾಗಿದೆ.

►ವೆರಿಫಿಕೇಷನ್ ಲಿಂಕ್ ಬಳಸಿ ಪಾಲಿಸಿಯ ನೈಜತೆಯನ್ನು ಖಚಿತಪಡಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಕೆಲವು ಸಾಮಾನ್ಯ ವಿಮಾ ಕಂಪನಿಗಳು ತಮ್ಮ ಜಾಲತಾಣಗಳಲ್ಲಿ ಪಾಲಿಸಿ ವೆರಿಫಿಕೇಷನ್ ಲಿಂಕ್ ಅನ್ನು ನೀಡುತ್ತಿವೆ. ತಮಗೆ ವಿತರಿಸಲಾಗಿರುವ ವಾಹನ ವಿಮಾ ಪಾಲಿಸಿಯು ನಕಲಿಯಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಗ್ರಾಹಕರು ವಿಮಾ ಕಂಪನಿಯ ಜಾಲತಾಣಕ್ಕೆ ಭೇಟಿ ನೀಡಿ ಈ ಲಿಂಕ್‌ನ್ನು ಬಳಸಬಹುದಾಗಿದೆ. ಜೊತೆಗೆ ವಿವರಗಳನ್ನು ದೃಢಪಡಿಸಿಕೊಳ್ಳಲು ಗ್ರಾಹಕರು ಕಂಪನಿಯ ಕಸ್ಟಮರ್ ಕೇರ್ ವಿಭಾಗವನ್ನೂ ಸಂಪರ್ಕಿಸಬಹುದಾಗಿದೆ.

►ಮಾನ್ಯತೆ ಹೊಂದಿರುವ ಕಂಪನಿಯಿಂದಲೇ ಪಾಲಿಸಿ ಖರೀದಿಸಿ ಮತ್ತು ಪಾಲಿಸಿಯ ಅಸ್ತಿತ್ವವನ್ನು ಪರೀಕ್ಷಿಸಿ

 ಹಾಲಿ ಭಾರತದಲ್ಲಿ ಮಾನ್ಯತೆಯನ್ನು ಹೊಂದಿರುವ 33 ಸಾಮಾನ್ಯ ವಿಮಾ ಕಂಪನಿಗಳು ಇವೆ ಎನ್ನುವುದು ನಿಮಗೆ ಗೊತ್ತಿರಲಿ. ಹೀಗಾಗಿ ನೀವು ಖರೀದಿಸಿರುವ ಪಾಲಿಸಿ ಇವುಗಳ ಪೈಕಿ ಯಾವುದೇ ಕಂಪನಿಯದ್ದಾಗಿರಬೇಕು. ಮಾನ್ಯತೆ ಪಡೆದಿರುವ ಸಾಮಾನ್ಯ ವಿಮಾ ಕಂಪನಿಗಳ ಪಟ್ಟಿ ನಿಮಗೆ ಅಂತರ್ಜಾಲದ https://www.irdai.gov.in/ADMINCMS/cms/NormalData_Layout.aspx?page=PageNo264&mid=3.2.10.  ಈ ಲಿಂಕ್‌ನಲ್ಲಿ ದೊರೆಯುತ್ತದೆ. ವಿಮಾ ಕಂಪನಿಯಿಂದ ನೇರವಾಗಿ ಪಾಲಿಸಿಯನ್ನು ಖರೀದಿಸುವುದು ಅತ್ಯುತ್ತಮ. ಏಜೆಂಟ್‌ರು ಅಥವಾ ಕಾಲ್ ಸೆಂಟರ್‌ಗಳ ಮೂಲಕ ಖರೀದಿಸುತ್ತಿದ್ದರೆ ಕಂಪನಿಯ ವೆಬ್ ಸೈಟ್‌ನಲ್ಲಿ ಉಲ್ಲೇಖಿಸಿರುವ ಸೆಂಟ್ರಲ್ ನಂಬರ್‌ನ್ನು ಸಂಪರ್ಕಿಸಿ ಏಜಂಟ್ ಅಥವಾ ಮಧ್ಯವರ್ತಿಗಳ ವಿಶ್ವಾಸಾರ್ಹತೆಯನ್ನು ಖಚಿತ ಪಡಿಸಿಕೊಳ್ಳಬಹುದು.

 ಆದರೆ ವಂಚಕರು ವಿಮಾ ಕಂಪನಿಯ ಲಾಂಛನವನ್ನೂ ನಕಲು ಮಾಡಬಹುದು ಮತ್ತು ನಕಲಿ ಪಾಲಿಸಿಯನ್ನು ನಿಮಗೆ ದಾಟಿಸಬಹುದು. ಹೀಗಾಗಿ ನಿಮ್ಮ ವಾಹನ ವಿಮಾ ಪಾಲಿಸಿಯ ಅಸ್ತಿತ್ವವನ್ನು ದೃಢಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ನಿಮ್ಮ ನಗರದಲ್ಲಿರುವ ಕಂಪನಿಯ ಶಾಖೆಗೆ ಭೇಟಿ ನೀಡಿ ಈ ಕೆಲಸವನ್ನು ಮಾಡಬಹುದು. ಆನ್‌ಲೈನ್ ಮೂಲಕವೂ ಮಾಡಬಹುದು. ನಿಮಗೆ ನೀಡಲಾಗಿರುವ ಪಾಲಿಸಿಯ ಅಧಿಕೃತತೆಯನ್ನು ತಿಳಿದುಕೊಳ್ಳಲು ನೀವು ಕಂಪನಿಗೆ ಇ-ಮೇಲ್ ಬರೆಯಬಹುದು ಅಥವಾ ದೂರವಾಣಿ ಕರೆಯನ್ನು ಮಾಡಬಹುದು.

►ಕ್ಯೂಆರ್ ಕೋಡ್ ಬಳಸಿ

ನಿಮಗೆ ತಂತ್ರಜ್ಞಾನದ ಅರಿವಿದ್ದರೆ ಪಾಲಿಸಿಯನ್ನು ದೃಢೀಕರಿಸಿಕೊಳ್ಳಲು ಕ್ಯೂಆರ್ ಕೋಡ್ ಅನ್ನು ಬಳಸಬಹುದು. ವಿಮಾ ಕಂಪನಿಗಳು ಡಿಸೆಂಬರ್ 2015ರ ಬಳಿಕ ನೀಡುತ್ತಿರುವ ವಾಹನ ವಿಮಾ ಪಾಲಿಸಿಗಳ ಮೇಲೆ ಕ್ಯೂಆರ್ ಕೋಡ್ ಮುದ್ರಿಸುವುದನ್ನು ಐಆರ್‌ಡಿಎಐ ಕಡ್ಡಾಯಗೊಳಿಸಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯ ಕ್ಯೂಆರ್ ಕೋಡ್ ರೀಡಿಂಗ್ ಆ್ಯಪ್ ಬಳಸಿ ನಿಮ್ಮ ಪಾಲಿಸಿಯ ಮೇಲಿನ ಕೋಡ್ ಅನ್ನು ಸ್ಕಾನ್ ಮಾಡಿದರೆ ವೆಬ್ ಪೇಜ್ ಪಾಲಿಸಿಯ ಸ್ಥಿತಿಗತಿ,ಅದರ ವಿವರಗಳು ಮತ್ತು ವಿಮೆ ಮಾಡಿಸಲಾದ ವಾಹನದ ವಿವರಗಳನ್ನು ನಿಮ್ಮ ಮೊಬೈಲ್ ಫೋನ್‌ಗೆ ರವಾನಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News